ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಬೇಟ್ ಪೂಜಾ ವೀಕ್ಷಿಸಿದ ಲಾಮಾ

Last Updated 7 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಮುಂಡಗೋಡ:  ಕಳೆದ ಒಂದು ವಾರದಿಂದ  ಬೌದ್ಧ ಭಿಕ್ಕುಗಳು, ವಿದೇಶಿ ಬೌದ್ಧ ಅನುಯಾಯಿಗಳು ಹಾಗೂ ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ಮುಂಡಗೋಡ ಟಿಬೇಟ್ ಕ್ಯಾಂಪ್‌ನಲ್ಲಿ  ಬೌದ್ಧ ಅನುಯಾಯಿಗಳು ತವರಿಗೆ ಮರಳುತ್ತಿದ್ದ ದೃಶ್ಯ ಭಾನುವಾರ ಕಂಡುಬಂತು.‘ಡಿಬೇಟ್ ಪೂಜಾ’ ವೀಕ್ಷಣೆಗೆಂದು ಒಂದು ವಾರದ ಭೇಟಿಗೆ ಬಂದಿದ್ದ ಟಿಬೇಟಿಯನ್ ಧರ್ಮಗುರು ದಲಾಯಿಲಾಮಾ ಅವರು ತಮ್ಮ ಪ್ರವಾಸದ ಕೊನೆಯ ದಿನದಂದು ಕ್ಯಾಂಪ್ 1ರ ಗಾಂದೆನ್ ಶಾಜಿ ಮಾನೆಸ್ಟ್ರಿಯಲ್ಲಿ ಜಿಝೂನ್ ಜಂಬಾ ಗುನಪು ಪೂಜೆ ಮಾಡಿದರು.

ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಪೂಜೆ ನಡೆಸಲಾಯಿತು. ನಂತರ ಬೌದ್ಧ ಸನ್ಯಾಸಿಗಳು ದಲಾಯಿಲಾಮಾ ಅವರಿಗೆ ದೇವರು ಹೆಚ್ಚಿನ ಆರೋಗ್ಯ, ಆಯುಷ್ಯ ನೀಡಲೆಂದು ಪ್ರಾರ್ಥಿಸಿ ಪೂಜಾ ಕಾರ್ಯ ಕೈಗೊಂಡರು.ನಂತರ ದಲಾಯಿಲಾಮಾ ಅವರು ಡಿಬೇಟ್ ಪೂಜಾ ಪರೀಕ್ಷಿಸಿದರು. ಬೌದ್ದ ಭಿಕ್ಕುಗಳಿಂದ ತುಂಬಿದ್ದ ಮಂದಿರದಲ್ಲಿ ಪರೀಕ್ಷಾರ್ಥಿಗಳು ತಾವು ಕಲಿತ ವಿದ್ಯೆಯನ್ನು ಧರ್ಮಗುರುವಿನ ಎದುರು ಸಾದರಪಡಿಸಿದರು.

ಬೌದ್ದ ಗುರುವಿನ ಎದುರು ಕುಳಿತ ಇಬ್ಬರು ಹಿರಿಯ ಸನ್ಯಾಸಿಗಳು ಪರೀಕ್ಷಾರ್ಥಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅವರಲ್ಲಿನ ಸಾಮರ್ಥ್ಯ ಪರೀಕ್ಷಿಸಿದರು. ಬೌದ್ದ ಗುರು ದಲಾಯಿಲಾಮಾ ಅವರು ಪರೀಕ್ಷಾರ್ಥಿಗಳ ಸಾಧನೆಯನ್ನು ಶಾಂತಚಿತ್ತದಿಂದ ಆಲಿಸಿದರಲ್ಲದೇ ಬೌದ್ದಭಿಕ್ಕುಗಳ ಸಾಧನೆಯನ್ನು ಮೆಚ್ಚಿದರು. ‘ಡಿಬೇಟ್ ಪೂಜಾ’ ವೀಕ್ಷಿಸಲು ವಿದೇಶಿ ಬೌದ್ದ ಅನುಯಾಯಿಗಳು, ಭಾರತೀಯರು ಮಂದಿರದಲ್ಲಿ ಆಸಿನರಾಗಿದ್ದರು.

ಏನಿದು ಡಿಬೇಟ್ ಪೂಜಾ: ಟಿಬೇಟಿಯನ್ ಧರ್ಮದಲ್ಲಿ ಡಿಬೇಟ್ ಪೂಜಾಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಝೇ ರಿನ್‌ಪೋಚಾ ಎಂಬ ಧರ್ಮಗುರುಗಳು ಮೊದಲಿಗೆ ಟಿಬೇಟ್ ದೇಶದಲ್ಲಿ ಈ ಪೂಜಾ ಕಾರ್ಯವನ್ನು ಕೈಗೊಂಡಿದ್ದರು. ತದನಂತರ ಈ ಪೂಜೆಗೆ ವಿಶೇಷ ಸ್ಥಾನಮಾನ ನೀಡಿ ಬೌದ್ಧ ಭಿಕ್ಕುಗಳು ಕಠಿಣವಾದ ಈ ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ಪದ್ದತಿ ಜಾರಿಯಲ್ಲಿದೆ.

ಸಾಮಾನ್ಯವಾಗಿ ದೇಶಿ ವ್ಯಾಸಂಗದಲ್ಲಿ ಪಿ.ಯು.ಸಿ ನಂತರ ಡಿಗ್ರಿ ಹೇಗೆ ಪಡೆದುಕೊಳ್ಳುತ್ತೇವೆಯೊ ಹಾಗೆ ನಳಂದಾ ಬೌದ್ದ ವಿಶ್ವವಿದ್ಯಾಲಯದಿಂದ  ನಡೆಸಲ್ಪಡುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರೀಕ್ಷಾರ್ಥಿಗಳು ವಿವಿಧ ಪರೀಕ್ಷೆಗಳನ್ನು ಎದುರಿಸಬೇಕಿದೆ.ಮೊದಲಿಗೆ ಬೌದ್ಧ ಭಿಕ್ಕುಗಳು ಹನ್ನೆರಡು ವರ್ಷ ಬೌದ್ದ ಶಿಕ್ಷಣ ಮುಗಿಸಿ ನಂತರ ‘ಗೆಶೆ ಲಾರಾಂಬಾ’ ಎಂಬ ಅಂತಿಮ ಹಂತದ ಪರೀಕ್ಷೆಯಲ್ಲಿ ಪಾಸಾಗಬೇಕು

. ಈ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ 7 ವರ್ಷಗಳ ಕಾಲ ಸತತ ಅಧ್ಯಯನ ಅವಶ್ಯಕತೆಯಿದೆ ಎನ್ನುತ್ತಾರೆ ಟಿಬೇಟಿಯನ್ ಹಿರಿಯ ಸನ್ಯಾಸಿಗಳು. ‘ಗೆಶೆ ಲಾರಾಂಬಾ’ದಲ್ಲಿ ಪಾಸಾದ ಬೌದ್ಧ ಸನ್ಯಾಸಿಗಳು ಬೌದ್ದ ಶಿಕ್ಷಣದ ಪ್ರಸರಣಕ್ಕಾಗಿ ಇತರರಿಗೆ ಶಿಕ್ಷಣ ನೀಡಬೇಕಾದ ಮಹತ್ತರ ಜವಾಬ್ದಾರಿ ಹೊರಬೇಕಾಗುತ್ತದೆ. ‘ಡಿಬೇಟ್ ಪೂಜಾ’ ಪ್ರತಿವರ್ಷ ನಡೆಯುತ್ತದೆ.ಕಳೆದ ಒಂದು ವಾರದಿಂದ ಟಿಬೇಟ್ ದೇಶದಂತೆ ಗೋಚರಿಸುತ್ತಿದ್ದ ಮುಂಡಗೋಡ ಟಿಬೆಟ್ ಕ್ಯಾಂಪ್‌ಗೆ ದೂರದ ಟಿಬೇಟ್, ನೇಪಾಳ, ಧರ್ಮಶಾಲಾ, ಓರಿಸ್ಸಾ, ಮಹಾರಾಷ್ಟ್ರ, ಬಿಹಾರ ಹಾಗೂ ಇನ್ನಿತರ ಕಡೆಗಳಿಂದ ಬೌದ್ದ ಅನುಯಾಯಿಗಳು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT