ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಧ್ಯಾನದಲ್ಲಿ ತುಂಬಿತು ಕ್ರೀಡಾಂಗಣ

Last Updated 6 ಮಾರ್ಚ್ 2011, 18:50 IST
ಅಕ್ಷರ ಗಾತ್ರ

ಬೆಂಗಳೂರು: ಅದೇನು ಜನ... ಸಾಗರದ ಹಾಗೆ ಹರಿದು ಬಂದರು. ಹೀಗೆ ಆಗುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಇಷ್ಟೊಂದು ಕ್ರಿಕೆಟ್ ಪ್ರೇಮಿಗಳನ್ನು ಸೆಳೆದು ತಂದಿದ್ದು ಭಾರತ ತಂಡ ಎನ್ನುವುದಕ್ಕಿಂತ, ಇಂಗ್ಲೆಂಡ್ ವಿರುದ್ಧ ಅಚ್ಚರಿಯ ವಿಜಯ ಪಡೆದ ಐರ್ಲೆಂಡ್‌ನವರೆಂದು  ಹೇಳಬಹುದು.

ಐರ್ಲೆಂಡ್ ಆಡುವ ಎಲ್ಲ ಪಂದ್ಯಗಳಿಗೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಇರುತ್ತದೆಂದು ವಿಶ್ವಕಪ್ ಕ್ರಿಕೆಟ್ ಆರಂಭಕ್ಕೆ ಎಣಿಕೆ ಮಾಡಲಾಗಿತ್ತು. ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪಂದ್ಯ ನಡೆದಾಗಲೂ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಗಳು ಖಾಲಿ ಆಗಿಯೇ ಇದ್ದವು. ಆ ಪಂದ್ಯದಲ್ಲಿ ಅನಿರೀಕ್ಷಿತ ನಡೆಯುವವರೆಗೆ ಆನ್‌ಲೈನ್‌ನಲ್ಲಿಯೂ ಭಾರತ-ಐರ್ಲೆಂಡ್ ಪಂದ್ಯಗಳ ಟಿಕೆಟ್‌ಗಳು ಸಾಕಷ್ಟು ಲಭ್ಯವಾಗಿದ್ದವು.

ಕಳೆದ ಬುಧವಾರ ವಿಲಿಯಮ್ ಪೋರ್ಟರ್‌ಫೀಲ್ಡ್ ನಾಯಕತ್ವದ ತಂಡವು ಮೂರು ವಿಕೆಟ್‌ಗಳ ಅಂತರದಿಂದ ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ಇಂಗ್ಲೆಂಡ್‌ಗೆ ಆಘಾತ ನೀಡಿದ ಮರುದಿನವೇ ಆನ್‌ಲೈನ್‌ನಲ್ಲಿ ಜನರು ಟಿಕೆಟ್‌ಗಾಗಿ ಮುಗಿಬಿದ್ದಿದ್ದರು.

ಇಂಗ್ಲೆಂಡ್‌ಗೆ ಪೆಟ್ಟು ನೀಡಿದ ಐರ್ಲೆಂಡ್‌ನವರು ಭಾರತದವರಿಗೂ ಸವಾಲಾಗುತ್ತಾರೆ ಎನ್ನುವ ಆಸೆಯೂ ಕ್ರಿಕೆಟ್ ಆಸಕ್ತರಲ್ಲಿ ಬಲವಾಯಿತು. ಅದರ ಪರಿಣಾಮ ಭಾನುವಾರದ ಪಂದ್ಯದ ಸಂದರ್ಭದಲ್ಲಿ ಕಾಣಿಸಿತು. ಮೊದಲ ಎಸೆತದ ಹೊತ್ತಿಗಾಗಲೇ ಕ್ರೀಡಾಂಗಣದ ಹೆಚ್ಚಿನ ಗ್ಯಾಲರಿಗಳು ಭರ್ತಿ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದಂತೆ ‘ಎಲ್ಲ ಟಿಕೆಟ್‌ಗಳು ಸೋಲ್ಡ್‌ಔಟ್’ ಎನ್ನುವುದೂ ಸ್ಪಷ್ಟವಾಯಿತು.

ದುರ್ಬಲವೆಂದು ಈ ಹಿಂದೆ ಲೆಕ್ಕಾಚಾರ ಮಾಡಿದ ಐರ್ಲೆಂಡ್ ತಂಡವು ಆಡುವಾಗ ಇಷ್ಟೊಂದು ಪ್ರೇಕ್ಷಕರು ಇರುತ್ತಾರೆಂದು ಸ್ವತಃ ಕೆಎಸ್‌ಸಿಎ ಅಧಿಕಾರಿಗಳೂ ಕಲ್ಪನೆ ಮಾಡಿಕೊಂಡಿರಲಿಲ್ಲ. ಭಾರತದ ಪಂದ್ಯ ಎಂದರೆ ಕೆಲವು ಗ್ಯಾಲರಿಗಳು ಮಾತ್ರ ಫುಲ್ ಆಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಕ್ರೀಡಾಂಗಣವೇ ‘ಹೌಸ್‌ಫುಲ್’ ಆಯಿತು. ಇಷ್ಟೊಂದು ಜನರನ್ನು ಸೆಳೆದು ತಂದಿದ್ದು ಐರ್ಲೆಂಡ್ ಎನ್ನುವುದನ್ನು ಅರಿಯುವುದು ಕಷ್ಟವೇನು ಆಗಿರಲಿಲ್ಲ.

ಭಾರತ ತಂಡದ ಮೇಲೆ ಅಭಿಮಾನ ಹೆಚ್ಚಿದ್ದರೂ, ಅದು ಐರ್ಲೆಂಡ್ ಎದುರು ಆಡುವುದನ್ನು ಕ್ರೀಡಾಂಗಣಕ್ಕೆ ಬಂದು ನೋಡುವಷ್ಟು ಆಸಕ್ತಿ ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳಿಗೆ ಇರುವುದಿಲ್ಲ ಎನ್ನುವ ಊಹೆಯೂ ಹುಸಿ ಆಯಿತು. ವಿಚಿತ್ರವೆಂದರೆ ಕ್ರೀಡಾಂಗಣ ಒಳಗೆ ಭರ್ತಿ ಆಗಿದ್ದರೂ, ಹೊರಗೆ ಭಾರಿ ಜನದಟ್ಟಣೆ! ಇನ್ನೂ ಎಲ್ಲಿಯಾದರೂ ಹೇಗಾದರೂ ಟಿಕೆಟ್ ಸಿಗಬಹುದು ಎನ್ನುವ ಆಸೆಯ ನೋಟದಿಂದ ನೋಡುತ್ತಿದ್ದ ಯುವಕರ ಸಂಖ್ಯೆ ಅಪಾರ.

ಬೆಳಿಗ್ಗೆ ಹತ್ತರ ಹೊತ್ತಿಗಾಗಲೇ ಕ್ರೀಡಾಂಗಣದತ್ತ ಜನಸಾಗರ ಹರಿದಿದ್ದರಿಂದ ಕಸ್ತೂರಬಾ ರಸ್ತೆ, ಮಹಾತ್ಮಾ ಗಾಂಧಿ ರಸ್ತೆ, ಕಬ್ಬನ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್. ಇದರಿಂದಾಗಿ ವಾಹನ ಸವಾರರು ಗಂಟೆಗಟ್ಟಲೇ ಮಹಾಬೀದಿಗಳ ಬಿಸಿಲಲ್ಲಿ ಬೇಯಬೇಕಾಯಿತು. ಪಾರ್ಕಿಂಗ್ ವ್ಯವಸ್ಥೆ ಎಲ್ಲಿದೆ? ಎಂದು ಹುಡುಕಾಡುತ್ತಿದ್ದ ವಾಹನ ಸವಾರರ ಕಷ್ಟವಂತೂ ಅಷ್ಟಿಷ್ಟಲ್ಲ! ಆದರೂ ಕ್ರಿಕೆಟ್ ಪ್ರೀತಿಯು ಈ ಎಲ್ಲ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಜನರಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT