ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಅಕಾಲಿಕ ಮಳೆ ತಂದ ಅವಾಂತರ.ಭತ್ತದ ಒಕ್ಕಲು ಕಾರ್ಯಕ್ಕೆ ಅಡಚಣೆ

Last Updated 26 ಫೆಬ್ರುವರಿ 2011, 10:40 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಚಳಿಗಾಲ ಕೊನೆಗೊಂಡು ಬೇಸಿಗೆ ಕಾಲಿಡುತ್ತಿದ್ದಂತೆಯೇ ಆಗಸದಲ್ಲಿ ಮೋಡಗಳು ಹೆಪ್ಪುಗಟ್ಟಿ ಅಕಾಲಿಕ ಮಳೆ ಸುರಿಸುವ ವಾತಾವರಣ ನಿರ್ಮಾಣವಾಗಿದ್ದು, ಮಲೆನಾಡಿನ ರೈತರಲ್ಲಿ ಆತಂಕ ಮೂಡಿಸಿದೆ. ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ಮಳೆ ಬಿದ್ದಿರುವುದರಿಂದ ಸುಗ್ಗಿ ಕಾಲದ ಕೆಲಸಗಳು ಇನ್ನೂ ಬಾಕಿ ಇದ್ದು, ಮಳೆ ವಾತಾವರಣದ ನಡುವೆ ಹೇಗೆ ನಿಭಾಯಿಸಬೇಕು ಎಂಬ ಚಿಂತೆ ತಾಲ್ಲೂಕಿನ ಬಹುತೇಕ ರೈತರದ್ದು. ಈಗಾಗಲೇ ಅನೇಕ ರೈತರು ಭತ್ತದ ಒಕ್ಕಲು ಮಾಡುತ್ತಿದ್ದಾರೆ. ಕಣದ ತುಂಬಾ ಭತ್ತದ ರಾಶಿ ಹಾಕಿದ್ದಾರೆ. ಏಕಾಏಕಿ ಅಕಾಲಿಕ ಮಳೆ ಸುರಿದರೆ ಭತ್ತ, ಹುಲ್ಲನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಅಡಿಕೆ ಕೊಯ್ಲಿನ ಸಂದರ್ಭದ ಆರಂಭದ ದಿನಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಂಗೆಟ್ಟಿದ್ದ ರೈತ ಸಮೂಹ ಅಡಿಕೆ ಕೊಯ್ಲು ತೊಂದರೆಗಳ ನಡುವೆಯೇ ಮುಗಿಸಿ, ಭತ್ತದ ಒಕ್ಕಲು ಮಾಡಲು ಮುಂದಾಗಿದ್ದರು. ಆದರೆ, ಈ ಸಂದರ್ಭದಲ್ಲಿಯೂ ಮಳೆ ಬೀಳುವ ಸೂಚನೆ ಹೆಚ್ಚಾಗಿರುವುದರಿಂದ ದಿಕ್ಕೆಟ್ಟ ರೈತರು ಹೇಗಾದರೂ ಮಾಡಿ ವರ್ಷವಿಡೀ ದುಡಿದು ಸಂರಕ್ಷಿಸಿಕೊಂಡ ಬೆಳೆಯನ್ನು ಒಪ್ಪ ಮಾಡಲು ಒಕ್ಕಲು ಯಂತ್ರಗಳ ಮೊರೆ ಹೋಗುತ್ತಿದ್ದಾರೆ.

ಒಕ್ಕಲು ಕಣದಲ್ಲಿ ಭತ್ತದ ಬಣವೆಗಳನ್ನು ಕಿತ್ತುಹಾಕಿ ಒಕ್ಕಲು ಮಾಡಲು ಮುಂದಾದ ತಾಲ್ಲೂಕಿನ ಮಂಡಗದ್ದೆ, ಬೆಜ್ಜವಳ್ಳಿ, ತೂದೂರು, ಮಾಳೂರು ಮೊದಲಾದ ಪ್ರದೇಶದಲ್ಲಿ ಗುರುವಾರ ಬಿದ್ದ ಅಕಾಲಿಕ ಮಳೆಯಿಂದ ಭತ್ತ ಹಾಗೂ ಹುಲ್ಲು ಒದ್ದೆಯಾಗಿದೆ. ಮತ್ತೆಮತ್ತೆ ಮಳೆ ಬೀಳುವ ಸೂಚನೆಯೇ ಹೆಚ್ಚಾಗಿರುವುದರಿಂದ ಅತ್ತ ಒಕ್ಕಲು ಮುಂದುವರಿಸಲೂ ಆಗದೇ ಇತ್ತ ನಿಲ್ಲಿಸಲೂ ಆಗದೇ ರೈತರು ಪೇಚಾಟಕ್ಕೆ ಸಿಲುಕಿದ್ದಾರೆ.

ಅತೀ ಶೀಘ್ರವಾಗಿ ಒಕ್ಕಲು ಮುಗಿಸಲು ಇರುವ ಭತ್ತ ಒಕ್ಕಣೆ ಯಂತ್ರಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಸಾಂಪ್ರದಾಯಿಕವಾಗಿ ಎತ್ತುಗಳನ್ನು ಬಳಸಿ ರೋಣಗಲ್ಲಿನ ಮೂಲಕ ಒಕ್ಕಲು ಮಾಡಲು ಹೆಚ್ಚು ದಿನ ಬೇಕಾಗಿರುವುದರಿಂದ ಈ ಪದ್ಧತಿಯನ್ನು ಬಹುತೇಕ ರೈತರು ಕೈಬಿಟ್ಟು ಬಹಳ ಬೇಗ ಕೆಲಸ ಮುಗಿಸಿ ಭತ್ತ ಹುಲ್ಲು ಬೇರೆ ಮಾಡುವ ಯಂತ್ರದ ಮೊರೆ ಹೋಗಿದ್ದಾರೆ. ಆದರೆ, ಈ ಯಂತ್ರಗಳ ಲಭ್ಯತೆ ರೈತರ ಬೇಡಿಕೆಗೆ ಅನುಗುಣವಾಗಿಲ್ಲ. ಅಕಾಲಿಕ ಮಳೆ ವಾತಾವರಣ ಇರುವುದರಿಂದ ಆದಷ್ಟು ಬೇಗ ಒಕ್ಕಲು ಮುಗಿಸಿ ಭತ್ತವನ್ನು ಜೋಪಾನ ಮಾಡಬೇಕಾದ ಪರಿಸ್ಥಿತಿ ಬಹುತೇಕ ರೈತರದ್ದಾಗಿದೆ.

ಅಕಾಲಿಕ ಮಳೆಯಿಂದ ಬೆಳೆಯನ್ನು ಸಂರಕ್ಷಿಸಿಡಲು ಕೆಲವು ಕಡೆಗಳಲ್ಲಿ ಸರ್ಕಾರ ಗೋದಾಮುಗಳನ್ನು, ಒಕ್ಕಲು ಕಣಗಳನ್ನು ನಿರ್ಮಿಸಿದೆ. ಆದರೆ, ರೈತರು ಬೆಳೆದ ಬೆಳೆಯನ್ನು ಒಕ್ಕಲು ಕಣದಲ್ಲಿಯೇ ಬಣವೆ ಹಾಕುವ ಪದ್ಧತಿ ಮಲೆನಾಡಿನಲ್ಲಿ ಇರುವುದರಿಂದ ಗೋದಾಮುಗಳು ರೈತರಿಗೆ ಹೆಚ್ಚಿನ ನೆರವಿಗೆ ಬರುತ್ತಿಲ್ಲ ಎಂಬ ಅಭಿಪ್ರಾಯ ರೈತ ಸಮೂಹದಿಂದ ವ್ಯಕ್ತವಾಗುತ್ತಿದೆ.

ವಾತಾವರಣದ ವೈಪರೀತ್ಯದಿಂದ ಉಂಟಾಗುವ ಅಕಾಲಿಕ ಮಳೆಯ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಯನ್ನು ಸಂರಕ್ಷಿಸಿಕೊಳ್ಳಲು ನೆರವಾಗುವಂತೆ ಕೃಷಿ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಸಜ್ಜಿತ ಒಕ್ಕಲು ಕಣಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಿಸಿ, ಒಕ್ಕಲು ಕಾರ್ಯವನ್ನು ಸರಾಗವಾಗಿ ನಡೆಸುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಅಭಿಪ್ರಾಯವನ್ನು ಅನೇಕ ರೈತರು ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT