ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆ ಮೀರಿಸಿದ ಸರ್ಕಾರಿ ಶಾಲೆ

ಶೈಕ್ಷಣಿಕ ಅಂಗಳ
Last Updated 8 ಜನವರಿ 2014, 5:36 IST
ಅಕ್ಷರ ಗಾತ್ರ

ಹುಣಸಗಿ: ನಮ್ಮ ಮಕ್ಕಳು ಹೆಚ್ಚು ವಿದ್ಯಾವಂತರಾಗಲಿ ಎಂದು ಪಾಲಕರು ಹಂಬಲಿಸಿ, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕಳುಹಿಸುವುದೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ಹುಣಸಗಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪೈಪೋಟಿ ನಡೆಸು­ತ್ತಾರೆ. ಇದಕ್ಕೆ ಇಲ್ಲಿನ ಪರಿಸರ, ಶೈಕ್ಷಣಿಕ ಪ್ರಗತಿಯೇ ಕಾರಣ ಎನ್ನುತ್ತಾರೆ ಪಾಲಕರು.

1996ರಲ್ಲಿ ಪ್ರಾರಂಭವಾದ ಈ ಶಾಲೆ, ಸುಸಜ್ಜಿತವಾದ ಶಾಲಾ ಕಟ್ಟಡ, ಶೌಚಾಲಯ, ವಿಶಾಲವಾದ ಆಟದ ಮೈದಾನ, ಬಿಸಿಯೂಟದ ಕೋಣೆ­ಯನ್ನು ಹೊಂದಿದೆ. ಖಾಸಗಿ ಶಾಲೆ­ಯನ್ನು ಮೀರಿಸುವಂತೆ ಪ್ರತಿ ವರ್ಷ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಪ್ರಸಕ್ತ ವರ್ಷದಲ್ಲಿ ಒಟ್ಟು 242 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದು, ಬಹುತೇಕ ಎಲ್ಲ ವಿದ್ಯಾರ್ಥಿನಿಯರು ಆಸಕ್ತಿಯಿಂದ ಶಾಲೆಗೆ ಆಗಮಿಸುತ್ತಾರೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕಿ ಅಮೃತಬಾಯಿ ಜಹಾಗೀರದಾರ.

8ನೇ ತರಗತಿಯಲ್ಲಿ 78, 9ನೇ ತರಗತಿಯಲ್ಲಿ 91 ಮತ್ತು ಎಸ್ಸೆಸ್ಸೆಲ್ಸಿ­ಯಲ್ಲಿ 73 ವಿದ್ಯಾರ್ಥಿಗಳಿದ್ದು, ಪರಸ್ಪರ ಸ್ಪರ್ಧೆಯೊಡ್ಡುತ್ತಾ, ನಿತ್ಯ ಸಂಜೆ ಆಯಾ ದಿನದ ವಿಷಯಕ್ಕೆ ಸಂಬಂಧಿಸಿದಂತೆ ಗುಂಪು ಚರ್ಚೆಯಲ್ಲಿ ತೊಡಗುತ್ತಾರೆ. ನಂತರ ಸಮರ್ಥವಾಗಿ ವಿಷಯವನ್ನು ಮಂಡಿಸಿ, ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುವುದು ಇಲ್ಲಿನ ಶಿಕ್ಷಕರ ವಿಶೇಷತೆಯಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿನಿ­ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಈ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡಲು ಕಳೆದ ವರ್ಷ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಅವರು ಶಾಲೆಗೆ ಭೇಟಿ ನೀಡಿ, ₨50 ಸಾವಿರ ದತ್ತಿ ನಿಧಿ ನೀಡಿದ್ದಾರೆ. ಸ್ಥಳೀಯ ಮುಖಂಡರ ದತ್ತಿನಿಧಿ ಸೇರಿ ₨1.11 ಲಕ್ಷ ಠೇವಣಿಯಾಗಿದ್ದು, ಪ್ರತಿವರ್ಷ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಈ ನಿಧಿಯ ಬಡ್ಡಿಯನ್ನು ಬಹುಮಾನವಾಗಿ ನೀಡಲಾಗುತ್ತದೆ.

ಹೈದರಾಬಾದ್‌ ಕರ್ನಾಟಕ ಮಕ್ಕಳ ಕಮ್ಮಟ ಸ್ಪರ್ಧೆಯಲ್ಲಿ ಈ ಶಾಲೆಯ ವಿದ್ಯಾರ್ಥಿನಿಯ ಕನ್ನಡನಾಡು ಎಂಬ ಕವನ ಆಯ್ಕೆಯಾಗಿದ್ದು, ಹಲವಾರು ಕವಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ ಇಲ್ಲಿನ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವುದು ಹಲವಾರು ಕ್ಲಬ್‌ಗಳು, ಯೋಗ, ಕರಾಟೆ, ಸಾಮೂಹಿಕ ಕವಾಯತು, ವಿಜ್ಞಾನ ರಸಪ್ರಶ್ನೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಪಯತ್ನಿಸಲಾಗುತ್ತದೆ.

ಸುಸಜ್ಜಿಯ ವಸತಿನಿಲಯ ಬೇಕು: ಈ ಶಾಲೆ ವಿದ್ಯಾರ್ಥಿಗಳಿಗೆ ವಸತಿನಿಲಯ ಇದ್ದರೂ ಸುಸಜ್ಜಿತವಾದ ಕಟ್ಟಡದ ಸಮಸ್ಯೆ ಇದೆ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗು­ತ್ತಿದ್ದು, ಸುಸಜ್ಜಿತ ವಸತಿನಿಲಯ ಕಟ್ಟಡ ಒದಗಿಸಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.


‘ವಿದ್ಯಾರ್ಥಿನಿಯರಿಗೆ ವಿಶೇಷ ತರಬೇತಿ’
‘ಶಾಲಾ ಸಮಯ ಮುಗಿಯುವುದಕ್ಕಿಂತ ಮುನ್ನವೇ ವಿದ್ಯಾರ್ಥಿಗಳು ಮನೆ ಹಾದಿ ಹಿಡಿಯುವುದು ಎಲ್ಲೆಡೆ ಸಾಮಾನ್ಯ. ಆದರೆ, ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪರಿಣಿತರಿಂದ ವೃತ್ತಿ ಮಾರ್ಗದರ್ಶನ, ಕೌಶಲ ನೀಡಲಾಗುತ್ತದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯರು ವೈದ್ಯಕೀಯ, ಎಂಜಿನಿಯರಿಂಗ್‌ಗೆ ಸೇರ್ಪಡೆಯಾಗಿದ್ದಾರೆ’.

–ವಿರೇಶ ಚಿಂಚೋಳಿ, ಎಸ್‌ಡಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT