ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರೇಷನ್ ಕಪ್: ಕಳೆದ 3 ವರ್ಷಗಳಲ್ಲಿ ಮೊದಲ ಬಾರಿಗೆ ಸ್ವದೇಶದಲ್ಲಿ ನೀರಜ್ ಆಟ

Published 8 ಮೇ 2024, 14:48 IST
Last Updated 8 ಮೇ 2024, 14:48 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೊ ಕ್ರೀಡಾಪಟು ನೀರಜ್ ಚೋಪ್ರಾ ಅವರು ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ಸ್ಪರ್ಧಿಸುತ್ತಿದ್ದಾರೆ. ಭುವನೇಶ್ವರದಲ್ಲಿ ಮೇ 12ರಿಂದ 15ರವರೆಗೆ ನಡೆಯುತ್ತಿರುವ ಫೆಡರೇಷನ್ ಕಪ್‌ನಲ್ಲಿ ಚೋಪ್ರಾ ಪಾಲ್ಗೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ.

ದೋಹಾದಲ್ಲಿ ಮೇ 10ರಿಂದ ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್‌ ಸರಣಿಯಲ್ಲಿ ಪಾಲ್ಗೊಂಡ ನಂತರ 26 ವರ್ಷದ ನೀರಜ್, ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

‘ಸದ್ಯದ ಮಾಹಿತಿ ಪ್ರಕಾರ ನೀರಜ್ ಚೋಪ್ರಾ ಹಾಗೂ ಕಿಶೋರ್ ಕುಮಾರ್ ಜೆನಾ ಅವು ದೇಶೀಯ ನೆಲದಲ್ಲಿ ಮೇ 12ರಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಭಾರತೀಯ ಅಥ್ಲೆಟಿಕ್ಸ್‌ ಒಕ್ಕೂಟ ಟ್ವೀಟ್ ಮಾಡಿದೆ.

ಈ ವಿಷಯವನ್ನು ಚೋಪ್ರಾ ಅವರ ತರಬೇತುದಾರ ಕ್ಲಾಸ್ ಬಾರ್ಟೊನಿಟ್ಜ್‌ ಅವರು ಖಚಿತಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.‌

ಪಂದ್ಯಾವಳಿಯ ವೇಳಾಪಟ್ಟಿಯಂತೆ ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತು ಮೇ 14ರಂದು ನಡೆಯಲಿದೆ. ಅಂತಿಮ ಸುತ್ತು ಮೇ 15ರಂದು ನಡೆಯಲಿದೆ.

28 ವರ್ಷದ ಕಿಶೋರ್ ಜೆನಾ ಅವರು ಹಾಂಗ್‌ಝೋ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದೇ ಪಂದ್ಯಾವಳಿಯಲ್ಲಿ ಚೋಪ್ರಾ ಚಿನ್ನ ಗೆದ್ದಿದ್ದರು. 2021ರ ಮಾರ್ಚ್ 17ರಂದು ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ ಪಾಲ್ಗೊಂಡಿದ್ದ ಚೋಪ್ರಾ 87.80 ಮೀ. ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.

ಅದಾದ ನಂತರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ, 2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್‌, 2023ರಲ್ಲಿ ವಿಶ್ವ ಚಾಂಪಿಯನ್ ಹಾಗೂ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಚೋಪ್ರಾ ಅವರ ಸದ್ಯದ ದಾಖಲೆ 89.94 ಮೀಟರ್ ಇದ್ದು, 90 ಮೀ. ಗುರಿ ತಲುಪುವ ಸಾಧನೆ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT