ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಕುಲ ಲೋಕಾರ್ಪಣೆ 5ರಂದು

Last Updated 3 ಮಾರ್ಚ್ 2011, 7:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸುಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ದಿ. ಗಂಗೂಬಾಯಿ ಹಾನಗಲ್ ಹೆಸರಿನಲ್ಲಿ ನಗರದ ಉಣಕಲ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲವನ್ನು ಮಾರ್ಚ್ 5ರಂದು ಲೋಕಾರ್ಪಣೆ ಮಾಡಲಾಗುತ್ತಿದೆ. ಗಂಗೂಬಾಯಿ ಜನ್ಮದಿನದಂದೇ ಈ ಗುರುಕುಲದ ಉದ್ಘಾಟನೆ ನೆರವೇರುತ್ತಿರುವುದು ವಿಶೇಷ.ಬುಧವಾರ ಗುರುಕುಲ ವೀಕ್ಷಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಈ ವಿಷಯ ತಿಳಿಸಿದರು.

ಗುರುಕುಲ ನಿರ್ಮಾಣ ಪೂರ್ಣಗೊಂಡು ಮೂರ್ನಾಲ್ಕು ತಿಂಗಳು ಕಳೆದಿದ್ದರೂ ಕಾರಣಾಂತರಗಳಿಂದ ಉದ್ಘಾಟನೆಯಾಗಿರಲಿಲ್ಲ. ಮಾರ್ಚ್ 5ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುಕುಲವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು. ಗುರುಕುಲದ ಕಟ್ಟಡ ಇಡೀ ದೇಶದಲ್ಲಿಯೇ ವಿಶಿಷ್ಟ ರೀತಿಯಿಂದ ನಿರ್ಮಾಣಗೊಂಡಿದೆ. ಗುರುಕುಲ ನಿರ್ಮಾಣಕ್ಕಾಗಿ 5 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಅಂತಿಮವಾಗಿ 5 ಕೋಟಿ 80 ಲಕ್ಷ ರೂಪಾಯಿ ವ್ಯಯವಾಗಿದೆ. ಗುರುಕುಲ ನಿರ್ವಹಣೆಗಾಗಿ ಕಳೆದ ಬಜೆಟ್‌ನಲ್ಲಿ ಒಂದು ಕೋಟಿ ರೂಪಾಯಿ ನೀಡಲಾಗಿದ್ದು, ಈ ಹಣವನ್ನು ನಿರ್ಮಾಣ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ. ಈ ಬಜೆಟ್‌ನಲ್ಲಿ ನಿರ್ವಹಣೆಗಾಗಿ 1.05 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.

ಗುರುಕುಲದಲ್ಲಿ ಆರು ಗುರುಗಳ ಮನೆ ಹಾಗೂ 36 ವಿದ್ಯಾರ್ಥಿಗಳ ವಸತಿಗೆ ಸೌಲಭ್ಯ ಕಲ್ಪಿಸಲಾಗಿದೆ. ಗುರು ಪರಂಪರೆ ಮೂಲಕ ಆಸಕ್ತರಿಗೆ ಸಂಗೀತ ಕಲಿಸುವ ವ್ಯವಸ್ಥೆ ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ಉಚಿತ ವಸತಿ ಒದಗಿಸಲಾಗುವುದು ಹಾಗೂ ತಿಂಗಳಿಗೆ ಎರಡು ಸಾವಿರ ರೂಪಾಯಿ ಸ್ಟೈಪಂಡ್ ನೀಡಲಾಗುವುದು. ಕಲಿಕೆಯ ಅವಧಿ ಗರಿಷ್ಠ ಐದು ವರ್ಷ ಆಗಿರಲಿದೆ.

ಹಿಂದೂಸ್ತಾನಿ ಸಂಗೀತದ ಕಿರಾಣಾ, ಗ್ವಾಲಿಯರ್, ಜೈಪುರ ಅತ್ರೋಲಿ, ಆಗ್ರಾ ಘರಾಣಾ ಶೈಲಿಗಳನ್ನು ಇಲ್ಲಿ ಕಲಿಸಲಾಗುವುದು. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಸಂಗೀತಗಾರರನ್ನು ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಗಂಗೂಬಾಯಿ ಅವರ ಮೊಮ್ಮಗ ಮನೋಜ ಹಾನಗಲ್ ಅವರು ತಮ್ಮ ಮನೆಯಲ್ಲಿ ರೂಪಿಸಿರುವ ಸಂಗೀತ ವಸ್ತು ಸಂಗ್ರಹಾಲಯ ವನ್ನು ಗುರುಕುಲಕ್ಕೆ ಸ್ಥಳಾಂತರಿಸಲು ಒಪ್ಪಿಗೆ ನೀಡಿದ್ದಾರೆ. ಗುರುಕುಲದಲ್ಲಿ ಸಭಾಭವನ ವೊಂದನ್ನು ನಿರ್ಮಿಸಿ, ಅಲ್ಲಿ ಈ ವಸ್ತು ಸಂಗ್ರಹಾಲಯಕ್ಕೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದರು.

ಚತುಷ್ಪಥಕ್ಕೆ ಚಾಲನೆ
ಹುಬ್ಬಳ್ಳಿ- ಧಾರವಾಡದ ನಡುವೆ ಚತುಷ್ಪಥ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮುಖ್ಯಮಂತ್ರಿಗಳು ಇದೇ ದಿನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶನಿವಾರ ಮಧ್ಯಾಹ್ನ 12ಕ್ಕೆ ಭೈರಿದೇವರಕೊಪ್ಪದ ಎಪಿಎಂಸಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಶೆಟ್ಟರ ತಿಳಿಸಿದರು. ಹುಬ್ಬಳ್ಳಿಯ ಹೊಸೂರು ವೃತ್ತದಿಂದ ಧಾರವಾಡದ ಜ್ಯೂಬಿಲಿ ಸರ್ಕಲ್‌ವರೆಗೆ 19 ಕಿ.ಮೀ. ಉದ್ದದ ರಸ್ತೆಯನ್ನು ಚತುಷ್ಪಥವನ್ನಾಗಿ ರೂಪಿಸುವ ಕಾಮಗಾರಿ ಇದಾಗಿದೆ. ಈ ಮೊದಲು ರೂ. 155 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದ ಈ ಕಾಮಗಾರಿಯ ಅಂದಾಜು ವೆಚ್ಚ ಈಗ ರೂ. 177.73 ಕೋಟಿ ತಲುಪಿದೆ ಎಂದು ಅವರು ಹೇಳಿದರು.

ಈ ಕಾಮಗಾರಿಯಲ್ಲಿ ಹುಬ್ಬಳ್ಳಿಯ ಉಣಕಲ್‌ನ ನವೀನ ಹೋಟೆಲ್‌ನಿಂದ ವಿದ್ಯಾಗಿರಿಯವರೆಗೆ 13.75 ಕಿ.ಮೀ. ಉದ್ದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುವುದು. ಈ ಭಾಗದಲ್ಲಿ ರಸ್ತೆಯ ಅಗಲ 50 ಮೀಟರ್ ಇರಲಿದೆ. ಉಳಿದುದೆಡೆ ನಗರ ಭಾಗದಲ್ಲಿ ರಸ್ತೆಯ ಅಗಲ 30 ಮೀಟರ್ ಮಾಡಲಾಗುವುದು. ಉಣಕಲ್ ಕ್ರಾಸ್, ನವನಗರ, ಭೈರಿದೇವರ ಕೊಪ್ಪದಲ್ಲಿ ಕೆಳಸೇತುವೆ ನಿರ್ಮಿಸಲಾಗುವುದು. ಹೊಸೂರು, ಎನ್‌ಟಿಟಿಎಫ್, ಧಾರವಾಡ ಕೋರ್ಟ್, ಜ್ಯೂಬಿಲಿ ವೃತ್ತಗಳನ್ನು ಅಭಿವೃದ್ಧಿಪಡಿಸಲಾಗುವುದು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿ) ಈ ಕಾಮಗಾರಿ ನಿರ್ವಹಿಸುತ್ತಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಜಿವಿಆರ್ ಇನ್‌ಫ್ರಾಸ್ಟ್ರಕ್ಚರ್ ಗುತ್ತಿಗೆ ಪಡೆದುಕೊಂಡಿದೆ. ಎರಡು ವರ್ಷಗಳಲ್ಲಿ ಈ ಕಾಮಗಾರಿ ಮುಗಿಸುವ ಗುರಿ ನಿಗದಿಪಡಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಸಾಲದ ನೆರವಿನಿಂದ ಬಿಆರ್‌ಟಿಎಸ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಚತುಷ್ಪಥದ ಜೊತೆಗೆ ಹೆಚ್ಚುವರಿಯಾಗಿ ಎರಡು ಪಥಗಳನ್ನು ರೂಪಿಸಿ, ಬಸ್‌ಗಳ ಸಂಚಾರಕ್ಕಾಗಿಯೇ ಮೀಸಲಿಡುವ ಯೋಜನೆ ಇದಾಗಿದೆ. ಚತುಷ್ಪಥ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಆರಂಭಿಸಲಾಗುವುದು. ನಂತರ ಆರು ಪಥಕ್ಕೆ ಹೆಚ್ಚಿಸುವ ಕೆಲಸವನ್ನು ಜೋಡಿಸಲಾಗುವುದು. ಆರು ಪಥಗಳ ರಸ್ತೆ ನಿರ್ಮಾಣಗೊಂಡ ನಂತರ ಮಧ್ಯದಲ್ಲಿನ ಎರಡು ಪಥಗಳನ್ನು ಬಸ್ ಸಂಚಾರಕ್ಕಾಗಿ ಮೀಸಲಿಡಲಾಗುವುದು ಎಂದರು.

ಬಿಆರ್‌ಟಿಎಸ್ ಯೋಜನೆಗಾಗಿ ಹೆಚ್ಚುವರಿ ಭೂಮಿ ಬೇಕಾಗುತ್ತದೆ. ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ಅಗತ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು. ಬಿಆರ್‌ಟಿಎಸ್ ಯೋಜನೆಯ ವೆಚ್ಚ 500 ಕೋಟಿ ರೂಪಾಯಿ ಆಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಶಾಸಕರಾದ ಚಂದ್ರಕಾಂತ ಬೆಲ್ಲದ, ಎಸ್.ಐ.ಚಿಕ್ಕನಗೌಡ್ರ, ಜಿಲ್ಲಾಧಿಕಾರಿ ದರ್ಪಣ ಜೈನ್, ಮನೋಜ ಹಾನಗಲ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT