ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಫೈನಲ್ ಪಂದ್ಯ: ಒತ್ತಡ ಸಹಿಸದೇ ವೆಬ್‌ಸೈಟ್ ಕ್ರ್ಯಾಷ್

Last Updated 21 ಫೆಬ್ರುವರಿ 2011, 18:55 IST
ಅಕ್ಷರ ಗಾತ್ರ

ಮುಂಬೈ, ನವದೆಹಲಿ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆಯಲು ಮುಗಿಬಿದ್ದಿರುವ ಕ್ರಿಕೆಟ್ ಪ್ರೇಮಿಗಳ ಒತ್ತಡ ಸಹಿಸದೇ ಟಿಕೆಟ್ ಮಾರಾಟದ ಅಧಿಕೃತ ಜಾಲತಾಣವು ‘ಕ್ರ್ಯಾಷ್’ ಆಗಿದೆ.

ಇದರಿಂದಾಗಿ ಫೈನಲ್ ಪಂದ್ಯ ನೋಡಬೇಕೆನ್ನುವ ಉತ್ಸಾಹದಲ್ಲಿರುವವರಿಗೆ ಭಾರಿ ನಿರಾಸೆ ಕಾಡಿತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಉದ್ರಿಕ್ತಗೊಂಡ ಘಟನೆ ನವದೆಹಲಿಯಲ್ಲಿ ಸೋಮವಾರ ನಡೆದಿದೆ.

(www.kyazoonga.com) ವೆಬ್‌ಸೈಟ್‌ನ ಮೂಲಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಟಿಕೆಟ್ ಖರೀದಿಸಲು ಮುಂದಾದಾಗ ಯಾವುದೇ ಪ್ರತಿಕ್ರಿಯೆ ಬರದೇ ಹೋಯಿತು. ಮೊದಲೇ ಕಾದು ಸುಸ್ತಾಗಿದ್ದ ಕ್ರಿಕೆಟ್ ಪ್ರೇಮಿಗಳು ಇದರಿಂದ ಕುಪಿತಗೊಂಡರು.

ವಿಶ್ವದ ಮೂಲೆಮೂಲೆಯಿಂದ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆಯಲು ಒಟ್ಟಿಗೆ ಯತ್ನಿಸಿದ್ದರಿಂದ ವೆಬ್‌ಸೈಟ್ ‘ಕ್ರ್ಯಾಷ್’ ಆಗಿತ್ತು. ಇದರಿಂದ ನಿತ್ಯವು ಕ್ರಿಕೆಟ್ ಜ್ವರ ಹೇಗೆ ಏರುತ್ತಿದೆ ಎನ್ನುವುದು ತಿಳಿದು ಬಂದಿತು. ‘ಫೈನಲ್ ಪಂದ್ಯಕ್ಕೆ ಟಿಕೆಟ್‌ನ ಅಗತ್ಯತೆ ಎಷ್ಟಿರುತ್ತದೆ ಎನ್ನುವದನ್ನು ತಿಳಿದು ಮುಂಚಿತವಾಗಿ ಈ ಕುರಿತು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದು ಕೆಲ ಅಭಿಮಾನಿಗಳು ಅಭಿಪ್ರಾಯಪಟ್ಟರು.

ಫೈನಲ್‌ಗೆ ನಾಲ್ಕೇ ಸಾವಿರ ಟಿಕೆಟ್: ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾದರೂ ಸಿದ್ಧಗೊಳ್ಳದ ಕಾರಣ ಈಗಾಗಲೇ ಸಮಸ್ಯೆಗೆ ಈಡಾಗಿರುವ ಮುಂಬೈಯ ವಾಂಖೆಡೆ ಕ್ರೀಡಾಂಗಣ, ಫೈನಲ್ ಪಂದ್ಯ ನೋಡಲು ಜನಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ಸೂಕ್ತ ಪ್ರಮಾಣದ ಟಿಕೆಟ್ ನೀಡದ ಕಾರಣ ವಿವಾದವನ್ನೂ ಮೈಮೇಲೆ ಎಳೆದುಕೊಂಡಿದೆ.

‘ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಭದ್ರತಾ ನಿಯಮಾವಳಿ ಪ್ರಕಾರ ಕ್ರೀಡಾಂಗಣವನ್ನು ನವೀಕರಿಸಲಾಗಿದ್ದು ಆಸನ ಸಾಮರ್ಥ್ಯ 38 ಸಾವಿರದಿಂದ 33 ಸಾವಿರಕ್ಕೆ ಇಳಿದಿದೆ. ಮುಂಬೈ ಕ್ರಿಕೆಟ್ ಸಂಸ್ಥೆ ಜೊತೆ ಸಂಬಂಧ ಹೊಂದಿರುವ ಕ್ಲಬ್‌ಗಳಿಗೆ 20 ಸಾವಿರ ಟಿಕೆಟ್‌ಗಳನ್ನು ಮೀಸಲಾಗಿಡಲಾಗಿದೆ. ಐಸಿಸಿಗೆ 8,500 ಟಿಕೆಟ್‌ಗಳನ್ನು ನೀಡಬೇಕಿದೆ. ಹೀಗಾಗಿ 4,000ನಷ್ಟು ಟಿಕೆಟ್‌ಗಳು ಮಾತ್ರ ಮಾರಾಟಕ್ಕೆ ಲಭ್ಯವಾಗಿವೆ’ ಎಂದು ಟೂರ್ನಿಯ ನಿರ್ದೇಶಕ ರತ್ನಾಕರ ಶೆಟ್ಟಿ ಪ್ರಕಟಿಸಿದ್ದಾರೆ.

‘ಮಾರಾಟಕ್ಕೆ ಲಭ್ಯವಿರುವ ನಾಲ್ಕು ಸಾವಿರ ಟಿಕೆಟ್‌ಗಳ ಪೈಕಿ ಸಾವಿರ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ, ಮಿಕ್ಕ ಟಿಕೆಟ್‌ಗಳನ್ನು ಕ್ರೀಡಾಂಗಣದ ಟಿಕೆಟ್ ಕೌಂಟರ್ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸಂಘಟನಾ ಸಮಿತಿಯು ಕ್ಲಬ್ ಸದಸ್ಯರನ್ನು ಸಹ ಸಾರ್ವಜನಿಕರೆಂದೇ ತಿಳಿದಿದೆ. ಹೀಗಾಗಿ ಜನಸಾಮಾನ್ಯರಿಗೆ ಕೇವಲ ನಾಲ್ಕು ಸಾವಿರ ಟಿಕೆಟ್ ಸಿಗುತ್ತಿವೆ ಎಂಬ ವಾದದಲ್ಲಿ ಅರ್ಥವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಸಂಘಟಕರ ಈ ನಿರ್ಧಾರಕ್ಕೆ ಅಭಿಮಾನಿಗಳು ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ 65 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಆರಾಮವಾಗಿ ಕುಳಿತು ನೋಡಲು ಅವಕಾಶವಿದೆ. ಕೆಲವೇ ದಿನಗಳಲ್ಲಿ ಕ್ರೀಡಾಂಗಣ ಸಂಪೂರ್ಣ ಸನ್ನದ್ಧವಾಗುತ್ತಿತ್ತು. ಫೈನಲ್ ಪಂದ್ಯವನ್ನು ಅಲ್ಲಿಯೇ ನಡೆಸಬಹುದಾಗಿತ್ತು’ ಎಂದು ಆಕ್ರೋಶಗೊಂಡ ಅಭಿಮಾನಿಯೊಬ್ಬ ಪ್ರತಿಕ್ರಿಯೆಯಲ್ಲಿ ಕಿಡಿಕಾರಿದ್ದಾನೆ.

‘ಬಹುದೊಡ್ಡ ಪಂದ್ಯಕ್ಕೆ ಕೇವಲ ನಾಲ್ಕು ಸಾವಿರ ಟಿಕೆಟ್‌ಗಳೇ? ಇದು ಸಂಘಟಕರ ವೈಫಲ್ಯವೇ ಸರಿ’ ಎಂದು ಆತ ಆಕ್ರೋಶವನ್ನು ಹೊರಹಾಕಿದ್ದಾನೆ. ‘ನಮಗೆ ಗೇಲಿ ಮಾಡುತ್ತೀರಾ? ಇಷ್ಟೊಂದು ಚಿಕ್ಕ ಮೈದಾನದಲ್ಲಿ ಫೈನಲ್ ನಡೆಸುವ ಅಗತ್ಯವೇನಿತ್ತು? ಈಡನ್ ಗಾರ್ಡನ್ಸ್‌ನಂತಹ ದೊಡ್ಡ ಕ್ರೀಡಾಂಗಣದಲ್ಲಿಯೇ ಈ ಪಂದ್ಯವನ್ನು ನಡೆಸಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ’ ಎಂದು ಮತ್ತೊಬ್ಬ ಅಭಿಮಾನಿ ಆಗ್ರಹಿಸಿದ್ದಾನೆ. ಈ ಮಧ್ಯೆ ಮಾ. 13ರ ನ್ಯೂಜಿಲೆಂಡ್-ಕೆನಡಾ ನಡುವಿನ ಪಂದ್ಯದ ವೇಳೆಗೆ ವಾಂಖೆಡೆ ಕ್ರೀಡಾಂಗಣ ಸಂಪೂರ್ಣ ಸನ್ನದ್ಧವಾಗಲಿದೆ ಎಂದು ಶೆಟ್ಟಿ ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT