ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘ ಕಾಲ ಅಧಿಕಾರ: ಯೆಮನ್‌ನಲ್ಲಿ ಕಾಣಿಸಿದ ಈಜಿಪ್ಟ್ ಛಾಯೆ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸನಾ (ಪಿಟಿಐ, ಐಎಎನ್‌ಎಸ್): ಈಜಿಪ್ಟ್‌ನಲ್ಲಿ ರಕ್ತರಹಿತ ಕ್ರಾಂತಿ ಮೂಲಕ ಅಧ್ಯಕ್ಷರನ್ನು ಪದಚ್ಯುತಿಗೊಳಿಸಿದ ವಿದ್ಯಮಾನದಿಂದ ಪ್ರಭಾವಿತರಾಗಿರುವ ಯೆಮನ್‌ನ ಜನತೆ ಇದೀಗ ತಾವೂ ಕ್ರಾಂತಿ ನಡೆಸುವ ಮೂಲಕ 33 ವರ್ಷಗಳಿಂದ ಅಧಿಕಾರದಲ್ಲಿರುವ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇ ಅವರ ಭ್ರಷ್ಟ ಆಡಳಿತಕ್ಕೆ ಕೊನೆ ಹಾಡಲು ಮುಂದಾಗಿದ್ದಾರೆ.

ರಾಜಧಾನಿ ಸಾನಾದ ಕೇಂದ್ರ ಭಾಗದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಯುವ ಪ್ರತಿಭಟನಾಕಾರರು ಅಧ್ಯಕ್ಷ ಸಲೇ ಅವರು ಮುಬಾರಕ್ ಮಾದರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

‘ಮುಬಾರಕ್ ನಂತರ ಇದೀಗ ಅಲಿ ಅವರ ಸರದಿ’ ಎಂದು 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಶುಕ್ರವಾರ ಇಲ್ಲಿ ಸಾವಿರಾರು ಮಂದಿ ಜಮಾಯಿಸಿ ಈಜಿಪ್ಟ್‌ನಲ್ಲಿ ಮುಬಾರಕ್ ರಾಜೀನಾಮೆ ನೀಡಿದ್ದಕ್ಕೆ ಸಂಭ್ರಮ ಆಚರಿದ್ದರು.

ಸಲೇ ಅವರು 1978ರಿಂದೀಚೆಗೆ ಯೆಮೆನ್‌ನಲ್ಲಿ ಅಧಿಕಾರದಲ್ಲಿದ್ದಾರೆ. ಫೆ.3ರಂದು ಇಲ್ಲಿ ಭಾರಿ ದೊಡ್ಡ ಪ್ರತಿಭಟನೆ ನಡೆದಿತ್ತು. ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಬಳಿಕ ಪರಿಸ್ಥಿತಿ ತಣ್ಣಗಾಗಿತ್ತು.

‘ನಿನ್ನೆ ಟ್ಯುನೀಶಿಯಾ, ಇಂದು ಈಜಿಪ್ಟ್, ನಾಳೆ ಯೆಮನಿಯನ್ನರು ತಮ್ಮ ಸಂಕೋಲೆ ಕಡಿದುಕೊಳ್ಳಲಿದ್ದಾರೆ’ ಎಂಬ ಪ್ರತಿಭಟನಾಕಾರರ ಘೋಷಣೆ ಬಹಳ ಅರ್ಥಗರ್ಭಿತವಾಗಿತ್ತು.

ಟಿವಿ ನೋಡುತ್ತ ಬೆರಗಾದ ಅರಬ್ ಜಗತ್ತು: ವಾಷಿಂಗ್ಟನ್ ವರದಿ:  ಟ್ಯುನೀಶಿಯಾದಲ್ಲಿ ನಡೆದ ರಕ್ತರಹಿತ ಕ್ರಾಂತಿ ಯಶಸ್ವಿಯಾದಾಗ ಜಗತ್ತು ಅಂತಹ ಅಚ್ಚರಿ ವ್ಯಕ್ತಪಸಿರಲಿಲ್ಲ. ಆದರೆ ಅರಬ್ ಜಗತ್ತಿನ ರಾಜಕೀಯ ಮತ್ತು ಸಾಂಸ್ಕೃತಿಕ ಹೃದಯ ಎಂದೇ ಭಾವಿಸಲಾಗಿರುವ ಈಜಿಪ್ಟ್‌ನಲ್ಲಿ ಜನರ ಪ್ರತಿಭಟನೆಗೆ ಭಾರಿ ಯಶಸ್ಸು ಸಿಕ್ಕಿರುವುದಕ್ಕೆ ಇಡೀ ಜಗತ್ತು ಅದರಲ್ಲೂ ಮುಖ್ಯವಾಗಿ ಅರಬ್ ಜಗತ್ತು ಮೂಗಿನ ಮೇಲೆ ಬೆರಳಿಟ್ಟಿದೆ.

ಯಾವುದು ಅಸಾಧ್ಯ ಎಂದು ಭಾವಿಸಲಾಗಿತ್ತೋ ಅದು ಸಾಧ್ಯವಾಗುತ್ತಿರುವುದನ್ನು ಟೆಹರಾನ್‌ನಿಂದ ಡೆಮಾಸ್ಕಸ್ ತನಕ ಜನರು ಟಿವಿ ಮೇಲೆ ನಿಬ್ಬೆರಗಾಗಿ ನೋಡುತ್ತಲೇ ಇದ್ದರು. ಸಾಮಾನ್ಯವಾಗಿ ಅರಬ್ ಲೋಕದಲ್ಲಿ ಬದಲಾವಣೆಯ ಗಾಳಿ ಬೀಸುವುದು ವಿರಳ, ಬೀಸಿದರೂ ಅದಕ್ಕೆ ಅಂತಹ ಯಶಸ್ಸು ಸಿಗುವುದಿಲ್ಲ. ಆದರೆ ಈಜಿಪ್ಟ್ ಕ್ರಾಂತಿ ಈ ಭಾಗದಲ್ಲಿ ಭಾರಿ ಬದಲಾವಣೆಯ ಹಾದಿಯನ್ನು ತೋರಿಸಿಕೊಟ್ಟಿದೆ ಎಂದು ಕ್ರಿಶ್ಚಿಯನ್ ಸೈನ್ಸ್ ಮಾನಿಟರ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

‘ಈಜಿಪ್ಟ್‌ನ ವಿದ್ಯಮಾನವನ್ನು ಅರಬ್ ರಾಷ್ಟ್ರಗಳ ಪ್ರತಿಯೊಬ್ಬರೂ ಟಿವಿ ಮೇಲೆ ಕುತೂಹಲದಿಂದ ನೋಡಿದ್ದಾರೆ. ನೋಡುತ್ತಿದ್ದಾರೆ. ಇನ್ನು ಮುಂದೆ ಅರಬ್ ಜಗತ್ತು ಈ ಮೊದಲಿನಂತೆ ಇರಲು ಸಾಧ್ಯವಿಲ್ಲ’ ಎಂದು ಬ್ರೂಕಿಂಗ್ಸ್ ದೋಹಾ ಸೆಂಟರ್‌ನ ಸಂಶೋಧನಾ ನಿರ್ದೇಶಕ ಶಾದಿ ಹಮೀದ್ ಹೇಳಿದರು.

ಅರಬ್ ಜಗತ್ತಿನಲ್ಲಿ ಮುಬಾರಕ್ ಅವರು ರಾಜಕೀಯ ನಿರಂಕುಶಾಧಿಕಾರದ ಸಾರ್ವಜನಿಕ ಮುಖವಾಗಿದ್ದರು. 50 ಲಕ್ಷ ಸೈನಿಕರ ಬಲಿಷ್ಠ ಸೇನೆಯನ್ನೂ ಅವರು ನಿರ್ಮಿಸಿಕೊಂಡಿದ್ದರು. ಅವರ ನಿರ್ಗಮನದಿಂದಾಗಿ ಅರಬ್‌ನ ದೊರೆಗಳಿಗೆ ನಡುಕ ಉಂಟಾಗಿರುವುದು ಖಂಡಿತ’ ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿನ ಮಧ್ಯಪ್ರಾಚ್ಯ ಕೇಂದ್ರದ ಫವಾಜ್ ಜಾರ್ಜೆಸ್ ಹೇಳುತ್ತಾರೆ.

ಅಲ್ಜೀರಿಯಾದಲ್ಲಿಯೂ ಜನರ ದಂಗೆ

ಅಲ್ಜಿರೀಸ್ (ಎಪಿ): ನಿಷೇಧದ ನಡುವೆಯೂ ಸಾವಿರಾರು ಮಂದಿ ಅಲ್ಜಿರಿಯಾ ರಾಜಧಾನಿ ಅಲ್ಜಿರೀಸ್‌ನಲ್ಲಿ ಸಮಾವೇಶಗೊಂಡು 1999ರಿಂದ ಅಧಿಕಾರದಲ್ಲಿ ಇರುವ ಅಧ್ಯಕ್ಷರ ಪದಚ್ಯುತಿಗೆ ಆಗ್ರಹಿಸಿದರು.

ಈಜಿಪ್ಟ್‌ನ ಅಧ್ಯಕ್ಷ ಹೋಸ್ನಿ ಮುಬಾರಕ್ ಜನರ ಪ್ರತಿಭಟನೆಗೆ ಮಣಿದು ರಾಜೀನಾಮೆ ನೀಡುತ್ತಿದ್ದಂತೆಯೇ ನಿರಂಕುಶ ಆಡಳಿತ ಇರುವ ಅಕ್ಕಪಕ್ಕದ ದೇಶಗಳಲ್ಲಿಯೂ ಜನರು ಪ್ರತಿಭಟನೆ ಮಾರ್ಗ ಹಿಡಿದಿದ್ದಾರೆ.

ಅಧ್ಯಕ್ಷ ಅಬಡೇಲ್‌ಅಜೀಜ್ ಬೌಟೆಪ್ಲಿಕಾ ವಿರುದ್ಧ ಧ್ವನಿ ಎತ್ತಿದ್ದಾರೆ. ಇಲ್ಲಿಯೂ ಸಹ ಹಲವು ವರ್ಷಗಳಿಂದ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಇದರ ವಿರುದ್ಧ ಜನರು ಬಂಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT