ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಮಾಹಿತಿ: ತಪ್ಪಿದ ಅವಕಾಶ

Last Updated 8 ಜನವರಿ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ನೂರಾರು ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಿರುವುದರಿಂದ ಅರ್ಹತೆ ಇರುವ ಅಭ್ಯರ್ಥಿಗಳು ನೇಮಕಾತಿ ಹೊಂದುವ ಅವಕಾಶದಿಂದ ವಂಚಿತರಾಗಿದ್ದಾರೆ.

ಪಾಲಿಟೆಕ್ನಿಕ್‌ಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 675 ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಡಿಸೆಂಬರ್ 21ರಿಂದ ಸಂದರ್ಶನ ಪ್ರಕ್ರಿಯೆ ಪ್ರಾರಂಭಿಸಿದ್ದು, ಈಗಾಗಲೇ ಮೆಕಾನಿಕಲ್, ಟೆಲಿಕಮ್ಯೂನಿಕೇಷನ್ (ಎಲೆಕ್ಟ್ರಾನಿಕ್ಸ್) ವಿಷಯಗಳ ಸಂದರ್ಶನ ಪೂರ್ಣಗೊಂಡಿದೆ.

ಅರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ 1:3ರ ಪ್ರಮಾಣದಲ್ಲಿ ಅಭ್ಯರ್ಥಿಗಳಿಗೆ  ಸಂದರ್ಶನ ಪತ್ರ ಕಳುಹಿಸಿಕೊಟ್ಟು, ಆ ಪ್ರಕಾರ ಸಂದರ್ಶನ ನಡೆಸಲಾಗುತ್ತಿದೆ. ಆದರೆ ಸಂದರ್ಶನ ಪತ್ರ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗಿರುವುದು ಹಾಗೂ ಸಂದರ್ಶನ ಸಂದರ್ಭದಲ್ಲಿ ಅನರ್ಹರಾಗಿರುವುದು         ಕಂಡುಬಂದಿದೆ.

ಉದಾಹರಣೆಗೆ ಮೆಕಾನಿಕಲ್ ವಿಷಯದಲ್ಲಿ 174 ಹುದ್ದೆಗಳ ಭರ್ತಿಗಾಗಿ 478 ಅಭ್ಯರ್ಥಿಗಳಿಗೆ ಸಂದರ್ಶನ ಪತ್ರ ಕಳುಹಿಸಲಾಗಿತ್ತು. ಈ ಪೈಕಿ 82 ಜನ ಗೈರು ಹಾಜರಾಗಿದ್ದರೆ, 69 ಜನ ಅನರ್ಹರಾಗಿದ್ದಾರೆ.
ಇನ್ನು ಟೆಲಿಕಮ್ಯೂನಿಕೇಷನ್ ವಿಷಯದಲ್ಲಿ 152 ಹುದ್ದೆಗಳ ಭರ್ತಿಗೆ ಈಗಾಗಲೇ ಸಂದರ್ಶನ ಪ್ರಕ್ರಿಯೆ ಮುಕ್ತಾಯವಾಗಿದೆ.

ಈ ವಿಷಯದಲ್ಲಿ ಸಂದರ್ಶನ ಪತ್ರ ಪಡೆದಿದ್ದ ಒಂದರಿಂದ 297 ಅಭ್ಯರ್ಥಿಗಳವರೆಗಿನ ಮಾಹಿತಿ ಲಭ್ಯವಾಗಿದ್ದು, ಇದರಲ್ಲಿ 103 ಜನ ಗೈರು ಹಾಜರಾಗಿದ್ದರೆ,   66 ಜನ ಅನರ್ಹರಾಗಿದ್ದಾರೆ. ಸಂದರ್ಶನಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಗೈರು ಮತ್ತು ಅನರ್ಹರಾಗಿರುವುದು ಇದೇ ಮೊದಲು ಎನ್ನಲಾಗಿದೆ. ಇದುವರೆಗೆ ಕೇವಲ ಎರಡು ವಿಷಯಗಳ ಸಂದರ್ಶನ ಪ್ರಕ್ರಿಯೆ ಮಾತ್ರ ೂರ್ಣಗೊಂಡಿದೆ. ಉಳಿದ ವಿಷಯಗಳಲ್ಲೂ ಇದೇ ರೀತಿ ಆಗುವ ಸಾಧ್ಯತೆಗಳಿವೆ.

ಅರ್ಹರಿಗೆ ಅನ್ಯಾಯ
ತಪ್ಪು ಮಾಹಿತಿ ನೀಡಿ ಸಂದರ್ಶನಕ್ಕೆ ಅರ್ಹತೆ ಪಡೆದು ನಂತರ ಅನರ್ಹರಾಗುವುದರಿಂದ, ನಿಜವಾಗಿಯೂ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂದರ್ಶನದ ಅವಕಾಶದಿಂದಲೇ ವಂಚಿತರಾಗ್ದ್ದಿದಾರೆ ಎಂಬುದು ನೊಂದ ಅಭ್ಯರ್ಥಿಗಳ ಅಳಲು. ಕೆಲ ವರ್ಷಗಳಿಂದ ಈಚೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪದ್ಧತಿಯನ್ನು ಕೆಪಿಎಸ್‌ಸಿ ಜಾರಿಗೆ ತಂದಿದೆ. ಈ ರೀತಿ ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ. ಕೇವಲ ಮಾಹಿತಿ `ಅಪ್‌ಲೋಡ್~ ಮಾಡಿದರೆ ಸಾಕು.

ಇದರ ಆಧಾರದ ಮೇಲೆ 1:3ರ ಪ್ರಮಾಣದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಆದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಶೇಕಡಾವಾರು ಅಂಕಗಳನ್ನು ಹೆಚ್ಚಾಗಿ ನಮೂದಿಸುವುದು, ಅಂತಿಮ ವರ್ಷದ ಫಲಿತಾಂಶ ನಿರೀಕ್ಷೆಯಲ್ಲಿರುವವರು ಇಂತಿಷ್ಟು ಅಂಕ ಬರಬಹುದು ಎಂದು ಭಾವಿಸಿ ಅಂದಾಜಿನ ಮೇಲೆ ಹೆಚ್ಚು ಅಂಕಗಳನ್ನು ನಮೂದಿಸುವುದು ನಡೆದಿದೆ. ಪದವಿ ಅಂಕಪಟ್ಟಿ ಬರುವ ಮೊದಲೇ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಿದ್ದರೂ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂಬುದು ಅಭ್ಯರ್ಥಿಗಳ ಆರೋಪ.

ಅಭ್ಯರ್ಥಿಗಳು ನೀಡಿರುವ ಮಾಹಿತಿ ಸರಿ ಇದೆಯೇ ಎಂಬುದನ್ನು ಸಂದರ್ಶನ ಪತ್ರ ಕಳುಹಿಸುವಾಗಲೇ ಆಯೋಗ ಪರಿಶೀಲಿಸುವುದಿಲ್ಲ. ಸಂದರ್ಶನ ಸಂದರ್ಭದಲ್ಲಿ ಮಾತ್ರ ನೋಡಲಾಗುತ್ತದೆ. ಆಗ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ. ಆದರೆ ಈ ರೀತಿ ಅಭ್ಯರ್ಥಿಯನ್ನು ಅನರ್ಹಗೊಳಿಸಿದಾಗ ಮತ್ತೊಮ್ಮೆ 1:3ರ ಪ್ರಮಾಣದಲ್ಲಿ ಸಂದರ್ಶನಕ್ಕೆ ಕರೆಯುವುದಿಲ್ಲ. ಹೀಗಾಗಿ ಅನರ್ಹಗೊಂಡ ನಂತರದ ಸ್ಥಾನದಲ್ಲಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.

`ನಮಗೆ ಮೆರಿಟ್ ಮತ್ತು ಮೀಸಲಾತಿ ಇದೆ. ಆದರೂ ಕೆಲವರು ಹೆಚ್ಚು ಅಂಕಗಳನ್ನು ಪಡೆದಿರುವುದಾಗಿ ತಪ್ಪು ಮಾಹಿತಿ ನೀಡಿದ ಕಾರಣ ಸಂದರ್ಶನ ಪತ್ರ ಬರಲಿಲ್ಲ. ತಪ್ಪು ಮಾಹಿತಿ ನೀಡಿದವರನ್ನು ಸಂದರ್ಶನ ಸಂದರ್ಭದಲ್ಲಿ ಅನರ್ಹಗೊಳಿಸಲಾಗಿದೆ. ಈಗ ಅವರ ನಂತರದ ಸ್ಥಾನದಲ್ಲಿರುವ ನಮ್ಮನ್ನು ಸಂದರ್ಶನಕ್ಕೆ ಕರೆಯಬೇಕು~ ಎಂಬುದು ನೊಂದ ಅಭ್ಯರ್ಥಿಗಳ ಆಗ್ರಹವಾಗಿದೆ.

ಮೂಲ ದಾಖಲೆಗಳನ್ನು ಪರಿಶೀಲಿಸದೆ ಸಂದರ್ಶನ ಪತ್ರಗಳನ್ನು ಕಳುಹಿಸುತ್ತಿರುವುದರಿಂದ ಈ ರೀತಿ ಆಗುತ್ತಿದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಮೊದಲೇ ದಾಖಲೆಗಳನ್ನು ಪರಿಶೀಲಿಸಬೇಕು ಅಥವಾ ಅನರ್ಹಗೊಂಡ ಅಭ್ಯರ್ಥಿಗಳ ನಂತರದ ಸ್ಥಾನದಲ್ಲಿ ಇರುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಬೇಕು ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೆಲ ಅಭ್ಯರ್ಥಿಗಳು ಆಗ್ರಹಿಸಿದರು.

ತಿದ್ದುಪಡಿ ಆಗಬೇಕು: ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕದ ಒಳಗೆ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳದೆ ಇದ್ದರೆ, ಸರಿಯಾದ ಮಾಹಿತಿ ನೀಡದೆ ಇದ್ದರೆ, ತಪ್ಪುಗಳನ್ನು ಮಾಡಿದ್ದರೆ ಅಂತಹವರನ್ನು ಅನರ್ಹಗೊಳಿಸಲಾಗುತ್ತದೆ. ಸಂದರ್ಶನ ಪತ್ರ ಕಳುಹಿಸುವ ಮೊದಲೇ ದಾಖಲೆಗಳನ್ನು ಪರಿಶೀಲಿಸುವುದು ಕಷ್ಟ. ಈ ರೀತಿ ಮಾಡಿದರೆ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದರು.

ಆ ರೀತಿ ಆದಾಗ, ನಂತರದ ಸ್ಥಾನದಲ್ಲಿ ಇರುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲು ಈಗಿರುವ ನಿಯಮಗಳಲ್ಲಿ ಅವಕಾಶ ಇಲ್ಲ. ನಿಯಮಗಳಲ್ಲಿ ತಿದ್ದುಪಡಿ ಆದರೆ ಮಾಡಬಹುದು. ಆದರೆ ಅರ್ಜಿ ಸಲ್ಲಿಸುವಾಗಲೇ ಎಚ್ಚರಿಕೆ ವಹಿಸಿದರೆ ಈ ರೀತಿ ತಪ್ಪುಗಳು ಆಗುವುದಿಲ್ಲ, ಮತ್ತೊಬ್ಬರಿಗೆ ತೊಂದರೆಯೂ ಆಗುವುದಿಲ್ಲ ಎಂದು ಆಯೋಗದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT