ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಿಗೆ ಮೇವಿಗಾಗಿ ಹೆದ್ದಾರಿ ತಡೆ

Last Updated 9 ಆಗಸ್ಟ್ 2012, 5:30 IST
ಅಕ್ಷರ ಗಾತ್ರ

ಸಿಂದಗಿ: ಗೋಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಜಾನುವಾರುಗಳಿಗೆ ತಿನ್ನಲು ಮೇವಿಲ್ಲ ಮತ್ತು ಕುಡಿಯಲು ನೀರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಜಾನುವಾರುಗಳನ್ನು ಕಟ್ಟಿ ರಸ್ತೆ ತಡೆ ಚಳವಳಿ ನಡೆಸಿರುವ ಘಟನೆ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿಯಲ್ಲಿ ಬುಧವಾರ ನಡೆದಿದೆ.

ಕೆಲ ಕಾಲ ಹೆದ್ದಾರಿ ತಡೆ ಮಾಡಿದ್ದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡು, ಪ್ರಯಾಣಿಕರಿಗೆ ತೀವ್ರ ತೊಂದರೆ ಅನುಭವಿಸಿದರು. ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ತಿನ್ನಲು ಮೇವಿಲ್ಲದೆ ಸಾಯುವ ಸ್ಥಿತಿ ತಲುಪಿವೆ. ಕುಡಿಯಲು ನೀರನ್ನೂ ಸಹ ಪೂರೈಕೆ ಮಾಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಹತಾಶರಾಗಿ ಮಾರಾಟ ಮಾಡಲು ಮುಂದಾಗಿದ್ದರು. ಗೋಶಾಲೆ ಸ್ಥಿತಿ ಅದಕ್ಕಿಂತ ಭೀಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ದೇವರಹಿಪ್ಪರಗಿ ಘಟಕದ ಅಧ್ಯಕ್ಷ ರಮೇಶ ಮಸಬಿನಾಳ, ಶಿವಾಜಿ ಮೆಟಗಾರ ಮಾತನಾಡಿ, ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೂರ‌್ನಾಲ್ಕು ದಿನಗಳಿಂದ ತಿನ್ನಲು ಮೇವಿಲ್ಲದೇ ದನಕರುಗಳು ಪರಿತಪಿಸುತ್ತಿವೆ. ನೀರು ಸರಬರಾಜು ಮಾಡುವ ವಿದ್ಯುತ್ ಮೋಟಾರ್ ಸುಟ್ಟಿರುವ ಕಾರಣಕ್ಕಾಗಿ ಕುಡಿಯಲು ನೀರೂ ಇಲ್ಲ. ಈ ಬಗ್ಗೆ ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಕ್ರಮ ಜರುಗಿಸದೇ ಇದ್ದುದು ಖಂಡನೀಯ ಎಂದರು.

ತಹಶೀಲ್ದಾರ ಡಾ. ಶಂಕ್ರಣ್ಣ ವಣಕ್ಯಾಳ, ಸಿಪಿಐ ಚಿದಂಬರ ವಿ.ಎಂ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಿ, ಅಗತ್ಯ ನೆರವು ನೀಡುವ ಭರವಸೆ ನೀಡಿದರು.ಗೋಶಾಲೆಯಲ್ಲಿ ಮೇವಿನ ಕೊರತೆ ಇದ್ದುದನ್ನು ಒಪ್ಪಿಕೊಂಡ ತಹಶೀಲ್ದಾರ ಡಾ.ವಣಕ್ಯಾಳ ಮೇವು ಸಂಗ್ರಹಿಸಿಕೊಂಡವರು ಮೇವನ್ನು ಗೋಶಾಲೆಗೆ ನೀಡಲು ಮುಂದಾಗುತ್ತಿಲ್ಲ.

ಮೇವಿನ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ಗೋಶಾಲೆಯಲ್ಲಿ ಈಗ 25-30 ಜಾನುವಾರುಗಳಿವೆ. ಅವುಗಳಿಗಾಗಿ ತಕ್ಷಣವೇ ಅರಕೇರಿ ಗೋಶಾಲೆಯಿಂದ ಮೇವು ತರಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಗ್ರಾಮ ಪಂಚಾಯಿತಿ ಟ್ಯಾಂಕರ್ ಮುಖಾಂತರ ನೀರಿನ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಂತರ ಪ್ರತಿಭಟನಕಾರರು ರಸ್ತೆ ತಡೆ ತೆರುವುಗೊಳಿಸಿದರು. ಪ್ರತಿಭಟನೆಯಲ್ಲಿ ವಿನೋದ ಪಾಟೀಲ, ಎ.ಡಿ. ಮುಲ್ಲಾ, ಮಹಾಂತೇಶ ವಂದಾಲ, ರಾಜು ಮೆಟಗಾರ, ಈರಣ್ಣ ವಡ್ಡೋಡಗಿ, ನಾದರ್ ರಿಸಲ್ದಾರ, ಮಲ್ಲಪ್ಪ ಮಸಬಿನಾಳ, ಪರಶುರಾಮ ಜಮಾದಾರ, ಕಾಂತೂ ದಿಂಡವಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT