ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ವಿಶೇಷ ತಂಡ ರಚನೆ- ಅಶೋಕ

ಸಬ್‌ಇನ್‌ಸ್ಪೆಕ್ಟರ್ ವಿಜಯ್‌ಕುಮಾರ್ ಸಾವಿನ ಪ್ರಕರಣ
Last Updated 27 ಜನವರಿ 2013, 20:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾನುಕುಂಟೆ ಠಾಣೆ ಎಸ್‌ಐ ವಿಜಯ್‌ಕುಮಾರ್ ಸಾವಿನ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಲು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ಅವರು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಜೆ ವಿಷಯವಾಗಿ ವಿಜಯ್‌ಕುಮಾರ್ ಹಾಗೂ ಆನಂದ್‌ಕುಮಾರ್ ನಡುವೆ ಜಗಳವಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ' ಎಂದರು.

ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ ಹತ್ತು ದಿನದೊಳಗೆ ವರದಿ ನೀಡುವಂತೆ ಹಾಗೂ ಇಲಾಖೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ ಎಂದರು.

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜೆ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ಬಳಿಕ ಶವವನ್ನು ಮಲ್ಲಪ್ಪಲೇಔಟ್‌ನ ಮನೆಗೆ ತೆಗೆದುಕೊಂಡು ಹೋಗಲಾಯಿತು.

ದಕ್ಷ ಅಧಿಕಾರಿ: `ಸೌಮ್ಯ ಸ್ವಭಾವದವರಾಗಿದ್ದ ಅಳಿಯ, ಕುಟುಂಬಕ್ಕೆ ಮಗನಂತಿದ್ದರು. ದಕ್ಷ ಅಧಿಕಾರಿಯಾಗಿದ್ದ ಅವರು, ಮಗಳು ಮತ್ತು ಕುಟುಂಬ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು' ಎಂದು ವಿಜಯಕುಮಾರ್ ಅವರ ಮಾವ ಮುನಿಯಪ್ಪ ಹೇಳಿದರು.

`ತಮ್ಮನನ್ನು ಕೊಲೆ ಮಾಡಿದ ಆನಂದ್‌ಕುಮಾರ್‌ಗೆ ಕಠಿಣ ಶಿಕ್ಷೆ ಕೊಡಿ. ಮುಂದೆ ಯಾವುದೇ ಪೊಲೀಸ್ ಸಿಬ್ಬಂದಿ ಈ ರೀತಿಯ ಕೃತ್ಯ ಎಸಗಬಾರದು' ಎಂದು ಮೃತರ ಅಕ್ಕ ವಿಜಯಮ್ಮ ಅಧಿಕಾರಿಗಳಲ್ಲಿ ಮನವಿ ಮಾಡಿದರು.

`ದಕ್ಷತೆಗೆ ಹೆಸರಾಗಿದ್ದ ವಿಜಯ್‌ಕುಮಾರ್, ಎಸ್‌ಐ ಹುದ್ದೆಗೆ ಆಯ್ಕೆಯಾದ ಸ್ವಲ್ಪ ಸಮಯದಲ್ಲೇ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸೇವೆಗೆ ಸೇರಿದ ದಿನದಿಂದಲೂ ಅವರು ಶಿಸ್ತಿನಿಂದ ಇರುತ್ತಿದ್ದರು' ಎಂದು ವಿಜಯ್‌ಕುಮಾರ್ ಅವರೊಂದಿಗೆ ಇಲಾಖೆ ಸೇರಿದ ಇಂದಿರಾನಗರ ಸಂಚಾರ ಠಾಣೆ ಕಾನ್‌ಸ್ಟೇಬಲ್ ಮಲ್ಲೇಶ್ ತಿಳಿಸಿದರು.

ಆನಂದ್‌ಕುಮಾರ್ ಈ ಹಿಂದೆ ಸರ್ಜಾಪುರ ಠಾಣೆಯಲ್ಲಿದ್ದಾಗ ಎಸ್‌ಐಗಳೊಂದಿಗೆ ಹಲವು ಬಾರಿ ಜಗಳವಾಡಿದ್ದ. ಅಲ್ಲದೇ, ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಸಮವಸ್ತ್ರ ಹರಿದು ಹಲ್ಲೆ ನಡೆಸಲು ಯತ್ನಿಸಿದ್ದ. ಈ ಸಂಬಂಧ ಆತನ ವಿರುದ್ಧ ಇಲಾಖಾ ತನಿಖೆ ಸಹ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

`ಆನಂದ್‌ಕುಮಾರ್, ಗೌರಿಬಿದನೂರಿನಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಆ ಮನೆಯ ಗೃಹಪ್ರವೇಶ ಕಾರ್ಯಕ್ರಮ ಮುಂದಿನ ವಾರಕ್ಕೆ ನಿಗದಿಯಾಗಿತ್ತು. ಈ ಕಾರಣದಿಂದ ಆತ ಒಂದು ವಾರ ರಜೆ ನೀಡುವಂತೆ ಎಸ್‌ಐ ಅವರಿಗೆ ಕೇಳಿದ್ದ ಎಂದು ಗೊತ್ತಾಗಿದೆ.

ಪೊಲೀಸ್ ಇಲಾಖೆಯಲ್ಲಿರುವ ವಿಜಯ್‌ಕುಮಾರ್ ಅವರ ಅಣ್ಣ ಬಿ.ಎಸ್.ಶಾಂತಕುಮಾರ್ ಅವರು ಗಂಗಾವತಿ ಉಪವಿಭಾಗದಲ್ಲಿ ಡಿವೈಎಸ್ಪಿ ಆಗಿದ್ದಾರೆ.

ಠಾಣೆಗೆ ವಾಪಸ್ ಕರೆ ತಂದ ಸಾವು
`ಆನಂದ್‌ಕುಮಾರ್ ಜತೆ ವಾಗ್ವಾದ ನಡೆದ ನಂತರ ವಿಜಯ್‌ಕುಮಾರ್ ಠಾಣೆಯಿಂದ ಹೊರ ಬಂದು ಗಸ್ತಿಗೆ ತೆರಳಲು ಜೀಪು ಹತ್ತಿದ್ದರು. ಈ ಹಂತದಲ್ಲಿ ಆನಂದ್‌ಕುಮಾರ್, ಅವಾಚ್ಯ ಶಬ್ದ ಬಳಸಿ ಮೆಲು ದನಿಯಲ್ಲಿ ಅವರನ್ನು ನಿಂದಿಸಿದ. ಆತನ ಮಾತುಗಳನ್ನು ಕೇಳಿಸಿಕೊಂಡ ಎಸ್‌ಐ, ಜೀಪಿನಿಂದ ಕೆಳಗಿಳಿದು ಬಂದು ತಮ್ಮ ಕೊಠಡಿಯಲ್ಲಿ ಕುಳಿತರು. ಅದಾದ ಸ್ವಲ್ಪ ಸಮಯದಲ್ಲೇ ಈ ದುರ್ಘಟನೆ ನಡೆಯಿತು' ಎಂದು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಹೇಳಿದರು.

ಅಭಿಪ್ರಾಯಗಳು :

`ಹಿರಿಯ ಅಧಿಕಾರಿಗಳು, ಕಾನ್‌ಸ್ಟೇಬಲ್ ಸೇರಿದಂತೆ ಕೆಳ ಹಂತದ ಸಿಬ್ಬಂದಿಯನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕು. ಈ ಪ್ರಕ್ರಿಯೆಯಲ್ಲಿ ತೊಡಕಾದಲ್ಲಿ ಇಂತಹ ಅನಾಹುತಗಳು ನಡೆಯುತ್ತವೆ'
-ಶಂಕರ ಬಿದರಿ, ನಿವೃತ್ತ ಡಿಜಿಪಿ

`ಸಿಬ್ಬಂದಿ ನಡುವೆ ಸಂವಹನದ ಕೊರತೆ ಉಂಟಾಗಿ ಈ ಘಟನೆ ನಡೆದಿದೆ. ಇಬ್ಬರ ನಡುವೆ ವಾಗ್ವಾದ ನಡೆಯಲು ನಿಖರ ಕಾರಣವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಸಿಬ್ಬಂದಿ ನಡುವೆ ಅನ್ಯೋನ್ಯತೆ ಅಗತ್ಯ'
- ಎ.ಆರ್.ಇನ್ಫಂಟ್, ನಿವೃತ್ತ ಡಿಜಿಪಿ

`ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದ ಕಾರಣ ಆನಂದ್ ಕುಮಾರ್‌ಗೆ ರಜೆ ನೀಡಲು ಎಸ್‌ಐ ನಿರಾಕರಿಸಿದ್ದಾರೆ. ಅಲ್ಲದೇ, ಆನಂದ್ ಕೂಡ ಮೂರು ದಿನಗಳಿಂದ ನಿರಂತರವಾಗಿ ಕೆಲಸ ಮಾಡಿದ್ದು, ಆತ ರಜೆ ಕೇಳಿದ್ದರಲ್ಲೂ ಅರ್ಥವಿದೆ. ಈ ಹಂತದಲ್ಲಿ ಪರಸ್ಪರರ ನಡುವೆ ಸಂಹವನದ ಕೊರತೆ ಉಂಟಾಗಿದ್ದರಿಂದ ದುರ್ಘಟನೆ ನಡೆದಿದೆ'
- ಡಾ. ಎಸ್.ಟಿ ರಮೇಶ್, ನಿವೃತ್ತ ಡಿಜಿಪಿ

`ಈ ಘಟನೆ ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಕೆಳ ಮಟ್ಟದ ಸಿಬ್ಬಂದಿಯ ಸಿಟ್ಟು ಈ ಮೂಲಕ ಹೊರ ಬಂದಿದೆ. ಮುಂದೆ ಇಂತಹ ಅನಾಹುತಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು'
- ಬಿಪಿನ್ ಗೋಪಾಲಕೃಷ್ಣ, ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ

`ಇನ್‌ಸ್ಪೆಕ್ಟರ್ ಅಥವಾ ಎಸ್‌ಐ ರಜೆ ನೀಡದಿದ್ದರೆ ಕೆಳ ಹಂತದ ಸಿಬ್ಬಂದಿ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಬಹುದು. ಈ ವ್ಯವಸ್ಥೆ ಇಲಾಖೆಯಲ್ಲಿದೆ. ಸಿಬ್ಬಂದಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಿದಾಗ ಮಾತ್ರ ಇಂತಹ ಅನಾಹುತಗಳನ್ನು ತಡೆಗಟ್ಟಬಹುದು.
- ಮುತ್ತಣ್ಣ ಪಿ. ಸರವಗೋಳ್, ಬೆಳಕವಾಡಿ ಠಾಣೆ

`ಕಾನ್‌ಸ್ಟೇಬಲ್‌ಗಳಾಗಿ ಇಲಾಖೆಗೆ ಸೇರಿ ಜೀತದಾಳುಗಳಂತೆ ದುಡಿಯುತ್ತಿದ್ದೇವೆ. ಹಿರಿಯ ಅಧಿಕಾರಿಗಳ ದೃಷ್ಟಿಯಲ್ಲಿ ನಾವು ಅವರ ಮನೆಯ ಸೆಕ್ಯುರಿಟಿ ಗಾರ್ಡ್‌ಗಳಿದ್ದಂತೆ. ನಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ಕರ್ತವ್ಯ ನಿರ್ವಹಿಸಬೇಕಾಗಿದೆ. ನಾವು ಕೂಡ ಮನುಷ್ಯರು ಎಂಬುದನ್ನು ಅಧಿಕಾರಿಗಳು ಅರಿಯಬೇಕು'
- ಕಾನ್‌ಸ್ಟೇಬಲ್ ಸುದರ್ಶನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT