ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು ವಾಸದ ಮತ್ತೊಂದು ಮಗ್ಗುಲು

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ರಾಜೇಂದ್ರನ್ ಕಣ್ಣನ್ ಎಂಬುವನ ಕಥೆ ಇದು. ಈತ ಜಯನಗರ ಒಂಭತ್ತನೇ ಬಡಾವಣೆಯ ಕಾರ್ಪೋರೇಶನ್ ಕಾಲೊನಿಯ ವಾಸಿಯಾಗಿದ್ದ. ಯಾವುದೋ ದಂಧೆಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ದುಡ್ಡು ಸಾಗಿಸುವ ಕೆಲಸ ಮಾಡುತ್ತಿದ್ದ. ಅವನ ಮನೆಯವರು ಹೇಳುವುದರ ಪ್ರಕಾರ, ಕಳ್ಳ ವ್ಯಾಪಾರ ನಡೆಸುತ್ತಿದ್ದ ಯಜಮಾನ ರಾಜೇಂದ್ರನ್‌ಗೆ ದಿನಕ್ಕೆ 50 ರೂಪಾಯಿ ಸಂಬಳ ಕೊಡುತ್ತಿದ್ದ. 1994ರಲ್ಲಿ ಒಂದು ದಿನ ತನ್ನಂತೆಯೇ ಕೆಲಸ ಮಾಡುತ್ತಿದ್ದ ಇನ್ನೊಬ್ಬನ ಜೊತೆ ರಾಜೇಂದ್ರನ್ ಜಗಳವಾಯಿತು. ಬಾಸ್ ಇಲ್ಲದಾಗ ಸೂಟ್‌ಕೇಸ್ ತೆರೆದು ತೋರಿಸು ಎಂದು ಅಮಾವಾಸಿ ಎಂಬುವವನು ಪಟ್ಟು ಹಿಡಿದಾಗ ರಾಜೇಂದ್ರನ್ ಅವನನ್ನು ಚಾಕುವಿನಿಂದ ಇರಿದ. ಅಮಾವಾಸಿ ಸ್ಥಳದಲ್ಲೇ ಸತ್ತುಹೋದ. ಐದು ದಿನ ತಲೆ ತಪ್ಪಿಸಿಕೊಂಡಿದ್ದ ರಾಜೇಂದ್ರನ್ ಕೊನೆಗೆ ಪೊಲೀಸರಿಗೆ ಶರಣಾದ. ಕೊಲೆ ಮಾಡಿದ್ದನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಒಪ್ಪಿಕೊಂಡ. ಜೈಲಿಗೆ ಹೋದ.

ಹದಿನಾಲ್ಕು ವರ್ಷ ಸೆರೆಮನೆಯಲ್ಲಿ ಕಳೆದ ರಾಜೇಂದ್ರನ್ ಬಿಡುಗಡೆಗೆ ಅರ್ಹನಾದ. ಶಿಕ್ಷಾವಧಿಗಿಂತ ಎರಡು ವರ್ಷ ಮುನ್ನವೇ, ಅಂದರೆ 2006ರಲ್ಲಿ, ಒಳ್ಳೆಯ ನಡತೆಯ ಆಧಾರದ ಮೇಲೆ ಆತನನ್ನು ಬಿಡುಗಡೆ ಮಾಡಬಹುದು ಎಂದು ಸೆರೆಮನೆ ಅಧಿಕಾರಿಗಳು ಶಿಫಾರಸು ಮಾಡಿದರು. ಆದರೆ ಇಂದಿಗೂ ಆತ ಸೆಂಟ್ರಲ್ ಜೈಲಿನಲ್ಲೇ ಇದ್ದಾನೆ. ಜೈಲರ್ ಲಕ್ಷ್ಮಿನಾರಾಯಣ ಹೇಳುವ ಪ್ರಕಾರ ರಾಜೇಂದ್ರನ್ ಮಾಗಿದ್ದಾನೆ. ಅಗತ್ಯಕ್ಕಿಂತ ನಾಲ್ಕು ವರ್ಷ ಹೆಚ್ಚು ಕಂಬಿ ಎಣಿಸಿ ತನ್ನ ಭವಿಷ್ಯವೇನೆಂದು ತೋಚದೆ ಸುಮ್ಮನೆ ಕಾಯುತ್ತಿದ್ದಾನೆ. ರಾಜೇಂದ್ರನ್ ಜೈಲಿನಲ್ಲೇ ಇರುವುದಕ್ಕೆ ಯಾರು ಕಾರಣ ಎಂದು ಕೇಳಿದರೆ ಸರ್ಕಾರ ಮತ್ತು ರಾಜ್ಯಪಾಲರು ಒಬ್ಬರನ್ನೊಬ್ಬರು ದೂರುತ್ತಿದ್ದಾರೆ.

ಪತ್ರಕರ್ತ ಈ.ಎಸ್. ಭಾನು ಪ್ರಕಾಶ್ ಈತನನ್ನು ಮೊನ್ನೆ ಹುಡುಕಿಕೊಂಡು ಹೋದಾಗ ಕಂಡದ್ದು ಮನ ಕಲಕುವ ದಶ್ಯ. ರಾಜೇಂದ್ರನ್ ಯಾಕೆ ಇನ್ನೂ ಒಳಗಿದ್ದಾನೆ ಎಂದು ಆತನ ಹೆಂಡತಿ ಮಕ್ಕಳಿಗೆ ಗೊತ್ತೇ ಇಲ್ಲ. ರಾಜ್ಯಪಾಲರಿಗೋ ಸರ್ಕಾರಕ್ಕೋ ಮನವಿ ಪತ್ರ ಕಳುಹಿಸಬಹುದು ಎಂಬ ಕಲ್ಪನೆಯೂ ಇಲ್ಲ. ಇವರು ಚಿಕ್ಕ ಗುಡಿಸಲೊಂದರಲ್ಲಿ ಬದುಕುತ್ತಿದ್ದಾರೆ. ಹೆಂಡತಿ ಆತನನ್ನು ನೋಡಲು ಹೋಗುವುದನ್ನೂ ಬಿಟ್ಟು ಬಿಟ್ಟಿದ್ದಾಳೆ. ಒಮ್ಮೆ ಹೋದರೆ 500 ರೂಪಾಯಿಗಳಷ್ಟು ಖರ್ಚಾಗುವುದರಿಂದ ಮನೆಗೆಲಸ ಮಾಡುವ ಆಕೆಗೆ ಅದು ಬೇಡವೇ ಬೇಡ ಎನಿಸಿಬಿಟ್ಟಿದೆ.

ಮೂರು ಮಕ್ಕಳಲ್ಲಿ ಒಬ್ಬಳು ಹೆಣ್ಣು ಮಗಳು. ಅವಳು ಓದುವುದನ್ನು ಬಿಟ್ಟು ತಾಯಿ ಮಾಡುವ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡು ಆಪರೇಶನ್ ಆಗಿರುವ ರಾಜೇಂದ್ರನ ಹೆಂಡತಿ ಸುಮತಿಗೆ ಮೊದಲಿನಂತೆ ಕೆಲಸ ಮಾಡಲು ಕೈಲಾಗುತ್ತಿಲ್ಲ.

ಒಳ್ಳೆಯ ನಡತೆಯ ಕೈದಿಗಳನ್ನು ಬಿಡುಗಡೆ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೂ ರಾಜ್ಯಪಾಲರ ನಡುವೆ ಇರುವ ವೈಮನಸ್ಸಿನ ಬಗ್ಗೆ ನಾಲ್ಕು ವರ್ಷದಿಂದ ಓದುತ್ತಾ ಬಂದಿದ್ದೇವೆ. ಇದರಲ್ಲಿ ಯಾರು ಸರಿ, ಯಾರು ತಪ್ಪು? ರಾಜ್ಯಪಾಲ ಭಾರದ್ವಾಜ್ ಅವರು ಹೇಳುವ ಪ್ರಕಾರ, ಸೆರೆಮನೆ ಇಲಾಖೆಯವರು ಅವರಿಗೆ ಸಾಕಷ್ಟು ಕಡತ ದಾಖಲಾತಿಗಳನ್ನು ಕಳುಹಿಸುತ್ತಿಲ್ಲ. ಸೆರೆಮನೆ ಸಚಿವರ ಪ್ರಕಾರ ರಾಜ್ಯಪಾಲರು ಕೇಳುವ ದಾಖಲಾತಿಗಳು ತೀರ ಅವಾಸ್ತವಿಕ. ತೀರ್ಪುಗಳು ನೂರಾರು ಪುಟ ಇರುತ್ತವೆ. ಹೀಗೆ ಒಬ್ಬೊಬ್ಬ ಕೈದಿಯ ವಿಷಯದಲ್ಲೂ ಎಲ್ಲ ದಾಖಲಾತಿಗಳನ್ನು ಕೇಳಿದರೆ ಅದೆಷ್ಟೋ ಸಾವಿರ ಪುಟಗಳನ್ನು ರಾಜ್ಯಪಾಲರಿಗೆ ಕಳುಹಿಸಬೇಕಾಗುತ್ತದೆ. ಕಳಿಸಿದ ದಾಖಲಾತಿಗಳ ಸಾರಾಂಶ ನೋಡಿ, ವಿಷಯ ಅರಿತುಕೊಂಡು ಕೈದಿಗಳನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ಭಾರದ್ವಾಜ್ ಅವರು ಸುಮ್ಮನೆ ತಕರಾರು ಎತ್ತುತ್ತಿದ್ದಾರೆ ಎನ್ನುವುದು ಜೈಲು ಮಂತ್ರಿ ವಿ. ನಾರಾಯಣಸ್ವಾಮಿ ಅವರ ದೂರು.

ಇದೊಂದು ಅಧಿಕಾರಸ್ಥರ ನಡುವಿನ ಜಗಳ. ಕಾನೂನಿನ ಅಂಶಗಳು ಯಾರ ಪರವಿದೆ ಅನ್ನುವುದು ಕಾನೂನು ತಜ್ಞರು ತೀರ್ಮಾನಿಸಬೇಕಾದ ವಿಷಯ. ಆದರೆ ಯಾವುದೊ ಕಚೇರಿಯಲ್ಲಿ ಕೂತ ಯಾರೋ ಸರಿಯಾಗಿ ದಾಖಲಾತಿ ಕೆಲಸ ಮಾಡದ ಕಾರಣ ಒಬ್ಬ ಪ್ರಜೆಯನ್ನು ಜೈಲಿನಲ್ಲಿ ಕೊಳೆಯಲು ಬಿಡುವುದು ಎಂಥ ನ್ಯಾಯ? ಹೀಗೆ ಅಮೆರಿಕದಲ್ಲಿ ನಡೆದಿದ್ದರೆ ರಾಜೇಂದ್ರನ್ ಕೋರ್ಟ್ ಮೆಟ್ಟಿಲು ಹತ್ತಿ ದೊಡ್ಡ ಮೊತ್ತದ ಪರಿಹಾರವನ್ನು ಗಿಟ್ಟಿಸಿಕೊಳ್ಳುತ್ತಿದ್ದ ಎಂದು ಸ್ನೇಹಿತರೊಬ್ಬರು ಹೇಳುತ್ತಿದ್ದರು.

ಅದು ನಿಜವಿರಬಹುದು. ಆದರೆ ಒಟ್ಟಾರೆ ಅವರ ನ್ಯಾಯಾಂಗ ವ್ಯವಸ್ಥೆ ಹೇಗಿದೆ ಎಂದು ತಿಳಿಯಲು ಒಂದು ಸಣ್ಣ ಅಂಶ ನೋಡಿ:  ಅಮೆರಿಕದಲ್ಲಿ ಸುಮಾರು 60 ಲಕ್ಷ ಮಂದಿ ಜೈಲಿನಲ್ಲಿದ್ದಾರೆ. ಅಂದರೆ ಬೆಂಗಳೂರಿನ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಪ್ರಮಾಣ ಆ ದೇಶದ ಸೆರೆಮನೆಗಳಲ್ಲಿ ಬಂಧಿಯಾಗಿದೆ.

ಪ್ರತಿ ದಿನವೂ ಹಿಂದಿನ ದಿನದಂತೆಯೇ ಇರುವುದರಿಂದ ಇಲ್ಲಿ ಸಮಯದ ಅಂದಾಜೇ ಬದಲಾಗಿ ಹೋಗಿ ಸೆರೆಯಾಳುಗಳು ವಿಚಿತ್ರ ನರಕ ಅನುಭವಿಸುತ್ತಾರಂತೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜೇಂದ್ರನ್‌ನಂಥ ಇನ್ನೂ ಕೆಲವು ಕೈದಿಗಳು ಬಿಡುಗಡೆಗೆ ಕಾಯುತ್ತಿದ್ದಾರೆ. ಅವರ ಬಗ್ಗೆ ಜೈಲ್ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಸಹಾನುಭೂತಿಯಿದೆ. ಬಡತನ ಮತ್ತು ಅಸಹಾಯಕತೆ ನಮ್ಮಲ್ಲಿ ಎಷ್ಟಿದೆ ಅಂದರೆ ವ್ಯವಸ್ಥೆಯ ವಿರುದ್ಧ ಸಣ್ಣ ದನಿಯನ್ನೂ ಎತ್ತಲಾರದೆ ಎಷ್ಟೋ ಜನ ಬದುಕುತ್ತಿದ್ದಾರೆ. ಆದರೆ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಕೈ ಕಟ್ಟಿ ಕುಳಿತಿರುವುದರಿಂದ ಆತನ ಮತ್ತು ಆತನ ಮನೆಯವರ ನೋವು ಕೊನೆಗಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT