ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖಾ ಸಮಿತಿ ರಚನೆ: ಪ್ರತಿಪಕ್ಷಗಳ ಬಹಿಷ್ಕಾರ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಇದೇ 7ರಂದು ನಡೆದ `ಬ್ಲೂಫಿಲಂ~ ವೀಕ್ಷಣೆ ಪ್ರಕರಣದ ತನಿಖೆಗೆ ಶಾಸಕ ಶ್ರೀಶೈಲಪ್ಪ ವಿರೂಪಾಕ್ಷಪ್ಪ ಬಿದರೂರು ಅಧ್ಯಕ್ಷತೆಯಲ್ಲಿ ಸದನದ ವಿಚಾರಣಾ ಸಮಿತಿಯನ್ನು ರಚಿಸಿ ಸ್ಪೀಕರ್ ಕೆ.ಜಿ.ಬೋಪಯ್ಯ ಗುರುವಾರ ಆದೇಶ ಹೊರಡಿಸಿದ್ದಾರೆ. ಆದರೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸದನ ಸಮಿತಿಯನ್ನು ಬಹಿಷ್ಕರಿಸಿವೆ.

ಅಧ್ಯಕ್ಷರನ್ನು ಹೊರತುಪಡಿಸಿ ಸಮಿತಿಯು ಆರು ಜನ ಸದಸ್ಯರನ್ನು ಒಳಗೊಂಡಿದ್ದು, ಪ್ರಕರಣದ ಸಮಗ್ರ ವಿಚಾರಣೆ ನಡೆಸಿ ಮಾರ್ಚ್ 13ರ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಬಿಜೆಪಿಯ ಎಸ್.ಆರ್.ವಿಶ್ವನಾಥ್, ಬಿ.ಸುರೇಶ್‌ಗೌಡ, ನೆಹರೂ ಓಲೇಕಾರ, ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ, ಡಾ.ಎಚ್.ಸಿ.ಮಹದೇವಪ್ಪ ಹಾಗೂ ಜೆಡಿಎಸ್‌ನ ದಿನಕರ ಶೆಟ್ಟಿ ಸಮಿತಿಯ ಸದಸ್ಯರಾಗಿದ್ದಾರೆ.

ಗುರುವಾರ ಸಂಜೆ 6 ಗಂಟೆವರೆಗೂ ಸಮಿತಿಗೆ ಹೆಸರುಗಳನ್ನು ಸೂಚಿಸಲು ಅವಕಾಶವಿತ್ತು. ಆದರೆ ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸಮಿತಿಗೆ ತಮ್ಮ ಕಡೆಯಿಂದ ಸದಸ್ಯರನ್ನು ಸೂಚಿಸಿರಲಿಲ್ಲ. ಇದರಿಂದಾಗಿ ಸಂಜೆ 7 ಗಂಟೆ ಸುಮಾರಿಗೆ ಸ್ಪೀಕರ್ ಅವರೇ ಮೂರೂ ಪಕ್ಷಗಳಿಂದ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಅವರು ಸದನದಲ್ಲಿ ಬ್ಲೂ ಫಿಲಂ ನೋಡಿದ್ದರಿಂದ ಮತ್ತು ಅವರಿಗೆ ಅಶ್ಲೀಲ ದೃಶ್ಯಾವಳಿ ಇದ್ದ ಮೊಬೈಲ್ ನೀಡಿದ್ದರು ಎಂಬ ಕಾರಣಕ್ಕೆ ಕೃಷ್ಣ ಪಾಲೆಮಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇದರಿಂದ ಸಮಾಧಾನಗೊಳ್ಳದ ಪ್ರತಿಪಕ್ಷಗಳು ಆ ಮೂವರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಸದನದಲ್ಲಿ ಪಟ್ಟು ಹಿಡಿದಿದ್ದವು.  ಈ ಹಿನ್ನೆಲೆಯಲ್ಲಿ ಇದೇ 8ರಂದು ಆ ಮೂವರಿಗೂ ನೋಟಿಸ್ ಜಾರಿ ಮಾಡಿದ್ದ ಬೋಪಯ್ಯ ಸದನ ಸಮಿತಿ ರಚಿಸುವುದಾಗಿ ಪ್ರಕಟಿಸಿದ್ದರು. ಆ ಪ್ರಕಾರ ಗುರುವಾರ ಸಮಿತಿ ರಚಿಸಲಾಗಿದೆ.

   `ಸಚಿವರು ಸದನದಲ್ಲಿ ಕುಳಿತು ವಿವಾದಿತ ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದ ಅಶ್ಲೀಲ ದೃಶ್ಯಗಳ ಹಿನ್ನೆಲೆ ಏನು? ಅದು ಸವಿಸ್ತಾರವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಹೇಗೆ? ಇದರ ಮೂಲ ಯಾವುದು? ಈ ರೀತಿಯ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ? ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಲಾಗಿದೆ.

ಈ ಕುರಿತು ಸಮಗ್ರವಾದ ಮಾಹಿತಿ ಸಂಗ್ರಹಿಸಲು, ಸ್ವತಂತ್ರವಾಗಿ ತನಿಖೆ ನಡೆಸಲು ಸಹಕಾರ ನೀಡಲಾಗುವುದು. ಭವಿಷ್ಯದಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಮಿತಿ ಸೂಕ್ತ ಶಿಫಾರಸುಗಳನ್ನು ಮಾಡಬೇಕು ಎಂದು ಆದೇಶಿಸಲಾಗಿದೆ.

ಸಚಿವರು ಸದನದಲ್ಲಿ ಬ್ಲೂಫಿಲಂ ನೋಡಿದ ದೃಶ್ಯಗಳನ್ನು ಸೆರೆಹಿಡಿದು ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿವೆ. ಇಷ್ಟಾದರೂ ಮತ್ತೆ ತನಿಖೆ ನಡೆಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಸಮಿತಿಗೆ ಸಹಕಾರ ನೀಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೂ ಸ್ಪೀಕರ್ ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ ಪ್ರತಿಪಕ್ಷಗಳ ಸದಸ್ಯರನ್ನು ಸಮಿತಿಗೆ ನೇಮಕ ಮಾಡಿದ್ದಾರೆ.

ಸ್ಪೀಕರ್ ಸಮಿತಿಗೆ ತಮ್ಮ ಹೆಸರನ್ನು ಸೇರಿಸಿರಬಹುದು. ಆದರೆ ಪಕ್ಷದ ನಿರ್ಧಾರಕ್ಕೆ ತಾವು ಬದ್ಧ ಎಂದು ಮಹದೇವಪ್ಪ ತಿಳಿಸಿದರು. ಪಕ್ಷದ ಸಮ್ಮತಿ ಇಲ್ಲದೆ ಸ್ಪೀಕರ್ ಸಮಿತಿ ರಚಿಸಿದ್ದಾರೆ. ಹೀಗಾಗಿ ಸಮಿತಿಗೆ ಮಹತ್ವ ಇಲ್ಲ ಎಂದು ಅವರು ಹೇಳಿದರು.

ನೋಟಿಸ್‌ಗೆ ಉತ್ತರ: `ಬ್ಲೂ ಫಿಲಂ~ ವಿವಾದಕ್ಕೆ ಸಂಬಂಧಿಸಿದಂತೆ ಮೂವರು ಶಾಸಕರು ಗುರುವಾರ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ನೋಟಿಸ್‌ಗೆ ಉತ್ತರ ನೀಡಿದ್ದು, ಅದರಲ್ಲಿ ತಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ; ಅಶ್ಲೀಲ ಚಿತ್ರವನ್ನೂ ನೋಡಿಲ್ಲ ಎಂದು ತಿಳಿಸಿದ್ದಾರೆ. `ನಾವು ನಿರಪರಾಧಿಗಳು~ ಎಂದು ಮೂವರೂ ಪ್ರತ್ಯೇಕ ಉತ್ತರದಲ್ಲಿ ವಿವರಿಸಿದ್ದಾರೆ.

ವಿಧಾನಸಭೆ ಅಧಿವೇಶನ ನಡೆಯುವಾಗ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದರು ಎಂಬ ಕಾರಣಕ್ಕೆ ಶಾಸಕರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ ಹಾಗೂ ಅವರಿಗೆ ಅಶ್ಲೀಲ ದೃಶ್ಯಾವಳಿ ಇದ್ದ  ಮೊಬೈಲ್ ನೀಡಿದರು ಎಂಬ ಕಾರಣಕ್ಕೆ ಶಾಸಕ ಕೃಷ್ಣ ಪಾಲೆಮಾರ್ ಅವರಿಗೆ ವಿವರಣೆ ಕೇಳಿ ಸ್ಪೀಕರ್ ನೋಟಿಸ್ ನೀಡಿದ್ದರು. 
 
ಈ ನೋಟಿಸ್‌ಗೆ ಉತ್ತರ ನೀಡಿರುವ ಅವರು `ಅಶ್ಲೀಲ ಚಿತ್ರ ನೋಡುವ ಉದ್ದೇಶ ತಮ್ಮದಾಗಿರಲಿಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಸಕರು ನೀಡಿರುವ ಉತ್ತರವನ್ನು ಬಹಿರಂಗಪಡಿಸಲು ನಿರಾಕರಿಸಿದ ಸ್ಪೀಕರ್ ಬೋಪಯ್ಯ, `ಇವು ಸದನದ ಆಸ್ತಿ. ವಿವರಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯ ಇಲ್ಲ. ಅವರ ಉತ್ತರಗಳನ್ನು ವಿಚಾರಣಾ ಸಮಿತಿ ಪರಿಶೀಲಿಸಲಿದೆ~ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕೃಷ್ಣ ಪಾಲೆಮಾರ್: `ನನ್ನ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ಇತ್ತು ಎಂಬ ಕಾರಣಕ್ಕೆ ನನಗೂ ನೋಟಿಸ್ ನೀಡಲಾಗಿದೆ. ಆದರೆ ವಾಸ್ತವವಾಗಿ ನನ್ನ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ಇರಲಿಲ್ಲ. ಬದಲಿಗೆ ವಿದೇಶದಲ್ಲಿ ನಡೆದ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಕುರಿತ ಭಯಾನಕ ದೃಶ್ಯಗಳಿದ್ದವು. ಅದನ್ನು ಬಿಟ್ಟು ಬೇರೆ ಯಾವುದೂ ಇರಲಿಲ್ಲ. ಇಷ್ಟಕ್ಕೂ ನಾನು ಸದನದೊಳಗೆ ಮೊಬೈಲ್ ಕೊಂಡೊಯ್ಯುವುದಿಲ್ಲ. ಆದರೆ, ಅಂದು ಅವಸರದಲ್ಲಿ ಮೊಬೈಲ್ ಕೊಂಡೊಯ್ದ ಕಾರಣ ಅದನ್ನು ಟೇಬಲ್ ಮೇಲೆ ಇಟ್ಟಿದ್ದೆ. ಆ ಸಂದರ್ಭದಲ್ಲಿ ಸ್ನೇಹಿತ ಲಕ್ಷ್ಮಣ ಸವದಿ ಅವರು ಮೊಬೈಲ್ ತೆಗೆದುಕೊಂಡು ನೋಡಿರಬಹುದು. ಇಷ್ಟಕ್ಕೇ ನನ್ನದು ತಪ್ಪು ಎಂದು ಹೇಗೆ ಹೇಳಲಾಗುತ್ತದೆ. ನಾನು ಸದನದಲ್ಲಿ ಅಶ್ಲೀಲ ಚಿತ್ರ ನೋಡಿಲ್ಲ. ಇಷ್ಟಾದರೂ ಮಾಧ್ಯಮಗಳು ನನ್ನನ್ನು  ಅಶ್ಲೀಲ ಚಿತ್ರ ನೋಡಿದಂತೆ ಬಿಂಬಿಸಿವೆ. ಇದರಲ್ಲಿ ನಾನು ನಿರಪರಾಧಿ. ಹೀಗಾಗಿ ನನ್ನನ್ನು ಆರೋಪಮುಕ್ತಗೊಳಿಸಬೇಕು. ಇಷ್ಟಕ್ಕೂ ಮೊಬೈಲ್ ಬಳಸುವ ತಾಂತ್ರಿಕ ಕೌಶಲ್ಯ ಕೂಡ ನನ್ನಲ್ಲಿ ಇಲ್ಲ~ ಎಂದು ಪಾಲೆಮಾರ್ ಉತ್ತರದಲ್ಲಿ ವಿವರಿಸಿದ್ದಾರೆ.

ಸಿ.ಸಿ.ಪಾಟೀಲ: `ನಾನು ಸದನದಲ್ಲಿ ಸವದಿ ಜತೆ ಮಾತನಾಡುತ್ತಿದ್ದೆ. ಆ ಸಂದರ್ಭದಲ್ಲಿ ಅವರು ವಿದೇಶದಲ್ಲಿ ಮಹಿಳೆಯೊಬ್ಬರನ್ನು ಭಯಾನಕವಾಗಿ ಹತ್ಯೆ ಮಾಡಿರುವ ಘಟನೆ ಬಗ್ಗೆ ತಿಳಿಸಿದರು. ಕುತೂಹಲಕ್ಕೆ ಒಮ್ಮೆ ಮೊಬೈಲ್ ಕಡೆ ನೋಡಿದೆ. ಆ ಸಂದರ್ಭದಲ್ಲಿ ಅಶ್ಲೀಲ ಚಿತ್ರ ಕಾಣಲಿಲ್ಲ. ಬದಲಿಗೆ ಭಯಾನಕವಾದ ದೃಶ್ಯ ಕಂಡುಬಂತು. ಅದನ್ನು ನೋಡಲು ಸಾಧ್ಯವಾಗದೆ, ಮೊಬೈಲ್ ಅನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಇಷ್ಟು ಬಿಟ್ಟರೆ ನಾನು ಯಾವುದೇ ಅಶ್ಲೀಲ ಚಿತ್ರ ವೀಕ್ಷಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನಾನು ನಿರಪರಾಧಿ. ನನ್ನನ್ನು ಮಾಧ್ಯಮಗಳು ವಿನಾಕಾರಣ ತಪ್ಪಿತಸ್ಥ ಎನ್ನುವ ಹಾಗೆ ಬಿಂಬಿಸಿದ್ದು, ಅದಕ್ಕೆ ಮಾನ್ಯತೆ ನೀಡಬಾರದು~ ಎಂದು ಸಿ.ಸಿ.ಪಾಟೀಲ ಕೋರಿದ್ದಾರೆ.

ಲಕ್ಷ್ಮಣ ಸವದಿ: `ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿಲ್ಲ. ಆ ರೀತಿಯ ಮನೋಭಾವ ನನ್ನದಲ್ಲ. ಅಗೌರವವಾಗಿಯೂ ನಡೆದುಕೊಂಡಿಲ್ಲ. ಮಹಿಳೆಯೊಬ್ಬರನ್ನು ಹತ್ಯೆ ಮಾಡುವ ಭಯಾನಕ ದೃಶ್ಯ ನೋಡಿದ್ದು ನಿಜ. ಆದರೆ, ಅದು ಅಶ್ಲೀಲ ಚಿತ್ರವಾಗಿರಲಿಲ್ಲ. ನನ್ನ ಕಳಕಳಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸದನದೊಳಗೆ ಮೊಬೈಲ್ ಬಳಸಿದ್ದಕ್ಕೆ ವಿಷಾದ ಇದೆ. ಆದರೆ, ತಪ್ಪು ಮಾತ್ರ ಮಾಡಿಲ್ಲ~ ಎಂದು ಸವದಿ ಹೇಳಿದ್ದಾರೆ.

`ನನ್ನ ಉದ್ದೇಶ ಅಶ್ಲೀಲ ಚಿತ್ರ ನೋಡುವುದಾಗಿರಲಿಲ್ಲ. ಬದಲಿಗೆ, ಮಹಿಳೆಯೊಬ್ಬರ ಹತ್ಯೆಯ ದೃಶ್ಯ ನೋಡುವುದು ಮಾತ್ರವಾಗಿತ್ತು. ಈ ವಿಷಯದಲ್ಲಿ ದುರುದ್ದೇಶ ಕೂಡ ಇರಲಿಲ್ಲ~ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT