ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವಕ್ಕೆ ಚಾಲನೆ

ಮಲ್ಲಾಡಿಹಳ್ಳಿ ಸಾಂಸ್ಕೃತಿಕ ಕಲೆಗಳ ತವರೂರು; ಬಿ.ಎಲ್‌.ವೇಣು
Last Updated 10 ಜನವರಿ 2014, 9:19 IST
ಅಕ್ಷರ ಗಾತ್ರ

ಹೊಳಲ್ಕೆರೆ: ರಾಘವೇಂದ್ರ ಸ್ವಾಮೀಜಿ ಅವರಿಂದ ಮಲ್ಲಾಡಿಹಳ್ಳಿ ಎಂಬ ಕುಗ್ರಾಮ ಸಾಂಸ್ಕೃತಿಕ ಕಲೆಗಳ ತವರೂರಾಯಿತು ಎಂದು ಸಾಹಿತಿ ಬಿ.ಎಲ್‌.ವೇಣು ಬಣ್ಣಿಸಿದರು.

ತಾಲ್ಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸೂರ್‌ದಾಸ್‌ಜೀ ರಂಗಮಂಟಪದಲ್ಲಿ ಗುರುವಾರ ಆರಂಭವಾದ ಐದು ದಿನಗಳ ‘ತಿರುಕನೂರಿನಲ್ಲಿ ರಂಗದಾಸೋಹ’ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಟಕ ಒಂದು ಜೀವಂತ ಕಲೆ. ಆದರೆ ಇಂದಿನ ಆಧುನಿಕತೆಯ ಭರಾಟೆಯಲ್ಲಿ ಇಂತದೊಂದು ವಿಶಿಷ್ಟ ಕಲೆ ವಿನಾಶದ ಅಂಚಿಗೆ ಹೋಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಎಲ್ಲರಿಂದ ಆಗಬೇಕು ಎಂದರು.

ಮಾಜಿ ಶಾಸಕ ಮಹಿಮಾ ಪಟೇಲ್‌ ಮಾತನಾಡಿ, ರಾಘವೇಂದ್ರ ಸ್ವಾಮೀಜಿ ಮಲ್ಲಾಡಿಹಳ್ಳಿಯನ್ನು ದೇಶದ ಭೂಪಟದಲ್ಲಿ ಮಿನುಗುವಂತೆ ಮಾಡಿದರು. ಅವರ ಆದರ್ಶ ಪಾಲಿಸಬೇಕು ಎಂದರು.

ನೇತೃತ್ವ ವಹಿಸಿದ್ದ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ನೈತಿಕ ಶಿಕ್ಷಣ ಅಗತ್ಯವಾಗಿದೆ. ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಮಠಗಳ ಪಾತ್ರ ಮುಖ್ಯ ಎಂದರು.

ಆಶ್ರಮದ ಇಒ ನಿರ್ವಾಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಜೆಎಂ ವಿದ್ಯಾಪೀಠದ ಉಪಾಧ್ಯಕ್ಷ ಎಸ್‌.ಎಚ್‌. ಪಟೇಲ್‌ ಅಧ್ಯಕ್ಷತೆ ವಹಿಸಿದ್ದರು.

ಆಶ್ರಮದ ವಿದ್ಯಾರ್ಥಿಗಳು ಯೋಗನಮನ ಸಲ್ಲಿಸಿದರು. ಯೋಗ ತರಬೇತುದಾರ ಸಂತೋಷ್‌ಕುಮಾರ್‌ ಮಾರ್ಗದರ್ಶನದಲ್ಲಿ ಐದು
ದಿನಗಳ ಯೋಗಶಿಬಿರಕ್ಕೆ ಚಾಲನೆ ನೀಡಲಾಯಿತು. ಪುಣ್ಯಾರಾಧನೆ ಅಂಗವಾಗಿ ರಾಘವೇಂದ್ರ ಸ್ವಾಮೀಜಿ ಮತ್ತು ಸೂರ್‌ದಾಸ್‌ಜೀ ಸ್ವಾಮೀಜಿ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ಬಿ.ವಿ.ಕಾರಂತ ರಚನೆ ಮತ್ತು ಅನಿಲ್‌ ಕಪೂರ್‌ ನಿರ್ದೇಶನದ ‘ನೀಲಿ ಕುದುರೆ’ ನಾಟಕವನ್ನು ರಾಘವೇಂದ್ರ ಗುರುಕುಲ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ತುಮ್ಕೋಸ್‌ ನಿರ್ದೇಶಕ ಮಲ್ಲಿಕಾರ್ಜುನಪ್ಪ, ಗಣೇಶ ರಾವ್‌, ಇದ್ದರು. ಉಪನ್ಯಾಸಕ ಎಸ್‌. ಬಸವರಾಜ್‌ ಸ್ವಾಗತಿಸಿದರು. ಬಿ.ಕೃಷ್ಣಮೂರ್ತಿ ನಿರೂಪಿಸಿದರು. ರಘುನಾಥ ರೆಡ್ಡಿ ವಂದಿಸಿದರು.

ಗೋಡೆ ಒಡೆದದ್ದು ಅಪರಾಧವಲ್ಲ
ಬಾಬ್ರಿ ಮಸೀದಿಯನ್ನು ಕೆಡವಿ ಹಿಂದೂ–ಮುಸ್ಲಿಂ ಭಾವೈಕ್ಯಕ್ಕೆ ಧಕ್ಕೆ ತಂದ ಬಿಜೆಪಿಯವರು ವಿಧಾನಸೌಧದ ಒಂದು ಸಣ್ಣ ಗೋಡೆ ಒಡೆದಿದ್ದಕ್ಕೆ ಆಕ್ಷೇಪ ಎತ್ತುತ್ತಾರೆ. ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿದ ಅಂತಹ ಕೋಮು ವಾದಿಗಳಿಗಿಂತ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಗೋಡೆ ಒಡೆದ ಸಚಿವ ಆಂಜನೇಯ ಅವರ ನಿರ್ಧಾರ ದೊಡ್ಡ ಅಪರಾಧವೇನಲ್ಲ.

–ಬಿ.ಎಲ್‌. ವೇಣು, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT