ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳ್ಮುಗಿಲು: ನೀರು-ಬೀದಿ ದೀಪದ ತಾಪತ್ರಯ

Last Updated 24 ಡಿಸೆಂಬರ್ 2012, 5:59 IST
ಅಕ್ಷರ ಗಾತ್ರ

ತುಮಕೂರು: ಯಾವ ಸಾರ್ಥಕತೆಗೆ ಮತ ಚಲಾಯಿಸಬೇಕು...? ಚುನಾವಣೆ ಸಮಯದಲ್ಲಿ ಭರವಸೆಗಳ ಹೊಳೆ ಹರಿಸಿದ ಯಾವೊಬ್ಬ ನಾಯಕರೂ ಇಲ್ಲಿ ತನಕ ಒಮ್ಮೆಯೂ ಭೇಟಿ ನೀಡಿಲ್ಲ. ಸಮಸ್ಯೆ ದಿನೇ ದಿನೇ ರೋಗದಂತೆ ಉಲ್ಭಣಿಸುತ್ತಿರುವುದು ತಪ್ಪುತ್ತಿಲ್ಲ.
ವಾರ್ಡ್‌ನ ಸದಸ್ಯೆ ಮನೆಯಿಂದ ಹಿಡಿದು ನಗರಸಭೆ, ಶಾಸಕ, ಸಚಿವರ ಬಳಿ ದೂರು ಹೊತ್ತೊಯ್ದರೂ; ನಮ್ಮ ಗೋಳು ತೀರಿಲ್ಲ.
ಮನವಿಗೆ ಮೂರು ಕಾಸಿನ ಬೆಲೆಯಿಲ್ಲ. ಸ್ಥಳೀಯಾಡಳಿತದಿಂದ ಬಯಸುವುದು ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ರಾತ್ರಿ ವೇಳೆ ಬೆಳಕು ನೀಡುವ ಬೀದಿ ದೀಪದ ವ್ಯವಸ್ಥೆ ಮಾತ್ರ. ಆದರೆ ನಗರಾಡಳಿತ ಇದುವರೆಗೂ ಕನಿಷ್ಠ ಮೂಲ ಸೌಕರ್ಯ ಒದಗಿಸಿಲ್ಲ ಎಂಬ ಆಕ್ರೋಶ ಉಪ್ಪಾರಹಳ್ಳಿಯ ಮಹಿಳೆಯರದ್ದು.

ವಾರ್ಡ್ ವ್ಯಾಪ್ತಿಯಲ್ಲಿನ ಸಮಸ್ಯೆ ಏನಿದೆ ಎನ್ನುತ್ತಿದ್ದಂತೆ ಹತ್ತಾರು ಮಂದಿ ಗುಂಪು ಕಟ್ಟಿಕೊಂಡು ತಾವು ನಿತ್ಯ ಅನುಭವಿಸುತ್ತಿರುವ ನರಕ ಯಾತನೆಯನ್ನು `ಪ್ರಜಾವಾಣಿ' ಬಳಿ ತೆರೆದಿಟ್ಟರು. ಇಲ್ಲಿ ವಾಸವಾಗಿರುವ ಬಹುತೇಕರು ಬಡವರು. ಯಾರ ಮನೆಯಲ್ಲೂ ನೀರಿನ ತೊಟ್ಟಿಯಿಲ್ಲ. ನೀರು ಸಂಗ್ರಹಿಸಲು ಸಿಂಟೆಕ್ಸ್, ಡ್ರಂಗಳಿಲ್ಲ. ಕೊಡಗಳೇ ನಮಗೆ ಗತಿ. ಬೀದಿಗೊಂದರಂತೆ ಇದ್ದ ಬೀದಿ ನಲ್ಲಿಗಳ ಸಂಪರ್ಕ ಕಡಿತಗೊಳಿಸಿರುವುದು ಸಮಸ್ಯೆಯನ್ನು ಸಾಕಷ್ಟು ಬಿಗಡಾಯಿಸಿದೆ.

ಎದ್ದ ತಕ್ಷಣವೇ ಬಿಂದಿಗೆ ಹಿಡಿದು ಮೈಲು ದೂರ ನೀರಿಗಾಗಿ ಅಲೆಯಬೇಕು. ನೀರು ಸಿಕ್ಕ ನಂತರವೇ ಮುಂದಿನ ಕರ್ಮಗಳಿಗೆ ಚಾಲನೆ. ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವುದರೊಳಗೆ ರಾತ್ರಿ ಆಗಿರುತ್ತೆ. ಮತ್ತೆ ಮುಂಜಾನೆ ಕೈಯಲ್ಲಿ ಬಿಂದಿಗೆ ಹಿಡಿದೇ ಅಂದಿನ ದಿನಚರಿಗೆ ಚಾಲನೆ ನೀಡಬೇಕು. ಈ ಕಾಯಕ ನಿರ್ವಹಿಸುವ ಮಹಿಳೆಯ ಗೋಳು ಹೇಳತೀರದು.

ರಾತ್ರಿಯಾದೊಡನೆ ಹೊರಗೆ ಓಡಾಡಲು ಹೆದರಿಕೆ. ಬಡಾವಣೆ ವ್ಯಾಪ್ತಿಯ ಬಹುತೇಕ ಕಡೆ ಬೀದಿ ದೀಪಗಳದ್ದೇ ಸಮಸ್ಯೆ. ಇದರ ಜತೆ ರಸ್ತೆಗಳು ಸರಿಯಿಲ್ಲ. ರಾತ್ರಿ ವೇಳೆ ನಡೆದಾಡುವರು ಬಿದ್ದು ಎದ್ದು ನಡೆದಾಡುವುದು ನಿರಂತರ. ಬೀದಿ ದೀಪ ಕೆಟ್ಟು ತಿಂಗಳು, ಎರಡು ತಿಂಗಳು ಕಳೆದರೂ; ಹೊಸದನ್ನು ಹಾಕಲ್ಲ. ದುಡ್ಡು ಕೊಟ್ಟವರ ಮನೆ ಬಳಿ ಮಾತ್ರ ಹಾಕುತ್ತಾರೆ ಎಂದು ಇಲ್ಲಿನ ಮಹಿಳೆಯರು ಆರೋಪಿಸುತ್ತಾರೆ.

ಸಮಸ್ಯೆ ಪರಿಹರಿಸಿ ಎಂದು ಕೇಳುವುದೇ ಮಹಾಪರಾಧ ಎನ್ನುವಂತಾಗಿದೆ ಇಲ್ಲಿನ ವಾತಾವರಣ. ಬುಗುಡನಹಳ್ಳಿ ಕೆರೆಗೆ ನೀರು ಬಿಟ್ಟ ಮೇಲೆ ಪರವಾಗಿಲ್ಲ. ಆದರೂ ಸಮಸ್ಯೆಗೆ ಇತಿಶ್ರೀ ಬಿದ್ದಿಲ್ಲ. ಕೆಲವೆಡೆ ಅತಿವೃಷ್ಟಿ ಎಂಬಂತೆ ನೀರು ರಸ್ತೆ, ಚರಂಡಿಯಲ್ಲಿ ಹರಿದರೆ ಕೆಲವೆಡೆ ತಿಂಗಳಾದರೂ ನಲ್ಲಿಯಿಂದ ಒಂದು ಹನಿ ನೀರು ತೊಟ್ಟಿಕ್ಕದ ಅನಾವೃಷ್ಟಿ. ಒಮ್ಮಮ್ಮೆ ನೀರನ್ನು ಶುದ್ಧೀಕರಿಸದೆ ನೇರವಾಗಿ ಬಿಡುವುದುಂಟು. ಚರಂಡಿಗಳ ಸ್ಥಿತಿಗತಿ ಆ ದೇವರಿಗೆ ಪ್ರೀತಿ. ಸ್ವಚ್ಛಗೊಂಡು ಎಷ್ಟು ತಿಂಗಳಾದವು ಎಂಬುದು ಯಾರಿಗೂ ನೆನಪಿಲ್ಲ.

ಬಹಳ ವರ್ಷಗಳ `ಗುಮ್ಮ' ಉಪ್ಪಾರಹಳ್ಳಿ ಮುಖ್ಯರಸ್ತೆ ವಿಸ್ತರಣೆಗೆ ಚಾಲನೆ ಸಿಕ್ಕಿದೆ. 80, 60 ಅಡಿಯಿಂದ 40 ಅಡಿಗೆ ಇಳಿದಿದೆ. ಈಗಲೇ ದೂಳುಮಯವಾಗಿದ್ದ ಈ ಪ್ರದೇಶ ಇನ್ನೂ ಎಷ್ಟು ವರ್ಷ `ದೂಳ್ಮುಗಿಲಿನಿಂದ' ಕೂಡಿರುತ್ತದೆ ಎಂಬ ಭಯ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಯಾವ ರಸ್ತೆಯೂ ಡಾಂಬರು ಕಂಡಿಲ್ಲ. ಇದರಿಂದ ಸದಾ ದೂಳು. ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.

ಇನ್ನೂ ಉಪ್ಪಾರಹಳ್ಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಚಾಲನೆ ಸಿಕ್ಕಿ ವರ್ಷಗಳು ಗತಿಸಿದರೂ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿಯ ವೇಗ ಆಮೆ ವೇಗಕ್ಕಿಂತ ಕಡಿಮೆ. ಮೇಲ್ಸೆತುವೆ ಸಂಪರ್ಕಿಸುವ ರಸ್ತೆ ಯಾವುದು ಎಂಬುದು ನಿರ್ಧಾರವಾಗಿಲ್ಲ. ಪ್ರಬಲರ ಲಾಬಿಗೆ ಆಡಳಿತ ಮಣಿದಿದೆ. ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಸ್ಥಳೀಯರಿಗೆ ಸಮಸ್ಯೆಯ ತೃಣವೂ ತಿಳಿದಿಲ್ಲ.

ಕೆಲಸ ನಡೆಯುತ್ತಿದೆ
ಜನರ ಸ್ಪಂದನೆ ಕಡಿಮೆ. ನಗರಾಡಳಿತ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಆಡಳಿತದ ಕೊನೆ ಅವಧಿ. ಕಾಮಗಾರಿ ವೇಗ ಪಡೆದಿವೆ.

-ಶಮೀಮ್ ತಾಜ್, ನಗರಸಭೆ ಸದಸ್ಯೆ

ದುಡ್ಡಿಗೆ ಮನ್ನಣೆ
ಚರಂಡಿ ಸ್ವಚ್ಛಗೊಳಿಸಲು ಪೌರ ಕಾರ್ಮಿಕರಿಗೆ ದುಡ್ಡು ಕೊಡಬೇಕು. ನೀರಿನ ತಾಪತ್ರಯ ತಪ್ಪದು. ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವರೇ ಇಲ್ಲ.
-ಕೆ.ಎಸ್.ಗಂಗಮ್ಮ

ಹಳ್ಳಿಯೆ ವಾಸಿ
ಬೀದಿ ದೀಪ ಕೆಟ್ಟು ತಿಂಗಳು ಕಳೆದವು. ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ. ದುಡ್ಡು ಕೊಟ್ಟರೆ ಮಾತ್ರ ಬೀದಿ ದೀಪ ಅಳವಡಿಸುತ್ತಾರೆ. ಈ ಭಾಗದ ಸಮಸ್ಯೆ ಗಮನಿಸಿದರೆ ಹಳ್ಳಿ ವಾತಾವರಣವೇ ಸಾವಿರ ಪಾಲು ಉತ್ತಮ.
-ಯಶಸ್ವಿನಿ, ವಿದ್ಯಾರ್ಥಿನಿ

ಹಂದಿ ಕಾಟ
ಹಂದಿ ಕಾಟಕ್ಕೆ ಮುಕ್ತಿ ಸಿಗದಾಗಿದೆ. ನಿತ್ಯ ಅವುಗಳನ್ನು ಓಡಿಸುವುದೇ ಕಾಯಕ. ಕೊಚ್ಚೆಯಲ್ಲಿ ಬಿದ್ದು ಉರುಳಾಡುವ ಹಂದಿಗಳ ಹಿಂಡು ಎಲ್ಲರಲ್ಲೂ ಭಯ ಹುಟ್ಟಿಸುತ್ತವೆ. ಹಂದಿ ನಿರ್ಮೂಲನೆಗೆ ಹತ್ತಾರು ಮನವಿ ಸಲ್ಲಿಸಿದರೂ; ಪ್ರಯೋಜನವಾಗದಾಗಿದೆ.
-ಮೋಹನ್ ಕುಮಾರ್

ಸಬೂಬು
ಸಮಸ್ಯೆ ಬಗ್ಗೆ ಏನೇ ಪ್ರಶ್ನಿಸಿದರೂ ಖಚಿತ ಉತ್ತರ ಸಿಗಲ್ಲ. ಬರೀ ಸಬೂಬು. ಜಾಣ್ಮೆಯ ಉತ್ತರ. ನೀರುಗಂಟಿ ಮಾತನಾಡಿಸುವುದು ಕಷ್ಟ ಎಂಬಂಥ ಸ್ಥಿತಿ ಇದೆ.
-ರಾಮಯ್ಯ, ನಿವೃತ್ತ ಎಎಸ್‌ಐ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT