ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸಿ ಇದು ಕತೆಯಲ್ಲ... ಹೇಳಲೇಬೇಕಾದ ವಾಸ್ತವ

Last Updated 4 ಏಪ್ರಿಲ್ 2013, 8:29 IST
ಅಕ್ಷರ ಗಾತ್ರ

ಚುನಾವಣೆಯಲ್ಲಿ, ಜನ ರಾಜಕೀಯದವರಿಂದ ಹಣ ಕೀಳುವ ಸ್ವಾರಸ್ಯಗಳನ್ನು ನಿಮಗೆ ಹೇಳಲೇಬೇಕು. ಕ್ಷಮಿಸಿ ಇದು ಕತೆಯಲ್ಲ....ವಾಸ್ತವ!

ದೃಶ್ಯ - 1: ಒಂದು ಪಕ್ಷದ ಪ್ರಚಾರ. ಬೀದಿಯಲ್ಲಿ ಹೋಗುತ್ತಿರುವಾಗ ಒಂದು ಧಾರ್ಮಿಕ ಕೇಂದ್ರದ ಬಳಿ ಒಬ್ಬ ಬಂದು, ಸ್ಥಳೀಯ ಮುಖಂಡನ ಕಿವಿಯಲ್ಲಿ ಪಿಸುಗುಟ್ಟುತ್ತಾನೆ.  `ಸರ್, ಆ ಪಕ್ಷದವರು, 30 ಸಾವಿರದಲ್ಲಿ ಚಪ್ಪರ ಹಾಕೋಕೆ ಒಪ್ಪಿದ್ದಾರೆ. ವಠಾರದ ಹುಡುಗರೆಲ್ಲಾ ಆಚೆ ಸರ್'. ಮುಖಂಡ ಅಭ್ಯರ್ಥಿಗೆ ಇದನ್ನು ಪಿಸುಗುಟ್ಟುತ್ತಾನೆ.  `ಸರಿ, ನಾವು 40 ಸಾವಿರ ಕೊಡುವ ವ್ಯವಸ್ಥೆ ಮಾಡಿ' ಎಂದು ಅಭ್ಯರ್ಥಿ ಮುಂದುವರಿಯುತ್ತಾನೆ. ಮುಖಂಡ ಸ್ಥಳೀಯ ವ್ಯಕ್ತಿಗೆ, `ಸರ್ ನಾಳೆ 35 ಸಾವಿರ ಕೊಡ್ತೇನೆ ಬನ್ನಿ' ಅನ್ನುತ್ತಾನೆ. ಇಲ್ಲಿ 5 ಸಾವಿರ ಎಲ್ಲಿಗೆ ಹೋಯಿತು! ಅರ್ಥವಾಯಿತಲ್ಲ.

ದೃಶ್ಯ - 2: ಇನ್ನೊಂದು, ಚುನಾವಣೆಯ ಸಂದರ್ಭ: ನಾಯಕನ ಮನೆಯಲ್ಲಿ ರಾತ್ರಿಯಾದಂತೆ ಜನವೋ ಜನ.ಯುವಕರ ಗುಂಪೊಂದು ನಾಯಕನ ಮುಂದೆ ನಿಂತಿದೆ. ಅದಕ್ಕೊಬ್ಬ ಮುಖಂಡ. 20 ರಷ್ಟು ಸದಸ್ಯರು. ಒಬ್ಬ ಮರಿ ಪುಢಾರಿ. `ಸರ್, ನಮ್ಮ ವಾರ್ಡ್‌ನಲ್ಲಿ ಎಲ್ಲಾ ವೋಟ್ ನಿಮಗೆ, `ಅ' ಪಕ್ಷದ ಅಡ್ರೆಸ್ ಇಲ್ಲ.  `ಬಿ' ಪಕ್ಷ ಲೆಕ್ಕಕ್ಕಿಲ್ಲ ಸರ್. ಆದರೆ ಅವರು ಸಿಕ್ಕಾಪಟ್ಟೆ ಹಣ ಹೆಂಡ ಹಂಚುತ್ತಾರೆ. ನಾವು ಸ್ವಲ್ಪ ಬಿಂದಾಸ್ ಖರ್ಚು ಮಾಡಿದರೆ ಜನ ನಮ್ಮ ಪರ ಸರ್. ಅನುಭವಿ, ಹಿರಿಯ ನಾಯಕನೂ ಚುನಾವಣೆಯ ವೇಳೆಯಲ್ಲಿ ಭಟ್ಟಂಗಿಗಳು ಸೃಷ್ಟಿಸುವ ಭ್ರಮಾಲೋಕದಲ್ಲಿ ಗೋಣು ಅಲ್ಲಾಡಿಸುತ್ತಾನೆ. ಇನ್ನು ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿಯ ಕೈಗೊಂಬೆಯಾಗಿ ವ್ಯವಸ್ಥೆಯ ವಿರುದ್ಧ ಈಜುವ ರಿಸ್ಕ್ ತೆಗೆದುಕೊಳ್ಳದೇ ಮೌನವಾಗುತ್ತಾನೆ. ಒಟ್ಟಿನಲ್ಲಿ ನೋಟಿನ ಕಂತು ಆ ಹುಡುಗರ ಕೈ ಸೇರುತ್ತದೆ. ಆ ಹುಡುಗರು ಹೊರಗೆ ಹೋಗಿ ಹಣ ಹಂಚಿಕೊಳ್ಳುತ್ತಾರೆ. ಈ ಗುಂಪಿನೊಂದಿಗೆ ಒಳಗೆ ಬಾರದ 5-6 ಹುಡುಗರಲ್ಲಿ ಮತ್ತೊಬ್ಬ ನಾಯಕನ ಸ್ಥಾನದಲ್ಲಿ ನಿಂತು, ಒಳಗೆ ಬಂದಿದ್ದ 20 ಹುಡುಗರ ಪೈಕಿ 10 ಜನರನ್ನು ಕರಕೊಂಡು, ಪುನಃ ಒಳಗೆ ಬಂದು `ಸರ್, ನಮ್ಮ ಊರೇ ನಿಮ್ಮದು...' ಎಂದು ಅಭ್ಯರ್ಥಿಯ ಕಿವಿಗೆ ಹೂ ಇಟ್ಟು ಹಣ ಪಡೆಯುತ್ತಾರೆ.

ಚುನಾವಣೆ ಹತ್ತಿರ ಬಂದಂತೆ, ಕೆಲವು ಯುವ ಸಂಸ್ಥೆಗಳಿಗೆ ನೇರ ಮದ್ಯದ ಪೆಟ್ಟಿಗೆ ತಲುಪುತ್ತದೆ. ಕೆಲವೊಮ್ಮೆ ಹತ್ತಿರದ ಹೊಟೇಲ್‌ನ ೂಪನ್‌ಗಳು ತಲುಪುತ್ತವೆ. ಹಾಗೇ ಕೊಡುವಲ್ಲಿ ವಿಫಲವಾದ ಅಭ್ಯರ್ಥಿ ಬಗ್ಗೆ, ಅಯ್ಯೋ ಅವರು ಏನೂ ಇಲ್ಲ, ಸೋಲೋದು ಗ್ಯಾರಂಟಿ ಎಂಬ ಸುದ್ದಿಯನ್ನು ವ್ಯವಸ್ಥಿತವಾಗಿ ಹಬ್ಬಿಸುತ್ತಾರೆ.

ದೃಶ್ಯ - 3: ಇದೆಲ್ಲ ಆಗುತ್ತಿರುವಾಗ ಒಬ್ಬ ಪುಡಾರಿ ಅಭ್ಯರ್ಥಿಯ ಕಿವಿಯಲ್ಲಿ ಹೇಳುತ್ತಾನೆ. ಸರಿ ಅವರನ್ನು ಒಳಗೆ ಕರಿ.. ಎನ್ನುವಾಗ ಒಂದೇ ಜಾತಿ ಮುಖವಾಡದ ಗುಂಪು ಬಂದು ಕೈಕಟ್ಟಿ ನಿಲ್ಲುತ್ತದೆ. ಅದರ ನಾಯಕ ಠೀವಿಯಿಂದ ನಾಯಕನ ಎದುರು ಕುಳಿತ ಕ್ಷಣ ಉಳಿದವರೆಲ್ಲರಿಗೂ ಹೊರಕ್ಕೆ ಹೋಗಲು ಆಜ್ಞೆಯಾಗುತ್ತದೆ.

`ಸರ್ ಇವರು  `ಎಕ್ಸ್'  ಜಾತಿಯ ಸಂಘದ ಅಧ್ಯಕ್ಷರು...' ಎಲ್ಲ ಪರಿಚಯ ಆದ ಮೇಲೆ, `ಇವರ ಸಮುದಾಯದ ಮತ 25 ಸಾವಿರ ಇದೆ. ಇವರು ಹೇಳಿದ್ರೆ ಮುಗೀತು ಸರ್ ಎಲ್ಲಾ ನಮಗೆ...'. ವ್ಯವಹಾರ ಕುದುರುತ್ತದೆ. ಈಗಾಗಲೇ ಕಿವಿಗೆ ತುಂಬಾ ಹೂ ಇಟ್ಟಿದ್ದರಿಂದ ನಾಯಕನ ತಲೆಗೆ ಒಂದು ಹೂವು ಇಟ್ಟು ಒಂದಿಷ್ಟು ಸಾವಿರ/ಲಕ್ಷ ಸಂದಾಯವಾಗುತ್ತದೆ.

ದೃಶ್ಯ - 4: ಮತ ಕೇಳಲು ನಾಯಕನ ಹಿಂಡು ಜೈಕಾರ ಹಾಕುತ್ತಾ ಹೋದಂತೆ, ಕತ್ತಲಾದ ಮೇಲೆ ಒಬ್ಬ ಕ್ರೈಸ್ತ ಪಾದ್ರಿ ಅಥವಾ ಮುಸ್ಲಿಂ ಗುರು ಅಥವಾ ಹಿಂದೂ ಸ್ವಾಮಿ.... ಹೀಗೇ ಆಯಾ ಕ್ಷೇತ್ರದಲ್ಲಿ ಸಿಕ್ಕಂತೆ ಭೇಟಿ. ಬಾಗಿಲು ಮುಚ್ಚಿದ ಕೋಣೆಯೊಳಗೆ ಎಲ್ಲವೂ ಗಪ್-ಚುಪ್ ವ್ಯವಹಾರ. ಹೊರಗೆ ಬಂದ ನಾಯಕನ ಮೊಗದಲ್ಲಿ ಮಂದಹಾಸ! ಪ್ರತಿರಾತ್ರಿ ಬೇರೆ ಬೇರೆ ಅಭ್ಯರ್ಥಿಗಳು ಬಂದು ನಗುತ್ತ ಮರಳುವ ವಿಷಯ ಗೊತ್ತಿರುವುದು ಕಾವಲುಗಾರನಿಗೆ ಮಾತ್ರ. ಕಾವಲುಗಾರನಿಗೆ ನಗು ಬಾರದಿರುತ್ತದೆಯೇ! ಯಾಕೆ ಎಂಬುದು ಬೇಡ ಬಿಡಿ...
ಇದೆಲ್ಲ ಆದ ಮೇಲೆ ಕೆಲವು ಸಂಘ-ಸಂಸ್ಥೆಗಳ ಜನ ಎಲ್ಲೆಲ್ಲಿ ರಾತ್ರಿ ಸೇರುತ್ತಾರೋ ಅಲ್ಲಿಗೆಲ್ಲಾ ಅಭ್ಯರ್ಥಿ ಹೋಗಲೇಬೇಕು. ಹೋಗುತ್ತಾನೆ ಕೂಡಾ.

ದೃಶ್ಯ - 5: ಇನ್ನೊಂದು ಅದ್ಭುತ ಅನುಭವ. ಪಕ್ಷ ಒಂದರ ಸಭೆಗೆ ರೂ. 150 ತಲಾ ಮಹಿಳೆಗೆ ಕೂಲಿ ನಿರ್ಧಾರವಾಗಿತ್ತು. ಉ. ಕರ್ನಾಟಕದ ಕ್ಷೇತ್ರ. ಒಬ್ಬೊಬ್ಬ ಪುಡಾರಿ ಎಷ್ಟು ಜನರನ್ನು ತರುತ್ತಾನೆ ಎಂಬುದನ್ನು ಲೆಕ್ಕ ಮಾಡಲು ಇನ್ನೊಬ್ಬ ವೀಕ್ಷಕ. ವೀಕ್ಷಕನನ್ನು ಯಾವುದೋ ಓಣಿಯಲ್ಲಿ ಕರೆದುಕೊಂಡು `ಸರ್ ನೋಡಿ, 30 ಹೆಂಗಸರು ಹೋಗ್ತಿದ್ದಾರೆ... ಲಿಸ್ಟ್ ತಗೊಳ್ಳಿ ಸರ್... ಅಮ್ಮೋ ನೀವ್ ಹೋಗ್ತಾ ಇರಿ... ಬೇಗ...' ಎಂದ ಪುಢಾರಿ, ಆಚೆ-ಈಚೆ ತಿರುಗಿಸಿ ಇನ್ನೊಂದು ಓಣಿಯಲ್ಲಿ ಪುನಃ 20 ಮಹಿಳೆಯರನ್ನು ತೋರಿಸುತ್ತಾನೆ. ವೀಕ್ಷಕ ಅರ್ಥಮಾಡಿಕೊಂಡ ಈ ಮೊದಲು ಬುರ್ಕಾ ಹಾಕಿದ್ದ 15ಕ್ಕೂ ಹೆಚ್ಚು ಹೆಂಗಸರು, ಬುರ್ಕಾ ತೆಗೆದು ಸೀರೆ ಧರಿಸುವಲ್ಲಿ ಜೊತೆಗೆ ಬೇರೆ 5 ಹಿಂದೂ ಮಹಿಳೆಯರ ಜೊತೆ ಸೇರಿದ್ದರು.... ಜನ ಅವರೇ, ಲೆಕ್ಕ ಬೇರೆ ಬೇರೆ.

ದೃಶ್ಯ - 6: ಅದೇ ಸಭೆಗೆ ವಾಹನ ಬಾಡಿಗೆ ಕೊಡಲು ವಾಹನದ ಪಟ್ಟಿ ನೋಡಿದ ವೀಕ್ಷಕ ಕಂಗಾಲು, ಯಾಕೆಂದರೆ, ಅದರಲ್ಲಿ ಕೆಲವೊಂದು ಸರ್ಕಾರಿ ಕಾರುಗಳ ನಂಬರ್‌ಗಳೂ ಇದ್ದವು. ಅಂದರೆ, ಚುನಾವಣೆಗೆ ಸರ್ಕಾರಿ ವಾಹನ ತಂದದ್ದಲ್ಲ. ಮೈದಾನದಲ್ಲಿದ್ದ ಕೆಲವು ವಾಹನದ ಸಂಖ್ಯೆಯನ್ನು ಬಾಡಿಗೆಗೆ ಪಟ್ಟಿ ಮಾಡುವಾಗ ಸೇರಿಸಿದ್ದು... ಇದು ಅತಿಶಯೋಕ್ತಿ ಎಂದೆನಿಸಿದರೆ ನಾನು ಬೇಸರಿಸುವುದಿಲ್ಲ. ನಿಮ್ಮ ಮುಗ್ಧತೆಗೆ ಮೌನವಾಗುತ್ತೇನೆ.

ಸಾಕು ಬಿಡಿ, ಇನ್ನು ಇಷ್ಟೆಲ್ಲಾ ಹಣ ಹಂಚಿದ್ದಕ್ಕೆ ಅದು ಮತವಾಗಿ ಪರಿವರ್ತನೆ ಆಗುತ್ತದೆಯೇ? ಮತವನ್ನು ಸೇರಿಸುವ ಶಕ್ತಿ ಇರುವುದು ಬೂತ್ ಮಟ್ಟದ ಕಾರ್ಯಕರ್ತರ ಪರಿಶ್ರಮಕ್ಕೆ ಮಾತ್ರ. ಅಪರೂಪಕ್ಕೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ, ಕಾರ್ಪೊರೇಟರ್ ಸ್ವಕ್ಷೇತ್ರದ ಮತಗಳನ್ನು ಪಕ್ಷದ ಅಭ್ಯರ್ಥಿಗೆ ನೀಡಿಸಬಲ್ಲ ಸಾಮರ್ಥ್ಯ ಹೊಂದಿರುವುದೂ ಉಂಟು. ಪಕ್ಷದ ಅಭ್ಯರ್ಥಿಯ ವರ್ಚಸ್ಸು, ವ್ಯಕ್ತಿತ್ವ ಕೂಡಾ ಮತ ಕೊಡಿಸುತ್ತದೆ. ಪಕ್ಷದ ಜನಪ್ರಿಯ ಕಾರ್ಯಕ್ರಮಗಳೂ ಸ್ವಲ್ಪ ವೋಟ್ ಒದಗಿಸುತ್ತವೆ. ಉಳಿದಂತೆ ನಾನು ಈಗಾಗಲೇ ಪಟ್ಟಿ ಮಾಡಿದ  ಸತ್ಯ ಘಟನೆಗಳು ಯಾವುದೂ ಕೂಡಾ `ವೋಟ್ ಆಗಿ ಪರಿವರ್ತನೆ ಆಗುವುದೇ ಇಲ್ಲ. ಆದರೂ ಅಭ್ಯರ್ಥಿಗಳು ಛಲಕ್ಕೆ ಬಿದ್ದು ಹಣ ಹಂಚುತ್ತಾರೆ.

ಯಾವುದೋ ಒಂದು ಧಾರ್ಮಿಕ ಕೇಂದ್ರಕ್ಕೆ ಗೋಡೆ ಕಟ್ಟಲು ಹಣ ನೀಡಿದ ಬೂತ್‌ನಲ್ಲಿ 10 ವೋಟ್, ಯುವಕ ಸಂಘದವರು ಮಜಾ ಉಡಾಯಿಸಿದ ಬೂತ್‌ನಲ್ಲಿ 25 ವೋಟ್, 10 ಸಾವಿರಕ್ಕೂ ಹೆಚ್ಚು ಜನ ಸಭೆ ಸೇರಿ, ಅದರಲ್ಲಿ 5000 ಜನಕ್ಕೆ ಹಣ ಕೊಟ್ಟು ಪ್ರಚಾರ ಗಿಟ್ಟಿಸಿದ ಊರಿನಲ್ಲಿ 1000 ವೋಟ್, ನಮ್ಮ ಜೊತೆ 30 ಹುಡುಗರು ಬಂದು, ಊರಿನ ಕೆಲವು ಮನೆಗಳ ಭೇಟಿ ಮಾಡಿಸಿ, ಹಣ ಪಡೆದ ಬೂತ್‌ನಲ್ಲಿ 2 ವೋಟ್..! ಹಾಗಾದರೆ, ಚುನಾವಣೆಯಲ್ಲಿ ಹಣ ಖರ್ಚು ಮಾಡಿದ ಕಾರಣಕ್ಕೆ ಗೆಲ್ಲಲು ಸಾಧ್ಯ ಎಂಬ ವಾದವನ್ನು ಹೇಗೆ ಸಮರ್ಥಿಸುವುದು? 3 ಪಕ್ಷಗಳು ತಲಾ 3 ಕೋಟಿಯಂತೆ ಏಕಕಾಲಕ್ಕೆ ಖರ್ಚು ಮಾಡಿ ಒಂದು ಪಕ್ಷದ ಅಭ್ಯರ್ಥಿ ಗೆಲ್ಲುವುದಾದರೆ ಉಳಿದ ಎರಡು ಪಕ್ಷಗಳ ಹಣ ಖುರ್ಚು ಮಾಡಿದ್ದು ಯಾರಿಗೆ? ಅನೇಕ ಸಂದರ್ಭದಲ್ಲಿ ಅತೀ ಹೆಚ್ಚು ಖರ್ಚು ಮಾಡಿದವ ಸೋಲುವುದೂ ಇದೆ.
ಅಂದರೆ ನಾನು ಹೇಳಹೊರಟಿರುವುದು ಚುನಾವಣೆಗೆ ಹಣ ಖರ್ಚು ಮಾಡುವುದೇ ಬೇಡವೆಂದಲ್ಲ. ಅದರ ಅಗತ್ಯವೇ ಇಲ್ಲ ಎಂದಲ್ಲ! ಪೋಲು ಮಾಡುವ ಎಲ್ಲಾ ಹಣ ವೋಟ್ ಆಗಿ ಪರಿವರ್ತನೆ ಆಗುವುದಿಲ್ಲ ಎಂಬುದು ನನ್ನ ಪ್ರಬಲ ವಾದ.

ಹಾಗಾದರೆ ಯಾವ ಹಂತದಲ್ಲಿ, ಖರ್ಚು ಮಾಡಿದರೆ ವೋಟ್ ಆಗಿ ಪರಿವರ್ತನೆ ಸಾಧ್ಯ ಎಂಬ ಬಗ್ಗೆ ರಾಜಕೀಯ ಪಕ್ಷಗಳು ನಾಯಕರು ಕೊಂಚ ಯೋಚಿಸಬೇಕಲ್ಲವೇ?  (ನಾಳೆಯ ಸಂಚಿಕೆಯಲ್ಲಿ ಭಾಗ 5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT