ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವದಾಯಿನಿ ನಕ್ಷತ್ರ ರಾತ್ರಿ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

`ಸ್ಟಾರಿ ನೈಟ್~ (1889) ವಿನ್ಸೆಂಟ್ ವ್ಯಾನ್ ಗೋನ ಪ್ರಸಿದ್ಧ ಚಿತ್ರಗಳಲ್ಲೊಂದು. ಈ ತೈಲವರ್ಣ ಚಿತ್ರದಲ್ಲಿ ಕಣ್ಣಿಗೆ ಗೋಚರವಾದುದನ್ನು ಚಿತ್ರಿಸುತ್ತಲೇ `ಕಾಣುವುದು ಸತ್ಯವಾದರೂ ನಿತ್ಯವಲ್ಲ~ ಎಂದು ದೃಶ್ಯಾತ್ಮಕವಾಗಿ ತನ್ನದೇ ಚಿತ್ರಣ ಶೈಲಿಯ ದ್ವಂದ್ವವೊಂದನ್ನು ವ್ಯಾನ್ ಗೋ ನಿರೂಪಿಸುತ್ತಾನೆ.

ಭೂಮಿ-ಆಕಾಶಗಳನ್ನು ವಿಭಜಿಸಿ, ಬಲಕ್ಕೆ ಬೆಟ್ಟದ ಬುಡದಲ್ಲಿರುವ ಆ ದೂರದ ಹಳ್ಳಿಮನೆಗಳ `ಆಕಾರಗಳನ್ನು~ (ಸೈಂಟ್ ರೆಮಿ ಎಂಬಲ್ಲಿ) ಯಥಾವತ್ತಾಗಿ ಅನುಸರಿಸಿ ಚಿತ್ರಿಸಲು ಯತ್ನಿಸಿದ್ದಾನೆ. ಆದರೆ `ಯಥಾವತ್~ ಎಂಬುದು ತನಗೆ ದಕ್ಕದೇ ಹೋದುದರ ವಿಷಾದವಾಗಿಯೂ ಈ ಚಿತ್ರ ಒದಗಿಬಂದಿದೆ.

ಸೈಂಟ್ ರೆಮಿ ಎಂಬಲ್ಲಿ ಮಾನಸಿಕ ಆಸ್ಪತ್ರೆಯೊಂದರ ಒಳರೋಗಿಯಾಗಿದ್ದ ವ್ಯಾನ್ ಗೋನಿಗೆ ಆಗಾಗ ಹೊರಕ್ಕೆ ಬರುವ ಅವಕಾಶ ದೊರೆಯುತ್ತಿದ್ದುದೇ ಆತನ ದ್ವಂದ್ವವು ತೀವ್ರಗೊಳ್ಳಲು ಕಾರಣ. ತದ್ವಿರುದ್ಧವಾಗಿ ಸ್ಕಿಝೊಫ್ರೀನಿಯದಿಂದ ನರಳುತ್ತಿದ್ದ ಈ ಕಲಾವಿದನಿಗೆ ಒಮ್ಮೆಲೆ ನಡೆವ ಎರಡು ಘಟನೆಗಳನ್ನು, ತನ್ಮೂಲಕ ತನ್ನಲ್ಲುಂಟಾಗುವ ಎರಡು ವಿಭಿನ್ನ ಅನುಭವಗಳನ್ನು ಒಂದರಮೇಲೊಂದು ತಾಳೆಹಾಕಿಕೊಳ್ಳುವುದರ ಬಗ್ಗೆ ಒಂದು ನಿರ್ಭಾವುಕವಾದ ವಸ್ತುನಿಷ್ಠ ಅರಿವಿತ್ತು. ಅದರ ಫಲವೇ ಈ ದೃಶ್ಯ.

ಆ ಅರಿವಿನಿಂದಾಗಿಯೇ ಈತ ಚಿತ್ರದ ಬಲಭಾಗದ ಹಳ್ಳಿಮನೆಗಳ ಆಕಾರಗಳಿಗೆ ನೀಲಿ ಮತ್ತು ಹಳದಿಯನ್ನು ಬಳಿಯುವಾಗ, ಅವುಗಳನ್ನು ವರ್ಣಗಳೆಂದು ಬಳಿಯಲಿಲ್ಲ. ಬದಲಿಗೆ `ವರ್ಣಮಯವಾದ ಹಳ್ಳಿಗೆ ರಾತ್ರಿಯ ಏಕವರ್ಣೀಯ ಹೊದ್ದಿಕೆ ಇದು~ ಎಂಬರ್ಥ ಬರುವಂತೆ ಚಿತ್ರಿಸಲಾಗಿದೆ. ಯುಗವೊಂದನ್ನು ದಿನವೊಂದರಲ್ಲಿ ಹಿಡಿದಿರಿಸುವ ಪ್ರಯತ್ನವಿದು.

ಇದಕ್ಕೊಂದು ಸ್ಪಷ್ಟೀಕರಣವಿದೆ. ಚಾರ್‌ಕೋಲಿನಲ್ಲಿ ಚಿತ್ರಿಸುವವರು ಯಾವಾಗಲೂ ಅದನ್ನು ವರ್ಣರೂಪಕ್ಕಿಳಿಸುವ ಉದ್ದೇಶದಿಂದಲೇ ಹಾಗೆ ಮಾಡುತ್ತಾರೆ. ಇದೇ ಅರ್ಥದಲ್ಲಿ ಈ ಹಳ್ಳಿಗೆ ನೀಲಿ-ಹಳದಿಯ ವರ್ಣವನ್ನು `ಹೊದಿಕೆ~ಯಂತೆ ಹೊದ್ದಿಸಲಾಗಿದೆ. ಈ ಹೊದಿಕೆಯ ಶೈಲಿಯು ಆಕಾಶಕ್ಕೆ ವರ್ಣ ಬಳಿವಾಗ ಇನ್ನೂ ತೆಳುವಾಗಲು ಕಾರಣ, ಅಲ್ಲಿ ಹೊದ್ದಿಸಲು ಮೂರು ಆಯಾಮದ ವಸ್ತುಗಳೇ ಇಲ್ಲದಿರುವುದು.
 
ಇದರಿಂದಾಗಿ ಆಕಾಶವು ಭೂಮಿಯ ತೆಳುಕನ್ನಡಿಯಾಗಿ ಬಿಡುತ್ತದೆ. ಆಕಾಶವನ್ನು ನಿಸರ್ಗಚಿತ್ರವೊಂದರ `ಹಿನ್ನೆಲೆ~ಯನ್ನಾಗಿ ಮಾತ್ರ ಬಳಸಿಕೊಳ್ಳುತ್ತಿದ್ದ 1880ರ ದಶಕದಲ್ಲಿ, ವ್ಯಾನ್ ಗೋ ಆಕಾಶವನ್ನೇ ಚಿತ್ರವನ್ನಾಗಿಸಿ, ಅದರ ಕೆಳಗಿನ ಹಳ್ಳಿ, ಬೆಟ್ಟ, ಮನೆಗಳನ್ನು ಆ ಆಕಾಶಕ್ಕೆ ಕೇವಲ ಚೌಕಟ್ಟಾಗಿಸಿದ್ದಾನೆ. ಮತ್ತು ಮುನ್ನೆಲೆಯ ಸಿಪ್ರಸ್ ಮರವನ್ನು ಅಕ್ಷರಶಃ ಹೊಳೆವ ಚಂದ್ರನೆಡೆ ಬೊಟ್ಟು ಮಾಡುತ್ತಿರುವ ಕಪ್ಪನೆಯ ಬೆರಳನ್ನಾಗಿಸಿದ್ದಾನೆ- ಝೆನ್ ಗಾದೆ ಮಾತೊಂದರಂತೆ.

ಝೆನ್ ಬೌದ್ಧಧರ್ಮದಿಂದ ಪ್ರಭಾವಿತನಾಗಿದ್ದ ವ್ಯಾನ್ ಗೋ ತನ್ನ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ ಚಿತ್ರರಚನೆಯನ್ನು ಆರಂಭಿಸಿ, ಕೇವಲ ಹತ್ತು ವರ್ಷಕಾಲ ಮಾತ್ರ, ಆತ್ಮಹತ್ಯೆ ಮಾಡಿಕೊಳ್ಳುವ ದಿನದವರೆಗೂ ಚಿತ್ರ ರಚಿಸಿದಾತ. ಆತನ ಸಾವಿನ ದಿನಗಳಲ್ಲಿ ಮೂಡಿದ (1889) ಈ ಚಿತ್ರದ ವಿನ್ಯಾಸದಲ್ಲೇ ತನ್ನ ದೇಹದ ನೋವನ್ನು ಹಿಡಿದಿರಿಸಲು ಯತ್ನಿಸಿದ್ದಾನೆ.

ಈ ಚಿತ್ರವನ್ನು ವೀಕ್ಷಿಸುವವರು ಮೊದಲು ಆಕಾಶವನ್ನು ದಿಟ್ಟಿಸಿದರೆ, ಅಲ್ಲಿ ಬಲಕ್ಕೆ ಹೊಳೆವ ಹಳದಿ ಚಂದ್ರನ ಹೊಳಪು ಕಣ್ಸೆಳೆದಿದ್ದೇ ಆದರೆ, ಇಡಿಯ ಸೈಂಟ್ ರೆಮಿಯನ್ನು ಆಕಾಶವು ಆಕ್ರಮಿಸಿರುವುದು ಕಾಣುತ್ತದೆ. ಕಣ್ಣು ಆಕಾಶವನ್ನೇ ದಿಟ್ಟಿಸುವುದನ್ನು ಮುಂದುವರೆಸಿದಲ್ಲಿ ಚಂದ್ರನ ಹಳದಿಯು ಇಡೀ ಹಳ್ಳಿಯನ್ನೇ ಹಳದಿಯಾಗಿಸಿ, ಹೊಳೆಯತೊಡಗಿಸಿ, ಕ್ಷಣವೊಂದರಲ್ಲಿ ನೀಲಿಚಿತ್ರವನ್ನಾಗಿಸುತ್ತದೆ.

ಆದ್ದರಿಂದ, ಪ್ರತಿಕೃತಿಯಲ್ಲಿ ಕಾಣಲಾಗದ ಅಸಲಿ ಅಂಶವೆಂದರೆ, ಇದು ಎಷ್ಟರಮಟ್ಟಿಗೆ ನೀಲಿಯಾವೃತ ಚಿತ್ರವೋ ಅಷ್ಟೇ ಹಳದಿ ವರ್ಣದಿಂದಾವೃತವಾದ ಚಿತ್ರವೂ ಹೌದು. ಯುಗವೊಂದು ದಿನವೊಂದರಲ್ಲಿ (ಅಥವಾ ರಾತ್ರಿಯೊಂದರಲ್ಲಿ) ಸೆರೆ ಸಿಕ್ಕುವುದು ಹೀಗೆ. ಅಂದರೆ ಆಕಾಶವನ್ನು ದಿಟ್ಟಿಸುವಾಗ ಹಳ್ಳಿಯೆಡೆಗೆ ದೃಷ್ಟಿಯು ಆನುಷಂಗಿಕವಾಗಿ ಹೊರಳಿಸಿ ಬಿಡುವುದು ಕಲಾವಿದನ ಉದ್ದೇಶ.

ತದ್ವಿರುದ್ಧವಾಗಿ ಹಳ್ಳಿಯನ್ನು ಗಮನಿಸುತ್ತ ಆಕಾಶ ನೋಡುವವರಿಗೆ ದೃಷ್ಟಿ-ವರ್ಣದ ಮಾಂತ್ರಿಕ ಬದಲಾವಣೆ ಇಲ್ಲಿ ಲಭ್ಯವಾಗದು.

`ವಾಕ್~ ಮಾಡುವಾಗ ಶಿರವನ್ನು ಸ್ವಲ್ಪ ಮೇಲೆತ್ತಿ ಆಕಾಶ ನೋಡುತ್ತ ನಡೆದರೂ ನಮ್ಮ ಪಾದದಡಿಯ ಇಡಿಯ ಜಗತ್ತಿನೊಂದಿಗಿನ ನಮ್ಮ ಸಂಬಂಧ ವ್ಯತ್ಯಾಸಗೊಳ್ಳುತ್ತದೆ ಎನ್ನುತ್ತಾನೆ ಜಾನ್ ಬರ್ಜರ್, ವ್ಯಾನ್ ಗೋನ ಚಿತ್ರಗಳ ಅನುಭವದ ಆಧಾರದ ಮೇಲೆ.

ವ್ಯಾನ್ ಗೋ ಯಾವುದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಂತು ಅಥವಾ ಕುಳಿತು ಈ ಚಿತ್ರ ಬಿಡಿಸದೆ, ಹಳ್ಳಿಯೆಡೆಗೆ ನಡೆಯುತ್ತ ಸಾಗುವಾಗ, ಆ ನಡಿಗೆಯ ಜೂಗಾಟಕ್ಕೆ ಕಣ್ಣಿಗೆ ಮತ್ತು ಶ್ರಾವ್ಯಕ್ಕೆ ದಕ್ಕುವ ದೃಶ್ಯವನ್ನು ಕಂಡಂತೆ ಚಿತ್ರಿಸಿ, ನಂತರ ಆಸ್ಪತ್ರೆಯಲ್ಲಿ ಪೂರ್ಣಗೊಳಿಸಿದಾಗ, ಹಳ್ಳಿಯನ್ನು ಕುರಿತಾದ ದೃಷ್ಟಿ ಹಾಗೂ ನೆನಪಿನ ಬೆರಕೆ ಮಾಡಿದಾಗ, ಆತನನ್ನು ಕಾಡುತ್ತಿದ್ದ ಸ್ಕಿಜೋಫ್ರೀನಿಯದ ಲಾಭ ಪಡೆದುಕೊಂಡದ್ದಿದೆ.
 
ಬರಿಯ ಮಾನವ ಕಣ್ಣಿಗೆ ಕಾಣದೆ, ದೃಷ್ಟಿಯು ವಾಸ್ತವತೆಯ ಇತಿಮಿತಿಗಳನ್ನು ಅರಿತು ಅದರಾಚೆಗೂ ಹೊಳೆಸುವ ಕಣ್ಣಪಾಪೆಯ ಸೊಗಸು ಈ ಚಿತ್ರ. ಮೇಣದ ಬೆಳಕನ್ನು ನಿರಂತರವಾಗಿ ವೀಕ್ಷಿಸಿದಾಗಲೂ ಇಂತಹ ದೃಷ್ಟಿಯತೀತ ಅನುಭವ ಸಾಧ್ಯ. ಆಕಾಶದ ಕುಂಚದ ಬೀಸಿನ ಚಲನೆಯೂ ಸಹ ರಾತ್ರಿಯ ನೀರವ ಬಾನಿನ ಸದ್ದನ್ನೂ ಚಿತ್ರಸಂಜ್ಞೆಗಳನ್ನಾಗಿಸುವಂತಿದೆ.

ಅಂದರೆ ವ್ಯಾನ್ ಗೋ ಕಂಡದ್ದನ್ನು ಕೇಳಿದ್ದರೊಂದಿಗೆ ಬೆರೆಸಿರುವ ದೃಶ್ಯವಿದು. ನಿರಂತರವಾಗಿ ಸಹಜ ಅನುಭವದಲ್ಲಿ ಅಸ್ತಿತ್ವದಲ್ಲಿಲ್ಲದ ಸದ್ದುಗಳ ಚಿತ್ರಗಳನ್ನು ಎದುರಿನ ಹಳ್ಳಿಯ ಮೇಲೆ ಆರೋಪಿಸಲಾದ ಚಿತ್ರ `ಸ್ಟಾರಿ ನೈಟ್~. ಆದ್ದರಿಂದ ಈ ಚಿತ್ರವು ಭೂಮಿ-ಆಕಾಶಗಳು ಒಂದಾಗುವ ಕ್ಷಿತಿಜದ ಚಿತ್ರಣವಲ್ಲ, ರಾತ್ರಿಯ ನೀರವತೆಯ ದೃಶ್ಯವಲ್ಲ, ಸಿಪ್ರಸ್ ಎಂಬ ಮರದ ಭಾವಚಿತ್ರವೂ ಅಲ್ಲ.
 
ಬದಲಿಗೆ ಹಲವು ಬಾರಿ ಹಳ್ಳಿಯೆಡೆ ನಡೆದು ಹೋಗುವಾಗ, ಸಹಜ ಆರೋಗ್ಯಭಾಗ್ಯವಿಲ್ಲದಾಗ, ತನ್ನ ದೇಹಕ್ಕೆ ಗುರುತ್ವದೊಂದಿಗೆ ಸಾತತ್ಯವಿಲ್ಲದಾಗ, ಆಗಷ್ಟೇ ಚಾಲ್ತಿಗೆ ಬರುತ್ತಿದ್ದ ಛಾಯಾಚಿತ್ರಣದ ತಾಂತ್ರಿಕ ಕಣ್ನೆಲೆಯ ಇತಿಮಿತಿಗಳನ್ನು ಮೀರುವ ಅತಿಮಾನವ ಪ್ರಯತ್ನ ಈ ಚಿತ್ರ.

ಒಂದರ್ಥದಲ್ಲಿ ವ್ಯಾನ್ ಗೋಗೆ `ಸ್ಟಾರಿ ನೈಟ್ಸ್~ನ ಚಿತ್ರಣವು ಒಂದು ಕಲಾತ್ಮಕ ಅಭಿವ್ಯಕ್ತಿಯಾಗಿರದೆ ಆತನ ಆರೋಗ್ಯವನ್ನು ಕಾಪಾಡಲು ಆತ ತನ್ನ ಮೇಲೇ ಪ್ರಯೋಗಿಸಿಕೊಂಡ ಒಂದು ಫಿಸಿಯೋಥೆರಪಿ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT