ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಯಮ್ಮ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಈ  ಗಣಿ ಧಣಿಯ ಬಳಿ ಹೆಲಿಕಾಪ್ಟರ್ ಇಲ್ಲ. ಈ ಗಣಿಯಲ್ಲಿ ಬೃಹದಾಕಾರದ ಯಂತ್ರಗಳಿಲ್ಲ. ಕೋಟ್ಯಂತರ ರೂಪಾಯಿ ಅವರ ಕೈಯಲ್ಲಿ ಓಡಾಡುವುದಿಲ್ಲ. ಅವರು ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರೀಟವನ್ನು ದಾನ ಮಾಡುವುದಿಲ್ಲ.
 
ಕಳೆದ 35 ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿದ್ದರೂ ಅವರು ಇನ್ನೂ ಜೈಲಿಗೆ ಹೋಗಿಲ್ಲ. ಅಕ್ರಮದ ವಾಸನೆಯೇ ಅವರಿಗೆ ಬಡಿದಿಲ್ಲ. ಒಂದೇ ಒಂದು ಮೊಕದ್ದಮೆ ಅವರ ವಿರುದ್ಧ ದಾಖಲಾಗಿಲ್ಲ. ಲೋಕಾಯುಕ್ತ ದಾಳಿ ನಡೆದಿಲ್ಲ. ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳು ಅವರ ಮನೆಯ ಕಡೆ ಸುಳಿದಿಲ್ಲ.

ಸರ್ಕಾರಿ ಭೂಮಿಯನ್ನು ಅವರು ಒತ್ತುವರಿ ಮಾಡಿಲ್ಲ. ಭೂಮಿಯ ಒಡಲನ್ನು ಅವರು ಬಗೆಯುವುದಿಲ್ಲ. ಸುಂದರವಾದ ಬಳ್ಳಿಯಲ್ಲಿ ಘಮಘಮಿಸುವ ಮಲ್ಲಿಗೆ ಹೂವುಗಳನ್ನು ಒಂದೊಂದೇ ಕಿತ್ತಂತೆ ಅವರು ಭೂಮಿಯಿಂದ ತಮಗೆ ಬೇಕಾದ ಕಲ್ಲುಗಳನ್ನು ಭೂಮಿಗೆ ನೋವಾಗದಂತೆ ಕೀಳುತ್ತಾರೆ. ಅದಕ್ಕೊಂದು ಕಲಾತ್ಮಕ ರೂಪ ಕೊಡುತ್ತಾರೆ.

ಅದಕ್ಕೇ ಅವರಿಗೆ ಗಣಿ ಉದ್ಯಮವನ್ನು ಆರಂಭಿಸಿದ ನಂತರ ಈವರೆಗೆ ಬರೋಬ್ಬರಿ 56 ಪ್ರಶಸ್ತಿಗಳು ಬಂದಿವೆ. ಅದರಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಬಹುಮಾನಗಳೂ ಸೇರಿವೆ. ಅದಕ್ಕೇ ಅವರನ್ನು ಎಲ್ಲರೂ `ಗಣಿಯಮ್ಮ~ ಎಂದೇ ಕರೆಯುತ್ತಾರೆ. ಅವರೇ ಮೈಸೂರಿನ ರಾಜಿ.ವಿ.ರಾಮನ್.

1971ರಲ್ಲಿ...
1971ರಲ್ಲಿ ಗಣಿ ಉದ್ಯಮವನ್ನು ಆರಂಭಿಸಿದ ರಾಜಿ ಎಂದೂ ಕೂಡ ಕಾನೂನಿನೊಂದಿಗೆ ರಾಜಿ ಮಾಡಿಕೊಂಡಿಲ್ಲ. ಅಧಿಕಾರಿಗಳಿಗೆ `ಸಮ್‌ತಿಂಗ್~ ಕೊಟ್ಟಿಲ್ಲ. ಬೇಕಾಬಿಟ್ಟಿಯಾಗಿ ಭೂಮಿಯನ್ನು ಅಗೆದಿಲ್ಲ. ಕಾರ್ಮಿಕರನ್ನು ಹೇಗೆಂದರೆ ಹಾಗೆ ಬಳಸಿಕೊಂಡಿಲ್ಲ. ಅದಕ್ಕೇ ಅವರು ಲೈಸನ್ಸ್ ಪಡೆದ ಭೂಮಿಯಲ್ಲಿ ಇನ್ನೂ ಗಣಿಗಾರಿಕೆಗೆ ಅವಕಾಶವಿದೆ. ಸುತ್ತಲೂ ಹಸಿರು ಮರಗಳು ತಂಪು ನೀಡುತ್ತಿವೆ.

ಸಿರಾಮಿಕ್ ಉದ್ಯಮಕ್ಕೆ ಬೇಕಾಗುವ ಫೆಲ್‌ಸೈಟ್ ಕಲ್ಲುಗಳನ್ನು ಒದಗಿಸುವ ಉದ್ಯಮದಲ್ಲಿ ಹೆಸರು ಮಾಡಿರುವ ರಾಜಿ ಅವರು ನಮ್ಮ ದೇಶದ ಕಂಪೆನಿಗಳಿಗಲ್ಲದೆ ವಿದೇಶಿ ಕಾರ್ಖಾನೆಗಳಿಗೂ ಈ ಕಲ್ಲುಗಳನ್ನು ಒದಗಿಸಿದ್ದಾರೆ. 1970ರ ದಶಕದಲ್ಲಿ ಸಿರಾಮಿಕ್ ಕಂಪೆನಿಗಳು ಅದಕ್ಕೆ ಬೇಕಾಗುವ ಕಚ್ಚಾ ವಸ್ತು ಸೈಲೆಕ್ಸ್‌ನ್ನು ಬೆಲ್ಜಿಯಂ ಮತ್ತು ಡೆನ್ಮಾರ್ಕ್‌ಗಳಿಂದ ಆಮದು ಮಾಡಿಕೊಳ್ಳುತ್ತಿದ್ದವು.

ಇದೇ ಸಂದರ್ಭದಲ್ಲಿ ಕೊಟ್ಟಾಯಂನ ಟ್ರವಾಂಕೂರ್ ಸಿಮೆಂಟ್ ಕಂಪೆನಿ ಸೈಲೆಕ್ಸ್ ಕಲ್ಲುಗಳ ಕೊರತೆಯಿಂದ ಬಳಲುವುದು ರಾಜಿ ಅವರ ಗಮನಕ್ಕೆ ಬಂತು. ಆಗ ಪತಿಯೊಂದಿಗೆ ಮೈಸೂರು ಬಳಿಯ ಕೃಷ್ಣರಾಜ ಸಾಗರಕ್ಕೆ ಬಂದಿದ್ದ ರಾಜಿ ಅವರಿಗೆ ಅಲ್ಲಿ ಫೆಲ್‌ಸೈಟ್ ಕಲ್ಲುಗಳು ಕಣ್ಣಿಗೆ ಬಿದ್ದವು.

ಈ ಕಲ್ಲುಗಳು ಬಿಳಿ ಸಿಮೆಂಟ್ ಮತ್ತು ಸಿರಾಮಿಕ್ ವಸ್ತು ತಯಾರಿಕೆಗೆ ಸೂಕ್ತವಾಗಬಹುದು ಎಂಬ ಭಾವನೆ ಬಂತು. ಅವುಗಳನ್ನು ಪರೀಕ್ಷಿಸಿದಾಗ ಅವು ಬಿಳಿ ಸಿಮೆಂಟ್ ಉತ್ಪಾದನೆಗೆ ಸೂಕ್ತ ಎನ್ನುವುದು ದೃಢವಾಯಿತು. ಆಗಲೇ ಅವರು ತಾವೂ ಗಣಿಗಾರಿಕೆಯನ್ನು ಆರಂಭಿಸುವ ಕನಸನ್ನು ಕಂಡರು.

ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಆರ್.ವೆಂಕಟರಾಮನ್ ಅವರ ಸಹಾಯದಿಂದ ರಾಜಿ ರಾಮನ್ ಮೈಸೂರು ತಾಲ್ಲೂಕಿನ ಶಾದನಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗರಳ್ಳಿ, ಹಂಗರಹಳ್ಳಿ ಸೇರಿದಂತೆ 7 ಕಡೆ ಗಣಿಗಾರಿಕೆಯ ಅನುಮತಿಯನ್ನು ಪಡೆದುಕೊಂಡರು. ಆರಂಭದಲ್ಲಿ ಕೇವಲ 5-6 ಮಂದಿ ಕಾರ್ಮಿಕರಿಂದ ಆರಂಭವಾದ ಗಣಿಗಾರಿಕೆ ಒಂದು ಹಂತದಲ್ಲಿ 120 ಮಂದಿ ಕಾರ್ಮಿಕರವರೆಗೂ ಏರಿತು. ಆದರೆ ಇಲ್ಲಿ ಯಂತ್ರಗಳನ್ನು ಬಳಸುವಂತಿಲ್ಲ.

ಎಲ್ಲ ಕೆಲಸಗಳನ್ನೂ ಕಾರ್ಮಿಕರು ಕೈಯಲ್ಲಿಯೇ ಮಾಡಬೇಕು. ನೈಜೀರಿಯ, ಇಟಲಿ, ಮಲೇಷ್ಯಾ ದೇಶಗಳಿಂದಲೂ ರಾಜಿ ಅವರಿಗೆ ಫೆಲ್‌ಸೈಟ್ ಪೂರೈಕೆಗೆ ಆದೇಶಗಳು ಬಂದವು. ಅಲ್ಲದೆ ಗುಜರಾತಿನ ಹಲವಾರು ಸಿಮೆಂಟ್ ಮತ್ತು ಸಿರಾಮಿಕ್ ಕಂಪೆನಿಗಳೂ ಬೇಡಿಕೆ ಸಲ್ಲಿಸಿದವು. ಎಲ್ಲ ಕಡೆಗೂ ರಾಜಿ ತಮ್ಮ ಗಣಿಯಿಂದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಿದರು.

 ಮಹಿಳೆಯ ಯಜಮಾನಿಕೆ...
ಸೈಲೆಕ್ಸ್ ಬದಲಾಗಿ ಫೆಲ್‌ಸೈಟ್ ಕಲ್ಲುಗಳನ್ನು ಸಿಮೆಂಟ್ ಮತ್ತು ಸಿರಾಮಿಕ್ ಉದ್ಯಮದಲ್ಲಿ ಬಳಸಬಹುದು ಎನ್ನುವುದು ಗೊತ್ತಾಗುತ್ತಿದ್ದಂತೆ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಉದ್ಯಮಗಳು ಆರಂಭವಾದವು. ರಾಜಿ ಅವರ ಗಣಿಗಾರಿಕೆಗೆ ಉತ್ತಮ ಬೆಂಬಲವೂ ದೊರಕಿತು. ಜೊತೆಗೆ ಪೈಪೋಟಿ ಸಹ ಏರ್ಪಟ್ಟಿತು.
 
ಎಲ್ಲ ಕಡೆ ಆಗುವ ಹಾಗೆಯೇ ಇಲ್ಲಿಯೂ ಕೂಡ ಅನಾರೋಗ್ಯಕರ ಪೈಪೋಟಿ ನಡೆಯಿತು. ಒಬ್ಬ ಮಹಿಳೆ ಗಣಿ ಯಜಮಾನಿಕೆಯನ್ನು ವಹಿಸಿಕೊಂಡು ಮುನ್ನೆಡೆಸುವುದು ಹಲವರ ಕಣ್ಣು ಕುಕ್ಕಿತು. ಅದಕ್ಕೆ ರಾಜಿ ಸಾಕಷ್ಟು ತೊಂದರೆಯನ್ನು ಎದುರಿಸ ಬೇಕಾಯಿತು. ಗಣಿಗಾರಿಕೆಯನ್ನು ಆರಂಭಿಸಿದ ಕೆಲವೇ ವರ್ಷಗಳಲ್ಲಿ ರಾಜಿ ಅವರ ಏಕೈಕ ಪುತ್ರನನ್ನು ಅಪಹರಿಸಲಾಯಿತು. ಆ ಮಗ ಇನ್ನೂ ಪತ್ತೆಯಾಗಿಲ್ಲ.

ಈಗ 75ರ ಹರೆಯದಲ್ಲಿರುವ ರಾಜಿ ಇನ್ನೂ ತನ್ನ ಮಗನಿಗಾಗಿ ಕಾಯುತ್ತಲೇ ಇದ್ದಾರೆ. ಈ ನಡುವೆ 10 ವರ್ಷದ ಹಿಂದೆ ಪತಿ ರಾಮನ್ ಕೂಡ ನಿಧನರಾದರು. ಆದರೂ ರಾಜಿ ಮಾತ್ರ ಗಣಿಗಾರಿಕೆಯನ್ನು ನಿಲ್ಲಿಸಿಲ್ಲ. ಇದ್ದ ಒಬ್ಬ ಮಗ ಕಾಣೆಯಾದರೂ ಕಾರ್ಮಿಕರನ್ನೇ ತನ್ನ ಮಕ್ಕಳು ಎಂದು ಪರಿಗಣಿಸಿ ಅವರ ಕಲ್ಯಾಣದಲ್ಲಿ ತೊಡಗಿಕೊಂಡಿದ್ದಾರೆ.

ರಾಜಿ ಅವರ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಗುಡಿಸಲು ವಾಸಿಗಳಲ್ಲ. ಮಂಡ್ಯ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಎಲ್ಲ ಕಾರ್ಮಿಕರಿಗೂ ಮನೆ ನಿರ್ಮಿಸಿ ಕೊಡಲಾಗಿದೆ. ಕಾರ್ಮಿಕರ ಮಕ್ಕಳೂ ಕಾರ್ಮಿಕರಾಗಬಾರದು ಎನ್ನುವ ಕಾರಣಕ್ಕೆ ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿಸಲೂ ಅವರು ಮುಂದಾಗಿದ್ದಾರೆ.
 
ಶಿಕ್ಷಣ ಇಲ್ಲದೆ ಯಾವುದೇ ಮಕ್ಕಳು ಕೊರಗಬಾರದು ಎನ್ನುವುದು ಅವರ ಕಾಳಜಿ. ಅದಕ್ಕೇ ಅವರು ಈಗ 15 ವರ್ಷಗಳ ಹಿಂದೆಯೇ ಶ್ರೀಕೃಷ್ಣ ಲಲಿತಕಲಾ ಮಂದಿರದ ಕಾರ್ಯದರ್ಶಿಯಾಗಿ ಪ್ರಾಥಮಿಕ ಶಾಲೆಯನ್ನು ವಹಿಸಿಕೊಂಡರು. ಈಗ ಅದು ಪ್ರೌಢಶಾಲೆಯಾಗಿದೆ. ಬಡ ಮಕ್ಕಳನ್ನೇ ಅಲ್ಲಿ ಸೇರಿಸಿಕೊಂಡು ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಿ ಶಿಕ್ಷಣ ನೀಡಲಾಗುತ್ತಿದೆ.

ಮೂಲ ತಮಿಳುನಾಡು
ರಾಜಿ ಅವರು ಮೂಲತಃ ತಮಿಳುನಾಡಿನವರು. ಆದರೆ ಹುಟ್ಟಿದ್ದು ಮಹಾರಾಷ್ಟ್ರದ ಪುಣೆಯಲ್ಲಿ. 1939ರಲ್ಲಿ ಹುಟ್ಟಿದ ಅವರು ತಮಿಳುನಾಡಿನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಪಡೆದುಕೊಂಡಿದ್ದಾರೆ. ಗಣಿ ಉದ್ಯಮವನ್ನು ಆರಂಭಿಸುವುದಕ್ಕೆ ಅವರ ಓದೂ ಕೂಡ ಕಾರಣವಾಗಿತ್ತು.
 

ಗಣಿ ಆರಂಭಿಸುವುದಕ್ಕೆ ಮೊದಲೇ ಅವರಿಗೆ ಮದುವೆಯಾಗಿತ್ತು. ಪತಿ ರಾಮನ್ ಕೂಡ ಪತ್ನಿಯ ಗಣಿ ಉದ್ಯಮವನ್ನು ಬೆಂಬಲಿಸಿದ್ದರಿಂದ ನಿರಾತಂಕವಾಗಿ ಅದು ನಡೆದುಕೊಂಡು ಬಂತು. ಈಗ ವಯಸ್ಸಾಗಿದೆ. ವಾಕರ್ ಇಲ್ಲದೆ ನಡೆಯುವುದು ಕಷ್ಟ. ಅಲ್ಲದೆ ಗಣಿ ಉದ್ಯಮ ಈಗ ಹೊಲಸಾಗಿದೆ. ಭೂಮಿಯನ್ನು ಬಗೆದು ಹಣ ಮಾಡಿಕೊಳ್ಳುವ ಬಕಾಸುರರೇ ಈಗ ಹೆಚ್ಚಾಗಿದ್ದಾರೆ. ಅವರ ನಡುವೆ ಉದ್ಯಮವನ್ನು ನಡೆಸಿಕೊಂಡು ಹೋಗುವುದು ಕಷ್ಟ.

ಕಾರ್ಮಿಕರನ್ನು ಮಕ್ಕಳಂತೆ ನೋಡಿಕೊಂಡರೂ ಮೊದಲಿನ ಹಾಗೆ ಕಾರ್ಮಿಕರು ನಿಯತ್ತಿನಿಂದ ಕೆಲಸಕ್ಕೆ ಬರುತ್ತಿಲ್ಲ ಎಂಬುದು ರಾಜಿ ಅವರ ಬೇಸರ. ಹೀಗಾಗಿ ರಾಜಿ ಅವರು ಈಗ ಕೇವಲ 11 ಎಕರೆ ಪ್ರದೇಶದಲ್ಲಿ 20 ವರ್ಷದ ಗುತ್ತಿಗೆ ಅನುಮತಿಯನ್ನು ಪಡೆದು ಗಣಿಗಾರಿಕೆಯನ್ನು ಮುಂದುವರಿಸಿದ್ದಾರೆ.

ಉತ್ತಮ ಗಣಿ ಮಹಿಳಾ ಮಾಲಕಿ
1973ರಲ್ಲಿ ಗಣಿಗಾರಿಕೆಯನ್ನು ಆರಂಭಿಸಿದ ರಾಜಿ ಅವರಿಗೆ 1978ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು `ಉತ್ತಮ ಗಣಿ ಮಹಿಳಾ ಮಾಲಕಿ~ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು. 1979ರಲ್ಲಿ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅವರು ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

1990ರಲ್ಲಿ ಎಫ್.ಕೆ.ಇರಾನಿ ಸ್ಮಾರಕ ವ್ಯಾಪಾರ ವ್ಯವಹಾರದ ಪ್ರಶಸ್ತಿ, 1995ರಲ್ಲಿ ರಾಷ್ಟ್ರೀಯ ಸುವರ್ಣ ಮಹಿಳಾ ರತ್ನ ಪ್ರಶಸ್ತಿ, 1997ರಲ್ಲಿ ಇಟಲಿಯ ಮ್ಯಾಂಟಗನಿಯಲ್ಲಿ ನೈಟಿಂಗೇಲ್ ಆಫ್ ಸಿರಾಮಿಕ್ ಪ್ರಶಸ್ತಿ, 1999ರಲ್ಲಿ ಇಂದಿರಾಗಾಂಧಿ ಪ್ರಶಸ್ತಿ, 2009ರಲ್ಲಿ ಕೇಂದ್ರ ಸರ್ಕಾರದ ಡೈರಕ್ಟರೇಟ್ ಆಫ್ ಸೈನ್ಸ್ ಸೇಫ್ಟಿ ವಿಭಾಗದ ಪ್ರಶಸ್ತಿ, ಅಪಘಾತ ರಹಿತ ಗಣಿಗಾರಿಕೆ ಪ್ರಶಸ್ತಿ, ಪರಿಸರ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಈ ವರ್ಷ ಗುಜರಾತಿನಲ್ಲಿ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ನೀಡಲಾಗಿದೆ.

ಸುದೀರ್ಘ ಕಾಲ ಗಣಿಗಾರಿಕೆಯನ್ನು ಮಾಡಿದ್ದರೂ ಭೂಮಿಯ ಪಾಲಿಗೆ ಅವರು ಎಂದೂ `ಗುಮ್ಮ~ ಆಗಲಿಲ್ಲ. ಗಣಿಯ ಕೆಲಸಗಾರರೆಲ್ಲಾ ಅವರನ್ನು ಅಮ್ಮಾ ಎಂದೇ ಕರೆಯುತ್ತಾರೆ. ಮಾತೃ ಹೃದಯದ ಮಹಿಳೆಯೊಬ್ಬಳು ಗಣಿಗಾರಿಕೆಯನ್ನು ಮಾಡಿದರೂ ಆಕೆ ಗಣಿಯಮ್ಮ ಆಗುತ್ತಾಳೆಯೇ ವಿನಾ ಗಣಿ ಗುಮ್ಮ ಆಗುವುದಿಲ್ಲ ಎನ್ನುವುದಕ್ಕೆ ರಾಜಿ ಉತ್ತಮ ಉದಾಹರಣೆ.

ಈಗ ಅವರು ಸುಸ್ತಾಗಿದ್ದಾರೆ. ಪತಿ ಮತ್ತು ಪುತ್ರನನ್ನು ಕಳೆದುಕೊಂಡು ನೊಂದಿದ್ದಾರೆ. ಯಾರಾದರೂ ಉತ್ತಮ ವ್ಯಕ್ತಿ ಈ ಭೂಮಿ ತಾಯಿಯನ್ನು ನೋಡಿಕೊಳ್ಳುವವರು ಸಿಕ್ಕರೆ ಅವರಿಗೆ ಇದನ್ನು ವಹಿಸಿಕೊಡುವ ಮನಸ್ಸು ಮಾಡಿದ್ದಾರೆ. ಮಗನ ಜೊತೆಗೇ ಅಂತಹ ವ್ಯಕ್ತಿಯ ಆಗಮನಕ್ಕೆ ಅವರು ಕಾಯುತ್ತಿದ್ದಾರೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT