ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಫ್ಯಾಷನ್ ಮೋಹ

ಚೆಲುವಿನ ಚಿತ್ತಾರ
Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸುತ್ತಲೂ ಕಗ್ಗತ್ತಲು, ಒಮ್ಮೆಲೇ ಎರಡೂ ಕಡೆ ಬೆಂಕಿಯ ಜ್ವಾಲೆ. ಆದರೆ ಅದು ಕೃತಕವಾದದ್ದು. ಕತ್ತಲನ್ನು ಸೀಳಿ ಮೆಲ್ಲನೆ ವೇದಿಕೆ ಮೇಲೆ ಬೆಳಕು ಚೆಲ್ಲತೊಡಗಿತು. ಆ ಬೆಳಕಿಗೆ ಪ್ರಾಚೀನ ಕಾಲದ ದೇವಾಲಯಗಳಲ್ಲಿ ಕಡೆದು ನಿಲ್ಲಿಸಿದ ಶಿಲ್ಪಗಳಂತೆ ಮೈಯೊಡ್ಡಿ ನಿಂತವರು ಬರೋಬ್ಬರಿ 27 ಮಂದಿ ರೂಪದರ್ಶಿಯರು. ಅವರಲ್ಲಿ 14 ಮಂದಿ ಯುವತಿಯರು. ಅವರೆಲ್ಲ ಸೀರೆಯನ್ನುಟ್ಟು ರ್‍ಯಾಂಪ್‌ಗೆ ಬರುತ್ತಿದ್ದಂತೆ ಮೌನವಾಗಿದ್ದ ಸಭಾಂಗಣದಲ್ಲಿ ಚಪ್ಪಾಳೆ, ಕೇಕೆ.

ಬೆಳ್ಳಿ ಚುಕ್ಕಿ ಫ್ಯಾಷನ್ ಅಕಾಡೆಮಿಯು ಇತ್ತೀಚೆಗೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ `ಪ್ರಿನ್ಸ್ ಮತ್ತು ಪ್ರಿನ್ಸೆಸ್ ಕರ್ನಾಟಕ 2013' ಫ್ಯಾಷನ್ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯವಿದು. ಬಗೆಬಗೆಯ ಕೇಶವಿನ್ಯಾಸ, ರಂಗುರಂಗಿನ ರೂಪಂ ಸೀರೆಗಳು ಹಾಗೂ ಸೀರೆಗೊಪ್ಪುವ ಒಡವೆಗಳು ರೂಪದರ್ಶಿಯರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದ್ದವು.

ನೇರಳೆ, ಬಿಳಿ, ಹಸಿರು, ಕಡುಗೆಂಪು, ಕೇಸರಿ, ಬೆಳ್ಳಿ, ಹಳದಿ ಬಣ್ಣದ ಕುಸುರಿ ಕಲೆ ಎದ್ದು ಕಾಣುತ್ತಿದ್ದ ಅದ್ದೂರಿ ಸೀರೆಗಳ ಸಂಗ್ರಹ ರೂಪದರ್ಶಿಯರ ಮೈಮೇಲೆ ಮಿಂಚಿದವು. ಅಂದಹಾಗೆ, ರೂಪಂ ಸಿಲ್ಕ್ ಇಂಟರ್‌ನ್ಯಾಷನಲ್ ಕಂಪೆನಿ ಸಹಯೋಗದೊಂದಿಗೆ ಫ್ಯಾಷನ್ ಈ ಶೋ ನಡೆಯಿತು.

ಹದಿನಾಲ್ಕು ಯುವತಿಯರಿಗೆ ಜೊತೆಯಾಗಿ ಹದಿಮೂರು ಮಂದಿ ಯುವಕರು ಶೇರ್ವಾನಿ ಧರಿಸಿ ರ್‍ಯಾಂಪ್ ಮೇಲೆ ಕಾಣಿಸಿಕೊಂಡರು. ಪೇಟ ಧರಿಸಿದ ಯುವಕನ ಶೇರ್ವಾನಿ ತುಂಬ ಇದ್ದ ಕುಸುರಿ ಕಲೆ ಗಮನ ಸೆಳೆಯಿತು. ಆತ ಸೀರೆಯುಟ್ಟ ರೂಪದರ್ಶಿಯೊಡನೆ ರ್‍ಯಾಂಪ್ ಮೇಲೆ ಬಂದು ಹಿಂದೂ ಸಂಪ್ರದಾಯದಂತೆ ಕೈಮುಗಿದು ಸ್ವಾಗತ ಕೋರಿದ ಕೂಡಲೇ ಪ್ರೇಕ್ಷಕರ ಕರತಾಡನ ಸಭಾಂಗಣ ಆವರಿಸಿತ್ತು.

ಫ್ಯಾಷನ್ ಶೋನ ಮತ್ತೊಂದು ಆಕರ್ಷಣೆ ಚಿಣ್ಣರ ಸ್ಪರ್ಧೆ. ವಿವಿಧ ಶಾಲೆಗಳಿಂದ ಬಂದ ಮೂರರಿಂದ 16 ವರ್ಷದೊಳಗಿನ ಮಕ್ಕಳು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ಮನರಂಜನೆ ನೀಡಿದರು. ರ್‍ಯಾಂಪ್ ಮೇಲೆ ಕಾಣಿಸಿಕೊಳ್ಳುವುದಕ್ಕೂ ಮುಂಚೆ ಎಲ್ಲಾ ಮಕ್ಕಳು ತಮ್ಮ ಪರಿಚಯ ಮಾಡಿಕೊಂಡರು. ಅವರ ಪರಿಚಯದ ತೊದಲು ಮಾತುಗಳು ಫ್ಯಾಷನ್ ಪ್ರಿಯರನ್ನು ನಗೆಗಡಲಲ್ಲಿ ಮುಳುಗಿಸಿದವು.

`ಎಥ್ನಿಕ್ ವೇರ್, ವೆಸ್ಟರ್ನ್ ವೇರ್ ಸೇರಿದಂತೆ ಮೂರು ಸುತ್ತುಗಳ ಸ್ಪರ್ಧೆ ಆಯೋಜಿಸಲಾಗಿದೆ. ಮದುವೆ, ಪಾರ್ಟಿಗಳಲ್ಲಿ ಸೀರೆಗಳು ಅದ್ದೂರಿಯಾಗಿ ಕಾಣುತ್ತವೆ. ಆದ್ದರಿಂದ ಸೀರೆಯನ್ನೇ ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ. ಸುಮಾರು 200ಕ್ಕೂ ಹೆಚ್ಚಿನ ಶೋಗಳಿಗೆ ವಿನ್ಯಾಸ ಮಾಡಿದ್ದೇನೆ. ಇಲ್ಲಿ ಮಕ್ಕಳಿಗೆ ತರಬೇತಿ ನೀಡಿದ್ದು ಖುಷಿ ನೀಡಿತು. ಆದರೆ ಅವರಿಗೆ ಹೇಗೆ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಬೇಕು ಎಂಬ ಇತ್ಯಾದಿ ಅಂಶಗಳ ಕುರಿತು ಒಂದು ತಿಂಗಳು ತರಬೇತಿ ನೀಡಿದ್ದೇನೆ' ಎಂದು ಅನುಭವ ಹಂಚಿಕೊಂಡರು ವಿನ್ಯಾಸಕ ಸೈಯದ್ ರಿಜ್ವಾನ್.

`ಇದು 5ನೇ ವರ್ಷದ ಫ್ಯಾಷನ್ ಸ್ಪರ್ಧೆ. ಸಿನಿಮಾ, ಜಾಹೀರಾತು ಹಾಗೂ ಮಾಡೆಲಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಬೆಳ್ಳಿಚುಕ್ಕಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇದುವರೆಗೆ ನಮ್ಮ ಅಕಾಡೆಮಿಯಿಂದ 300ರಿಂದ 400 ಮಂದಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ' ಎಂದು ಶೋ ಹಾಗೂ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು ಬೆಳ್ಳಿಚುಕ್ಕಿ ವ್ಯವಸ್ಥಾಪಕ ನಿರ್ದೇಶಕ ಜೆ.ಎನ್. ರವಿ.

ಚಿತ್ರ ನಿದೇರ್ಶಕ ವಿಕ್ರಂ ವಾಸು, ರೂಪದರ್ಶಿ ಮನಿಷಾ ಹುಂಡಾಲೆ, ಗಾಯಕ ರವಿಶಂಕರ್ ತೀರ್ಪುಗಾರರಾಗಿದ್ದರು.

ಚಿತ್ರಗಳು: ಬಿ.ಎಚ್. ಶಿವಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT