ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆಗಳ ಸುಳಿಯಲ್ಲಿ ಸೊರಗಿದ ಭಾರತ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಸೆಂಚೂರಿಯನ್ (ಪಿಟಿಐ): ವಿಶ್ವಕಪ್‌ಗೆ ಮುನ್ನವೇ ಭಾರತ ತಂಡವು ಕೊರತೆಗಳ ಸುಳಿಯಲ್ಲಿ ಸಿಲುಕಿ ಸೊರಗಿದೆ.ಬ್ಯಾಟಿಂಗ್ ಬಲವನ್ನು ಹಿಗ್ಗಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ವಿಜಯದ ಸುಗ್ಗಿಯ ಹಿಗ್ಗಿನಿಂದ ನಲಿಯುವ ಆಸೆಯ ಮುತ್ತು ಕೂಡ ಕೈಜಾರಿಬಿತ್ತು.

2-1ರಲ್ಲಿ ಮುನ್ನಡೆ ಸಾಧಿಸಿದ್ದ ತಂಡವು ಇನ್ನೊಂದು ಪಂದ್ಯವನ್ನು ಗೆಲ್ಲುವ ಛಲವನ್ನು ತೋರಲಿಲ್ಲ.ಒಂದು ಗೆಲುವು ಐದು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ಟ್ರೋಫಿ ಸಿಗುವಂತೆ ಮಾಡುತಿತ್ತು.ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ಲೆಕ್ಕಾಚಾರವೆಲ್ಲ ತಲೆಕೆಳಗೆ.ಪರಿಣಾಮ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದ ಸಾಧನೆಯ ಶ್ರೇಯ ಪಡೆಯುವ ಅವಕಾಶವೂ ತಪ್ಪಿತು.

ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಮಾಡಿಕೊಂಡ ನಂತರ, ಮಹೇಂದ್ರ ಸಿಂಗ್ ದೋನಿ ನಾಯಕತ್ವದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಸಾಧ್ಯವಾಗುತ್ತದೆಂದು ನಿರೀಕ್ಷಿಸಿದ್ದು ಸಹಜ. ಏಕಮಾತ್ರ ಟ್ವೆಂಟಿ-20 ಪಂದ್ಯದಲ್ಲಿನ ಜಯದ ನಂತರ ಈ ಆಶಯಕ್ಕೆ ಇನ್ನಷ್ಟು ಬಲ ಬಂದಿತ್ತು. ಡರ್ಬನ್‌ನಲ್ಲಿ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 135 ರನ್‌ಗಳ ಅಂತರದಿಂದ ಸೋತರೂ ಆನಂತರ ಪುಟಿದೆದ್ದು ಜೋಹಾನ್ಸ್‌ಬರ್ಗ್‌ನಲ್ಲಿ ಒಂದು ರನ್ ಅಂತರದ ರೋಚಕ ವಿಜಯ ಸಾಧಿಸಿದಾಗಲಂತೂ ‘ಮಹಿ’ ಬಳಗದ ಮೇಲಿನ ನಿರೀಕ್ಷೆಯ ಭಾರ ಇನ್ನಷ್ಟು ಹೆಚ್ಚಿದ್ದು ನಿಜ.

ಅದಕ್ಕೆ ತಕ್ಕಂತೆಯೇ ಕೇಪ್‌ಟೌನ್‌ನಲ್ಲಿ ವಿಶ್ವಾಸಪೂರ್ಣ ಆಟವಾಡಿ ಹತ್ತು ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾವನ್ನು ಎರಡು ವಿಕೆಟ್‌ಗಳ ಅಂತರದಿಂದ ಮಣಿಸಿದ್ದು ಸ್ಮರಣೀಯ. ಆ ಹಂತದಲ್ಲಿ ಭಾರತವು ಆತಿಥೇಯರನ್ನು ಒತ್ತಡದಲ್ಲಿಡುವ ಸ್ಥಿತಿಯಲ್ಲಿ ಇತ್ತು.

ನಾಲ್ಕನೇ ಪಂದ್ಯದಲ್ಲಿಯೇ ಸರಣಿ ವಿಜಯದ ಸಂಭ್ರಮವೂ ಸಾಧ್ಯವಿತ್ತು.ಆಗ ಕಾಡಿದ್ದು ವರಣನ ಅವಕೃಪೆ! ಆದರೆ ಗುರಿಯನ್ನು ಬೆನ್ನಟ್ಟಿದ್ದ ಭಾರತದವರ ಇನಿಂಗ್ಸ್ ಆರಂಭವು ಪ್ರಭಾವಿ ಆಗಿದ್ದರೆ;ಡಕ್ವರ್ಥ್-ಲೂಯಿಸ್ ನಿಯಮದ ಲೆಕ್ಕಾಚಾರವು ದಕ್ಷಿಣ ಆಫ್ರಿಕಾ ಕಡೆಗೆ ತಕ್ಕಡಿಯ ಭಾರ ಹೆಚ್ಚಿಸಲು ಸಾಧ್ಯವಿರಲಿಲ್ಲ.ನಾಲ್ಕನೇ ಪಂದ್ಯದಲ್ಲಿ ಸರದಿಯ ಆರಂಭದ ಬ್ಯಾಟ್ಸ್‌ಮನ್‌ಗಳು ಚುರುಕಿನಿಂದ ಆಡಲಿಲ್ಲ. ಬೇಗ ವಿಕೆಟ್ ಒಪ್ಪಿಸಿದರು.

ವಿಕೆಟ್ ಪತನದ ಗತಿ ಹಾಗೂ ಪ್ರತಿ ಓವರ್‌ನಲ್ಲಿ ಗಳಿಸಿದ ರನ್‌ಗಳ ಸರಾಸರಿಯಲ್ಲಿ ನಡೆಯುವ ಡಕ್ವರ್ಥ್-ಲೂಯಿಸ್ ನಿಯಮದ ಲೆಕ್ಕಾಚಾರವು ಭಾರತದ ಸಂಕಷ್ಟ ಹೆಚ್ಚಿಸಿತು. ವಿರಾಟ್ ಕೊಹ್ಲಿ ಅವರೊಬ್ಬರ ಶ್ರಮವು ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ. ದುರಾದೃಷ್ಟಕ್ಕೆ ಅದೇ ಪಂದ್ಯದಲ್ಲಿ ಯೂಸುಫ್ ಪಠಾಣ್ ಕೂಡ ವಿಫಲರಾದರು.

ಭಾರತದವರ ಬ್ಯಾಟಿಂಗ್‌ಗೆ ಆ ಪಂದ್ಯದಲ್ಲಿ ಬಲ ಬರಲಿಲ್ಲ. ಆದ್ದರಿಂದಾಗಿ ಗ್ರೇಮ್ ಸ್ಮಿತ್ ನಾಯಕತ್ವದ ಪಡೆಯುವರು ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಲು ಸಾಧ್ಯವಾಯಿತು. ಒಂದು ವೇಳೆ ಮಳೆಯ ಕಾರಣ ಪಂದ್ಯಕ್ಕೆ ಅಡ್ಡಿಯಾಗದಿದ್ದರೂ, ಆ ಹಣಾಹಣಿಯಲ್ಲಿ ಆತಿಥೇಯರು ಯಶ ಪಡೆಯುವ ಸ್ಥಿತಿಯಲ್ಲಿ ಇದ್ದರೆನ್ನುವುದನ್ನು ಒಪ್ಪಲೇಬೇಕು.

ಸರಣಿಯ ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿಯಾದರೂ ಬ್ಯಾಟಿಂಗ್‌ನಲ್ಲಿನ ಕೊರತೆಯನ್ನು ನೀಗಿಸಿಕೊಂಡಿದ್ದರೆ ಐತಿಹಾಸಿಕ ಸಾಧನೆಯ ಶ್ರೇಯವು ದೋನಿ ಪಡೆಯ ಯಶಸ್ಸಿನ ಕಿರೀಟಕ್ಕೆ ಗರಿಯಾಗುತ್ತಿತ್ತು.ನಾಯಕ ದೋನಿ ಕೂಡ ಸರಣಿ ಸೋಲಿಗೆ ‘ಬ್ಯಾಟಿಂಗ್ ವಿಭಾಗದಲ್ಲಿನ ಕೊರತೆ ಕಾರಣ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅದರಲ್ಲಿಯೂ ಮಧ್ಯಮ ಕ್ರಮಾಂಕದಲ್ಲಿನ ವೈಫಲ್ಯವು ಅವರಿಗೆ ಎದ್ದು ಕಾಣಿಸಿದೆ.ತಾವೂ ಸರಣಿಯಲ್ಲಿ ಹೆಚ್ಚು ರನ್ ಗಳಿಸಲಿಲ್ಲ ಎನ್ನುವ ಚಿಂತೆಯೂ ರಾಂಚಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗೆ ಕಾಡುತ್ತಿದೆ. ವೀರೇಂದ್ರ ಸೆಹ್ವಾಗ್,ಗೌತಮ್ ಗಂಭೀರ್ ಹಾಗೂ ಸಚಿನ್ ತೆಂಡೂಲ್ಕರ್ ಇಲ್ಲದಿದ್ದರೆ ಬ್ಯಾಟಿಂಗ್ ಬಲವೇ ಕುಗ್ಗಿ ಹೋಗುತ್ತದೆ ಎನ್ನುವ ಅಭಿಪ್ರಾಯ ಹುಸಿಯಾಗಿಸುವಲ್ಲಿ ಯುವಕರು ವಿಫಲರಾಗಿದ್ದೂ ಬೇಸರಕ್ಕೆ ಕಾರಣವಾಗಿದೆ. ಬೌಲರ್‌ಗಳನ್ನು ದೂರುವುದಕ್ಕೆ ಖಂಡಿತ ಅವಕಾಶವಿಲ್ಲ. ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಸಮಸ್ಯೆ ಆಗಿದ್ದು ಬ್ಯಾಟಿಂಗ್‌ನಲ್ಲಿ.

ಆದರೆ ಯೂಸುಫ್ ಪಠಾಣ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ದೂರುವುದಕ್ಕೆ ಅವಕಾಶವಿಲ್ಲ. ಪಠಾಣ್ ಅಂತೂ ಆಡಿದ ಮೂರು ಪಂದ್ಯಗಳಲ್ಲಿ ಒಟ್ಟು 166 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿಯಂತೂ ಶತಕ ಸಾಧನೆ ಮಾಡಿದರು.ದೋನಿ ಹಾಗೂ ಯುವರಾಜ್ ಸಿಂಗ್ ಅವರು ಸ್ವಲ್ಪವಾದರೂ ಅಬ್ಬರಿಸಿದ್ದರೆ; ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲಿನ ಕಹಿ ತಿನ್ನುವಂತೆ ಆಗುತ್ತಿರಲಿಲ್ಲ.


   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT