ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ ಪಂಚಾಯಿತಿ ಅಧ್ಯಕ್ಷರಾಗಿ ನರಸಿಂಹಮೂರ್ತಿ; ಅಶ್ವತ್ಥಪ್ಪ ಉಪಾಧ್ಯಕ್ಷ

Last Updated 5 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಕ್ಷೇತ್ರದ ಸದಸ್ಯ ಸಿ.ಆರ್.ನರಸಿಂಹಮೂರ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ಷೇತ್ರದ ಸದಸ್ಯ ಎನ್.ಅಶ್ವತ್ಥಪ್ಪ ಆಯ್ಕೆಯಾಗಿದ್ದಾರೆ.
 
ಬಿಸಿಎಂ-ಎ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಿ.ಆರ್.ನರಸಿಂಹಮೂರ್ತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಅಶ್ವತ್ಥಪ್ಪ ಇಬ್ಬರೂ ಒಂದು ಮತದ ಅಂತರದಿಂದ ವಿಜೇತರಾದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಚುನಾವಣೆ ಸಂದರ್ಭದಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಇಬ್ಬರೂ ಆಕಾಂಕ್ಷಿಗಳು ತಾವು ಬಯಸಿದ ಸ್ಥಾನಗಳನ್ನು ಯಶಸ್ವಿಯಾದರು. ಸುಮಾರು ಒಂದು ಗಂಟೆ ಕಾಲ ನಡೆದ ಚುನಾವಣೆ ಪ್ರಕ್ರಿಯೆ ನಡೆಯಿತು.

`ಚುನಾವಣೆಯಲ್ಲಿ ಇಬ್ಬರೂ ಒಂದು ಮತದ ಅಂತರದಿಂದ ವಿಜೇತರಾಗಿದ್ದಾರೆ~ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಕೆ. ಶಿವರಾಂ ಘೋಷಿಸಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ದಿನದಿಂದ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಎರಡೂ ಸ್ಥಾನಗಳಿಗೂ ಪ್ರತ್ಯೇಕವಾಗಿ ನಾಲ್ಕು ಮಂದಿ ಆಕಾಂಕ್ಷಿಗಳಿದ್ದರೂ ಇಬ್ಬರ ಹೆಸರು ಮಾತ್ರವೇ ಕೇಳಿ ಬರುತಿತ್ತು.
 
ಆದರೆ ಎರಡು-ಮೂರು ದಿನಗಳಲ್ಲಿ ನಡೆದ ಮಹತ್ತರ ಬೆಳವಣಿಗೆಯಲ್ಲಿ ಹೆಚ್ಚಿನ ಪೈಪೋಟಿ ನೀಡದ ಇಬ್ಬರೂ ಅನಿರೀಕ್ಷಿತವಾಗಿ ಆಯ್ಕೆಯಾದರು. 27 ಮತಗಳಲ್ಲಿ ಇಬ್ಬರೂ ತಲಾ 14 ಮತಗಳನ್ನು ಗಳಿಸುವ ಮೂಲಕ ವಿಜೇತರಾದರು. ಅವರ ಪ್ರತಿಸ್ಪರ್ಧಿಗಳು 13 ಮತಗಳನ್ನು ಗಳಿಸಿ ಪರಾಭವಗೊಂಡರು.

ಚುನಾವಣೆ ವಿವರ: ಬೆಳಿಗ್ಗೆ 10 ರಿಂದ ಮಧ್ಯಾಹ್ನ ಗಂಟೆಯವರೆಗೆ ಆಕಾಂಕ್ಷಿಗಳಿಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ನೀಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಸಿ.ಆರ್.ನರಸಿಂಹಮೂರ್ತಿ ಮತ್ತು ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದ ಎಸ್.ಎನ್.ಚಿನ್ನಪ್ಪ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಅಶ್ವತ್ಥಪ್ಪ, ಗೌರಿಬಿದನೂರು ತಾಲ್ಲೂಕಿನ ದಾರಿನಾಯಕನಪಾಳ್ಯ ಕ್ಷೇತ್ರದ ಪಿ.ವಿ.ರಾಘವೇಂದ್ರ ಹನುಮಾನ್ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಕ್ಷೇತ್ರದ ಅಮರಾವತಿ ಕೃಷ್ಣಪ್ಪ ನಾಮಪತ್ರ ಸಲ್ಲಿಸಿದರು.

ನಾಮಪತ್ರಗಳನ್ನು ಹಿಂಪಡೆದುಕೊಳ್ಳಲು ನೀಡಲಾಗಿದ್ದ ಐದು ನಿಮಿಷಗಳ ಕಾಲಾವಧಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಿ.ವಿ.ರಾಘವೇಂದ್ರ ಹನುಮಾನ್ ಅವರೊಬ್ಬರೇ ತಮ್ಮ ನಾಮಪತ್ರವನ್ನು ಹಿಂಪಡೆದರು. ಸದಸ್ಯರು ಕೈಯೆತ್ತುವ ಮತ್ತು ಸಹಿಗಳನ್ನು ಹಾಕುವುದರ ಮೂಲಕ ಪರ-ವಿರೋಧ ಮತಗಳ ಚಲಾವಣೆ ಮಾಡಿದರು. ಎಲ್ಲ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಕೆ.ಶಿವರಾಂ ಅವರು ಚುನಾವಣಾ ವಿಜೇತರ ಹೆಸರುಗಳನ್ನು ಘೋಷಿಸಿದರು.

ಅಧಿಕಾರಿಗಳು ಮತ್ತು ಸದಸ್ಯರ ಶುಭಹಾರೈಕೆಗಳನ್ನು ಪಡೆದ ನಂತರ ಮಾತನಾಡಿದ ಸಿ.ಆರ್.ನರಸಿಂಹಮೂರ್ತಿ ಮತ್ತು ಎನ್.ಅಶ್ವತ್ಥಪ್ಪ, `ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆ-ಸಂಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು.
 
ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಬಿಡುಗಡೆಯಾಗುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು~ ಎಂದರು. ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು. 

ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಗೆ ರಾಜೀನಾಮೆ
ಚಿಕ್ಕಬಳ್ಳಾಪುರ:
ಜಿಲ್ಲಾ ಪಂಚಾಯಿತಿಯಲ್ಲಿ ಏಕೈಕ ಬಿಜೆಪಿ ಸದಸ್ಯರಾಗಿದ್ದ ಸಿ.ಆರ್.ನರಸಿಂಹಮೂರ್ತಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಸುಲಭದ್ದಾಗಿರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದ ಎಸ್.ಎನ್.ಚಿನ್ನಪ್ಪ, ಚಿಂತಾಮಣಿ ತಾಲ್ಲೂಕಿನ ಭೂಮಿಶೆಟ್ಟಹಳ್ಳಿ ಕ್ಷೇತ್ರದ ಶೇಖ್‌ಮೌಲಾ ಮತ್ತು ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ಅವರ ಹೆಸರು ಕೇಳಿ ಬರುತಿತ್ತು.

ಆದರೆ ಈ ನಡುವೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿ.ಆರ್.ನರಸಿಂಹಮೂರ್ತಿ ಬುಧವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿನಾರಾಯಣರೆಡ್ಡಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು. 27 ಸದಸ್ಯರ ಪೈಕಿ 14 ಸದಸ್ಯರ ಬೆಂಬಲ ಪಡೆದು ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

`ಜಿಲ್ಲಾ ಪಂಚಾಯಿತಿಯಲ್ಲಿ ಏಕಮೇವ ಬಿಜೆಪಿ ಸದಸ್ಯರಾಗಿರುವ ಸಿ.ಆರ್.ನರಸಿಂಹಮೂರ್ತಿಯವರಿಗೆ ಅಧ್ಯಕ್ಷರಾಗಬೇಕಿದ್ದರೆ, ಬಿಜೆಪಿಗೆ ರಾಜೀನಾಮೆ ನೀಡಬೇಕು ಎಂದು ಷರತ್ತು ವಿಧಿಸಿದ್ದೆವು. ಅದರಂತೆಯೇ ಅವರು ಬಿಜೆಪಿಗೆ ರಾಜೀನಾಮೆ ನೀಡಿ, ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರವಾಗಿ ಸ್ಪರ್ಧಿಸಿದರು. ಸ್ವತಂತ್ರ ಅಭ್ಯರ್ಥಿಯಾದ ಕಾರಣ ಅವರ ಪರ ನಾವು ಮತ ಚಲಾಯಿಸಿದೆವು~ ಎಂದು ಸದಸ್ಯರು `ಪ್ರಜಾವಾಣಿ~ಗೆ ತಿಳಿಸಿದರು.

 ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಕಾಂಗ್ರೆಸ್ ಸದಸ್ಯ ಎನ್.ಅಶ್ವತ್ಥಪ್ಪ ಅವರು ಕೂಡ ತೀವ್ರ ಪೈಪೋಟಿ ಎದುರಿಸಬೇಕಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಗೌರಿಬಿದನೂರು ತಾಲ್ಲೂಕಿನ ದಾರಿನಾಯಕನಾಪಾಳ್ಯ ಕ್ಷೇತ್ರದ ಪಿ.ವಿ.ರಾಘವೇಂದ್ರ ಹನುಮಾನ್, ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಕ್ಷೇತ್ರದ ಅಮರಾವತಿ ಕೃಷ್ಣಪ್ಪ ಮತ್ತು ಚಿಂತಾಮಣಿ ತಾಲ್ಲೂಕಿನ ಕೋನಪಲ್ಲಿ ಕ್ಷೇತ್ರ ಮಂಜುಳಮ್ಮ ಮುನಿನರಸಿಂಹಪ್ಪ ಅವರ ಹೆಸರು ಕೇಳಿ ಬರುತಿತ್ತು. ಆದರೆ ಸದಸ್ಯರ ಮನವೊಲಿಸಿಕೊಂಡ ಎನ್.ಅಶ್ವತ್ಥಪ್ಪ ಅವರು 14 ಸದಸ್ಯರ ಬೆಂಬಲದಿಂದ  ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT