ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೊಹಿನೂರ್' ಇನ್ನು ನೆನಪಷ್ಟೇ...

Last Updated 24 ಡಿಸೆಂಬರ್ 2012, 19:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರತಿಷ್ಠಿತ ಬ್ರಿಗೇಡ್ ರಸ್ತೆಯಲ್ಲಿರುವ `ಕೊಹಿನೂರ್ ಹೋಟೆಲ್' ಸೋಮವಾರ ತನ್ನ ಅಂತಿಮ ದಿನದ ವಹಿವಾಟು ನಡೆಸಿ ಶಾಶ್ವತವಾಗಿ ಬಾಗಿಲು ಮುಚ್ಚಿತು.

ಕಳೆದ 55 ವರ್ಷಗಳಿಂದ ಎಲ್ಲಾ ವರ್ಗದ ಜನರ ಮನ ಸೆಳೆದಿದ್ದ ಈ ರೆಸ್ಟೋರೆಂಟ್ ತನ್ನದೇ ಆದ ವಿಶಿಷ್ಟ ಮಲಬಾರ್ ಶೈಲಿಯ ತಿನಿಸುಗಳಿಗೆ ಪ್ರಖ್ಯಾತವಾಗಿತ್ತು. ಇಲ್ಲಿನ `ಬ್ಲ್ಯಾಕ್ ಟೀ', ಚಿಕನ್ ಮತ್ತು ಮಟನ್ ಬಿರಿಯಾನಿ, ಪರೋಟ, ಎಗ್ ಕರಿಯನ್ನು ಲಕ್ಷಾಂತರ ಮಂದಿ ಸವಿದಿದ್ದಾರೆ. ಇನ್ನು ಇದು ನೆನಪು ಮಾತ್ರ.

ಸ್ವಾತಂತ್ರ್ಯ ಬಂದ ಕೆಲವು ವರ್ಷ ಇದು ನೆಹರು ಕೆಫೆಯಾಗಿದ್ದು, ಆ ಕಾಲದಲ್ಲಿ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಗೆ ಬಂದು ಹೋಗುವವರ ನೆಚ್ಚಿನ ಉಪಹಾರ ಗೃಹವಾಗಿತ್ತು. ನಂತರ ಅದನ್ನು  ಕೇರಳದ ಮಲಪುರಂ ಜಿಲ್ಲೆಯ ಹಾಜಿ ಕೆ.ಬೀರಾನ್ ಎಂಬುವವರು ಬಾಡಿಗೆಗೆ ಪಡೆದುಕೊಂಡರು. ಕೊಹಿನೂರ್ ಎಂದು ಹೆಸರು ಬದಲಾಯಿಸಿದರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ವ್ಯವಹಾರ ನಡೆಸುತ್ತಿರುವ ಈ ಹೋಟೆಲ್ ಈಚೆಗಿನ ದಿನಗಳಲ್ಲಿ ಕೆಳ ಮಧ್ಯಮ ವರ್ಗದವರ ಪಾಲಿಗೆ ಅತ್ಯಂತ ಇಷ್ಟದ ಉಪಹಾರ ಗೃಹವಾಗಿತ್ತು. ಏಕೆಂದರೆ ಈ ಪ್ರದೇಶದ ಆಸುಪಾಸಿನಲ್ಲೆಲ್ಲೂ ಇಷ್ಟೊಂದು ಕಡಿಮೆ ಬೆಲೆಗೆ ಚಹ ಮತ್ತು ಮಾಂಸಹಾರಿ ತಿನಿಸುಗಳು ಸಿಗುತ್ತಿರಲಿಲ್ಲ.

ಬೀರಾನ್ ನಂತರ ಮೊಹಿದ್ದೀನ್ ಕುಟ್ಟಿ ಇದನ್ನು ಮುನ್ನಡೆಸಿದರು. ಇವರೂ ಅನಾರೋಗ್ಯದಿಂದ ಮಲಪ್ಪುರಂನಲ್ಲೇ ನೆಲೆಸಿದ್ದು, ಅವರ ಮಕ್ಕಳು ಇದನ್ನು ನಡೆಸಿಕೊಂಡು ಹೋಗುತ್ತಿದ್ದರು. ಅರ್ಧ ಶತಮಾನದ ಹಿಂದಿದ್ದ ಮೇಜು, ಕುರ್ಚಿ ಸೇರಿದಂತೆ ಪೀಠೋಪಕರಣಗಳು ಇಲ್ಲಿನ ವೈಶಿಷ್ಟ್ಯವಾಗಿತ್ತು. 60 ವರ್ಷಗಳ ಹಿಂದಿನ ಗೋಡೆ ಗಡಿಯಾರ, ಕಪಾಟುಗಳೂ `ಕೊಹಿನೂರ್' ಜತೆಯಲ್ಲೇ ನೆನಪಲ್ಲಿ ಉಳಿಯುವಂತಹದ್ದೇ.

ಬ್ರಿಗೇಡ್ ರಸ್ತೆಯಲ್ಲಿ ಉಳಿದಿದ್ದ ಈ ಏಕೈಕ ಹಳೆಯ ಕಟ್ಟಡವನ್ನು ಸದ್ಯದಲ್ಲೇ ಕೆಡವಲಾಗುವುದು. ಬೆಂಗಳೂರಿನ ಮಕ್ಸೂದ್ ಎಂಬುವವರಿಗೆ ಈ ಕಟ್ಟಡ ಇರುವ ಸ್ಥಳ ಸೇರಿದ್ದು, ಬಾಡಿಗೆಗೆ ಇದ್ದವರು `ಮುಂದುವರಿಕೆ'ಗಾಗಿ ನ್ಯಾಯಾಲಯದಲ್ಲಿ ಹಲವು ಸಮಯದಿಂದ ಹೋರಾಟ ನಡೆಸಿದ್ದರು. ಕೊನೆಗೆ ಹೈಕೋರ್ಟ್‌ನಲ್ಲಿ ತೀರ್ಪು ಮಾಲೀಕರ ಪರವೇ ಬಂದಿತ್ತು. ನಂತರ ಪ್ರಸಕ್ತ ಹೊಟೇಲ್ ಮಾಲೀಕರಿಗೆ ಕಟ್ಟಡವನ್ನು ತೆರವುಗೊಳಿಸಲು ನ್ಯಾಯಾಲಯ ಎಂಟು ತಿಂಗಳ ಕಾಲಾವಧಿ ನೀಡಿತ್ತು. ಸೋಮವಾರಕ್ಕೆ ಆ ಗಡುವು ಮುಗಿದಿದೆ. ಹೋಟೆಲ್‌ನವರು ಮೇಲ್ಮನವಿ ಸಲ್ಲಿಸಿಲ್ಲ ಎಂದು ಹೋಟೆಲ್‌ನ ವ್ಯವಸ್ಥಾಪಕ ಮಹಮ್ಮದ್ ತಿಳಿಸಿದರು.

ಕೊನೆಯ ದಿನ ಹೋಟೆಲ್‌ನಲ್ಲಿ ನೂಕುನುಗ್ಗಲು. ನೂರಾರು ಮಂದಿ ಭೇಟಿ ನೀಡಿ ಕೆಲವು ಹೊತ್ತು ಕುಳಿತು ಟೀ ಕುಡಿದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಎದ್ದು ಹೋಗಿದ್ದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT