ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬರ ಎದುರಿಸಿದ ಜಿಲ್ಲಾ ಉತ್ಸವ

Last Updated 15 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಜನರ ವಿರೋಧದ ನಡುವೆಯೇ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆದ ಐದನೇ ಜಿಲ್ಲಾ ಉತ್ಸವ ಜನರ ಬರ, ಜನಪ್ರತಿನಿಧಿಗಳ ಬಹಿಷ್ಕಾರದ ನಡುವೆಯೇ ತೆರೆ ಕಂಡಿತು.

ಮೂರು ದಿನಗಳ ಕಾಲದ ಉತ್ಸವದಲ್ಲಿ ಮುಖ್ಯ ವೇದಿಕೆಯ ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಎಸ್‌ಜೆಜೆಎಂ ಕಾಲೇಜು ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಜಹೊರತುಪಡಿಸಿದರೆ, ಉದ್ಘಾಟನಾ ಸಮಾರಂಭ ಸೇರಿದಂತೆ ನಾಟಕೋತ್ಸವ ಹಾಗೂ ಉಳಿದೆಲ್ಲ ಗೋಷ್ಠಿಗಳು ಜನರನ್ನು ಕರೆತಂದು ಕಾರ್ಯಕ್ರಮ ನಡೆಸಬೇಕಾಯಿತು.

ಉತ್ಸವದಲ್ಲಿ ವಿವಿಧ ವಿಷಯಗಳ ಏಳು ಗೋಷ್ಠಿಗಳು, ನಾಟಕೋತ್ಸವದಲ್ಲಿ ಒಂಬತ್ತು ನಾಟಕಗಳು, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ, ಉದ್ಯೋಗ ಮೇಳ, ಹಾಗೂ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆದವು. ಆದರೆ, ಯಾವುದೇ ಒಂದು ಗೋಷ್ಠಿಯಲ್ಲಿ ಸಭಾಭವನ ತುಂಬುವಷ್ಟು ಜನರು ಬರಲೇ ಇಲ್ಲ. ಕೆಲವೊಂದು ಗೋಷ್ಠಿಗಳು ಜನರು ಇಲ್ಲದೇ ಒಂದೆರಡು ತಾಸು ಮುಂದೂಡಿದ ಪ್ರಸಂಗಗಳು ಸಹ ನಡೆದವು.

ಅಷ್ಟೇ ಅಲ್ಲದೇ ಕೆಲವೊಂದು ಗೋಷ್ಠಿಗಳಲ್ಲಿ ಮೂರ‌್ನಾಲ್ಕು ಜನ ಉಪನ್ಯಾಸಕರು ಇದ್ದರೆ, ಅವರಲ್ಲಿ ಇಬ್ಬರು, ಒಬ್ಬರು ಗೈರು ಉಳಿದಿದ್ದರಿಂದ ಗೋಷ್ಠಿಗಳು ಕೇವಲ ಕಾಟಾಚಾರಕ್ಕೆ ನಡೆದಂತೆ ಕಂಡು ಬಂದವು. ಮಕ್ಕಳ ಕವಿಗೋಷ್ಠಿ ಹಾಗೂ ಹಿರಿಯರ ಕವಿಗೋಷ್ಠಿ ಮಾತ್ರ ವೇದಿಕೆ ಭರ್ತಿಯಾಗುವಷ್ಟು ಜನರು ಭಾಗವಹಿಸಿದ್ದರು. ಉಳಿದೆಲ್ಲ ಗೋಷ್ಠಿಗಳ ವೇದಿಕೆ ಖಾಲಿ ಖಾಲಿಯಾಗಿಯೇ ಇದ್ದವು.

ಜಿಲ್ಲೆಯಲ್ಲಿ ಬರದ ಬವಣೆ ಇರುವುದರಿಂದ ಜಿಲ್ಲಾ ಉತ್ಸವ ನಡೆಸುವುದೇ ಬೇಡ ಎಂದು ಜಿಲ್ಲೆಯ ಹತ್ತು ಹಲವು ಸಂಘ- ಸಂಸ್ಥೆಗಳು, ಅನೇಕ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಉತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರ ಜತೆಗೆ ಉತ್ಸವ ಉದ್ಘಾಟನೆ ದಿನವೇ ಸ್ಥಳೀಯ ಶಾಸಕ ಸುರೇಶಗೌಡ ಪಾಟೀಲರು ಜಿಲ್ಲಾ ಉತ್ಸವ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ವಿರೋಧವು ಸಹ ಇತ್ತೆಂದು ಬಹಿರಂಗಗೊಳಿಸಿದ್ದರು.


ಎಲ್ಲ ವಿರೋಧದ ನಡುವೆಯೂ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾ ಉತ್ಸವ ಆಚರಣೆಗೆ ವಿಶೇಷ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಲಿಲ್ಲ. ಆದರೆ,ಮೂರು ದಿನಗಳ ಕಾಲ ಉತ್ಸವ ಮಾತ್ರ ಜನರ ಉತ್ಸವವಾಗಲೇ ಇಲ್ಲ. ಜಿಲ್ಲೆಯ ಅಧಿಕಾರಿಗಳೇ ಜಿಲ್ಲಾ ಉತ್ಸವದುದ್ದಕ್ಕೂ ಮಿಂಚಿ ಮರೆಯಾಗುತ್ತಿದ್ದುದು ಸಾಮಾನ್ಯವಾಗಿತ್ತು.


ಈ ನಡುವೆ ಅದ್ಧೂರಿ ಉತ್ಸವ ಆಚರಣೆ ಮಾಡುವುದಿಲ್ಲ ಎಂದುಕೊಳ್ಳುತ್ತಲೇ,ಸರ್ಕಾರದಿಂದ ಬಿಡುಗಡೆಯಾದ 20 ಲಕ್ಷ ರೂ., ಹಳೇ ಉತ್ಸವದಲ್ಲಿ ಬಾಕಿ ಉಳಿದಿದ್ದ 11 ಲಕ್ಷ ರೂ.ಹಾಗೂ ಸಂಘ ಸಂಸ್ಥೆಗಳ ದೇಣಿಗೆ ರೂಪದಲ್ಲಿ ಬಂದ 10 ಲಕ್ಷ ಸೇರಿದಂತೆ ಒಟ್ಟು 45 ಲಕ್ಷಕ್ಕೂ ಹೆಚ್ಚು ಹಣವನ್ನು ಜಿಲ್ಲಾಡಳಿತ ವ್ಯಯಿಸುವ ಮೂಲಕ ಅದ್ಧೂರಿ ಉತ್ಸವವನ್ನಾಗಿ ಮಾರ್ಪಡಿಸಿದೆ.


ಕಲಾವಿದರಿಗೆ ನೀಡುವ ಸಂಭಾವನೆ ವಿಷಯದಲ್ಲಿಯೂ ಎಲ್ಲ ಕಲಾವಿದರನ್ನು ಸಮಾಧಾನ ಪಡಿಸಲು ಸಾಧ್ಯವಾಗಿಲ್ಲ. ಸಿನಿಮಾ ಸಂಗೀತಕಾರರನ್ನು ಕರೆಯಿಸಿ ಒಬ್ಬೊಬ್ಬರಿಗೆ  ಲಕ್ಷಾಂತರ ರೂ. ಸಂಭಾವನೆ ನೀಡಿದರೆ, ಸ್ಥಳೀಯ ಎಲ್ಲ ಕಲಾವಿದರಿಗೆ ಸೇರಿ ಕೇವಲ ಮೂರ‌್ನಾಲ್ಕು ಲಕ್ಷ ರೂ. ಸಂಭಾವನೆ ನೀಡಿ ಅವರ ಅಸಮಾಧಾನಕ್ಕೆ ಕಾರಣವಾಯಿತಲ್ಲದೇ, ತಾರತಮ್ಯ ಧೋರಣೆ ಅನುಸರಿಸಿದೆ ಎಂದ ಆರೋಪಕ್ಕೂ ಗುರಿಯಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಜನರ ಸಂಖ್ಯೆ ಹೆಚ್ಚಾದರೂ, ಹಾಕಿದ ಕುರ್ಚಿಗಳು ತುಂಬದಷ್ಟು ಜನರು ಬರಲೇ ಇಲ್ಲ. ಮೊದಲ ದಿನ ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ ಅವರ ಚಿತ್ರಗೀತೆಗಳ ಹಾಡುಗಾರಿಕೆ ಕಾರ್ಯಕ್ರಮದಲ್ಲಿ 10 ಸಾವಿರ ಖುರ್ಚಿಗಳಲ್ಲಿ 8,000 ಕುರ್ಚಿಗಳು ಖಾಲಿಯಾಗಿದ್ದವು.

ಎರಡನೇ ದಿನ ಸಂಜೆ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ ಅವರ ಕಾರ್ಯಕ್ರಮಕ್ಕೆ ನಿರೀಕ್ಷೆ ಮೀರಿ ಜನರು ಆಗಮಿಸಿದ್ದರೂ, ಖುರ್ಚಿಗಳಲ್ಲಿ ಮಾತ್ರ ಯುವ ಜನರೇ ತುಂಬಿದ್ದರು.


ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತೆ ಜನರ ಬರ ಎದುರಾಯಿತು. ರಾತ್ರಿ 10 ಗಂಟೆವರೆಗೆ ಸ್ವಲ್ಪ ಮಟ್ಟನ ಪ್ರೇಕ್ಷಕರು ಇದ್ದರೂ ನಂತರದ ಕಾರ್ಯಕ್ರಮಗಳಿಗೆ ಅಧಿಕಾರಿಗಳನ್ನು ಹೊರತುಪಡಿಸಿದರೆ, ಜನರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಸುಮಾರು ಎರಡು ಗಂಟೆ ನಡಯಬೇಕಿದ್ದ ದೇಶ ಭಕ್ತಿ ಗೀತೆಯ ಜಾಗೋ ಹಿಂದೂಸ್ತಾನಿ ಕಾರ್ಯಕ್ರಮವನ್ನು ಕೇವಲ ಒಂದೇ ತಾಸಿಗೆ ಮೊಟಕುಗೊಳಿಸುವಂತೆ ಸೂಚಿಸಲಾಯಿತು.


ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ 9 ನಾಟಕಗಳನ್ನು ನೋಡಲು ಜನರೇ ಇರಲಿಲ್ಲ. ಒಂದೊಂದು ನಾಟಕಕ್ಕೆ ಕೇವಲ ನೂರರಿಂದ ಇನ್ನೂರು ಜನರು ಮಾತ್ರ ಇದ್ದರು. ಆದರೆ, ನಾಟಕೋತ್ಸವ ಆಯೋಜಿಸಿದ ಸ್ಥಳ ದೂರಾಗಿದ್ದರಿಂದ ಜನರು ಅಲ್ಲಿ ಬರಲಿಲ್ಲ. ಊರಿನ ಮಧ್ಯದಲ್ಲಿ ಈ ವೇದಿಕೆ ನಿರ್ಮಿಸಿದ್ದರೆ ಚನ್ನಾಗಿರುತ್ತಿತ್ತು ಎಂದು ನಾಟಕ ತಂಡದ ಸದಸ್ಯ ಮನೋಜ ಹೇಳಿದರು.


ವಸ್ತು ಪ್ರದರ್ಶನ ಮಳಿಗೆಗಳಂತೂ ಮೂರು ದಿನ ಜನರಿಲ್ಲದೇ ಬೀಕೋ ಎನ್ನುತ್ತಿದ್ದವು. ಈ ಮಳಿಗೆಗಳಲ್ಲಿ ಸರ್ಕಾರಿ ಇಲಾಖೆಗಳ ಯೋಜನೆಗಳ ಮಾಹಿತಿ ನೀಡುವುದಕ್ಕೆ ಮೀಸಲಾಗಿದ್ದವು. ತೋಟಗಾರಿಕೆ ಇಲಾಖೆಯ ಫಲ-ಪುಷ್ಪ ಪ್ರದರ್ಶನ ಮಾತ್ರ ನೋಡುಗರ ಗಮನ ಸೆಳೆಯಿತು. ತರಾತುರಿಯಲ್ಲಿ ಆಯೋಜಿಸಿದ ಉದ್ಯೋಗ ಮೇಳ ಕೂಡಾ ಉದ್ಯೋಗ ಆಕಾಂಕ್ಷಿಗಳನ್ನು ಹಾಗೂ ಕಂಪೆನಿಗಳನ್ನು ಆಕರ್ಷಿಸುವಲ್ಲಿ ವಿಫಲವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT