ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲ್ಲು ಶಿಕ್ಷೆ ಅಹಿಂಸಾ ವಿರೋಧಿ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಾಗರಿಕ ಸಮಾಜವು ಸಮಸ್ತ ಮನುಕುಲದ ಜೀವನ ಧರ್ಮವನ್ನು ಗೌರವಿಸುವ ತತ್ವದ ತಳಹದಿಯ ಮೇಲೆ ನಿಂತಿದೆ. ಒಂದು ವೇಳೆ ಯಾರಾದರೂ ಈ ತತ್ವವನ್ನು ಉಲ್ಲಂಘಿಸಿದರೆ ಆಗ ಅವರನ್ನು ಶಿಕ್ಷೆಗೆ ಒಳಪಡಿಸ ಲಾಗುತ್ತದೆ. ಆದರೆ ಶಿಕ್ಷೆ ವಿಧಿಸುವವರೇ ಸ್ವತಃ ಈ ನಿಯಮವನ್ನು ಮೀರಿ ಹಂತಕರಾಗಿಬಿಟ್ಟರೆ, ಕಾಯುವವರೇ ಕೊಲ್ಲುವವರಾದಂತೆ ಆಗುವುದಿಲ್ಲವೇ? ಅಸ್ಪ್ರಶ್ಯತೆಯ ಅನಿಷ್ಟವನ್ನು ತೊಡೆದುಹಾಕಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ನಡುವೆ ಭಿನ್ನಾ ಭಿಪ್ರಾಯವಿತ್ತು ಎನ್ನುವುದು ಎಲ್ಲರಿಗೂ ಚೆನ್ನಾಗಿ ಗೊತ್ತಿರುವ ಸಂಗತಿ. ಆದರೆ ಮರಣ ದಂಡನೆ ರದ್ದುಗೊಳಿಸಬೇಕೆನ್ನುವ ವಿಷಯದಲ್ಲಿ ಈ ಇಬ್ಬರೂ ಸಮಾನ ಮನೋಭಾವ ಹೊಂದಿದ್ದರು ಎನ್ನುವುದು ನಮ್ಮಲ್ಲಿ ಅದೆಷ್ಟು ಮಂದಿಗೆ ತಿಳಿದಿದೆ?

`ಮರಣ ದಂಡನೆಯು ಅಹಿಂಸಾ ಸಿದ್ಧಾಂತಕ್ಕೆ ವ್ಯತಿರಿಕ್ತವಾದದ್ದು ಎಂದು ನಾನು ಭಾವಿಸುತ್ತೇನೆ~ ಎಂದು `ಹರಿಜನ~ ಪತ್ರಿಕೆಯಲ್ಲಿ ಗಾಂಧಿ ಬರೆದಿದ್ದರು. ಅಂಬೇಡ್ಕರ್ ಕೂಡ ಇದನ್ನೇ ಪ್ರತಿಪಾದಿಸಿದ್ದರು. `ಎಲ್ಲಕ್ಕಿಂತ ಮಿಗಿಲಾಗಿ ಈ ದೇಶವು ಅಹಿಂಸಾ ತತ್ವದ ಮೇಲೆ ಅಪಾರ ನಂಬಿಕೆ ಇಟ್ಟಿದೆ...ಹಾಗಾಗಿ ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ದೇಶದಲ್ಲಿ ಮರಣ ದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು~ ಎಂದು ಅವರು ಸಂವಿಧಾನ ರಚನಾ ಸಭೆಯಲ್ಲಿ ಹೇಳಿದ್ದರು.

ಆಧುನಿಕ ಭಾರತದ ಸಂಸ್ಥಾಪಕರಾದ ಈ ಇಬ್ಬರು ಮಹಾನ್ ನಾಯಕರ ಆಶಯಗಳು ಈ ನೆಲದ ಕಾನೂನಿನಲ್ಲಿ ಮಿಳಿತವಾಗಿಲ್ಲ ಎನ್ನುವುದು ದುರದೃಷ್ಟಕರ. ಶಿಕ್ಷೆಯ ಹೆಸರಿನಲ್ಲಿ ಭಾರತವು ತನ್ನ ಜನರನ್ನೇ ಕೊಲ್ಲುತ್ತಿದೆ. ನಾವು ನೈತಿಕ ಹಾಗೂ ಕಾನೂನು ನೆಲೆಗಟ್ಟಿನಲ್ಲಿ `ಮರಣ ದಂಡನೆಗೇ ಮರಣ ದಂಡನೆ ನೀಡಬೇಕು~ ( ಗಲ್ಲು ಶಿಕ್ಷೆ ರದ್ದು)ಎಂದು  ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಹೇಳುತ್ತಾರೆ. ಅಮ್ನೆಸ್ಟಿ ಅಂತರರಾಷ್ಟ್ರೀಯ ವರದಿಯಲ್ಲಿ ಮರಣದಂಡನೆಯನ್ನು `ಮೃತ್ಯು ಅದೃಷ್ಟ~ ಎಂದು ವ್ಯಾಖ್ಯಾನಿಸಲಾಗಿದೆ. ಸ್ವಾತಂತ್ರ್ಯದ ಕಾಲಘಟ್ಟದಿಂದಲೂ ಭಾರತದಲ್ಲಿ ಮರಣದಂಡನೆ ಯಾವ ರೀತಿಯಲ್ಲಿ ಜಾರಿಯಾಗಿದೆ ಎನ್ನುವುದನ್ನು ಅಧ್ಯಯನ ಮಾಡಿರುವ ಅಮ್ನೆಸ್ಟಿ, `ಅಂತಿಮವಾಗಿ ಯಾರು ಮರಣ ದಂಡನೆಗೆ ಗುರಿಯಾಗುತ್ತಾರೆ~ ಎನ್ನುವ ಅದೃಷ್ಟದ ಲೆಕ್ಕಾಚಾರವಿದು ಎಂಬ ನಿರ್ಣಯಕ್ಕೆ ಬಂದಿದೆ.

ಈ ಶಿಕ್ಷೆಯು ಪ್ರತಿವಾದಿ ವಕೀಲರ ಸಾಮರ್ಥ್ಯ ಹಾಗೂ ನ್ಯಾಯಾಧೀಶರ ವೈಯಕ್ತಿಕ ಒಲವು-ನಿಲುವಿನ ಮೇಲೆ ನಿಂತಿರುತ್ತದೆ. ಶೃದ್ಧಾನಂದ ಪ್ರಕರಣದಲ್ಲಿ ಮರಣ ದಂಡನೆಯ `ಅದೃಷ್ಟದ~ ಅಂಶವನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಂಡಿದೆ. (ಪತ್ನಿ ಕೊಲೆ ಪ್ರಕರಣದಲ್ಲಿ ಶೃದ್ಧಾ ನಂದ ಸ್ವಾಮಿಗೆ ವಿಧಿಸಿದ್ದ ಮರಣದಂಡನೆಯನ್ನು ನಂತರದಲ್ಲಿ ಜೀವಾವಧಿಗೆ ಪರಿವರ್ತಿಸಲಾಗಿದೆ) `ಮರಣ ದಂಡನೆ ಪ್ರಶ್ನೆಯು ವ್ಯಕ್ತಿನಿಷ್ಠ ಅಂಶಗಳಿಂದ ಮುಕ್ತವಾಗಿಲ್ಲ. ಇದನ್ನು ಶಿಕ್ಷೆಯನ್ನು ಖಚಿತಗೊಳಿಸುವುದು ಅಥವಾ  ಜೀವಾವಧಿ ಶಿಕ್ಷೆಗೆ ಬದಲಾಯಿಸುವುದು ನ್ಯಾಯಾಧೀಶರ ವೈಯಕ್ತಿಕ ನಿಲುವಿನ ಮೇಲೆ ನಿಂತಿರುತ್ತದೆ~ ಎಂದು ಅದು ವ್ಯಾಖ್ಯಾನಿಸಿದೆ.

ಇಡೀ ವಿಶ್ವದಾದ್ಯಂತ ಗಲ್ಲು ಶಿಕ್ಷೆ ರದ್ದುಗೊಳಿಸಬೇಕೆನ್ನುವ ದನಿ ಕೇಳಿಬರುತ್ತಿದೆ ಎನ್ನುವುದನ್ನು ಗಮನಿಸಬೇಕು. ಈಗಾಗಲೇ ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಅಮೆರಿಕ ಹೊರತುಪಡಿಸಿ ಅಮೆರಿಕ ಖಂಡದ ಇತರ ದೇಶಗಳಲ್ಲಿ ಇದನ್ನು ರದ್ದುಗೊಳಿಸ ಲಾಗಿದೆ. ಬೆಲರಸ್ ಹೊರತುಪಡಿಸಿ ಇಡೀ ಯೂರೋಪ್‌ನಲ್ಲಿ ಇದಕ್ಕೆ ಇತಿಶ್ರೀ ಹಾಡಲಾಗಿದೆ. ಆಫ್ರಿಕಾ ಕೂಡ ಗಲ್ಲು ಶಿಕ್ಷೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದೆ.

ಪ್ರಸ್ತುತ  ಚೀನಾ ಹಾಗೂ ಜಪಾನ್ ದೇಶಗಳಲ್ಲಿ ಅಪಾರ ಸಂಖ್ಯೆಯ ಜನರನ್ನು ನೇಣಿಗೇರಿ ಸಲಾಗು ತ್ತಿದೆ. ಈ ವಿಷಯದಲ್ಲಿ ಚೀನಾ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಆದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಅಮೆರಿಕವೇನೂ ಇದರಲ್ಲಿ ಹಿಂದೆ ಬಿದ್ದಿಲ್ಲ (ಇಲ್ಲಿ ಪ್ರಮುಖವಾಗಿ ಕಪ್ಪು ಜನಾಂಗದವರಿಗೆ ಈ ಶಿಕ್ಷೆ ನೀಡಲಾಗುತ್ತದೆ). ಮಾನವ ಹಕ್ಕು ಉಲ್ಲಂಘನೆಯ ಕುಖ್ಯಾತಿ ಹೊತ್ತಿರುವ ದೇಶಗಳ ಸಾಲಿಗೆ ಭಾರತದಂಥ ಪ್ರಜಾಪ್ರಭುತ್ವ ದೇಶವೂ ಸೇರುತ್ತದೆ ಎನ್ನುವುದನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟ ವಾಗುತ್ತದೆ. ಮರಣ ದಂಡನೆಯನ್ನು ವಿರೋಧಿ ಸುವ ಜಾಗತಿಕ ಧ್ವನಿಗೆ ಭಾರತವೂ ದನಿ ಗೂಡಿಸಬೇಕು. ಈ ನೆಲದ ಕಾನೂನಿನಿಂದ ಈ ಶಿಕ್ಷೆಯನ್ನು ರದ್ದುಗೊಳಿಸಬೇಕು.

ಅರವಿಂದ ನಾರಾಯಣ್
ವಕೀಲರು, ಪರ್ಯಾಯ ಕಾನೂನು ವೇದಿಕೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT