ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಕಾಲದ ವರಸೆ (ಚಿತ್ರ: ಕಿಲಾಡಿ ಕಿಟ್ಟಿ)

Last Updated 19 ಮೇ 2012, 19:30 IST
ಅಕ್ಷರ ಗಾತ್ರ

ನಾಯಕ ಕಿಲಾಡಿ ಕಳ್ಳ. ತಾನು ಗೆಳೆಯರೊಂದಿಗೆ ಸೇರಿ ದರೋಡೆ ಮಾಡಿದ ದುಡ್ಡನ್ನು ಮರಳಿ ಪಡೆಯಲು ಪೊಲೀಸ್ ಇಲಾಖೆಯೊಳಗೇ ಸೇರಿಕೊಳ್ಳುವ ಚಾಣಾಕ್ಷ. ಪೊಲೀಸರೋ ಆತ ಕಳ್ಳನೆಂಬುದನ್ನು ತಿಳಿದುಕೊಳ್ಳಲಾರದಷ್ಟು ಗಾಂಪರು. ಪೊಲೀಸರು ಮಾತ್ರವಲ್ಲ ಇಡೀ ಚಿತ್ರದಲ್ಲಿ ನಾಯಕ ಮತ್ತವನ ಇಬ್ಬರು ಸ್ನೇಹಿತರನ್ನು ಬಿಟ್ಟು ಉಳಿದವರೆಲ್ಲರೂ ಮೂರ್ಖರು.
ತೆಲುಗಿನ `ಬ್ಲೇಡ್ ಬಾಬ್ಜಿ~ ಚಿತ್ರದ ಸವಕಲು ಹಾಸ್ಯಗಳ ಕನ್ನಡ ಅವತರಣಿಕೆ `ಕಿಲಾಡಿ ಕಿಟ್ಟಿ~.
ಕಳ್ಳನಾಗಿದ್ದರೂ ನಾಯಕನ ಆ ವೃತ್ತಿಯ ಹಿಂದೆ ತನ್ನ ಹಳ್ಳಿಯ ಜನರ ಜಾಗವನ್ನು ಉಳಿಸುವ ಸದುದ್ದೇಶವಿದೆ. ಐದು ಕೋಟಿ ಹಣ ಸಂಪಾದಿಸಲು ಕಳ್ಳತನಕ್ಕಿಳಿಯುವ ಅವನದು ಹೂವಿನಂಥ ಮನಸ್ಸು. ಆತನಿಗೆ ಬ್ಯಾಂಕ್ ದರೋಡೆ ಮಾಡುವ ಕಲೆ ಗೊತ್ತು.

ಪೊಲೀಸ್ ವೇಷ ಧರಿಸಿ ಯಾಮಾರಿಸುವುದು ಇನ್ನೂ ಸಲೀಸು. ನೆಲ, ಜಲ, ವ್ಯಕ್ತಿಗಳ ಬಗ್ಗೆ ಹಾಡಿ ಕುಣಿಯುವಾಗ ದೇಶಭಕ್ತಿ ಆತನ ನರನಾಡಿಗಳಲ್ಲಿ ಉಕ್ಕಿ ಹರಿಯುತ್ತದೆ. ಬದುಕು, ಸಂಸ್ಕೃತಿ, ಲೌಕಿಕತೆಯ ಬಗ್ಗೆ ಎಡೆಬಿಡದೆ ನಿಮಿಷಗಟ್ಟಲೆ ಭಾಷಣ ಕೊಚ್ಚುವ ಪ್ರವೀಣನೂ ಹೌದು!

ಕಳ್ಳರು ಪೊಲೀಸ್ ಇಲಾಖೆಯೊಳಗೆ ಸೇರಿಕೊಳ್ಳುವ ಕಥೆ ಕನ್ನಡದಲ್ಲಿ ಹೊಸತೇನಲ್ಲ. ಎಂಬತ್ತರ ದಶಕದಲ್ಲಿ ಅಂಬರೀಶ್ (ಚಿತ್ರ: ನ್ಯಾಯಕ್ಕಾಗಿ ನಾನು) ಇದೇ ರೀತಿ ವೇಷ ಧರಿಸಿದ್ದರು. ಆದರೆ ಆ ಚಿತ್ರದಲ್ಲಿದ್ದ ಹಾಸ್ಯದ ಗುಣಮಟ್ಟವನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ.

ನೂರಾರು ಚಿತ್ರಗಳಲ್ಲಿ ಪ್ರೇಕ್ಷಕ ಕಂಡಿರುವ ಸನ್ನಿವೇಶ ಮತ್ತು ಹಾಸ್ಯಗಳನ್ನು ಮತ್ತೆ ಕೆದಕುವ ಪ್ರಯತ್ನ ಎಂದು ಅನಂತರಾಜು ನಿರ್ದೇಶನವನ್ನು ಗುರುತಿಸಬಹುದು.

ಅನಂತರಾಜು ಆರಿಸಿಕೊಂಡಿರುವ ಕಥೆಯಲ್ಲಿ ತಾರ್ಕಿಕ ಅಂಶಗಳನ್ನು ಹುಡುಕುವುದು ವ್ಯರ್ಥ. ಹಾಸ್ಯ-ಅಪಹಾಸ್ಯಗಳನ್ನು ಒಪ್ಪಿಕೊಂಡಾಗಲೂ ಚಿತ್ರ ಪರಿಪೂರ್ಣ ಮನರಂಜನೆ ನೀಡಲಾರದು. ಹಾಗೆಂದು ನಗು ಬರಿಸುವ ದೃಶ್ಯಗಳಿಗೇನೂ ಕೊರತೆಯಿಲ್ಲ. ಆದರೆ ಅಂತ್ಯದಲ್ಲಿ ಎದುರಾಗುವ ಮಾರುದ್ದದ ಭಾಷಣ ತಾಳ್ಮೆಗೆ ಸವಾಲು ಹಾಕುತ್ತದೆ. ಪ್ರೇಕ್ಷಕ ಮೊದಲು ನಕ್ಕಿದ್ದನ್ನೂ ಮರೆಯುತ್ತಾನೆ.

ಇಡೀ ಚಿತ್ರದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡಂತೆ ಸಾಗಿದ್ದಾರೆ ಶ್ರೀನಗರ ಕಿಟ್ಟಿ. ಅದರ ತೂಕದ ಪರಿಣಾಮ ಅಲ್ಲಲ್ಲಿ ಅರಿವಿಗೆ ಬರುತ್ತದೆ. ನಾಯಕಿ ಹರಿಪ್ರಿಯಾ ಪಾತ್ರಕ್ಕೆ ತಳಹದಿ ಇಲ್ಲ, ಗುರಿಯೂ ಇಲ್ಲ. ಅವರದೇನಿದ್ದರೂ ಹಾಡಿನ ಮಳೆಗೆ ಮೈಯೊಡ್ಡುವ ಕೆಲಸವಷ್ಟೆ. ರಂಗಾಯಣ ರಘು, ಶರಣ್, `ಮುಖ್ಯಮಂತ್ರಿ~ ಚಂದ್ರು, ನಿವೇದಿತಾ, ಸತ್ಯಜಿತ್, ಸಂಗೀತಾ, ದಿಲೀಪ್‌ರಾಜ್ ಠುಸ್ಸೆಂದ ಬಲೂನಿಗೆ ಮತ್ತೆ ಗಾಳಿ ತುಂಬುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಮೆಲುಕು ಹಾಕುವ ಸ್ವರಗಳಿಲ್ಲ.
 
ತಾಂತ್ರಿಕವಾಗಿಯೂ ಗತಕಾಲದ ವರಸೆಯನ್ನು ಚಿತ್ರ ನೆಚ್ಚಿಕೊಂಡಿದೆ. ಕೃಷ್ಣಕುಮಾರ್ ಕ್ಯಾಮೆರಾ ಕಣ್ಣು ಹಾಡುಗಳ ಮೇಲಷ್ಟೇ ಗಮನ ಹರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT