ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು ಸುಧಾರಣೆಗೆ ಬಿಪಿನ್‌ ಸಮಿತಿ

Last Updated 10 ಸೆಪ್ಟೆಂಬರ್ 2013, 19:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ ಕಾರಾಗೃಹಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಸಿಐಡಿ ಪೊಲೀಸ್‌ ಮಹಾನಿರ್ದೇಶಕ ಬಿಪಿನ್‌ ಗೋಪಾಲಕೃಷ್ಣ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಎಡಿಜಿಪಿ ಎನ್‌.ಎಸ್‌.ಮೇಘರಿಕ್‌, ಜಂಟಿ ಪೊಲೀಸ್‌ ಕಮಿಷನರ್‌ ಎಸ್‌.ರವಿ ಅವರು ಸಮಿತಿಯಲ್ಲಿದ್ದು, ಮೂರು ವಾರಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಮಿತಿಯು ಕಾರಾಗೃಹಗಳಿಗೆ ಭೇಟಿ ನೀಡಿ ಅವುಗಳ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲಿದೆ. ಅದರ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ವಿಕ್ಷಣಾ ಗೋಪುರಗಳ ಸ್ಥಾಪನೆ, ಬಯೊಮೆಟ್ರಿಕ್‌, ಸ್ಕ್ಯಾನರ್‌ಗಳ ಅಳವಡಿಕೆ ಸೇರಿದಂತೆ ಭದ್ರತೆಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ತಿಳಿಸಿದರು.

ಸೈಕೊ ಜೈಶಂಕರ್‌ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಪ್ರಕರಣದ ಬಗ್ಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್‌.ಕೆ.ಪಟ್ನಾಯಕ್‌ ನೇತೃತ್ವದ ಸಮಿತಿ ವರದಿ ನೀಡಲಿದೆ. ಅದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದರು.

ನಕ್ಸಲ್ ಪೀಡಿತವೆಂದು ಘೋಷಿಸಲಿ: ರಾಜ್ಯದಲ್ಲಿ 13 ನಕ್ಸಲ್ ಶಿಬಿರಗಳಿವೆ. ಕರ್ನಾಟಕವನ್ನು ನಕ್ಸಲ್ ಪೀಡಿತ ರಾಜ್ಯ ಎಂದು ಘೋಷಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಹಣ ಬರಲಿದೆ ಎಂದು ನುಡಿದರು. ನಕ್ಸಲ್ ಚಟುವಟಿಕೆಗಳನ್ನು ತಡೆಯಲು ಸರ್ಕಾರ ಕ್ರಮಕೈಗೊಂಡಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಕ್ಸಲರ ಪುನರ್ವಸತಿಗೆ ಪೈಲಟ್‌ ಯೋಜನೆ ರೂಪಿಸುವ ಅಗತ್ಯವಿದೆ. ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

‘ಶಸ್ತ್ರಾಸ್ತ್ರಗಳ ಆಧುನೀಕರಣಕ್ಕೆ ಕೇಂದ್ರದಿಂದ ಹಣ ಬಂದಿದೆ. ನಮಗೆ ಯಾವ ರೀತಿಯ ಶಸ್ತ್ರಾಸ್ತ್ರಗಳು ಬೇಕು ಎಂಬುದನ್ನು ಕೇಂದ್ರಕ್ಕೆ ತಿಳಿಸಲಾಗಿದೆ. ಆದರೆ, ಇನ್ನೂ ಪೂರೈಕೆಯಾಗಿಲ್ಲ. ಈ ಬಗ್ಗೆ ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್‌ ಶಿಂಧೆ ಅವರೊಂದಿಗೆ ಚರ್ಚಿಸಲಾಗುವುದು’ ಎಂದರು.

ಹೊಸ ಠಾಣೆ ಆರಂಭ
ಮಲ್ಪೆ ಸೇರಿದಂತೆ ಕರಾವಳಿ ಭಾಗದಲ್ಲಿ ಮೂರು ಪೊಲೀಸ್‌ ಠಾಣೆಗಳನ್ನು ತೆರೆಯಲಾಗುವುದು. ಅಕ್ಟೋಬರ್‌ ಮೊದಲ ವಾರದಲ್ಲಿ ಉದ್ಘಾಟನೆ ಆಗಲಿದೆ ಎಂದು ಜಾರ್ಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT