ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ'

Last Updated 4 ಸೆಪ್ಟೆಂಬರ್ 2013, 5:49 IST
ಅಕ್ಷರ ಗಾತ್ರ

ಹಾಸನ: ಎಲ್ಲೆಂದರಲ್ಲಿ ಪೆಂಡಾಲ್ ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಸಂಚಾರ ಹಾಗೂ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಬಾರಿ ಕೆಲವು ಕ್ರಮಗಳನ್ನು ಕೈಗೊಂಡಿದೆ.

ಈ ಬಗ್ಗೆ ಎಲ್ಲ ಗಣೇಶೋತ್ಸವ ಆಚರಣಾ ಸಮಿತಿಗಳಿಗೂ ಕೆಲವು ನಿಯಮಗಳನ್ನು ವಿಧಿಸಿದ್ದು, ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ನೆರವಾಗುವಂತೆ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗಣಪತಿ ಪ್ರತಿಷ್ಠಾಪನೆಗಾಗಿ ಯಾರಿಂದಲೂ ಕಡ್ಡಾಯವಾಗಿ ಹಣ ಸಂಗ್ರಹಿಸುವಂತಿಲ್ಲ. ಮನೆಮನೆಗೆ ಹೋಗಿ ಒತ್ತಾಯದಿಂದ ಹಣ ಸಂಗ್ರಹಿಸುವುದು, ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಣ ಸಂಗ್ರಹಣೆ ಮಾಡಬಾರದು. ಇಂಥ ಪ್ರಕರಣ ನಡೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ ಒಳಗೆ ಸಾರ್ವಜನಿಕರ ಓಡಾಟಕ್ಕೆ ಸಾಕಷ್ಟು ಸ್ಥಳಾವಕಾಶ ಇರಬೇಕು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ವ್ಯವಸ್ಥೆ ಮಾಡಬೇಕು. ಪ್ರಮುಖ ಪೆಂಡಾಲ್‌ಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸುವಂತೆಯೂ ಇಲಾಖೆ ಸೂಚನೆ ನೀಡಿದೆ.

ಗಣೇಶ ವಿಸರ್ಜನೆಯ ವೇಳೆ ಆರ್ಕೆಸ್ಟ್ರಾ ಅಥವಾ ಭಾರಿ ಸದ್ದು ಮಾಡುವ ಮೈಕ್ ವ್ಯವಸ್ಥೆ ಬಳಸುವಂತಿಲ್ಲ. ಗಣಪತಿಯನ್ನು ಪ್ರತಿಷ್ಠಾಪಿಸುವ ಮೊದಲು ಪೊಲೀಸ್ ಇಲಾಖೆ, ನಗರಸಭೆ/ ಪುರಸಭೆ, ಚೆಸ್ಕಾಂ, ಅಗ್ನಿಶಾಮಕ ಠಾಣೆ ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಮೂರ್ತಿ ಪ್ರತಿಷ್ಠಾಪಿಸಿದ ಪೆಂಡಾಲ್ ಒಳಗೆ ಉತ್ಸವ ಮಂಡಳಿಯ ಒಬ್ಬ ಸ್ವಯಂಸೇವಕ 24 ಗಂಟೆ ಹಾಜರಿರಬೇಕು. ಪೆಂಡಾಲುಗಳಲ್ಲಿ ಬೆಂಕಿ ನಂದಿಸುವ ಉಪಕರಣವನ್ನು ಕಡ್ಡಾಯವಾಗಿ ಇಟ್ಟಿರಬೇಕು.

ರಾತ್ರಿ 10 ಗಂಟೆಯ ನಂತರ ಯಾವ ಪೆಂಡಾಲ್‌ನಲ್ಲೂ ಧ್ವನಿವರ್ಧಕ ಬಳಸಬಾರದು. ಪೆಂಡಾಲಿಗೆ ಚೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸರಬರಾಜು ಪಡೆದುಕೊಳ್ಳಬೇಕು, ನೇರವಾಗಿ ಕಂಬದಿಂದ ಪಡೆದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೆಂಡಾಲ್‌ನಲ್ಲಿ ಜನರೇಟರನ್ನೂ ಕಡ್ಡಾಯವಾಗಿ ಅಳವಡಿಸಬೇಕು.

ಪ್ರತಿ ಪೆಂಡಾಲ್‌ನಲ್ಲಿ ಪೊಲೀಸ್ ಠಾಣೆ, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ, ಸ್ವಯಂಸೇವಕರ ಹೆಸರು ಮತ್ತು ಮೊಬೈಲ್ ನಂಬರ್ ಒಳಗೊಂಡ ಫಲಕವನ್ನು ಹಾಕಬೇಕು.

ಹೆಚ್ಚು ಜನ ಸಂಚಾರವಿರುವ ಮತ್ತು ಕಿರಿದಾದ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು. ಪಟಾಕಿ ಸಂಗ್ರಹಿಸಲು ಪೊಲೀಸ್ ಇಲಾಖೆಯಿಂದ ಅನುಮತಿ ಕಡ್ಡಾಯ. ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಪಟಾಕಿ ಸಿಡಿಸಬಹುದು.

ಗಣಪತಿ ವಿಸರ್ಜನಾ ಮೆರವಣಿಗೆ ಮುಗಿದ ದಿನದಂದೇ ಪೆಂಡಾಲನ್ನು ತೆಗೆಯಬೇಕು ಎಂದು ಇಲಾಖೆಯ ಪ್ರಕಟಣೆ ಸೂಚಿಸಿದೆ.

ಪ್ರತಿಭಾ ಪುರಸ್ಕಾರ
ಸಿದ್ದಾರ್ಥ ಪರಿಶಿಷ್ಟ ಜಾತಿ/ವರ್ಗಗಳ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

2012-13ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೃರ್ಗಡೆಯಾದ ವಿದ್ಯಾರ್ಥಿಗಳು ಸೆ.20ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಇ.ಡಬ್ಲ್ಯೂ.ಎಸ್. 707, 27ನೇ ಅಡ್ಡ ರಸ್ತೆ, ಕುವೆಂಪು ನಗರ, ಹಾಸನ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ 7760383970 ಅಥವಾ 9845326850 ಸಂಪರ್ಕಿಸಲು ಕೊರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT