ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ: ಮಿಸ್ಟರ್ 420 : ಇಲ್ಲದ ಅರ್ಥ; ಸಮಯ ವ್ಯರ್ಥ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ಸಂದೇಶ್ ನಾಗರಾಜ್
ನಿರ್ದೇಶಕ: ಪ್ರಶಾಂತ್‌ರಾಜ್
ತಾರಾಗಣ: ಗಣೇಶ್, ಪ್ರಣೀತಾ, ರಂಗಾಯಣ ರಘು, ಸಾಧುಕೋಕಿಲ

ಈ ಹಿಂದೆ `ಕಿರಾತಕರು~ ಎಂಬ ರಿಮೇಕ್ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಪ್ರದೀಪ್ ರಾಜ್  ನಿರೀಕ್ಷೆ ಹೆಚ್ಚುವಂತೆ ಮಾಡಿದ್ದರು. ಸಿನಿಮಾರಂಗದ ಕುದುರೆ ಓಟದಲ್ಲಿ ಸದಾ ಓಡುವ ಕುದುರೆಯಾಗಲು ಸಾಕಷ್ಟು ಪರಿಶ್ರಮಪಡಬೇಕು ಎಂಬುದನ್ನು ಮರೆತು ಅವರು ಮಾಡಿದ ಸಿನಿಮಾವೇ `ಮಿಸ್ಟರ್ 420~. ನಾಯಕ ಗಣೇಶ್, ನಿರ್ದೇಶಕ ಪ್ರದೀಪ್ ರಾಜ್ ಮತ್ತು ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಯಾವುದೇ ಉದ್ದೇಶವಿಲ್ಲದೆ `ಬೇಕಿದ್ದರೆ ನೋಡಿಕೊಳ್ಳಿ~ ಎಂಬಂತೆ ಮಾಡಿದ ಸಿನಿಮಾ ಇದು.

ಪ್ರೇಕ್ಷಕರು  ಸಿನಿಮಾದ ಹೆಸರನ್ನು ನೋಡಿ ಊಹಿಸಬಹುದಾದಂತೆ ಈ ಸಿನಿಮಾ ವಂಚನೆ, ಕಳ್ಳತನವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಜೀವಿಸುವ ಮಾವ ಹಾಗೂ ಸೋದರಳಿಯನ ಕಥೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದ ನಾಯಕನನ್ನು ತನ್ನ `ವೃತ್ತಿ~ಗೆ ಕರೆದುಕೊಂಡು ಬಂದ ಮಾವ, ಅದರಲ್ಲೇ ಉದ್ಧಾರವಾಗುವ, ಲಾಂಗು ಹಿಡಿದು ಡಾನ್ ಆಗುವ ಕನಸು ಕಾಣುತ್ತಾನೆ.

ಆದರೆ, ನಾಯಕಿಯ ಪ್ರೀತಿಯೇ ಕಾರಣವಾಗಿ ಅವರಿಬ್ಬರೂ ಸರಿಯಾದ ಮಾರ್ಗದಲ್ಲಿ ದುಡಿಯುವ ಪ್ರಯತ್ನದಲ್ಲಿದ್ದಾಗ ಭೂಗತಲೋಕದ ವಿಷವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ. ಯಾವ ಪ್ರಯತ್ನವಿಲ್ಲದೆಯೇ ಡಾನ್ ಆಗುತ್ತಾರೆ. ಕೊನೆಯಲ್ಲಿ ಅದರಿಂದ ಹೇಗೆ ಹೊರಬರುತ್ತಾರೆ ಎಂಬುದು ಸಿನಿಮಾದ ಸಂಕ್ಷಿಪ್ತ ಹಂದರ. ಸಹಜವಾಗಿಯೇ ನಾಯಕ ಮೋಹಕ ನಾಯಕಿಯ ಪ್ರೇಮಪಾಶದಲ್ಲಿ ಸಿಲುಕುವ ಎಂದಿನ ಕಥೆಯ ಎಳೆಯೂ ಇದರಲ್ಲುಂಟು.

ಗಣೇಶ್, ರಂಗಾಯಣ ರಘು, ಸಾಧುಕೋಕಿಲ ಎಂಬ ನಟರಿದ್ದ ಮೇಲೆ ಈ ಸಿನಿಮಾದಲ್ಲಿ ನಗುವಿಗೆ ಕೊರತೆ ಇಲ್ಲ. ಕೆಲವು ದೃಶ್ಯಗಳು ಚೆನ್ನಾಗಿ ನಗಿಸುತ್ತವೆಯಾದರೂ ಪ್ರೇಕ್ಷಕರನ್ನು ನಗಿಸುವ ಅವಸರದಲ್ಲಿ ಹಾಸ್ಯಾಸ್ಪದವಾಗಿವೆ. ಅವು ನಮಗೆ ಹಳೆಯ ತಮಿಳು ಸಿನಿಮಾಗಳನ್ನು ನೆನಪಿಸುತ್ತವೆ. ಕಥೆಯೂ ಹೊಸದೇನಲ್ಲ. ಅದು ಈಗಾಗಲೇ ಅನೇಕರು ಮಾಡಿರುವ ಹರಿಕಥೆಯೇ. ಈ ಮೊದಲು ಕನ್ನಡದಲ್ಲೇ ಇಂಥ ಕಥೆಗಳು ಬಂದಿವೆ. ಇಂಥ ಸಾಮಾನ್ಯ ಕಥೆಯನ್ನು ನಿರ್ದೇಶಕರ ಚಿತ್ರಕಥೆಯಾಗಲಿ, ನಿರ್ದೇಶನವಾಗಲಿ, ಅಲ್ಲಲ್ಲಿ ಪಂಚ್ ಇರುವ ಬಿ.ಎ. ಮಧು ಅವರ ಸಂಭಾಷಣೆಯಾಗಲಿ ಮೇಲಕ್ಕೆತ್ತಲು ಸಾಧ್ಯವಾಗಿಲ್ಲ. ಸದಾ ಪೆದ್ದು ಪೊಲೀಸ್ ಅಧಿಕಾರಿಯಂತೆ ವರ್ತಿಸುವ ಸಾಧುಕೋಕಿಲ, ನುರಿತ, ಬುದ್ಧಿವಂತ ಕಳ್ಳನಂತೆ ನಟಿಸಿದ ರಂಗಾಯಣ ರಘು ಅವರ ನಟನೆ ಅತಿ ಎನ್ನಿಸುತ್ತದೆ.

ಆದರೂ, ಇದ್ದುದರಲ್ಲಿ ಕೊಂಚ ಸಹ್ಯ ಎನ್ನಿಸುವುದು ಇವರು ನಟಿಸಿರುವ ದೃಶ್ಯಗಳೇ. ನಿರ್ದೇಶಕ ಪ್ರದೀಪ್ ರಾಜ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ದ್ವಿತೀಯಾರ್ಧದಲ್ಲಿ ಬರುವ ಆ ಖಳಪಾತ್ರಕ್ಕೆ ಅವರು ಸೂಕ್ತವಾಗಿದ್ದಾರೆ ಕೂಡ.

ಇವುಗಳ ಹೊರತಾಗಿ ಹಾಡು, ಸಂಗೀತ ಕೂಡ ಕಿವಿಗಳನ್ನು ಮುಟ್ಟುವುದಿಲ್ಲ. ಹರಿಕೃಷ್ಣ ಸಂಯೋಜಿಸಿರುವ ಸಂಗೀತದಲ್ಲಿ ಕೇಳುವಂಥದ್ದು ಏನಿಲ್ಲ. ಇದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ಇಂಪಾದ ಹಾಡುಗಳನ್ನು ಕೊಟ್ಟ ಹರಿಕೃಷ್ಣ ಇವರೆಯೇ? ಎಂಬ ಅನುಮಾನಕ್ಕೂ ಇದು ಕಾರಣವಾಗುತ್ತದೆ. ನಾಯಕ ಗಣೇಶ್, ಇಬ್ಬನಿಯಲ್ಲಿ ತೊಳೆದ ಹೂವಿನಂತಿರುವ ನಾಯಕಿ ಪ್ರಣೀತಾ ಜೊತೆ ಒಂದೆರಡು ಹಾಡು ಹಾಡುತ್ತ ಕುಣಿಯುತ್ತಾರೆಯಾದರೂ ಅದು ಹಾಗೂ ಅವರ ನಟನೆ ಜೀವಂತವಾಗಿದೆ ಅನಿಸುವುದಿಲ್ಲ.

ಕನ್ನಡದ `ಚಿನ್ನದ ತಾರೆ~ ಹೀಗೇಕೆ ಆದರು ಎಂಬುದನ್ನು ಬೇರೆಯವರು ಕೇಳಿಕೊಳ್ಳುವುದಕ್ಕಿಂತ ಅವರೇ ಕೇಳಿಕೊಂಡರೆ ಒಳ್ಳೆಯದೇನೋ.
ಕಥೆ, ನಿರೂಪಣೆ, ಸಂಗೀತ, ಛಾಯಾಗ್ರಹಣ, ಸಂಕಲನ (ಕುಮಾರ್)- ಹೀಗೆ ಯಾವ ಅಂಶಗಳಲ್ಲೂ ಸಿನಿಮಾ ಜೀವಂತವಾಗಿ ತಾಕುವುದಿಲ್ಲ. ಸರಿಯಾದ ಸಿದ್ಧತೆ, ಚಿತ್ರಕತೆ ಇಲ್ಲದೆ ತಯಾರಾದ ಈ ಸಿನಿಮಾದಿಂದ ಏನನ್ನೂ ನಿರೀಕ್ಷಿಸದಿರುವುದು ಪ್ರೇಕ್ಷಕರ ಆರೋಗ್ಯಕ್ಕಂತೂ ಒಳಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT