ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಾತ್ಮಕ ಕೃಷಿ ಸಂಶೋಧನೆ ಆಹಾರ ಭದ್ರತೆಗೆ ಮೂಲ

Last Updated 10 ಫೆಬ್ರುವರಿ 2011, 9:40 IST
ಅಕ್ಷರ ಗಾತ್ರ

ಧಾರವಾಡ: “ನಿರಂತರ ಗುಣಾತ್ಮಕ ಕೃಷಿ ಸಂಶೋಧನೆ ಹಾಗೂ ಕೃಷಿ ಉತ್ಪಾದನೆ ಗರಿಷ್ಠಗೊಳಿಸುವ ಉತ್ತಮ ಮಾನವ ಸಂಪನ್ಮೂಲಗಳು ಆಹಾರ ಭದ್ರತೆಯ ಮಟ್ಟದಲ್ಲಿನ ಉತ್ಪಾದನೆಗೆ ಮೂಲ ಅಂಶಗಳಾಗಿವೆ. ಗುಣಾತ್ಮಕ ಶಿಕ್ಷಣ, ಉತ್ತಮ ಪರಿಸರ ಹೊಂದಿರುವ ಭಾರತ ಮುಂಬರುವ ದಿನಗಳಲ್ಲಿ ವಿಶ್ವ ಕೃಷಿ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ” ಎಂದು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಡಾ. ರೋನಿ ಕಾಫಮನ್ ಆಶಯ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಳಯದಲ್ಲಿ ಬದಲಾಗುತ್ತಿರುವ ಹವಾಮಾನದ ಸನ್ನಿವೇಶಗಳಲ್ಲಿ ಗೋಧಿ ಉತ್ಪಾದನೆ ಹೆಚ್ಚಿಸುವ ಕುರಿತು ಗೋಧಿ ತಜ್ಞರ ನಾಲ್ಕು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ವಿಶ್ವ ಪರಿಸರದ ಬದಲಾವಣೆಗಳು ನಿಶ್ಚಿತವಾಗಿಯೂ ಆಹಾರ ಚಕ್ರ ಹಾಗೂ ಅದರ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆ ಮೇಲೆ ತೀವ್ರತರ ಪರಿಣಾಮ ಬೀರಲಿವೆ ಎಂದರು.

ಭಾರತದ ಕೃಷಿ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಎಲ್ಲ ಅವಶ್ಯಕತೆಗಳಿಗೆ ಸರ್ಕಾರದ ಅನುದಾನವನ್ನೇ ಅವಲಂಬಿಸಿವೆ. ಇದನ್ನು ತಪ್ಪಿಸಲು ಕೃಷಿಯ ಹಾಗೂ ವಿಶ್ವದ ಆಹಾರ ಅವಶ್ಯಕತೆಗೆ ತಕ್ಕಂತೆ ಅವುಗಳ ಸಂಶೋಧನೆ ಗುಣಮಟ್ಟ ಹೆಚ್ಚಬೇಕು. ಕೃಷಿ ಅಭಿವೃದ್ಧಿ ಕೃಷಿ ತಜ್ಞರ ಮೇಲೆ ಅವಲಂಬಿತವಾಗಿದ್ದು, ಕೃಷಿ ವಿವಿಗಳು ತಜ್ಞರ ಸಂಶೋಧನಾ ಚಟುವಟಿಕೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ಮೆಕ್ಸಿಕೋ ದೇಶದ ಸಿಮೈಟ್ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಂಜಯ ರಾಜಾರಾಮ್, ಬದಲಾಗುತ್ತಿರುವ ಜಾಗತಿಕ ಹವಾಮಾನದಲ್ಲಿ ಗೋಧಿ ಬೆಳೆಯು ತೆನೆಯಾಗುವ ಸಂದರ್ಭದಲ್ಲಿ ಒಂದರಿಂದ ಎರಡು ಡಿಗ್ರಿ ಸೆಂಟಿಗ್ರೇಡ್ ಬಿಸಿಲು ಹೆಚ್ಚಾದರೂ ಉತ್ಪಾದನೆಯ ಮೇಲೆ ಪರಿಣಾಮ ಉಂಟಾಗುತ್ತಿದೆ. ಅಲ್ಲದೇ ಹೆಚ್ಚು ಹೆಚ್ಚು ಬರವನ್ನು ನಾವು ಕಾಣುವ ಸಂದರ್ಭಗಳು ಉಂಟಾಗಲಿವೆ. 1994ರ ಮುಂಚೆ ಹಸಿರು ಕ್ರಾಂತಿ ಸಂದರ್ಭದಲ್ಲಿ ದೇಶದ ಕೃಷಿ ಬೆಳವಣಿಗೆ ಶೇ. 3 ರಷ್ಟು ಇದ್ದದ್ದು, ಕಳೆದ ದಶಕದಲ್ಲಿ ಶೇ. 1 ರಷ್ಟಾಗಿರುವುದು ಕಳವಳಕಾರಿ ಸಂಗತಿ ಎಂದರು.

ಭಾರತ ದೇಶದ ಕೃಷಿ ಉತ್ಪಾದನೆಯನ್ನು ಸರಾಸರಿ ಶೇ. 3 ರಷ್ಟಕ್ಕೆ ಹೆಚ್ಚಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆಯಬೇಕು. ಜನಸಂಖ್ಯೆ ಬೆಳವಣಿಗೆಗೆ ತಕ್ಕಂತೆ ನಮ್ಮ ಆಹಾರ ಉತ್ಪಾದನೆ ಮಟ್ಟವನ್ನು ಕಾಯ್ದುಕೊಳ್ಳುವ ಪರಿಣಾಮಕಾರಿ ನೀತಿ ಇಂದಿನ ಅಗತ್ಯ. ಇದರಿಂದ ದೇಶದ ಅಗತ್ಯದ ಹೆಚ್ಚುವರಿ ಆಹಾರ ಉತ್ಪಾದನೆ ಸಾಧ್ಯ ಎಂದು ಹೇಳಿದರು.

ದೇಶದಲ್ಲಿ 27 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ 80 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಆಗುತ್ತಿದ್ದು, ಇದು 120 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಸಾಧಿಸಬೇಕಾಗಿದೆ. ಚೀನಾ ದೇಶದ ಕೃಷಿ ಯತ್ಪಾದನೆ ಶೇ. 4.5 ರಷ್ಟು, ಈಜಿಪ್ಟ್ ಶೇ. 7 ರಷ್ಟು, ಫ್ರಾನ್ಸ್ ಶೇ. 6.5 ರಷ್ಟಿರುವುದು ಗಮನಿಸಿ ವಿವಿಧ ರೀತಿಗಳಲ್ಲಿ ಒಡೆದು ಹೋಗಿರುವ ದೇಶದ ರೈತರನ್ನು ಒಗ್ಗೂಡಿಸಿ ಕೃಷಿ ವ್ಯವಸ್ಥೆ ಪುನರ್ ರೂಪಿಸಬೇಕು ಎಂದು ಸಲಹೆ ನೀಡಿದರು.

ಮೆಕ್ಸಿಕೋ ಸಿಮೈಟ್ ಸಂಸ್ಥೆಯ ನಿರ್ದೇಶಕ ಡಾ. ಹನ್ಸ್ ಬ್ರೌನ್, 2050ರ ಹೊತ್ತಿಗೆ ಭಾರತ ಉಪಖಂಡದ ಜನಸಂಖ್ಯೆ ವಿಶ್ವದ ನಾಲ್ಕು ಜನರಲ್ಲಿ ಒಬ್ಬರನ್ನು ಹೊಂದಿರುವಷ್ಟು ಬೆಳವಣಿಗೆಯಾಗಲಿದೆ. ದೇಶದ ಆಹಾರ ಉತ್ಪಾದನೆ ಹೆಚ್ಚಳ ಇಂದಿನ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೇ ದೇಶದ ಕೃಷಿ ವ್ಯವಸ್ಥೆಯ ದಕ್ಷತೆ ಹೆಚ್ಚಿಸಲು ಕ್ರಮ ಕೈಕೊಳ್ಳಬೇಕು. ವಿಶ್ವದ ಆಹಾರ ವ್ಯವಸ್ಥೆಯ ಕುರಿತಂತೆ ಮಾರ್ಚನಲ್ಲಿ ತಮ್ಮ ಸಂಸ್ಥೆ ಕೃಷಿ ವಿಜ್ಞಾನಿಗಳ ಸಂವಾದ ಸಮ್ಮೇಳನ ಆಯೋಜಿಸಲಿದೆ ಎಂದರು.

ಐಎಆರ್‌ಐ ಮಾಜಿ ನಿರ್ದೇಶಕ ಡಾ. ಎಸ್.ನಾಗರಾಜನ್ ಮಾತನಾಡಿ, ಭಾರತದ ವಿವಿಧ ಪ್ರದೇಶಗಳ ಹವಾಮಾನ ತಕ್ಕಂತೆ ವಿವಿಧ ಕೃಷಿ ನೀತಿ ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಕುಲಪತಿ ಡಾ. ಆರ್.ಆರ್.ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಎಸ್.ಸಿಂಗ್ ಸಮ್ಮೇಳನದ ಮಾಹಿತಿ ನೀಡಿದರು. ಡಾ. ಪಿ.ಎಂ.ಸಾಲಿಮಠ ಸ್ವಾಗತಿಸಿದರು. ಡಾ. ಎಂ.ಬಿ.ಚೆಟ್ಟಿ ವಂದಿಸಿದರು. ಡಾ. ಕೃಷ್ಣರಾಜು ನಿರೂಪಿಸಿದರು. ಇದಕ್ಕೂ ಮುನ್ನ ಬುಧವಾರ ನಸುಕಿನ ಜಾವ ನಿಧನರಾದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರಿಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT