ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೇವಸ್ಥಾನಗಳ ಜಾಗ ತೆರವು: ಮನವೊಲಿಕೆಗೆ ಯತ್ನ'

Last Updated 26 ಏಪ್ರಿಲ್ 2013, 8:26 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ದೇವಸ್ಥಾನಗಳ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ಮನವೊಲಿಸಿ, ಜಾಗವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಜಾರಿಯಲ್ಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಾಗೂ ಭಗಂಡೇಶ್ವರ- ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನು ಮುತ್ತಪ್ಪ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದೇವಸ್ಥಾನಗಳ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವಿಷಯ ಸೂಕ್ಷ್ಮವಾಗಿದೆ. ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಇದನ್ನು ಒಮ್ಮಿಂದೊಮ್ಮೆ ಖಾಲಿ ಮಾಡಿಸಲು ಸಾಧ್ಯವಿಲ್ಲ. ಒತ್ತುವರಿದಾರರ ಮನವೊಲಿಸಿ ಜಾಗವನ್ನು ವಾಪಸ್ ವಶಕ್ಕೆ ತೆಗೆದುಕೊಳ್ಳಲಾಗುವುದು' ಎಂದು ಅವರು ಪ್ರತಿಕ್ರಿಯೆ ನೀಡಿದರು.

ಒತ್ತುವರಿಯಾಗಿರುವ ದೇವಾಲಯಗಳ ಜಾಗವನ್ನು ಸರ್ವೇ ಮಾಡಿಸುವ ಕೆಲಸವನ್ನು ರಾಜ್ಯದಲ್ಲಿ ಇದುವರೆಗೆ ಯಾವ ಸರ್ಕಾರಗಳು ಮಾಡಿರಲಿಲ್ಲ. ಇಂತಹ ಸಾಧನೆಯನ್ನು ಮಾಡಿದ ಹೆಮ್ಮೆ ಬಿಜೆಪಿ ಸರ್ಕಾರಕ್ಕೆ ಇದೆ. ಸರ್ವೇ ಕೆಲಸವನ್ನು ಯಾವುದೇ ಸಂಘಟನೆಗಳು ಮಾಡಿಸಿರುವುದಲ್ಲ ಎಂದು ಅವರು ಹೇಳಿದರು.

ದೇವಸ್ಥಾನಗಳ ಜಾಗದ ಒತ್ತುವರಿ ವಿಷಯವು ಅತ್ಯಂತ ಸೂಕ್ಷ್ಮವಾಗಿದೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಒತ್ತುವರಿಯಾಗಿರುವುದಲ್ಲ. ತಲತಲಾಂತರದಿಂದ ಒತ್ತುವರಿಯಾಗಿರುವಂತಹದ್ದು. ಹಲವು ದಾಖಲೆಗಳಲ್ಲಿ ದೇವಸ್ಥಾನ ಹಾಗೂ ಆ ಜಾಗವನ್ನು ಬಳಸುತ್ತಿರುವ ಕುಟುಂಬದವರ ಹೆಸರು ಎರಡೂ ಇವೆ ಎಂದು ಅವರು ವಿವರಣೆ ನೀಡಿದರು.

ದೇವಸ್ಥಾನಗಳಲ್ಲಿ ಇದ್ದ ಆಭರಣಗಳ ಬಗ್ಗೆಯೂ ಮೌಲ್ಯಮಾಪನ ಮಾಡಿಸಿದ ಹಿರಿಮೆ ಬಿಜೆಪಿ ಸರ್ಕಾರಕ್ಕೆ ಇದೆ. ಭಕ್ತರು ನೀಡಿದ ಆಭರಣಗಳ ಬಗ್ಗೆ ಯಾವುದೇ ದಾಖಲೆಗಳು ಇದುವರೆಗೆ ಇರಲಿಲ್ಲ. ಈಗ ಎಲ್ಲ ಆಭರಣಗಳ ಮೌಲ್ಯಮಾಪನ ಮಾಡಿ, ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಪರಿಸರವಾದಿಗಳ ಸಂಸ್ಥೆಗಳಿಗೆ ಬರುತ್ತಿರುವ ವಿದೇಶಿ ಹಣದ ಕುರಿತು ಈಗಾಗಲೇ ಸಾಕಷ್ಟು ದಾಖಲೆ ನೀಡಿದ್ದೇವೆ. ಇದಕ್ಕೆಲ್ಲ ಕಡಿವಾಣ ಹಾಕಿದ್ದರಿಂದಲೇ ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಇವರು ಅಪಪ್ರಚಾರ ಮಾಡುತ್ತಿದ್ದಾರೆ. ಜಾತಿಯ ವಿಷ ಬೀಜವನ್ನು ಬಿತ್ತಲು ದೂರವಾಣಿ ಕರೆ, ಎಸ್‌ಎಂಎಸ್‌ಗಳನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ವಿರಾಜಪೇಟೆ ಬಿಜೆಪಿ ವಕ್ತಾರ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕೊಡವ ಹಾಗೂ ಗೌಡ ಸಮಾಜದವರು ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ. ವಿರಾಜಪೇಟೆಯಲ್ಲಿ ಗೌಡ ಸಮಾಜದ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿಯಲ್ಲಿ ಕೊಡವ ಸಮಾಜದ ಅಪ್ಪಚ್ಚು ರಂಜನ್ ಅವರನ್ನು ಇಷ್ಟು ವರ್ಷಗಳ ಕಾಲ ಗೆಲ್ಲಿಸುವ ಮೂಲಕ ಇದನ್ನು ಸಾಬೀತು ಪಡಿಸಿದ್ದಾರೆ ಎಂದರು. ಬಿಜೆಪಿ ಮುಖಂಡರಾದ ತಳೂರು ಕಿಶೋರ್‌ಕುಮಾರ್, ಸುಬ್ರಮಣಿ ಉಪಾಧ್ಯಾಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT