ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಮಾರುಕಟ್ಟೆಗೆ ಐತಿಹಾಸಿಕ ಕಲ್ಯಾಣಿ ‘ಬಲಿ’

Last Updated 25 ಡಿಸೆಂಬರ್ 2013, 6:08 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿರುವ ಕೋಳಿ ಮಾರುಕಟ್ಟೆ ದುರ್ನಾತ ಬೀರುತ್ತಿದೆ. ಸುತ್ತಮುತ್ತಲ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.

ಪಟ್ಟಣದಲ್ಲಿ 28 ಕೋಳಿ ಅಂಗಡಿಗಳಿವೆ. 22 ಮಾರ್ಕೆಟ್‌ನಲ್ಲಿವೆ. ದಿನಕ್ಕೆ 2ಟನ್‌ ಕೋಳಿ ಮಾಂಸ ಬಿಕರಿಯಾಗುವ ಮೂಲಕ 1ಲಕ್ಷ ರೂಪಾಯಿ ವಹಿವಾಟು ನಡೆಯುತ್ತದೆ. ಹಬ್ಬಗಳಲ್ಲಿ ಇದು ದುಪ್ಪಟ್ಟು.

ಒಂದು ಕೆ.ಜಿ ತೂಕದ ಕೋಳಿ ಕತ್ತರಿಸಿದರೆ ಕರುಳು, ಕಾಲು, ಕೊಕ್ಕು, ಪುಕ್ಕ ಸೇರಿದಂತೆ 400ಗ್ರಾಂ ತ್ಯಾಜ್ಯ ಸೃಷ್ಟಿಯಾಗುತ್ತದೆ. ದಿನಕ್ಕೆ 8 ಕ್ವಿಂಟಲ್‌ ತ್ಯಾಜ್ಯ. ಇದು ಕೋಳಿ ವ್ಯಾಪಾರಿಯ ಲೆಕ್ಕ. ಈ ತ್ಯಾಜ್ಯವನ್ನು ಸಮೀಪದ ಐತಿಹಾಸಿಕ ರಂಗಪ್ಪ ನಾಯಕನ ಕಲ್ಯಾಣಿಗೆ ತುಂಬುತ್ತಿದ್ದಾರೆ.

ಹಾಗಲವಾಡಿ ಪಾಳೇಗಾರ ರಂಗಪ್ಪನಾಯಕ ಈ ಕಲ್ಯಾಣಿ ನಿಮಿರ್ಸಿದ್ದರು. ಹಿಂದೆ ಈ ಕಲ್ಯಾಣಿ ಕುರುಬರಹಳ್ಳಿ, ರಾಯಪ್ಪನ ಪಾಳ್ಯ, ಹಳೆ ಊರಿಗೆ ನೀರು ಒದಗಿಸುತ್ತಿತ್ತು ಎನ್ನಲಾಗುತ್ತಿದೆ. ಈಗಲೂ ಇದರ ಪಕ್ಕ ಬನ್ನಿ ಮಂಟಪ, ಶಿವಲಿಂಗ, ನಂದಿ ವಿಗ್ರಹ ತ್ಯಾಜ್ಯದ ಮಧ್ಯೆ ಇವೆ. ದೇವಾಂಗ ಸಮುದಾಯದವರು ವಿಜಯ ದಶಮಿಯಂದು ಈಗಲೂ ಇಲ್ಲೇ ಬನ್ನಿ ಪೂಜೆ ನೆರವೇರಿಸುತ್ತಾರೆ. ಇಂಥ ಐತಿಹಾಸಿಕ ಕಲ್ಯಾಣಿ ಇಂದು ಕೋಳಿ ತ್ಯಾಜ್ಯದ ಆಗರವಾಗಿದೆ.

ಕೋಳಿ ಮಾರ್ಕೆಟ್ ಮುಂಭಾಗದ ರಸ್ತೆ ಸಹ ಹದಗೆಟ್ಟಿದೆ. ಬಸ್‌ಗಳೂ ಇಲ್ಲೇ ನಿಲ್ಲುತ್ತವೆ. ಆಟೊ ನಿಲ್ದಾಣವೂ ಇಲ್ಲಿಯೇ. ಹೂವು, ಕುಂಕುಮ ವ್ಯಾಪಾರಿಗಳಿಗಾಗಿ ನಿರ್ಮಿಸಿರುವ ಮಳಿಗೆಗಳು ಕಳಪೆ ಕಾಮಗಾರಿಯಿಂದ ಉದ್ಘಾಟನೆಗೂ ಮೊದಲೇ ಶಿಥಿಲಗೊಂಡಿವೆ. ಪ್ರಯಾಣಿಕರ ಆಸನಗಳನ್ನೇ ಆಕ್ರಮಿಸಿಕೊಂಡು ವ್ಯಾಪಾರ ಮುಂದುವರೆಸಿದ್ದಾರೆ. ಇವರೂ ಕೋಳಿ ತ್ಯಾಜ್ಯಕ್ಕೆ ಇನ್ನಷ್ಟು ತ್ಯಾಜ್ಯ ಸೇರಿಸುತ್ತಿದ್ದಾರೆ.

ಈ ಎಲ್ಲದರ ಫಲವಾಗಿ ನಿತ್ಯ ಪಟ್ಟಣಕ್ಕೆ ಬಂದು ಹೋಗುವ ಸಾವಿರಾರು ಪ್ರಯಾಣಿಕರು, ಸುತ್ತ ಮುತ್ತಲ ನಾಗರಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ‘ವ್ಯಾಪಾರಕ್ಕೆ ಸೂಕ್ತ ಮಾರುಕಟ್ಟೆ ನಿರ್ಮಿಸಿಕೊಡುವಂತೆ ಪುರಸಭೆಗೆ ಮನವಿ ಮಾಡಿಕೊಂಡಿದ್ದೇವೆ. ಪಟ್ಟಣದ ಯಾವುದೇ ಭಾಗದಲ್ಲಿ ಮಳಿಗೆ ನಿರ್ಮಿಸಿಕೊಟ್ಟರೂ ಅಲ್ಲಿಗೆ ಹೋಗಲು ಸಿದ್ದರಿದ್ದೇವೆ. ಇಲ್ಲಿ ಕಟ್ಟುವ ಬಾಡಿಗೆಯನ್ನು ಪುರಸಭೆಗೆ ಕಟ್ಟುತ್ತೇವೆ. ತ್ಯಾಜ್ಯ ವಿಲೇವಾರಿ ಖರ್ಚನ್ನೂ ಭರಿಸಲು ಸಿದ್ದರಿದ್ದೇವೆ. ಆದರೆ ಪುರಸಭೆ ಆಡಳಿತ ತಮ್ಮ ಮನವಿ ಆಲಿಸುತ್ತಿಲ್ಲ ಎಂದು ಕೋಳಿ ವ್ಯಾಪಾರಿಗಳು ದೂರುತ್ತಾರೆ.

ಮಟನ್‌ ಮಾರ್ಕೆಟ್‌ ಬಳಿ 2 ಮಳಿಗೆಗಳನ್ನು ಕೋಳಿ ವ್ಯಾಪಾರಕ್ಕೆ ಮೀಸಲಿಟ್ಟಿದ್ದಾರೆ. 22 ಮಂದಿ ಈ 2 ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಸಾಧ್ಯವಾ? ಇವು ಸಹ ಮಟನ್ ವ್ಯಾಪಾರಿಗಳ ಪಾಲಾಗಿವೆ ಎಂದು ಕೋಳಿ ವ್ಯಾಪಾರಿ ಇಕ್ಬಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋಳಿ ಮಾರ್ಕೆಟ್ ಇರುವ ಜಾಗ ಖಾಸಗಿ ಒಡೆತನದಲ್ಲಿದೆ. ಸ್ವಚ್ಛತೆ ಕಾಪಾಡುವಂತೆ ಸ್ಥಳದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ವ್ಯಾಪಾರಿಗಳಿಗೆ ವೆಂಕಟರಮಣ ದೇವಸ್ಥಾನದ ಬಳಿ ಮಳಿಗೆ ಒದಗಿಸಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT