ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಂದರೆಯಲ್ಲಿ ತೊಂಡಿಹಾಳ ಗ್ರಾಮ

Last Updated 11 ಅಕ್ಟೋಬರ್ 2011, 8:40 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ಸರಹದ್ದಿನ ಅಂಚಿನಲ್ಲಿರುವ ಅಭಿವೃದ್ಧಿ ವಂಚಿತ ತೋಡಿಹಾಳ ಗ್ರಾಮಸ್ಥರಿಂದ ಹಲವು ಬೇಕು ಬೇಡಿಕೆಗಳ ಒತ್ತಾಯ ನಿರಂತರವಾಗಿ ಕೇಳಿಬರುತ್ತಿದ್ದರೂ ಯಾವುದೇ ಪ್ರಯೋಜನವಾಗದೇ ಗ್ರಾಮದ ಜನತೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಯಲಬುರ್ಗಾದಿಂದ ಸುಮಾರು 15-20 ಕಿ.ಮೀ. ಅಂತರದಲ್ಲಿರುವ ತೊಂಡಿಹಾಳ ಜನತೆಗೆ ಸಮರ್ಪಕ ಸಾರಿಗೆ ವ್ಯವಸ್ಥೆಯಾಗಲಿ, ಕುಡಿಯುವ ನೀರಿನ ಪೂರೈಕೆಯಾಗಲಿ, ಶಾಲಾ ಕೊಠಡಿಯಾಗಲಿ, ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಆಸ್ಪತ್ರೆಯಾಗಲಿ, ಸಾರ್ವಜನಿಕ ಶೌಚಾಲಯವಾಗಲಿ ಹೀಗೆ ತೀರಾ ಅಗತ್ಯವಾಗಿ ಬೇಕಾದ ಮೂಲ ಸೌಲಭ್ಯಗಳು ಈ ಗ್ರಾಮಸ್ಥರಿಗೆ ದೊರೆಯದೆ ಇಲ್ಲಿ ಜನ ಜೀವನ  ಅತಂತ್ರ ಸ್ಥಿತಿ ತಲುಪಿದೆ ಎಂದು ನಾಗೇಶಪ್ಪ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆಗುಂಟಾ ಕೊಳಚೆ ನೀರು, ಸಾಮೂಹಿಕ ಶೌಚ! ಸಾಲು ಸಾಲಾಗಿ ತಿಪ್ಪೆಗುಂಡಿಗಳ ರಾಶಿ, ಹೀಗೆ ಸಂಪೂರ್ಣವಾಗಿ ಕೊಳಗೇರಿಯಂತಿರುವ ಈ ಗ್ರಾಮದ ಬಹುತೇಕ ಓಣಿಯಲ್ಲಿ ದಿನಬಳಕೆ ನೀರು ಸುಲಭವಾಗಿ ಮುಂದಕ್ಕೆ ಹರಿದು ಹೋಗಲು ಸಾಧ್ಯವಾಗದೇ ನಿಂತಲ್ಲೆ ನಿಂತು ದುರ್ನಾತ ಹಾಗೂ ಸೊಳ್ಳಗಳ ತಾಣವಾಗಿ ಪರಿಣಮಿಸಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಸಾರ್ವಜನಿಕರು ವಯೋವೃದ್ಧರು ಇಂತಹ ದುರಾವಸ್ಥೆಯ ರಸ್ತೆಯಲ್ಲಿ ಸುಲಭವಾಗಿ ತಿರುಗಾಡುವುದು ಕಷ್ಟವಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗದಿರುವುದು ಸ್ಥಳೀಯ ನಾಗರಿಕರ ಬೇಸರಕ್ಕೆ ಕಾರಣವಾಗಿದೆ.
ನಾಲ್ಕು ವರ್ಷಗಳ ಹಿಂದೆಯೇ ಸಿದ್ಧಗೊಂಡ ಇಲ್ಲಿಯ ಕಿರು ಬಸ್ ನಿಲ್ದಾಣಕ್ಕೆ ಸುಣ್ಣ ಬಣ್ಣ ಹಚ್ಚಿ ಜನರ ಬಳಕೆಗೆ ಅನುಕೂಲ ಮಾಡಿಕೊಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಜನಪ್ರತಿನಿಧಿಗಳ ಬೇಜವಾಬ್ದಾರಿತನ ಹಾಗೂ ಇಚ್ಛಾಶಕ್ತಿಯ ಕೊರತೆಗೆ ಸಾಕ್ಷಿಯಾಗಿದೆ.

ಅರ್ಧಕ್ಕೆ ನಿಂತಿರುವ ಸಮುದಾಯ ಭವನ ಪೂರ್ಣಗೊಂಡಿಲ್ಲ, ನಿರ್ಮಾಣಗೊಂಡು ವರ್ಷ ಕಳೆದರೂ ಉದ್ಘಾಟನೆಗೊಳ್ಳದ ಪಶು ಚಿಕಿತ್ಸಾ ಕೇಂದ್ರ, ಅರೆಬರೆ ಕಲ್ಲುಬಂಡೆ ಜೋಡಣೆ ಹೀಗೆ ಜನತೆಗೆ ಅನುಕೂಲವಾಗುವಂತಹ ಯಾವೊಂದು ಕುರುಹು ಇಲ್ಲಿ ಲಭ್ಯವಿಲ್ಲದಿರುವುದು ಗ್ರಾಮಸ್ಥರ ದೌಭಾಗ್ಯವೇ ಸರಿ.

ಸರಿಯಾದ ಸಮಯಕ್ಕೆ ಬಸ್ ಸೌಲಭ್ಯಗಳಿಲ್ಲದ ಕಾರಣ ಬೆಳಿಗ್ಗೆ ವಿವಿಧೆಡೆ ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ಇದರಿಂದ ಅನೇಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಜನತೆ ಟಂಟಂ ವಾಹನಗಳ ಅವಲಂಬನೆ ಅನಿವಾರ್ಯವಾಗಿದೆ ಎಂಬುದು ಪದವಿ ವಿದ್ಯಾರ್ಥಿ ಶರಣಪ್ಪ ಎಂಬವರ ಅಳಲು.

ಗ್ರಾಮ ಪಂಚಾಯಿತಿ ವತಿಯಿಂದ ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಾಕಷ್ಟು ಅವಕಾಶವಿದ್ದರೂ ಆ ಬಗ್ಗೆ ಚಿಂತಿಸದ ಜನಪ್ರತಿನಿಧಿಗಳು ಅಭಿವೃದ್ಧಿ ಹೆಸರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಬಸ್‌ನಿಲ್ದಾಣದ ಹತ್ತಿರದ ಕಾಲುವೆ ದುರಸ್ತಿ ಹೆಸರಿನಲ್ಲಿ ಸಾಕಷ್ಟು ಸಲ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಜಿ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಗ್ರಾಮ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.

ಈ ನಿಟ್ಟಿನಲ್ಲಿ ಶಾಸಕರು, ಉಸ್ತುವಾರಿ ಸಚಿವರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಉನ್ನತಮಟ್ಟದ ಅಧಿಕಾರಿಗಳು ಗ್ರಾಮದ ಸಮಗ್ರ ಅಭಿವೃದ್ಧಿ ವಿಶೇಷ ಗಮನಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
 -ಉಮಾಶಂಕರ ಬ. ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT