ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನಕಾಯಿ ತ್ಯಾಜ್ಯ ಸಂಸ್ಕರಣೆ ಘಟಕ ದುರ್ನಾತ: ದೂರು

Last Updated 10 ಡಿಸೆಂಬರ್ 2013, 8:35 IST
ಅಕ್ಷರ ಗಾತ್ರ

ಕೆಜಿಎಫ್‌: ರಾಬರ್ಟಸನ್‌ಪೇಟೆಯ ಬೋರಿಲಾಲ್‌ಪೇಟೆ ಮನೆಯೊಂದ­ರಲ್ಲಿ ಅಕ್ರಮವಾಗಿ ನಡೆಸುತ್ತಿರುವ ತೆಂಗಿನ ಕಾಯಿ ತ್ಯಾಜ್ಯ ಸಂಸ್ಕರಣೆ­ಯಿಂದ ಇಡೀ ಪ್ರದೇಶ ದುರ್ವಾಸನೆ­ಯಿಂದ ಕೂಡಿದ್ದು, ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಬೋರಿಲಾಲ್‌ಪೇಟೆಯ ಹೃದಯಭಾಗದಲ್ಲಿರುವ ಎರಡು ಅಂತಸ್ತುಗಳ ಮನೆಯ ಛಾವಣಿ ಮೇಲೆ ವ್ಯಾಪಾರಿಯೊಬ್ಬರು ಕೊಳೆತ ತೆಂಗಿನಕಾಯಿಗಳಿಂದ ಉರುವಲು ಸಾಧನ ಮತ್ತು ಎಣ್ಣೆ ತೆಗೆಯುತ್ತಿ­ದ್ದಾರೆ. ಈ ಕಾರ್ಯಕ್ಕೆ ಒಣಗಿದ, ಕೊಳೆತ ತೆಂಗಿನಕಾಯಿಗಳನ್ನು ಅರ್ಧ ಉರಿಸಿ ಹಾಗೆಯೇ ಬಿಡುತ್ತಿದ್ದಾರೆ. ಕೊಳೆತ ತೆಂಗಿನ ಕಾಯಿಗಳನ್ನು ಒಣಗಿಸುತ್ತಿದ್ದಾರೆ. ನಂತರ ಅದರಿಂದ ಎಣ್ಣೆ ತೆಗೆಯುವ ಕೆಲಸ ನಡೆಯುತ್ತಿದೆ. ತೆಂಗಿನಕಾಯಿ ಸುಡು­ವುದರಿಂದ ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ತೆಂಗಿನ ಚಿಪ್ಪನ್ನು ಒಣಗಿಸಿ ಅದನ್ನು ಅರ್ಧಕ್ಕೆ ಬಿಡುತ್ತಾರೆ. ಅದನ್ನು ಸ್ವರ್ಣ­ಕಾರರಿಗೆ ಮಾರಾಟ ಮಾಡ­ಲಾಗುತ್ತದೆ. ಅಕ್ಕಸಾಲಿಗರು ಚಿನ್ನ ಕರಗಿಸಲು, ಹೊಳಪು ನೀಡಲು ಈ ಚಿಪ್ಪನ್ನು ಉಪಯೋಗಿಸುತ್ತಾರೆ. ಈ ಚಿಪ್ಪು ಅತ್ಯಂತ ಶಾಖವನ್ನು ಹೊರಸೂಸುವುದರಿಂದ ಚಿಪ್ಪಿಗೆ ಬಹುಬೇಡಿಕೆ. ಒಳ್ಳೆ ಲಾಭದಾಯಕ­ವಾದ ಕೆಲಸವನ್ನು ನಿಲ್ಲಿಸಲು ಮನೆಯವರು ಒಪ್ಪುತ್ತಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.

ಒಣಗಿದ ತೆಂಗಿನಕಾಯಿಯಿಂದ ಎಣ್ಣೆ ತೆಗೆಯುವ ಕಾರ್ಯ ನಡೆಯುವಾಗ ಬರುವ ದುರ್ವಾಸನೆಯಿಂದ ಜನ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಬಾಡಿಗೆ ಮನೆಯಾದರೆ ಬಿಟ್ಟು ಬೇರೆ ಕಡೆ ಹೋಗಬಹುದು. ಸ್ವಂತ ಮನೆಯಾದ್ದರಿಂದ ಬೇರೆ ಕಡೆ ಎಲ್ಲಿಗೆ ಹೋಗುವುದು. ನಗರಸಭೆ ಅಧಿಕಾರಿಗಳ ತಾತ್ಸಾರ ಮನೋಭಾವದಿಂದ ಸಾಮೂಹಿಕ ಕಾಯಿಲೆಗೆ ಒಳಗಾಗುವ ಪರಿಸ್ಥಿತಿ ಬಂದಿದೆ ಎಂದು ನಿಸ್ಸಹಾಯಕ ಜನ ದೂರುತ್ತಾರೆ. ಸಂಜೆ ನಂತರವಂತೂ ವಾಸನೆಯ ಪ್ರಮಾಣ ಹೆಚ್ಚುತ್ತದೆ.

ಒಂದೆಡೆ ಸಯನೈಡ್‌ ದೂಳು, ಮತ್ತೊಂದೆಡೆ ತೆಂಗಿನ ಚಿಪ್ಪಿನ ದುರ್ವಾಸನೆ ನಿವಾರಣೆ ಮಾಡುವಂತೆ ಕೋರಿದರೂ ನಮ್ಮಂತಹ ಜನರ ಮಾತನ್ನು ಯಾರು ಕೇಳುತ್ತಾರೆ ಎಂದು ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಈ ಭಾಗದ ನಿವಾಸಿಗಳು ನಿಟ್ಟುಸಿರು ಬಿಡುತ್ತಾರೆ.

ಈ ಸಂಬಂಧ ಬಡಾವಣೆಯನ್ನು ಪ್ರತಿನಿಧಿಸುತ್ತಿರುವ ನಗರಸಭೆ ಸದಸ್ಯೆ ಇಂದ್ರಾಣಿ ಲಿಖಿತವಾಗಿ ದೂರನ್ನು ಸಲ್ಲಿಸಿ ದುರ್ವಾಸನೆಯನ್ನು ನಿಲ್ಲಿಸುವಂತೆ ಕೋರಿದ್ದಾರೆ.

ಅಸಹನೀಯ ವಾತಾವರಣದಿಂದ ಬೇಸತ್ತುಹೋಗಿರುವ ಸಾರ್ವಜನಿಕರು ಸಹ ರಾಬರ್ಟಸನ್‌ಪೇಟೆ ಪೊಲೀಸರಿಗೆ ದೂರನ್ನು ನೀಡಿ, ಪರಿಸರ ಹಾನಿ ಮತ್ತು ನಾಗರಿಕರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಸಂಸ್ಕರಣ ಘಟಕದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT