ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Last Updated 8 ಜನವರಿ 2012, 19:05 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ ಪೊಲೀಸರು ದಾಖಲು ಮಾಡಿರುವ ಪ್ರಥಮ ಮಾಹಿತಿ ವರದಿ ಹಾಗೂ ಅದರ ಅನ್ವಯ ನಡೆಯುತ್ತಿರುವ ತನಿಖೆಯ ರದ್ದತಿಗೆ ಕೋರಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ವಾದ, ಪ್ರತಿವಾದಗಳನ್ನು ಆಲಿಸಿ ಮುಗಿಸಿರುವ ನ್ಯಾಯಮೂರ್ತಿ ಎನ್. ಆನಂದ ತೀರ್ಪನ್ನು ಕಾಯ್ದಿರಿಸಿದರು.

ಇಲ್ಲದ ದಾಖಲೆಯ ವಾದ ಸಲ್ಲ: ಕುಮಾರಸ್ವಾಮಿ ಅವರು 150 ಕೋಟಿ ರೂಪಾಯಿ ಗಣಿ ಹಗರಣದಲ್ಲಿ ಶಾಮೀಲು ಆಗಿದ್ದಾರೆ ಎಂದು ಖುದ್ದು ವಾದ ಮಂಡಿಸುತ್ತಿರುವ ಅಬ್ರಹಾಂ ಅವರು ತಿಳಿಸಿದರು. ಇದು ಸದನದಲ್ಲಿ ಕೂಡ ತೀವ್ರ ಚರ್ಚೆಗೆ ಒಳಗಾಗಿತ್ತು ಎಂದರು.

ಅದಕ್ಕೆ ನ್ಯಾಯಮೂರ್ತಿಗಳು `ಅದನ್ನು ಚರ್ಚೆ ಮಾಡಿದವರು ಯಾರು~ ಎಂದು ಪ್ರಶ್ನಿಸಿದರು. `ಮಾಜಿ ಸಚಿವ ಜನಾರ್ದನ ರೆಡ್ಡಿ~ ಎಂಬ ಉತ್ತರ ಬಂತು. `ಅವರೆಲ್ಲಿದ್ದಾರೆ~ ನ್ಯಾಯಮೂರ್ತಿಗಳ ಪ್ರಶ್ನೆ. `ಜೈಲಿನಲ್ಲಿ~ ಎಂದರು ಅಬ್ರಹಾಂ.

`ಅವರೇ ಜೈಲಿನಲ್ಲಿದ್ದಾರೆ. ಅಂತಹ ವ್ಯಕ್ತಿಯ ಹೇಳಿಕೆ ಆಧಾರದ ಮೇಲೆ ಈ ಆರೋಪ ಮಾಡುತ್ತಿದ್ದೀರಾ. ಈ ಕುರಿತು ಯಾವುದಾದರೂ ದಾಖಲೆ ನಿಮ್ಮಲ್ಲಿ ಇದೆಯಾ~ ಎಂದು ನ್ಯಾಯಮೂರ್ತಿಗಳುಪ್ರಶ್ನಿಸಿದರು.
ಅದಕ್ಕೆ ಅಬ್ರಹಾಂ `ಇಲ್ಲ. ಆದರೆ ಒಂದು ವೇಳೆ ತನಿಖೆ ಮುಂದುವರಿದರೆ ಇದು ಬಹಿರಂಗಗೊಳ್ಳಲಿದೆ. ಆದುದರಿಂದ ಕುಮಾರಸ್ವಾಮಿ ಅವರ ಅರ್ಜಿ ವಜಾಗೊಳಿಸಿ~ ಎಂದರು.

ಅದಕ್ಕೆ ನ್ಯಾಯಮೂರ್ತಿಗಳು, `ಈ ಹಣ ಕೊಟ್ಟವರು ಯಾರು, ಪಡೆದುಕೊಂಡವರು ಯಾರು ಎನ್ನುವುದೇ ತಿಳಿದಿಲ್ಲ. ಲೋಕಾಯುಕ್ತ ಪೊಲೀಸರು ಯಾರನ್ನು ಹೋಗಿ ವಿಚಾರಿಸಬೇಕು, ಯಾರ ವಿರುದ್ಧ ತನಿಖೆ ನಡೆಸಬೇಕು~ ಎಂದು ಪ್ರಶ್ನಿಸಿ, `ಇಲ್ಲದ ದಾಖಲೆಗಳನ್ನು ಉದ್ದೇಶಿಸಿ ವಾದ ಮಂಡಿಸಬೇಡಿ~ ಎಂದರು.

ಕುಮಾರಸ್ವಾಮಿ ಪರ ವಾದ ಮಂಡಿಸಿದ ಹಸ್ಮತ್ ಪಾಷಾ, `ಲೋಕಾಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವ ಪೂರ್ವದಲ್ಲಿಯೇ ಈ ದೂರು ದಾಖಲು ಮಾಡಿರುವುದು ಸರಿಯಲ್ಲ~ ಎಂದರು.

ಅದಕ್ಕೆ ಲೋಕಾಯುಕ್ತ ಪರ ವಕೀಲರು, `ದೂರು ನೀಡಿದ ಮೂರು ತಿಂಗಳ ಒಳಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡದಿದ್ದಾಗ ಸಾಮಾನ್ಯ ಪ್ರಜೆಯೊಬ್ಬ ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ~ ಎಂದರು.

ಎಚ್.ಡಿ. ಕುಮಾರಸ್ವಾಮಿ  ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಂತಕಲ್ ಗಣಿ ಕಂಪೆನಿಗೆ ಕಾನೂನು ಬಾಹಿರವಾಗಿ ಗಣಿ ಗುತ್ತಿಗೆ ನವೀಕರಣಕ್ಕೆ ಶಿಫಾರಸು ಮಾಡಿರುವ ಆರೋಪದ ವಿವಾದ ಇದಾಗಿದೆ.

`ಇದೆಂಥ ಪದ್ಧತಿ ನೋಡಿ...!~
`ಅಧೀನ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುವುದು ಸರ್ಕಾರ. ಆ ನ್ಯಾಯಾಧೀಶ ವಿಶೇಷ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳ್ಳುತ್ತಾರೆ. ಅವರನ್ನು ನೇಮಕ ಮಾಡಿರುವ ಮುಖ್ಯಮಂತ್ರಿಗಳೇ ಅವರ ಮುಂದೆ ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತಾರೆ. ನಮ್ಮದು ಇದೆಂಥ ಕಾನೂನಿನ ಪದ್ಧತಿ ನೋಡಿ~ ಎಂದು ನ್ಯಾ.ಆನಂದ ವಿಚಾರಣೆ ವೇಳೆ ವಿಷಾದ ವ್ಯಕ್ತಪಡಿಸಿದರು.  `ಇದನ್ನು ನಾನು ನ್ಯಾಯಮೂರ್ತಿಯಾಗಿ ಹೇಳುತ್ತಿಲ್ಲ. ಬದಲಿಗೆ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ~ ಎಂದು ಕಾನೂನು ಪದ್ಧತಿಯ ವಾಸ್ತವಿಕ ಸ್ಥಿತಿಯ ಕುರಿತು ಮಾರ್ಮಿಕವಾಗಿ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT