ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚದುರಿದ ಚಿತ್ರಗಳು

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಕಳೆದ ಜುಲೈ 15ಕ್ಕೆ ಹೆಲ್ಸಿಂಕಿ ಒಲಿಂಪಿಕ್ಸ್‌ನ ಭಾರತ ಹಾಗೂ ಯುಗೊಸ್ಲೋವಿಯಾ ತಂಡಗಳ ನಡುವೆ ಫುಟ್‌ಬಾಲ್ ಪಂದ್ಯ ನಡೆದು 60 ವರ್ಷಗಳಾದವು. ಆ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದವರಲ್ಲಿ ಕರ್ನಾಟಕದ ಟಿ. ಷಣ್ಮುಗಂ ಕೂಡಾ ಒಬ್ಬರು.
ಭಾರತ ಮೊದಲ ಪಂದ್ಯದಲ್ಲಿಯೇ 1-10 ಗೋಲುಗಳಿಂದ ಯುಗೊಸ್ಲೋವಿಯಾ ಎದುರು ಸೋಲು ಕಂಡಿತು.

ಆದರೆ 1951-1962ರ ಅವಧಿ ಭಾರತ ಫುಟ್‌ಬಾಲ್ ರಂಗಕ್ಕೆ ಸುವರ್ಣ ವರ್ಷ. ಈ ಅವಧಿಯಲ್ಲಿ ಭಾರತ ಏಷ್ಯಾದಲ್ಲಿಯೇ ಅತ್ಯುತ್ತಮ ತಂಡವೆನಿಸಿತ್ತು. 1951ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿತ್ತು. 1952ರ ಒಲಿಂಪಿಕ್ಸ್‌ನಲ್ಲೂ ಗಮನ ಸೆಳೆದಿತ್ತು. ಈ ವೇಳೆ ಷಣ್ಮುಗಂ ಭಾರತ ತಂಡದ ಸದಸ್ಯರಾಗಿದ್ದರು.

ಜುಲೈ 27ರಿಂದ ಆರಂಭವಾಗಲಿರುವ ಲಂಡನ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಕಾಲ್ಚೆಂಡಿನ ಆಟದಲ್ಲಿ ಭಾರತ ನಡೆದುಬಂದ ಹಾದಿಯನ್ನು ಅವಲೋಕಿಸಿದಾಗ ಮತ್ತೆ ಮತ್ತೆ ನೆನಪಾದವರು ಷಣ್ಮುಗಂ. ಬೆಂಗಳೂರಿನ ಇಂದಿರಾನಗರದಲ್ಲಿರುವ ಅವರ ಮನೆಗೆ ಹೋದಾಗ, 92 ವರ್ಷದ ಷಣ್ಮುಗಂ ಚೆದುರಿದ ನೆನಪುಗಳನ್ನು ಒಂದುಗೂಡಿಸಿದರು.

* * *
ಫುಟ್‌ಬಾಲ್ ಆಟವೆಂದರೆ ನನಗೆ ಮೊದಲಿನಿಂದಲೂ ಪ್ರೀತಿ. ಫುಟ್‌ಬಾಲ್ ನನಗೆ ಎಲ್ಲವನ್ನೂ ನೀಡಿದೆ. ಕ್ರೀಡೆ ನನ್ನ ಬದುಕಿಗೆ ಹೆಚ್ಚು ಅರ್ಥ ಕೊಟ್ಟಿದೆ. ಯಾವುದೇ ಕೆಟ್ಟ ಚಟಗಳು ನನಗಿಲ್ಲ. ಅದಕ್ಕಾಗಿಯೇ 92ರ ವಯಸ್ಸಿನಲ್ಲೂ ಆರೋಗ್ಯವಾಗಿದ್ದೇನೆ. ಅಡ್ಡಾಡಲು ಕೊಂಚ ಕಷ್ಟವಾಗುತ್ತಿದೆ ಎನ್ನುವುದನ್ನು ಹೊರತು ಪಡಿಸಿದರೆ ಆರೋಗ್ಯವೇನೂ ಹದಗೆಟ್ಟಿಲ್ಲ.

ನಾನು ಆಸ್ಟಿನ್ ಟೌನ್ ಹೈಸ್ಕೂಲ್‌ನ ವಿದ್ಯಾರ್ಥಿ. ಬ್ರಿಟಿಷರು ಫುಟ್‌ಬಾಲ್ ಆಡುವುದನ್ನು ಪೊಲೀಸ್ ಕ್ರೀಡಾಂಗಣದಲ್ಲಿ ನೋಡಿ ಮನಸ್ಸಿನಲ್ಲಿ ಆಸೆ ಹುಟ್ಟುತ್ತಿತ್ತು. ಅಷ್ಟೇ ಅಲ್ಲ, ಪೊಲೀಸ್ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ಕಾರಣ ಕೆಲವರು ಪರಿಚಿತರಾಗಿದ್ದರು. ಈ ವೇಳೆಗೆ ಫುಟ್‌ಬಾಲ್ ಆಡುವ ಆಸೆ ಮನದಲ್ಲಿ ಗಟ್ಟಿಯಾಗಿತ್ತು.

ಟೆನಿಸ್ ಚೆಂಡಿನಿಂದ ಫುಟ್‌ಬಾಲ್ ಆಡುತ್ತಿದ್ದೆ. ಆದ್ದರಿಂದ ಬೇಗನೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಕಲಿತುಬಿಟ್ಟೆ. ಕೆಲ ಬ್ರಿಟಿಷ್ ಅಧಿಕಾರಿಗಳು ನನ್ನೊಂದಿಗೆ ಆಗಾಗ್ಗೆ ಮಾತನಾಡುತ್ತಿದ್ದರು. ಇದೇ ಅವಕಾಶ ಬಳಸಿಕೊಂಡು ಫುಟ್‌ಬಾಲ್ ಆಡಲು ಮುಂದಾದೆ. ಅವರೂ ಸಹ ಬೆಂಬಲ ನೀಡಿದರು.

ರಾಜ್ಯ ತಂಡದಲ್ಲಿ ಆಡಿದೆ. ರಾಷ್ಟ್ರೀಯ ತಂಡದಲ್ಲಿಯೂ ಸ್ಥಾನ ಲಭಿಸಿತು. 1952ರ ಒಲಿಂಪಿಕ್ಸ್‌ನಲ್ಲೂ ಆಡುವ ಅವಕಾಶ ನನ್ನದಾಯಿತು. ಮೊದಲಿನಿಂದಲೂ ಬರಿಗಾಲಿನಿಂದ ಆಡುತ್ತಿದ್ದೆ. ಬೂಟು ಹಾಕಿಕೊಳ್ಳಬೇಕು ಎನ್ನುವುದೇ ಗೊತ್ತಿರಲಿಲ್ಲ.

ಅಭ್ಯಾಸ ಕೂಡ ಬರಿಗಾಲಿನಲ್ಲಿ ನಡೆಯುತ್ತಿತ್ತು. ಆದ ಕಾರಣ ಒಲಿಂಪಿಕ್ಸ್‌ನಲ್ಲೂ ಬರಿಗಾಲಿನಲ್ಲಿ ಆಡಿದಾಗ ಏನೂ ವಿಶೇಷವೆನಿಸಲಿಲ್ಲ. ಆದರೆ, ಒಲಿಂಪಿಕ್ಸ್‌ನಿಂದ ಮರಳಿದ ತಕ್ಷಣ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಎಲ್ಲಾ ಆಟಗಾರರಿಗೆ ಬೂಟು ಕೊಡಿಸಿತು.

ಮೈಸೂರು ರಾಜ್ಯದಲ್ಲಿ 39 ವರ್ಷ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಕಾನ್‌ಸ್ಟೇಬಲ್ ಆಗಿ ಕೆಲಸಕ್ಕೆ ಸೇರಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನಿವೃತ್ತಿ ಹೊಂದಿದೆ.

ನನಗೆ ನೆನಪಿರುವ ಹಾಗೆ ಭಾರತದ ಅಹ್ಮದ್ ಖಾನ್ ಮಾತ್ರ ಒಂದು ಗೋಲನ್ನು ಒಲಿಂಪಿಕ್ಸ್‌ನಲ್ಲಿ ಗಳಿಸಿದ್ದರು. ಪಂದ್ಯ ಮುಗಿದ ಮೇಲೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆದರು. ಈ ಕ್ಷಣ ನಮಗೆ ತುಂಬಾ ಖುಷಿ ನೀಡಿತ್ತು.

ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡದ ನಾಯಕರಾಗಿದ್ದವರು ಕೋಲ್ಕತ್ತದ ಆತ್ಮೀಯ ಮಿತ್ರ ಶೈಲೇಂದ್ರನಾಥ್ ಮನ್ನಾ. ನಾವು ಕ್ರೀಡಾಂಗಣದಲ್ಲೂ ಹೊರಗಡೆಯೂ ಆತ್ಮೀಯ ಸ್ನೇಹಿತರಾಗಿದ್ದೆವು. ಮನ್ನಾ ಫುಲ್‌ಬ್ಯಾಕ್‌ನಲ್ಲಿ ಆಡುತ್ತಿದ್ದರು. ನಾನು ಲೆಫ್ಟ್ ಬ್ಯಾಕ್‌ನಲ್ಲಿ ಆಡುತ್ತಿದ್ದೆ.
 
ಒಂದು ಸಲ ಪಂದ್ಯದ ವೇಳೆ ಬಿದ್ದು ಕೈಗೆ ಬಲವಾಗಿ ಪೆಟ್ಟು ಬಿದ್ದಾಗ, ಕೂಡಲೇ ಉಪಚರಿಸಿ ಮನ್ನಾ ಸಮಾಧಾನ ಹೇಳಿದ್ದರು. ಈ ಸಂದರ್ಭವನ್ನು ಎಂದಿಗೂ ಮರೆಯಲಾರೆ.

ಈಗಿನಷ್ಟು ಸೌಲಭ್ಯಗಳು ಆಗಿರಲಿಲ್ಲ. ಆದರೂ ನಮ್ಮ ಆಟಕ್ಕೆ ಅವುಗಳು ಅಡ್ಡಿಯಾಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮನ್ನಾ ಅತ್ಯಂತ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರು. ಸ್ಫೂರ್ತಿದಾಯಕ ಶಕ್ತಿಯಾಗಿದ್ದರು. ತಂಡವನ್ನು ಕುಟುಂಬದಂತೆ ಕಾಣುತ್ತಿದ್ದರು.

ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಫುಟ್‌ಬಾಲ್ ಆಡುವುದನ್ನು ಬಿಟ್ಟ ಮೇಲೂ ದೂರವಾಣಿ ಮೂಲಕ ಅವರ ಸಂಪರ್ಕದಲ್ಲಿದ್ದೆ. ನಮ್ಮವರೇ ಆದ ಗೋಲ್ ಕೀಪರ್ ಕೆ.ವಿ. ವರದರಾಜ್ ಸಹ ಒಲಿಂಪಿಕ್ಸ್ ತಂಡದಲ್ಲಿದ್ದರು.

ಈಗ ಲಂಡನ್ ಒಲಿಂಪಿಕ್ಸ್ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದರೆ, ಫುಟ್‌ಬಾಲ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಟೀವಿಯಲ್ಲಿ ಪಂದ್ಯ ನಡೆಯುತ್ತಿದ್ದರೆ ನೋಡುತ್ತೇನೆ. ಈ ಆಟವೂ ಸಹ ಕ್ರಿಕೆಟ್‌ನಂತೆ ವ್ಯವಹಾರದ ರೂಪ ಪಡೆಯುತ್ತಿದೆ. ಈಗ ಸಾಕಷ್ಟು ಕ್ಲಬ್‌ಗಳಿವೆ. ಒಂದು ಸಂತೋಷವೆಂದರೆ, ಕ್ರೀಡೆಯನ್ನು ನೆಚ್ಚಿಕೊಂಡು ಬಂದವರಿಗೆ `ಅನ್ನ~ ಸಿಕ್ಕಿದೆ. ಬದುಕಿನ ಸಾರ್ಥಕತೆಗೆ ನೆರವಾಗಿದೆ. 

***
1946 ಹಾಗೂ 1952ರಲ್ಲಿ ಷಣ್ಮುಗಂ ಮೈಸೂರು ರಾಜ್ಯ ತಂಡದ ನಾಯಕರಾಗಿದ್ದರು. ಈ ವೇಳೆ ಮೈಸೂರು ಸಂತೋಷ್ ಟ್ರೋಫಿ ಜಯಿಸಿತ್ತು. ಈ ಟೂರ್ನಿಯಲ್ಲಿ ಬಂಗಾಳದವರು ಪ್ರಾಬಲ್ಯ ಹೊಂದಿದ್ದರು.
 
ವಿಶೇಷವೆಂದರೆ ಮೈಸೂರು ತಂಡ ಬಂಗಾಳದ ಎದುರೇ ಎರಡೂ ಸಲ ಪ್ರಶಸ್ತಿ ಜಯಿಸಿತ್ತು. ಷಣ್ಮುಗಂ ಅವರು ಗೋವಾದ ಸಲಗಾಂವ್ಕರ್ ತಂಡದ ಕೋಚ್ ಆಗಿದ್ದಾಗ ಆ ತಂಡ ಫೆಡರೇಷನ್ ಕಪ್‌ನಲ್ಲಿ ಚಾಂಪಿಯನ್ ಆಗಿತ್ತು.

ಥೇಮ್ಸ ನದಿಯ ದಡದಲ್ಲಿರುವ ಕ್ರೀಡಾಭಿಮಾನಿಗಳು ಒಲಿಂಪಿಕ್ಸ್ ಸಂಭ್ರಮದ್ದಲ್ಲಿದ್ದರೆ, ಸುಮಾರು ಏಳು ದಶಕಗಳ ಕಾಲ ಫುಟ್‌ಬಾಲ್ ಜತೆಗೆ ಒಡನಾಟ ಇರಿಸಿಕೊಂಡು, ರಾಷ್ಟ್ರವನ್ನು ಪ್ರತಿನಿಧಿಸಿದ್ದ ಷಣ್ಮುಗಂ ಬದುಕಿನ ಮುಸ್ಸಂಜೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT