ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ಕೊಟ್ಟ ಕಡಲೆ

Last Updated 30 ಜನವರಿ 2012, 19:30 IST
ಅಕ್ಷರ ಗಾತ್ರ

ಸುಮಾರು 15 ಎಕರೆ ವಿಶಾಲವಾದ ಪ್ರದೇಶ, ಕೆಂಪು ಮತ್ತು ಕಪ್ಪು ಮಣ್ಣಿನ ಭೂಮಿ, ಅಲ್ಲಿ ಸಮನಾಗಿ ಹರಡಿಕೊಂಡ ಪಕ್ವವಾದ ಬಾದಾಮಿ ಬಣ್ಣದ ಕಡಲೆ ಗಿಡ ಮತ್ತು ಕಾಯಿಗಳು. ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಬೀಡಿಗಾನಹಳ್ಳಿಯಲ್ಲಿ ಈ ದೃಶ್ಯ ನೋಡಬಹುದು.

ಹತ್ತಿರದಲ್ಲೇ ಅಂತರ‌್ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅದು ತಲೆಯೆತ್ತುವ ಹೊತ್ತಿನಲ್ಲಿ ಹಣದಾಸೆಗೆ ತಮ್ಮ ಭೂಮಿಗಳನ್ನು ಮಾರಿಕೊಳ್ಳದ ಅನೇಕ ಪ್ರಗತಿಪರ ರೈತರು, ವ್ಯವಸಾಯ ಮುಂದುವರಿಸಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಇದು ನಿಜಕ್ಕೂ ಅನುಕರಣೀಯ.

ಯಥೇಚ್ಛವಾಗಿ ತರಕಾರಿ ಬೆಳೆಗಳನ್ನು ಬೆಳೆದು ಕೊಡುವ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೀಡಿಗಾನಹಳ್ಳಿಯ ಈ ರೈತರು ಕಡಲೆ ಬೆಳೆಯ ವಿಶೇಷ ಗುಣಗಳಿಗೆ ಮಾರು ಹೋಗಿದ್ದಾರೆ. ಬೆಂಗಳೂರು ಕೃಷಿ ವಿವಿ ಕಡಲೆ ಸಂಶೋಧನಾ ವಿಭಾಗ, ಬೆಂಗಳೂರು ಗ್ರಾಮಾಂತರ  ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ದೇವನಹಳ್ಳಿ ತಾಲ್ಲೂಕು ಕೃಷಿ ಇಲಾಖೆಗಳಿಂದ ತಾಂತ್ರಿಕ ಮಾಹಿತಿ ಪಡೆದು ಯಶಸ್ವಿಯಾಗಿ ಕಡಲೆ ಬೆಳೆದು ಇನ್ನಿತರ ರೈತರಿಗೆ ಮಾದರಿಯಾಗಿದ್ದಾರೆ.

ಬೀಜಕ್ಕೆ ಜೀವಾಣು ಅಣು ಗೊಬ್ಬರಗಳಿಂದ ಬೀಜೋಪಚಾರ ಮಾಡಿ, ಎಕರೆಗೆ 25 ಕಿಲೊದಂತೆ ಬಿತ್ತನೆ ಬೀಜ ಬಳಸಿ 30 ಸೆಂ ಮಿ ಅಂತರದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ 10 ಸೆಂ ಮಿ ಇರುವಂತೆ ನೋಡಿಕೊಂಡು ಅಕ್ಟೋಬರ್ ಮೊದಲನೇ ವಾರದಲ್ಲಿ ಬಿತ್ತನೆ ಮಾಡಿದ್ದರು.

ಬಿತ್ತನೆಗೆ ಬಳಸಿದ್ದು ಜೆಜಿ-11. ಇದು ಬೆಂಗಳೂರು ಕೃಷಿ ವಿವಿಯಿಂದ ಬಿಡುಗಡೆಗೊಂಡ ದಪ್ಪ ಕಾಳಿನ ತಳಿ. ಸಾಂಪ್ರದಾಯಿಕ ಅಣ್ಣಿಗೇರಿ-1 ತಳಿಗಿಂತ ಶೇ 25 ರಿಂದ 30 ರಷ್ಟು ಜಾಸ್ತಿ ಇಳುವರಿ ಕೊಡುತ್ತದೆ. ಬಿತ್ತನೆಯ ನಂತರ ಹಿಂಗಾರು ಹಂಗಾಮಿನಲ್ಲಿ ಒಟ್ಟು 2 ಬಾರಿ ಮಳೆಯಾಗಿತ್ತು. ಇದು ಪೂರ್ತಿ ಮಳೆಯಾಶ್ರಯದಲ್ಲೇ ಬೆಳೆದದ್ದು.

`ಕಡಲೆ ಕಡಿಮೆ ನೀರು ಬೇಡುವ ಬೆಳೆಯೆಂದು ಮಾಧ್ಯಮಗಳಿಂದ ತಿಳಿದಿದ್ದೆ. ನೀರಾವರಿಯಲ್ಲಿ ದ್ರಾಕ್ಷಿ, ಕೊತ್ತಂಬರಿ, ಬೀಟ್‌ರೂಟ್ ಇತ್ಯಾದಿ ಬೆಳೆಯುತ್ತಿದ್ದೆ. ಆದರೆ ಒಮ್ಮೆ ಅನಿರೀಕ್ಷಿತವಾಗಿ ನೀರಿನ ಅಭಾವ ತಲೆದೋರಿ, ಯಾಕೆ ಒಂದು ಸಲ ಕಡಲೆ ಬೆಳೆಯಬಾರದು ಎಂಬ ಯೋಚನೆ ಬಂತು. ಅದರಲ್ಲಿ ಯಶಸ್ವಿಯೂ ಆದೆ~ ಎಂದು ಹೇಳುವ ಪ್ರಗತಿಪರ ರೈತ ರಾಜಣ್ಣ ಅವರ ಮುಖದಲ್ಲಿ ಸಂತಸ ಗುರುತಿಸಬಹುದು.

`ದ್ರಾಕ್ಷಿ ಬೆಳೆಗೆ ಕಡಿಮೆಯೆಂದರೆ 15 ಸಲ ಹಾಗೂ ತರಕಾರಿ ಬೆಳೆಗೆ ನಾಲ್ಕರಿಂದ ಆರು ಸಲ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುತ್ತ್ದ್ದಿದೆ. ಇದರಿಂದ ವ್ಯವಸಾಯದ ವೆಚ್ಚವೂ ಹೆಚ್ಚಿತ್ತು. ಆದರೆ ಕಡಲೆಗೆ ಕೊಟ್ಟದ್ದು ಒಂದೇ ಒಂದು ಸಿಂಪರಣೆ. ಎಕರೆಗೆ ಬರೋಬ್ಬರಿ 12 ಕ್ವಿಂಟಾಲ್ ಇಳುವರಿ ಬರುವ ಅಂದಾಜಿದೆ~ ಎನ್ನುತ್ತಾರೆ ಯುವ ರೈತ ಮಂಜುನಾಥ್.

ನೀರು, ಪೋಷಣೆ ಕಮ್ಮಿಯಿದ್ದರೂ ಹುಲುಸಾಗಿ ಬೆಳೆದು ಸ್ವಯಂ ಕಳೆಗಳನ್ನು ನಿಯಂತ್ರಿಸಿ ತನ್ನ ಎಲೆ ರಾಶಿಯಿಂದ ಭೂಮಿಗೆ ಸಾಕಷ್ಟು ಸಾವಯವ ಗೊಬ್ಬರ ಒದಗಿಸಿ ಮಣ್ಣಿನ ಫಲವತ್ತತೆ ಕಾಪಾಡುವ ವಿಶಿಷ್ಟ ಬೆಳೆ ಕಡಲೆ.

`ಉತ್ತರ ಕರ್ನಾಟಕದ ಹಿಂಗಾರು ಹಂಗಾಮಿನ ಮುಖ್ಯ ಬೆಳೆಯಾದ ಕಡಲೆ ದಕ್ಷಿಣ ಕರ್ನಾಟಕದಲ್ಲಿ ಅಷ್ಟಾಗಿ ಪ್ರಚಲಿತದಲ್ಲಿ ಇಲ್ಲ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2010ರ ಹಿಂಗಾರು ಹಂಗಾಮಿನಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ಜೆಜಿ-11 ತಳಿ ಬೀಜೋತ್ಪಾದನೆ ಮಾಡಲಾಗಿತ್ತು.
 
ಈ ಮೂಲಕ ಇಲ್ಲಿನ ರೈತರಿಗೆ ಕಡಲೆ ಬೆಳೆಯ ಪರಿಚಯಿಸುತ್ತಿದ್ದೇವೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಖರ್ಚಿಲ್ಲದ ವ್ಯವಸಾಯ ವಿಧಾನ ಅನುಸರಿಸಿ ಅಧಿಕ ಲಾಭ ತರುವಂತಹ ಬೆಳೆ ಕಡಲೆ ಬಿಟ್ಟರೆ ಮತ್ತೊಂದಿಲ್ಲ~ ಎನ್ನುವುದು ಕಡಲೆ ಸಂಶೋಧನಾ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಕೆ. ಪಿ. ವಿಶ್ವನಾಥ್ ಅವರ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT