ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡ-ಕೃಷ್ಣಕುಮಾರ್ ಚರ್ಚೆ

Last Updated 5 ಆಗಸ್ಟ್ 2013, 8:55 IST
ಅಕ್ಷರ ಗಾತ್ರ

ಕುಣಿಗಲ್:  ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾನುವಾರ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಅವರನ್ನು ಭೇಟಿ ಮಾಡಿದರು. ಸುಮಾರು ಮೂರು ಗಂಟೆ ಚರ್ಚೆ ನಡೆಸುವ ಮೂಲಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದಾರೆ.

ದೇವೇಗೌಡರು ತಾಲ್ಲೂಕಿನ ಕನ್ನಗುಣಿ ಗ್ರಾಮದಲ್ಲಿರುವ ಡಿ.ಕೃಷ್ಣಕುಮಾರ್ ಮನೆಗೆ ಹೋಗಿ ಕೃಷ್ಣಕುಮಾರ್ ಮತ್ತು ಅವರ ಬೆಂಬಲಿಗರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಕೃಷ್ಣಕುಮಾರ್ ಬೆಂಬಲಿಗರಿಗೆ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಉಂಟಾದ ರಾಜಕೀಯ ಅನ್ಯಾಯ ಮತ್ತಿತರ ವಿಚಾರಗಳ ಚರ್ಚೆ ನಡೆಯಿತು. ಎಲ್ಲವನ್ನೂ ಆಲಿಸಿದ ಗೌಡರು, ಅನ್ಯಾಯ ಸರಿಪಡಿಸಲಾಗುವುದು. ಎಲ್ಲರನ್ನೂ ಒಗ್ಗೂಡಿಸುವ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಚರ್ಚೆ ಬಳಿಕ ಮಾತನಾಡಿದ ದೇವೇಗೌಡರು, ಜೆಡಿಎಸ್ ನಿರ್ನಾಮ ಯಾರಿಂದಲೂ ಸಾಧ್ಯವಿಲ್ಲ. ದುಡ್ಡಿನಿಂದ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ. ಕಾರ್ಯಕರ್ತರ ಬಲದಿಂದಲೇ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗುವುದು. ಪಕ್ಷ ಬಲವರ್ಧನೆಗಾಗಿ ಪಕ್ಷ ತೊರೆದ ನಾಯಕರನ್ನು ಮತ್ತೆ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದು, ಕೃಷ್ಣಕುಮಾರ್ ಮತ್ತು ಬೆಂಬಲಿಗರು ತಮ್ಮ ಶಕ್ತಿ ಧಾರೆ ಎರೆದು ಗೆಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.

ಬಿಜೆಪಿಯಿಂದ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಕಂಡಿರುವ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಗೌಡರು ನಮ್ಮ ನೋವು ಆಲಿಸಿದ್ದಾರೆ. ಆಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಕಾರ್ಯಕರ್ತರ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ, ಡಿ.ಕೃಷ್ಣಕುಮಾರ್ ಪತ್ನಿ ವಿಜಯಲಕ್ಷ್ಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಚಿಕ್ಕರಾಮಯ್ಯ, ಮುಖಂಡರಾದ ಬಲರಾಮ, ರಂಗಸ್ವಾಮಿ, ತಿಮ್ಮೇಗೌಡ, ಸುರೇಶ, ಗೋಪಿ, ನಾರಾಯಣ, ಜೆಡಿಎಸ್ ಮುಖಂಡರಾದ ಎಚ್.ಎ.ಜಯರಾಮಯ್ಯ, ಪಾಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT