ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಕೋನ ಸ್ಪರ್ಧೆ; ವರ್ಚಸ್ಸಿನ ಪರೀಕ್ಷೆ

Last Updated 30 ಡಿಸೆಂಬರ್ 2010, 11:50 IST
ಅಕ್ಷರ ಗಾತ್ರ

ಮಂಡ್ಯ: ಅಭಿವೃದ್ಧಿಗೂ ಹೆಚ್ಚಾಗಿ ಎಲ್ಲ ಭಾಗಕ್ಕೂ ಸ್ವಲ್ಪಮಟ್ಟಿಗೆ ಅಧಿಕ ಎನ್ನುವಷ್ಟೇ ರಾಜಕಾರಣ ಆವರಿಸಿರುವ ಜಿಲ್ಲೆ ಮಂಡ್ಯ. ರಾಜಧಾನಿಗೆ ಹತ್ತಿರ ವಿದ್ದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮರೀಚಿಕೆ. ಚುನಾವಣೆಗಳಲ್ಲಿ ಅಭಿವೃದ್ಧಿ ಮುಖ್ಯವಾಗಿ ಪ್ರಸ್ತಾಪವಾದರೂ ತದನಂತರ ಅದು ಗೌಣ. ಜಿಲ್ಲೆಯಲ್ಲಿ ಪ್ರಾಬಲ್ಯವುಳ್ಳ ಜೆಡಿಎಸ್, ಪ್ರಾಬಲ್ಯ ಮರಳಿ ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ಜೊತೆಗೆ ಈ ಬಾರಿ ಅದೇ ಅಭಿವೃದ್ಧಿ ಮಂತ್ರದೊಂದಿಗೆ ಒಕ್ಕಲಿಗರ ಕೋಟೆಗೆ ಲಗ್ಗೆ ಇಡಲು ಬಿಜೆಪಿ ಹೆಜ್ಜೆ ಇಟ್ಟಿದೆ. ಪಂಚಾಯತಿ ಚುನಾವಣೆ ಇದೇ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಗೆ ಎಡೆಮಾಡಿಕೊಟ್ಟಿದೆ.

ಪ್ರಾಬಲ್ಯವುಳ್ಳ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸುತ್ತಿವೆ ಎಂಬುದು ಪರೋಕ್ಷವಾಗಿ ಬಿಜೆಪಿ ಕಮಲ ಈ ಬಾರಿ ಅರಳಬಹುದೇನೋ ಎಂಬ ಆತಂಕವು ಆ ಪಕ್ಷಗಳ ಮುಖಂಡರಲ್ಲಿ ಇರುವಂತೆ ಗೋಚರಿಸುತ್ತಿದೆ.ಸಹಜವಾಗೇ ಚುನಾವಣೆ ಬಿಸಿ ತೀವ್ರಗೊಂಡಿದ್ದು, ಹಳ್ಳಿಹಳ್ಳಿಗಳಲ್ಲಿ ಜನ ಪಕ್ಷಗಳೊಂದಿಗೆ ಗುರುತಿಸಿ ಕೊಂಡಿದ್ದು, ಮಾನಸಿಕವಾಗಿ ಗುಂಪುಗಳಾಗಿದ್ದಾರೆ. ಒಂದು ಪಕ್ಷದ ಜೊತೆ ಗುರುತಿಸಿಕೊಂಡರೇ ಇನ್ನೊಬ್ಬರಿಗೆ ನಿಷ್ಠುರ ಎಂದು ಭಾವಿಸಿರುವ ಕೆಲ ಯುವಕರು ಹಗಲ ಹೊತ್ತು ಜಮೀನಿನತ್ತ ನಡೆಯುತ್ತಾರೆ.

ಚುನಾವಣಾ ಪ್ರಚಾರದ ಅಬ್ಬರದಲ್ಲಿ ಮೂರು ಪಕ್ಷಗಳದು ಸಮಬಲ. ತ್ರಿಕೋನ ಸ್ಪರ್ಧೆಯಲ್ಲಿ ಸ್ಪರ್ಧೆಗೆ ಬಿದ್ದಂತೆ ಮೂರೂ ಪಕ್ಷಗಳು ಅಭಿವೃದ್ಧಿ ಕನಸಿನ ಚಿತ್ತಾರ ಬಿಡಿಸುತ್ತಿವೆ. ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಅವರ ವರ್ಚಸ್ಸನ್ನು ಆಯಾ ಪಕ್ಷಗಳು ಓರೆಗೆ ಹಚ್ಚಿವೆ. ಈ ಚುನಾವಣೆ ಜಿಲ್ಲೆಯಲ್ಲಿ ಇವರ ವರ್ಚಸ್ಸು, ಪ್ರಾಬಲ್ಯ ಗುರುತಿಸಲು ಅಳತೆಗೋಲು ಆಗಲಿದೆ.

ಇದೇ ಕಾರಣದಿಂದ ಚುನಾವಣೆಯು ಒಟ್ಟು ಕುತೂಹಲವನ್ನು ಹೆಚ್ಚಿಸಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಸಂಸದ ಅಂಬರೀಷ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಚೇತರಿಕೆ ನೀಡಲು ಮುಂದಾಗಿದ್ದಾರೆ. ಜಿಲ್ಲಾ ಪಂಚಾಯಿತಿ 40 ಮತ್ತು ಏಳು ತಾಲ್ಲೂಕು ಪಂಚಾಯಿತಿಗಳ ಒಟ್ಟು 152 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್, ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಒಂದೆರಡು ತಾಲ್ಲೂಕಿನಲ್ಲಿ ರೈತಸಂಘದ ಜೊತೆ ಮೈತ್ರಿ ಮಾಡಿಕೊಂಡಿದ್ದು, ನಾಯಕತ್ವ, ಸಂಪರ್ಕದ ಗೊಂದಲದ ಹಿನ್ನೆಲೆಯಲ್ಲಿ ಎರಡು ಕಡೆ ಇಬ್ಬರು ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ್ದರೆ, ಒಂದು ಕಡೆ ಅಭ್ಯರ್ಥಿಯನ್ನೇ ಕಣಕ್ಕಿಳಿಸಿಲ್ಲ.

ಒಟ್ಟು 40 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಹಾಲಿ 20ರಲ್ಲಿ ಜೆಡಿಎಸ್, 15ರಲ್ಲಿ ಕಾಂಗ್ರೆಸ್, 4ರಲ್ಲಿ ಎಐಪಿಜೆಡಿ ಮತ್ತು ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಕಾಲಾನಂತರ ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಜಯಗಳಿಸಿತ್ತು.ಚುನಾವಣೆಯಲ್ಲಿ ಈಗ ಪರಸ್ಪರ ವಾಗ್ದಾಳಿಯಲ್ಲಿ ತೊಡಗಿರುವ ಪಕ್ಷಗಳು, ಮಳವಳ್ಳಿ, ಮಂಡ್ಯ (ಕಾಂಗ್ರೆಸ್) ಮತ್ತು ನಾಗಮಂಗಲ (ಜೆಡಿಎಸ್) ಹೊರತುಪಡಿಸಿದರೆ ಉಳಿದ ಪಂಚಾಯಿತಿಗಳಲ್ಲಿ ಅಧಿಕಾರ ಅನುಭವಿಸಲು ಪರಸ್ಪರ ಕೈಜೋಡಿಸಿವೆ. ಕಾಂಗ್ರೆಸ್-ಜೆಡಿಎಸ್ (ಮದ್ದೂರು, ಕೆ.ಆರ್.ಪೇಟೆ), ಕಾಂಗ್ರೆಸ್-ಜೆಡಿಎಸ್, ‘ಆಪರೇಷನ್ ಕಮಲ’ ಮೂಲಕ ಬಿಜೆಪಿ (ಶ್ರೀರಂಗಪಟ್ಟಣ) ಅಧಿಕಾರಕ್ಕಾಗಿ ರಾಜಕೀಯ ತಂತ್ರಗಾರಿಕೆಯನ್ನು ಮೆರೆದಿವೆ.

ಇನ್ನು ಸ್ಥಳೀಯವಾಗಿ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸೋತಿರುವ ಅಂಬರೀಶ್ (ಕಾಂಗ್ರೆಸ್), ಜಿಲ್ಲೆಯ ಮಟ್ಟಿಗೆ ಪಕ್ಷದ ಮೇಲೆ ಸ್ಪಷ್ಟ ಹಿಡಿತ ಹೊಂದಿರುವ ಸಂಸದ ಚಲುವರಾಯಸ್ವಾಮಿ (ಜೆಡಿಎಸ್) ಮತ್ತು ಒಕ್ಕಲಿಗರ ಕೋಟೆ ಭೇದಿಸುವ ಉದ್ದೇಶದಿಂದಲೇ ಬಿಜೆಪಿ ಸರ್ಕಾರ ಉಸ್ತುವಾರಿ ಸಚಿವರಾಗಿ ನೇಮಿಸಿರುವ ಗೃಹ ಸಚಿವ ಆರ್.ಅಶೋಕ್ ಅವರಿಗೆ ಈ ಚುನಾವಣೆ ನಿಜವಾದ ಅರ್ಥದಲ್ಲಿ ಪ್ರತಿಷ್ಠೆಯ ಪ್ರಶ್ನೆ.

ಹಣದ ಹರಿವು ಪ್ರಮುಖವಾಗಿರುವ ಚುನಾವಣೆ ಯಲ್ಲಿ ಮೂರು ಪಕ್ಷಗಳಲ್ಲೂ ಕಾರ್ಯಕರ್ತರ ಉತ್ಸಾಹ ಮೇರೆ ಮೀರಿದೆ. ಮೇಲ್ನೋಟಕ್ಕೆ ಅದೇ ಉತ್ಸಾಹ ಮತದಾರರಲ್ಲಿ ಕಾಣಿಸುತ್ತಿಲ್ಲ. ಮುಖಂಡರ ಶಕ್ತಿ ಪ್ರದರ್ಶನದ ಬಳಿಕ ಕಾಂಗ್ರೆಸ್ ಈ ಬಾರಿ ಎಷ್ಟು ಸ್ಥಾನ ಮತ್ತು ಮತಗಳನ್ನು ಗಳಿಸಲಿದೆ ಎಂಬು ದರಲ್ಲಿ ಮುಖ್ಯಮಂತ್ರಿಗಳ ಹುಟ್ಟೂರಿನ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯಲಿದೆಯಾ, ಎಷ್ಟು ಸ್ಥಾನ ಗೆಲ್ಲಲಿದೆ ಎಂಬ ಪ್ರಶ್ನೆಗೆ ಉತ್ತರವು ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT