ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರ ಬಂದರೆ ಎಚ್ಚರಿಸುವ ಮಾಪಕ!

Last Updated 10 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜ್ವರ ಬಂದಿದ್ದರೆ ಹಣೆ ಮುಟ್ಟಿ  ನೋಡುವುದು, ರೋಗಿಯ ಬಾಯಿ ತೆರೆಸಿ ಥರ್ಮಾಮೀಟರ್‌ ಇಟ್ಟು ಅಳೆಯುವ ಕ್ರಮವಿದೆ. ಈಗ ಈ ಕ್ರಮಕ್ಕೆ ಹೊಸ ಸೇರ್ಪಡೆ ವಿಶಿಷ್ಟ ತೋಳುಪಟ್ಟಿ. ಟೋಕಿಯೊದ ಪ್ರಾಧ್ಯಾಪಕರು ಅಭಿವೃದ್ಧಿಪಡಿಸಿರುವ ಈ ಸೂಕ್ಷ್ಮ ಸಂವೇದನೆಯ ಪಟ್ಟಿಯನ್ನು ತೋಳಿಗೆ ಕಟ್ಟಿಕೊಂಡರೆ ಆ ವ್ಯಕ್ತಿಯ ದೇಹದ ತಾಪಮಾನ ಏರಿದರೆ, ಜ್ವರ ಬಂದರೆ ಎಚ್ಚರಿಕೆ ಗಂಟೆ ಮೊಳಗಿಸುತ್ತದೆ.

ನಾಡಿ ಮಿಡಿತ ನೋಡಿಕೊಂಡು ಅಂಗೈ ಔಷಧ ನೀಡುತ್ತಿದ್ದ ಕಾಲ ಉರುಳಿಹೋಗಿ ಅದೆಷ್ಟೋ ಕಾಲವಾಗಿದೆ. ನಾವೆಲ್ಲರೂ ಇಂದು, ಹೊಸ ತಲೆಮಾರಿನ ಅಲೋಪಥಿ ಯುಗದಲ್ಲಿದ್ದೇವೆ!

ನಿಯಂತ್ರಣಕ್ಕೆ ಸಿಗದಷ್ಟು ಪ್ರಮಾಣದಲ್ಲಿ ಹೆಚ್ಚುತ್ತಲೇ ಇರುವ ಜನಸಂಖ್ಯೆ, ಕ್ಷೀಣಿಸುತ್ತಲೇ ಸಾಗುತ್ತಿರುವ ಆರೋಗ್ಯ, ಸವಾಲಾಗುತ್ತಲೇ ಹುಟ್ಟುತ್ತಿರುವ ಹೊಸ ರೋಗಗಳು... ಹೀಗೆ ಅನೇಕಾನೇಕ ಕಾರಣಗಳಿಂದ ವೈದ್ಯಕೀಯ ಲೋಕದ ಜವಾಬ್ದಾರಿಯೂ ಹೆಚ್ಚುತ್ತಿದೆ. ಅವರ ‘ಕಾರ್ಯಭಾರ’ದ ಜಟಿಲತೆಯನ್ನು ಸುಗಮಗೊಳಿಸುತ್ತಿರುವ ಶ್ರೇಯ ತಂತ್ರಜ್ಞಾನದ್ದು..!

ಮೊದಲೆಲ್ಲ ಜ್ವರ ಬಂದಿದೆಯೇ?, ಬಂದಿದ್ದರೇ ಎಷ್ಟಿದೆ? ಎಂಬುದನ್ನು ತಿಳಿಯಲು ಎರಡು ಮಾರ್ಗಗಳಿದ್ದವು. ಯಾರಾದರೂ ಹಣೆ ಮುಟ್ಟಿ ಪರೀಕ್ಷಿಸುವುದು; ವೈದ್ಯರು ರೋಗಿಯ ಬಾಯಿ ತೆರೆಯಿಸಿ ಥರ್ಮಾಮೀಟರ್‌ (ಉಷ್ಣತಾ ಮಾಪಕ) ಇಟ್ಟು ಅಳೆಯುವುದು!

ಆದರೆ ಇದೀಗ ವಿಶಿಷ್ಟ ತೋಳು ಪಟ್ಟಿಯೊಂದು ಅಭಿವೃದ್ಧಿಗೊಂಡಿದೆ. ನಿಮಗೆ ಜ್ವರ ಬಂದರೆ ಅದು ಕೂಗಿಕೊಳ್ಳುತ್ತದೆಯಂತೆ. ಆದರೆ ಅದನ್ನು ನೀವು ಧರಿಸಿರಬೇಕಷ್ಟೇ!  ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಟಕಾವೊ ಸೊಮೆಯಾ ಹಾಗೂ ಔದ್ಯೋಗಿಕ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ  ತಕಯಸು ಸಕುರೈ ಜತೆಗೂಡಿ ಇದನ್ನು ರೂಪಿಸಿದ್ದಾರೆ.

ರೋಗಿಯ ದೇಹದ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಿರುವುದನ್ನು ತಾಪಮಾನದ ಸಂವೇದಕ ಪತ್ತೆ ಮಾಡಿದೊಡನೆ, ಅದರಲ್ಲಿರುವ ಸ್ಪೀಕರ್‌ ಮೂಲಕ ಅಲಾರಂ (ಎಚ್ಚರಿಕೆ ಗಂಟೆ) ಮೊಳಗುತ್ತದೆ ಎನ್ನುತ್ತಾರೆ ಸಂಶೋಧಕರು.

30 ಸೆಂಟಿ ಮೀಟರ್ ಉದ್ದ ಹಾಗೂ 18 ಸೆಂಟಿ ಮೀಟರ್ ಅಗಲವಿರುವ ಈ ತೋಳ್ಪಟ್ಟಿ, ಅಗತ್ಯಕ್ಕೆ ತಕ್ಕಂತೆ ಬಾಗಿಸಿಕೊಳ್ಳಬಹುದಾದಷ್ಟು ಮೃದುವಾಗಿದೆ. ನಿರಾಕಾರ ಸಿಲಿಕಾನ್ ಸೌರ ಫಲಕ, ಸಂಪೀಡನಾ ವಿದ್ಯುತ್ ಸ್ಪೀಕರ್, ತಾಪಮಾನ ಸಂವೇದಕ ಹಾಗೂ ಸಾವಯವ ಘಟಕಾಂಶಗಳ ವಿದ್ಯುತ್ ಪೂರಣ ಮಂಡಲ ಅದರಲ್ಲಿದೆ. ಇದನ್ನು ಬಟ್ಟೆಯ ಮೇಲೆ ಇಲ್ಲವೇ ನೇರವಾಗಿ ಚರ್ಮದ ಮೇಲೆ ಧರಿಸಬಹುದಂತೆ.

ಹೃದಯ ಬಡಿತ, ದೇಹದ ತಾಪಮಾನದ ಮೇಲೆ ಸತತ ನಿಗಾ ಇಡುವುದರಿಂದ ಹಸುಗೂಸು, ವೃದ್ಧರು ಹಾಗೂ ರೋಗಿಗಳ ಆರೈಕೆಯಲ್ಲಿ ಇದು  ಪ್ರಮುಖವಾಗಿ ನೆರವಾಗಬಲ್ಲದು ಎಂಬ ನಿರೀಕ್ಷೆ ಮೂಡಿಸಿದೆ.

ಆದರೆ ಈ ಸಾಧನ ರೋಗಿಗಳಿಗೆ ಆರಾಮದಾಯಕ ಎನಿಸಬೇಕಾದರೆ, ಹೊಂದಿಕೊಳ್ಳಬಲ್ಲ ಸಂವೇದಕಗಳನ್ನು ಒಳಗೊಂಡಿರಬೇಕು. ಅವು ನಿಸ್ತಂತು ಆಗಿರಬೇಕು. ನಿರ್ವಹಣೆ ಮುಕ್ತ ಹಾಗೂ ಬಾಹ್ಯ ಇಂಧನ ಪೂರೈಕೆ ಅಪೇಕ್ಷಿಸದಂತೆ ಇರಬೇಕು. ಜತೆಗೆ ಅಗ್ಗವೂ ಆಗಿರಬೇಕು ಎಂಬುದು ಬಳಕೆದಾರರ ನಿರೀಕ್ಷೆ.

‘ಕಠಿಣವಾದ ಘಟಕಗಳ ಆಧಾರಿತ ಸಾಂಪ್ರದಾಯಿಕ ಸಂವೇದಕಗಳನ್ನು ಬಳಸಿ ಈ ಎಲ್ಲಾ ನಿರೀಕ್ಷೆಗಳನ್ನು ಮುಟ್ಟುವುದು ಸಾಧ್ಯವಿಲ್ಲ. ಆದ್ದರಿಂದ ಸಾವಯವ ಘಟಕಾಂಶಗಳನ್ನು ಬಳಸಿ ಹೊಂದಿಕೊಳ್ಳಬಲ್ಲ  ಸಾಧನವನ್ನು ರೂಪಿಸಿದೆವು. ಪಾಲಿಮರ್ ಫಲಕದ ಮೇಲೆ ಇಂಕ್‌ಜೆಟ್‌ ಪ್ರಿಂಟರ್‌ನಿಂದ ಅದನ್ನು ಮುದ್ರಿಸಿದೆವು’ ಎನ್ನುತ್ತಾರೆ  ಸಕುರೈ.

‘ದೇಹದ ಉಷ್ಣಾಂಶವನ್ನು ದನಿಯ ಮೂಲಕ ಪ್ರತಿಕ್ರಿಯಿಸುವಂತೆಯೂ,  ಇತರ  ಸಂವೇದಕಗಳನ್ನು ಜತೆಗೂಡಿಸಿ ಒತ್ತಡ, ಹೃದಯ ಬಡಿತ, ತೇವಾಂಶ ಅಳೆಯುಂತೆಯೂ ಇದನ್ನು ಬದಲಾಯಿಸಿಕೊಳ್ಳಬಹುದು’ ಎನ್ನುತ್ತಾರೆ ಸಂಶೋಧಕರು. ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ಐಇಇಇ ಇಂಟರ್ ನ್ಯಾಷನಲ್ ಸಾಲಿಡ್ ಸ್ಟೇಟ್‌ ಸರ್ಕ್ಯೂಟ್ಸ್ ಕಾನ್ಫೆರೆನ್ಸ್‌ನಲ್ಲಿ ಇದನ್ನು ಪ್ರಸ್ತುತಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT