ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಸಾರ ಬೇಡ...

Last Updated 25 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ, ಐಟಿ-ಬಿಟಿಗಳಲ್ಲಿ ಕೆಲಸ ಮಾಡುತ್ತಾ ತಮ್ಮ ಪರ್ಸ್ ತುಂಬಾ ಹಣ ಬಾಚಿಕೊಳ್ಳುತ್ತಿರುವ ಹೆಣ್ಣುಮಕ್ಕಳ ವ್ಯಕ್ತಿಗತ ಜೀವನ, ಅದರಲ್ಲೂ ಮದುವೆಯ ಜೀವನದಲ್ಲಿ ಬಿರುಕು.... ಹೊಂದಾಣಿಕೆ ಇರದಿರುವುದು ಕಂಡುಬರುತ್ತದೆ. ವಿದ್ಯೆ ವಿನಯವನ್ನು, ಸಂಪಾದನೆ ಆತ್ಮವಿಶ್ವಾಸವನ್ನು ಕೊಡದಿದ್ದರೆ ಅದರಿಂದ ನಮಗೇ ಉರುಳಾಗುವ ಸಾಧ್ಯತೆಯೇ ಹೆಚ್ಚು.
 
ಈಗಿನ ಕಾಲದಲ್ಲಿ ಹುಡುಗಿಯರು ದಾಂಪತ್ಯಕ್ಕೆ ಎರಡನೇ ಸ್ಥಾನ ಕೊಡುತ್ತಿದ್ದಾರೆ. ಅಂದರೆ ವಿದ್ಯೆ, ಉದ್ಯೋಗ ಆದ ನಂತರ ಸ್ವಲ್ಪ ಸಮಯದ ನಂತರವೇ ಮದುವೆಗೆ ತಯಾರಾಗುತ್ತಾರೆ. ಇಲ್ಲಿಯವರೆಗೂ ಸರಿಯೇ. ಆದರೆ ಹುಡುಗನ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ಅದು ಪ್ರೀತಿಸಿ ಅಥವಾ ಹಿರಿಯರು ನೋಡಿ ಮಾಡಿದ್ದಾದರೂ ಸರಿಯೇ.

ಕೇವಲ ಹುಡುಗನಿಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ಅವನ ಕೆಲಸ, ಸಂಬಳ, ರೂಪ ಮತ್ತು ಮಾತುಗಾರಿಕೆ ಇವೆಲ್ಲವೂ ಒಂದು ಮುಖವಾದರೆ, ಅವನ ತಂದೆ-ತಾಯಿ, ಮನೆತನ, ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಇನ್ನೊಂದು ಮುಖ.
 
ಈ ಇನ್ನೊಂದು ಮುಖದ ಬಗ್ಗೆ ಹುಡುಗಿಯರು ತುಂಬಾ ತಾತ್ಸಾರದಿಂದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾಳೆ;  ಗಂಡನ ತಂದೆ-ತಾಯಿ ಬಂದಾಗ ಹೇಗೋ ಸ್ವಲ್ಪ ಉಪಚರಿಸಿ ಕಳುಹಿಸಿದರಾಯಿತು ಎಂದು ಭಾವಿಸುತ್ತಾಳೆ.

ನನ್ನ ಗೆಳತಿ ಸುಮಿತ್ರನ ಮಗಳು ಸಾಫ್ಟ್‌ವೇರ್ ಎಂಜಿನಿಯರ್, ದೂರದ ಗುಲ್ಬರ್ಗದ ಯುವಕನೊಂದಿಗೆ ಪ್ರೀತಿಸಿ ಮದುವೆ ಆದಳು. ಅವನು ಹಿರಿಮಗ, ಇಬ್ಬರು ತಂಗಿಯರು, ಒಬ್ಬ ತಮ್ಮ ಹಾಗೂ ತಂದೆ-ತಾಯಿ ಇರುವ ಒಟ್ಟು ಕುಟುಂಬ ಮತ್ತು ಅವರು ಕೆಳಮಧ್ಯಮ ವರ್ಗದವರು.

ಕಷ್ಟಪಟ್ಟು ಮಗನನ್ನು ಎಂಜಿನಿಯರ್ ಓದಿಸಿ, ಒಳ್ಳೆಯ ಕೆಲಸವೆಂದು ಬೆಂಗಳೂರಿಗೆ ಕಳುಹಿಸಿದ್ದರು. ಅವರಿಗೆ ಈ ಮದುವೆ ಒಲ್ಲದ ಮದುವೆ. ಅವಳು ಅವನ ಈ ಕುಟುಂಬದ ಹಿನ್ನೆಲೆಗೆ ಮಹತ್ವ ಕೊಡದೆ ಇದ್ದುದರಿಂದ ಅವಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅದರ ಪರಿಣಾಮವೇ ವಿವಾಹ ವಿಚ್ಛೇದನ.

ಇನ್ನೊಬ್ಬ ಗೆಳತಿ ವಿಜಯನ ಮಗಳು ದೂರದ ಅಮೆರಿಕದಲ್ಲಿ ಗಂಡನೊಂದಿಗೆ ನೆಲೆಸಿದ್ದಾಳೆ. ಅವಳದು ಷರತ್ತುಬದ್ದ ಮದುವೆ. ಅದರಲ್ಲಿ ಒಂದು ಷರತ್ತು ಹೀಗಿದೆ. ತಾನು ಅತ್ತೆ-ಮಾವನ ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ಅವರುಗಳು ತನ್ನ ಮನೆಗೆ ಬರುವ ಹಾಗಿಲ್ಲ. ಹೀಗೆ ಅವರ ದಾಂಪತ್ಯ ಮುರಿಯದೇ ಸಾಗಿದೆ. ಕಾರಣ ಗಂಡ, ತಂದೆ-ತಾಯಿ ಹಾಗೂ ಹೆಂಡತಿಯನ್ನು ವಿರಸಕ್ಕೆ ಎಡೆ ಮಾಡಿಕೊಡದ ಹಾಗೆ ಸಂಭಾಳಿಸುತ್ತಿದ್ದಾನೆ.

ಷರತ್ತುಗಳು ಮತ್ತು ಕರಾರುಗಳೊಟ್ಟಿಗೆ ಆಗುವ ಮದುವೆಗಳಲ್ಲಿ ಎಲ್ಲಿಯ ಆತ್ಮೀಯತೆ ಮತ್ತು ಆಸರೆಗಳು? ಜೀವಮಾನ ಇರಬೇಕಾದ ಬಂಧನದಲ್ಲಿ ಸಹನೆ ಮತ್ತು ಸಹಿಸಿಕೊಳ್ಳುವ ಗುಣ ಬೇಕೇಬೇಕು. ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುವಾಗ ತನ್ನ ಹಿರಿಯ, ಕಿರಿಯ ಸಹೋದ್ಯೋಗಿಗಳೊಟ್ಟಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅದೇ ರೀತಿ ಈ ಮದುವೆಯ ಜೀವನದಲ್ಲಿಯೂ ಕೆಲವು ಅನಿವಾರ್ಯಗಳು ಇರುತ್ತವೆಂದೂ ಅರಿಯುವುದು ಒಳ್ಳೆಯದು.

ಮದುವೆಗೆ ಮುಂಚೆ ಹುಡುಗನನ್ನು ಆಫೀಸಿನಲ್ಲಿ ಹೋಟೆಲ್‌ಗಳಲ್ಲಿ ಭೇಟಿಯಾಗುತ್ತಿರುತ್ತಾರೆ. ಆಗ ಪರಿಚಯವಾಗುವುದು ಕೇವಲ ಕಾಲುಭಾಗ ಮಾತ್ರ. ಅವನ ಉಳಿದ ವ್ಯಕ್ತಿತ್ವದ ಪರಿಚಯ ಆಗುವುದೇ ಇಲ್ಲ, ಆದರೂ ಆ ವ್ಯಕ್ತಿ ಇಷ್ಟವಾದರೆ ಮದುವೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಂತಹ ಮದುವೆಗಳಲ್ಲಿ ಗಂಡ ಹೆಂಡಿರ ವಿರಸ ಸರ್ವೇಸಾಮಾನ್ಯ.

ಇಂತಹ ಆತುರದ ತೀರ್ಮಾನ ತೆಗೆದುಕೊಳ್ಳುವ ಮೊದಲೇ ಕೆಲವು ಅಂಶಗಳನ್ನು ಪರಿಗಣಿಸಬೇಕಾಗಿದೆ. ಮೊದಲು ಆತನ ಕುಟುಂಬ ಸದಸ್ಯರೊಡನೆ ಪರಿಚಯ ಮಾಡಿಕೊಳ್ಳುವುದು ಮುಖ್ಯ. ಅವರ ಮನೆಗೂ ಭೇಟಿ ಕೊಡಬೇಕು. ಆ ಕುಟುಂಬದೊಂದಿಗೆ ತಾನು ಹೊಂದಿಕೊಳ್ಳುವುದಕ್ಕೆ ಸಾಧ್ಯವೋ, ಇಲ್ಲವೋ ಎಂದು ಯೋಚಿಸಬೇಕು. ಹೆಚ್ಚಿನ ಹುಡುಗಿಯರು ಗಂಡ ತನ್ನ ರೂಪ, ವಿದ್ಯೆ ಹಾಗೂ ಉದ್ಯೋಗಕ್ಕೆ ಮರುಳಾಗುತ್ತಾನೆಂದೂ, ತಾನು ಹೇಳಿದಂತೆ ಕೇಳುತ್ತಾನೆಂದು ಭ್ರಮೆಯಲ್ಲಿರುತ್ತಾರೆ. ಅದು ಕೇವಲ ಅವರ ಭ್ರಮೆ ಮಾತ್ರ.

ಇತ್ತೀಚಿಗೆ ಆಧುನಿಕ ಕುಟುಂಬಗಳಲ್ಲಿ ಹಣ, ಅಹಂಕಾರ ಮತ್ತು ಹಠಗಳಿಗೆ ಮೊದಲನೇ ಸ್ಥಾನವನ್ನು ಕೊಡುತ್ತಿದ್ದಾರೆ. ಇದರ ಬದಲು ಹೃದಯ ಸ್ಪಂದನಗಳಿಗೆ ಬೆಲೆ ಕೊಟ್ಟು ಇನ್ನೊಬ್ಬರ ಬಲಹೀನತೆಗಳನ್ನು ಸಹಾನುಭೂತಿ ತೋರಿಸುವ ಸಹನೆಯನ್ನು ಸ್ತ್ರೀ ಪುರುಷರಿಬ್ಬರೂ ಅಳವಡಿಸಿಕೊಂಡರೆ ವಿಚ್ಛೇದನದ ಕಡೆಗೆ ಹೋಗುವ ಅಗತ್ಯವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT