ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಂಬೊರೇಟ್‌ನಲ್ಲಿ ಜಾತ್ರೆ ರಂಗು

Last Updated 11 ಜನವರಿ 2011, 8:45 IST
ಅಕ್ಷರ ಗಾತ್ರ

ಸುಡು ಬಿಸಿಲನ್ನು ಲೆಕ್ಕಿಸದೆ ಸಾಹಸ ಪ್ರದರ್ಶನ. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ವಿವಿಧ ಪರಿಸರದ ಸಾವಿರಾರು ವಿದ್ಯಾರ್ಥಿಗಳು ಒಂದೇ ಕುಟುಂಬದವರಂತೆ ಜೊತೆ ಜೊತೆ ಇರುವುದು. ಚಳಿಯನ್ನೂ ಲೆಕ್ಕಿಸದೆ ಬಿಡಾರಗಳಲ್ಲಿ ವಾಸ...

ಕನಕಪುರ ರಸ್ತೆಯ ಕಗ್ಗಲೀಪುರ ಸಮೀಪ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿರುವ ರಾಜ್ಯ ಮಟ್ಟದ 26ನೇ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೊರೇಟ್ ಕಾರ್ಯಕ್ರಮದಲ್ಲಿ ಈ ವೈವಿಧ್ಯಗಳನ್ನೆಲ್ಲ ನೋಡಬಹುದು.  ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿರುವ 8 ಸಾವಿರ ಶಿಬಿರಾರ್ಥಿಗಳು ಬಯಲು ಪ್ರದೇಶದಲ್ಲಿ ನೂರಾರು ಬಿಡಾರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದು ಇಲ್ಲೇ ಕಾಯಂ ವಾಸಕ್ಕಾಗಿ ಅಲ್ಲ; ಜ. 6 ರಿಂದ ಆರಂಭವಾಗಿರುವ ರಾಜ್ಯ ಮಟ್ಟದ ಜಾಂಬೊರೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು. 

 ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳಿಗೆ ಸಮಾಜ ಸೇವೆ, ಸ್ವಾವಲಂಬಿ ಜೀವನ ಮತ್ತು ಪರಿಸರ ಸಂರಕ್ಷಣೆ ಕುರಿತು ಅರಿವು ಹಾಗೂ ದೇಶಪ್ರೇಮ ಮೂಡಿಸುವುದೇ ಈ ಶಿಬಿರದ ಮುಖ್ಯ ಉದ್ದೇಶ. ಇದು ಈ ವರೆಗಿನ ಸಮಾವೇಶದಲ್ಲೇ ಬೃಹತ್ ಪ್ರಮಾಣದ್ದು ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ನ  ಮುಖ್ಯ ಆಯುಕ್ತ ಕೊಂಡಜ್ಜಿ ಬಿ. ಷಣ್ಮುಖಪ್ಪ ಹೇಳುತ್ತಾರೆ.

ಇಲ್ಲಿ ಸ್ವತಃ ಶಿಬಿರಾರ್ಥಿಗಳು ಅಡುಗೆ ಮಾಡಿಕೊಂಡು ಊಟ ಮಾಡುತ್ತಾರೆ.  ಇದೊಂದು ವಿಶೇಷ ಅನುಭವ. ಕರಕೌಶಲ್ಯ, ಕೃತಕ ಗೋಡೆ ಹತ್ತುವುದು, ಹಗ್ಗದ ಬೆಂಕಿ ದಾಟುವುದು ಹಾಗೂ ಈಜಿನಲ್ಲಿ ಬಗೆಬಗೆಯ ಸಾಹಸಮಯ ಚಟುವಟಿಕೆಗಳನ್ನು ನಡೆಸುತ್ತಾರೆ.
ಇವುಗಳಲ್ಲದೆ ಹೊರ ಸಂಚಾರ, ಭಾವೈಕ್ಯ, ಯೋಗ, ಆರೋಗ್ಯ ಅರಿವು, ಸಮುದಾಯ ಅಭಿವೃದ್ಧಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗುತ್ತವೆ. ನಿತ್ಯ ಸಂಜೆ ವಿವಿಧ ಜಿಲ್ಲೆಗಳಿಂದ ಬಂದಿರುವ ಶಿಬಿರಾರ್ಥಿಗಳು ಆಯಾ ಭಾಗದ ಸಾಂಸ್ಕೃತಿಕ, ಜಾನಪದ ಕಲೆಗಳ ಪ್ರದರ್ಶನ ಮಾಡುವ ಮೂಲಕ ವಿಸ್ಮಯ ಲೋಕವನ್ನೇ ಸೃಷ್ಟಿಸುತ್ತಿದ್ದಾರೆ. ಪಥಸಂಚಲನವಂತೂ ಪರಿಣಿತರೂ ಮೂಗಿನ ಮೇಲೆ ಬೆರಳಿಡುವಷ್ಟು ಲಯಬದ್ಧ, ಅಚ್ಚುಕಟ್ಟು.

ಇಲ್ಲಿ ರೋವರ್ಸ್‌ ಮತ್ತು ರೇಂಜರ್ಸ್‌ಗಳು (18 ವರ್ಷ ಮೇಲ್ಪಟ್ಟವರು) ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಗೊಂದರಂತೆ ವಿಭಾಗಗಳನ್ನು ರಚಿಸಲಾಗಿದ್ದು, ಆಯಾ ಜಿಲ್ಲೆಯ ಶಿಬಿರಾರ್ಥಿಗಳೇ ತಯಾರಿಸಿದ ಜಿಲ್ಲಾ ದ್ವಾರಗಳು ಮನಮೋಹಕವಾಗಿವೆ.

ಮಂಗಳವಾರ ಮುಗಿಯುವ ಜಾಂಬೋರಿ ಜಾತ್ರೆಯ ರಂಗು ತಂದಿದೆ. ಮೊದಲ ದಿನ ವೇದಿಕೆ ಕುಸಿದು ಆದ ಅವಘದ ಕಹಿಯನ್ನು ಪೂರ್ತಿ ಮರೆಸಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT