ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಗೆಕೋರರ ವಿರುದ್ಧ ದಾಳಿಗೆ ಗಡಾಫಿ ಕರೆ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಟ್ರಿಪೊಲಿ (ಎಎಫ್‌ಪಿ): `ಏನೇ ಆದರೂ ನಾನು ಶರಣಾಗುವುದಿಲ್ಲ. ಲಿಬಿಯಾ ಹೊತ್ತಿ ಉರಿದರೂ ಸರಿ, ದೀರ್ಘಯುದ್ಧಕ್ಕೆ ನಾನು ಸಿದ್ಧ. ರಾಷ್ಟ್ರದ ಮೇಲೆ ನಿಯಂತ್ರಣ ಸಾಧಿಸಿರುವ ದಂಗೆಕೋರರ ವಿರುದ್ಧ ಗೆರಿಲ್ಲಾ ದಾಳಿ ನಡೆಸಿ~ ಎಂದು ನಿಗೂಢ ಸ್ಥಳದಲ್ಲಿ ಅಡಗಿರುವ ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ  ಕರೆ ನೀಡಿದ್ದಾರೆ.

ತಾವು ಅಧಿಕಾರಕ್ಕೆ ಬಂದ 42ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ, ಸಿರಿಯಾದ ಅರ್ರೈ ಒರುಬ ಎಂಬ ಉಪಗ್ರಹ ವಾಹಿನಿಯಲ್ಲಿ ಬಿತ್ತರವಾದ ಧ್ವನಿಮುದ್ರಿತ ಭಾಷಣದಲ್ಲಿ ಅವರು ಹೀಗೆ ಹೇಳಿದ್ದಾರೆ.

`ನಮ್ಮ ತೈಲ ಬಾವಿ ಹಾಗೂ ಬಂದರುಗಳು ಪಶ್ಚಿಮ ರಾಷ್ಟ್ರಗಳ ಅಧೀನವಾಗಲು ಅವಕಾಶ ನೀಡುವುದಿಲ್ಲ. ನಮ್ಮ ಪ್ರತಿರೋಧ ವ್ಯಾಪಕವಾಗಲಿದೆ. ಶತ್ರು ಲಿಬಿಯಾದವನೇ ಆಗಿರಲಿ ಅಥವಾ ವಿದೇಶೀಯನೇ ಆಗಿರಲಿ, ಎಲ್ಲೇ ಇದ್ದರೂ ಕೊಲ್ಲುವುದೇ ಗುರಿ~ ಎಂದು 69 ವರ್ಷದ ಕರ್ನಲ್ ಗುಡುಗಿದ್ದಾರೆ. ಒಂದು ದಿನದ ಅವಧಿಯಲ್ಲಿ ಈ ಭಾಷಣ ವಾಹಿನಿಯಲ್ಲಿ ಎರಡು ಬಾರಿ ಪ್ರಸಾರವಾಗಿದೆ.

ಲಿಬಿಯಾದಲ್ಲಿ ಬಂಡುಕೋರರ ನೇತೃತ್ವದ ರಾಷ್ಟ್ರೀಯ ಸ್ಥಿತ್ಯಂತರ ಮಂಡಲಿಯ (ಎನ್‌ಟಿಸಿ) ಹೊಸ ಆಡಳಿತ ರಚನೆಗೆ ಅನುವು ಮಾಡಿಕೊಡಲು ಫ್ರಾನ್ಸ್, ಬ್ರಿಟನ್ ಮತ್ತಿತರ ಮಿತ್ರ ರಾಷ್ಟ್ರಗಳ ಮಹತ್ವದ ಸಮಾವೇಶ ಪ್ಯಾರಿಸ್‌ನಲ್ಲಿ ನಡೆದಿರುವ ಸಂದರ್ಭದಲ್ಲೇ ಅವರು ಹೀಗೆ ಹೇಳಿದ್ದಾರೆ.

`ನನ್ನ ಧ್ವನಿ ನಿಮ್ಮ ಕಿವಿಗೆ ಬಿದ್ದರೂ ಸರಿ, ಬೀಳದಿದ್ದರೂ ಸರಿ. ಪ್ರತಿರೋಧ ಮುಂದುವರಿಸಿ... ನಾವು ಶರಣಾಗುವುದಿಲ್ಲ. ನಾವೇನೂ ಹೆಣ್ಣಿಗರಲ್ಲ. ಯುದ್ಧವನ್ನು ನಿರಂತರ ಮುಂದುವರಿಸುತ್ತೇವೆ. ಅವರಿಗೆ ದೀರ್ಘಯುದ್ಧ ಬೇಕಾದರೆ ಅದೂ ನಡೆದುಹೋಗಲಿ. ಲಿಬಿಯಾ ಹೊತ್ತಿ ಉರಿಯಲು ಆರಂಭಿಸಿದರೆ ಯಾರು ಆಳ್ವಿಕೆ ನಡೆಸುತ್ತಾರೆ? ಹೀಗಾಗಿ ಹೊತ್ತಿ ಉರಿಯಲಿ~ ಎಂದು ಅವರು ಧ್ವನಿಸಂದೇಶದಲ್ಲಿ ಹೇಳಿದ್ದಾರೆ.

ತಮ್ಮ ಜನ್ಮಸ್ಥಳ ಸಿರ್ಟೆಯು ಅಭೇದ್ಯ ಎಂಬ ವಿಶ್ವಾಸವನ್ನೂ ಗಡಾಫಿ  ಇದೇ ವೇಳೆ ವ್ಯಕ್ತಪಡಿಸಿದ್ದಾರೆ.
ಬಂಡುಕೋರ ಪ್ರಮುಖರು ಗಡಾಫಿ  ಅವರ ಈ ಕರೆಯನ್ನು ಉಪೇಕ್ಷಿಸಿದ್ದಾರೆ. ತಮ್ಮ  ನಿರಂಕುಶತ್ವದ ವಿರುದ್ಧದ ಹೋರಾಟ ಯಶಸ್ವಿಯಾಗಿರುವುದರಿಂದ ಗಡಾಫಿ ಎಷ್ಟು ಹತಾಶರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಬಂಡುಕೋರ ಪ್ರಮುಖರೊಬ್ಬರು ಹೇಳಿದ್ದಾರೆ.

ಅಮೆರಿಕ ಕೋರಿಕೆ
ವಾಷಿಂಗ್ಟನ್: ಲಿಬಿಯಾದಲ್ಲಿ ಎನ್‌ಟಿಸಿ ನೇತೃತ್ವದಲ್ಲಿ ರೂಪುಗೊಳ್ಳಲಿರುವ ಹೊಸ ಆಡಳಿತಕ್ಕೆ ಎಲ್ಲ ಸಹಕಾರ ನೀಡುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದ್ದಾರೆ.

ಇದೇ ವೇಳೆ ಲಿಬಿಯಾ ನಾಗರಿಕರು ದಾಳಿ ಭಯದಿಂದ ಮುಕ್ತರಾಗುವ ತನಕ ಗಡಾಫಿ ಪಡೆಯನ್ನು ಗುರಿಯಾಗಿಸಿಕೊಂಡು ನ್ಯಾಟೊ ಪಡೆಗಳ ವಾಯುದಾಳಿ ಮುಂದುವರಿಯಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಯುದ್ಧ ಗೆದ್ದರೆ ಶಾಂತಿ ಸಾಧಿಸಿದಂತೆ ಎಂದೇನೂ ಹೇಳಲಾಗದು. ಆದರೆ ಲಿಬಿಯಾದಲ್ಲಿ ಎನ್‌ಟಿಸಿ ಅಧಿಕಾರಕ್ಕೆ ಬರಲು ಅಮೆರಿಕ ಎಲ್ಲ ರೀತಿಯ ನೆರವು ನೀಡಲಿದೆ ಎಂದು `ಲಿಬಿಯಾ ಮಿತ್ರರ ಸಮಾವೇಶ~ದಲ್ಲಿ ಹೇಳಿದ್ದಾರೆ.

ಜರ್ಮನಿಯಿಂದ 100 ಕೋಟಿ ಯೂರೊ ಬಿಡುಗಡೆ
ಬರ್ಲಿನ್ ವರದಿ: ಇದೇ ವೇಳೆ ತಾನು ಮುಟ್ಟುಗೋಲು ಹಾಕಿಕೊಂಡಿರುವ ಗಡಾಫಿಯ 700 ಕೋಟಿ ಯೂರೊ ಪೈಕಿ 100 ಕೋಟಿ ಯೂರೊವನ್ನು ಲಿಬಿಯಾದ ಮಧ್ಯಂತರ ಸರ್ಕಾರಕ್ಕೆ ಬಿಡುಗಡೆ ಮಾಡುವುದಾಗಿ ಜರ್ಮನಿ ಹೇಳಿದೆ.

100 ಕೋಟಿ ಯುರೊ ಬಿಡುಗಡೆ ಮಾಡುವ ಜರ್ಮನಿ ಕೋರಿಕೆಗೆ ವಿಶ್ವಸಂಸ್ಥೆ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ ಎಂದು ಚಾನ್ಸೆಲರ್ ಏಂಜೆಲಾ ಮರ್ಕೆಲ್ ಗುರುವಾರ ಸಂಜೆ ಮುಕ್ತಾಯಗೊಂಡ ಪ್ಯಾರಿಸ್ಸಿನ `ಲಿಬಿಯಾ ಮಿತ್ರರು~ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಲಿಬಿಯಾದಲ್ಲಿ ಮಧ್ಯಂತರ ಸರ್ಕಾರ ರಚಿಸಿರುವ ಎನ್‌ಟಿಸಿ ಗೆ ನೀರು ಸರಬರಾಜು ಪುನರ್‌ವ್ಯವಸ್ಥೆ, ಆಸ್ಪತ್ರೆ, ಸಾರಿಗೆ ಸೇವೆಗಳನ್ನು ಸರಿಪಡಿಸುವ ಉದ್ದೇಶದಿಂದ ಈ ಹಣ ನೀಡುವುದಾಗಿ ಅವರು ಹೇಳಿದ್ದಾರೆ.

ಇದಲ್ಲದೇ, ಮೂಲಭೂತ ಸೌಕರ್ಯ, ಪೊಲೀಸ್ ಪಡೆ ತರಬೇತಿ ಹಾಗೂ ಹೊಸ ಸಂವಿಧಾನ ಕರಡು ಸಿದ್ಧಪಡಿಸುವಲ್ಲಿ ಲಿಬಿಯಾಕ್ಕೆ ದೀರ್ಘಕಾಲೀನ ನೆರವು ನೀಡಲು ಕೂಡ ಜರ್ಮನಿ ಸಿದ್ಧ ಎಂದು ಇದೇ ಸಂದರ್ಭದಲ್ಲಿ ಮರ್ಕೆಲ್ ಹೇಳಿದ್ದಾರೆ.

ಗಡಾಫಿ ತಮ್ಮ ಆಡಳಿತಾವಧಿಯಲ್ಲಿ ವಿದೇಶಿ ಬ್ಯಾಂಕುಗಳಲ್ಲಿ 6000 ಕೋಟಿ ಡಾಲರ್ ಠೇವಣಿ ಇರಿಸಿದ್ದಾರೆಂಬುದು ಒಂದು ಅಂದಾಜು.

ಅಮೆರಿಕವೊಂದರಲ್ಲೇ 3700 ಕೋಟಿ ಡಾಲರ್ ಕಪ್ಪು ಹಣ ಇದೆ ಎನ್ನಲಾಗಿದೆ. ಬ್ರಿಟನ್‌ನಲ್ಲಿ 2000 ಕೋಟಿ ಡಾಲರ್ ಇದ್ದರೆ ಜರ್ಮನಿಯಲ್ಲಿ 1000 ಕೋಟಿ ಡಾಲರ್ ಇದೆ ಎಂಬುದು ತಜ್ಞರ ಲೆಕ್ಕಾಚಾರ.

ಈ ಹಣವು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಷೇರುಗಳ ರೂಪದಲ್ಲಿ, ಬ್ಯಾಂಕುಗಳಲ್ಲಿ ಹಾಗೂ ಆಸ್ತಿ ವಹಿವಾಟಿನಲ್ಲಿ ಹೂಡಿಕೆಯಾಗಿದೆ ಎನ್ನಲಾಗಿದೆ.

ಇನ್ನು ಕೆಲವರ ಪ್ರಕಾರ, ಗಡಾಫಿ ಆಡಳಿತದಲ್ಲಿ 20 ವಿವಿಧ ರಾಷ್ಟ್ರಗಳಲ್ಲಿ ಅಕ್ರಮವಾಗಿ ಹೂಡಿಕೆಯಾಗಿರುವ ಹಣದ ಮೊತ್ತ 15000 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT