ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಶೆಟ್ಟಿಕೆರೆಯ ದೊಡ್ಡತನ

Last Updated 7 ಡಿಸೆಂಬರ್ 2012, 6:31 IST
ಅಕ್ಷರ ಗಾತ್ರ

ಜಾಗತೀಕರಣ, ಆಧುನಿಕ ಜೀವನ ಶೈಲಿ ಗ್ರಾಮಗಳನ್ನು ಸಾಂಸ್ಕೃತಿಕ ದಿವಾಳಿತನದತ್ತ ನೂಕುತ್ತಿರುವ ಈ ದಿನಗಳಲ್ಲಿ ಗ್ರಾಮಗಳು ಸಹ ಆಮದಾದ ಜನಪ್ರಿಯ ಸಂಸ್ಕೃತಿಗೆ ಮಾರು ಹೋಗುತ್ತಿವೆ. ಇಂಥ ಪರ್ವ ಕಾಲದಲ್ಲೂ ಅಲ್ಲೊಂದು ಇಲ್ಲೊಂದು ಬೆರೆಳೆಣಿಕೆ ಗ್ರಾಮಗಳು ತಮ್ಮ ಇತಿಹಾಸ, ಜನಪದೀಯ ಸಾರವನ್ನು ಸಾರುತ್ತಾ ಗತವೈಭವವನ್ನು ಉತ್ಖನನ ಮಾಡಿ ಪಳೆಯುಳಿಕೆಗಳಿಗೆ ಜೀವ ತುಂಬುವ ಪ್ರಯತ್ನ ಮಾಡುತ್ತಿವೆ. ಅಂಥ ಗ್ರಾಮಗಲ್ಲಿ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಸಮೀಪ ಇರುವ ದೊಡ್ಡ ಶೆಟ್ಟಿಕೆರೆಯೂ ಒಂದು.

ದೊಡ್ಡಶೆಟ್ಟಿಕೆರೆ ಗ್ರಾಮದಲ್ಲಿರುವ ವೀರಗಲ್ಲೊಂದರ ಮೇಲಿನ ಶಾಸನದಲ್ಲಿ ಹನ್ನೆರಡನೇ ಶತಮಾನದಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನ ಮಗ ವೀರನಾರಸಿಂಹ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಮಂಜಯ ನಾಯಕನ ಮಗ ರಾಮಯನಾಯಕ ಈ ಪ್ರಾಂತ್ಯ ಆಳುತ್ತಿದ್ದ.

ಅವನು ಯುದ್ಧದಲ್ಲಿ ಮರಣ ಹೊಂದಿದಾಗ ಅವನ ರಾಣಿಯೂ ಸಹಗಮನ ಮಾಡಿದಳು. ಜತೆಗೆ ಗರುಡರಾದ ಗಣಪಿ, ಬಲ್ಲ ಎಂಬುವರೂ ಆತ್ಮಾರ್ಪಣಗೈದರು ಎಂಬ ಉಲ್ಲೇಖವಿದೆ. ಇಡೀ ಗ್ರಾಮವೇ ಕಲ್ಲು ಹಾಸಿನಿಂದ ಆವೃತವಾಗಿತ್ತು.

ಊರಿನ ಸುತ್ತಾ ಶ್ರೀರಂಗಪಟ್ಟಣದ ಮಾದರಿಯಲ್ಲಿ ಎತ್ತರದ ಕೋಟೆಯ ಅವಶೇಷವಿತ್ತು. 10 ಅಡಿ ಎತ್ತರ, 8 ಅಡಿ ಅಗಲದ ಹೆಬ್ಬಾಗಿಲು, ಕಿರುಬಾಗಿಲು ಇತ್ತು. ಎರಡು ಬಾರಿ ಪ್ಲೇಗ್ ಬಂದಾಗ ಊರು ಕಾಲಿ ಮಾಡುವ ಸಂದರ್ಭ ಈ ಬಾಗಿಲು ಶಿಥಿಲವಾಗಿ ಮುರಿದು ಹೋಯಿತು ಎಂದು ಊರ ಹಿರಿಯರು ಈಗಲೂ ಸ್ಮರಿಸುತ್ತಾರೆ.

ರಾಮಯ ನಾಯಕನ ನಂತರ ಮೈಸೂರು ಪ್ರಾಂತ್ಯದಿಂದ ದೊಡ್ಡಶೆಟ್ಟಿ, ಚಿಕ್ಕಶೆಟ್ಟಿ ಎಂಬ ಅಣ್ಣ ತಮ್ಮಂದಿರು ಈ ಊರಿಗೆ ಬಂದು ನೆಲೆಸಿದರು. ಇಬ್ಬರ ಮಧ್ಯೆ ಮನಸ್ತಾಪ ಬಂದು ಇಬ್ಬರೂ ಬೇರೆಯಾದರು. ದೊಡ್ಡಶೆಟ್ಟಿ ಇದ್ದ ಊರು ದೊಡ್ಡಶೆಟ್ಟಿಕೆರೆ ಆಯಿತು. ತಮ್ಮ ಹತ್ತಿರದಲ್ಲೇ ಹೋಗಿ ನೆಲೆಸಿದ ಗ್ರಾಮ ಚಿಕ್ಕಶೆಟ್ಟಿಕೆರೆ ಎಂದಾಯಿತು. ಈಗ ಎರಡೂ ಗ್ರಾಮಗಳಲ್ಲಿ ಶೆಟ್ಟರು ಇಲ್ಲ. ಯಾವುದೋ ಹೊರಗಿನ ಆಕ್ರಮಣಕ್ಕೆ ಊರಿನ ವೈಭವ ಬಲಿಯಾದ ಕುರುಹುಗಳಿವೆ. ಆದರೆ ಇಂದಿಗೂ ದೊಡ್ಡಶೆಟ್ಟಿಕೆರೆ, ಚಿಕ್ಕಶೆಟ್ಟಿಕೆರೆ ಜನ ಪರಸ್ಪರ  ಸಂಬಂಧ ಬೆಳೆಸುವ ಪರಿಪಾಠವಿಲ್ಲ ಎಂದು ಹೇಳುತ್ತಾರೆ.

ಕಳೆದ ಮೂರ‌್ನಾಲ್ಕು ಶತಮಾನಗಳಿಂದೀಚೆಗೆ ಗುಂಬಳಿಗೌಡ ಎಂಬುವವ ಈ ಊರಿನ ಪೂರ್ವಜ ಎಂದು ಹೇಳುತ್ತಾರೆ. ಊರಲ್ಲಿ ಕುಂಬಾರಗುಡಿ, ಬೀರದೇವರ ಗುಡಿ, ಅಂಕನಾಥನಗುಡಿಗಳಿರುವುದರಿಂದ ಕುಂಬಾರರು, ಕುರುಬರು ಅಧಿಕ ಸಂಖ್ಯೆಯಲ್ಲಿದ್ದಿರಬಹುದು.

ಗುಂಬಳಿಗೌಡನ ಕನಸಿನಲ್ಲಿ ರಂಗನಾಥಸ್ವಾಮಿ ಬಂದು ತನ್ನನ್ನು ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದ. ಅದರಂತೆ ಗುಂಬಳಿಗೌಡ ಬಾವಿಯಲ್ಲಿದ್ದ ರಂಗನಾಥಸ್ವಾಮಿ ವಿಗ್ರಹವನ್ನು ಮೇಲೆತ್ತಿ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದ ಎಂಬ ದಂತಕತೆಯಿದೆ. ಆದರೆ ಊರಿನ ಹಿರಿಯ ಮುಖಂಡ ಡಿ.ತಿಪ್ಪಣ್ಣ ರಾಮಾನುಜಾಚಾರ್ಯರು ತಮಿಳುನಾಡಿನ ಚೋಳರ ಆಶ್ರಯ ತಪ್ಪಿ ಕರ್ನಾಟಕಕ್ಕೆ ಬಂದು ಈ ಪ್ರಾಂತದಲ್ಲಿ ಹಲವು ಕಡೆ ರಂಗನಾಥಸ್ವಾಮಿ ಪ್ರತಿಷ್ಠಾಪಿಸಿದ್ದಾರೆ. ಅವುಗಳಲ್ಲಿ ಇಲ್ಲಿನ ಬೆಟ್ಟದ ರಂಗಸ್ವಾಮಿಯೂ ಒಂದು. ರಾಮಾನುಜರ ಹಾಗೂ ಆಳ್ವಾರ್‌ರ ಪ್ರತಿಮೆಗಳು ಇಂದಿಗೂ ಇಲ್ಲಿರುವುದೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ.

ಇವೆಲ್ಲ ಗ್ರಾಮದ ಐತಿಹಾಸಿಕ, ಪೌರಾಣಿಕ ವೈಭವ ಸಾರುವಂಥ ಅಗ್ಗಳಿಕೆಯ ಸಂಗತಿಗಳು. ಆದರೆ ದೊಡ್ಡ ಶೆಟ್ಟಿಕೆರೆ ಒಂದು ಕಾಲದಲ್ಲಿ ಹಲ ಜನಪದ ಕಲೆಗಳ ತವರೂರಾಗಿತ್ತು ಎಂಬುದು ಹೆಮ್ಮೆಯ ಸಂಗತಿ. ಊರಿನ ಪ್ರತಿಯೊಂದು ಮನೆಯಲ್ಲೂ ಹಳೇ ಕಾಲದ ಒಂದಿಲ್ಲೊಂದು ಪುರಾತನ ವಸ್ತಗಳು ಜನಪದ ಸಂಸ್ಕೃತಿಯ ಅಭಿಜ್ಞಾನವಾಗಿ ದೊರಕುತ್ತವೆ. ನಾವು ಕಂಡು ಕೇಳರಿಯದ ವಿಶಿಷ್ಟ ವಸ್ತುಗಳು ಹಿಂದಿನ ಸಂಸ್ಕೃತಿ ಪ್ರತೀಕವಾಗಿ ಈಗಲೂ ಇಲ್ಲಿನ ಮನೆಗಳಲ್ಲಿವೆ.

ಪ್ರತಿಯೊಂದು ಕಲ್ಲು, ಕಂಬವೂ ಒಂದು ಕತೆ ಹೇಳುತ್ತದೆ. ಗ್ರಾಮದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಈಚೆಗೆ ಹಾವೇರಿ ಜನಪದ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟಾಗ ಇಂಥ ಅಪರೂಪದ ವಸ್ತುಗಳನ್ನು ಗ್ರಾಮಸ್ಥರು ದೂಳು ಕೊಡವಿ ಈಚೆ ತೆಗೆದಾಗಲೇ ದೊಡ್ಡ ಶೆಟ್ಟಿಕೆರೆಯ ದೊಡ್ಡತನ ಬೆಳಕಿಗೆ ಬಂದದ್ದು. ನಾಗವಾಸ (ವಿಶಿಷ್ಟ ಶೈಲಿಯ ದೀಪ), ಬಾಗ್ಲಾ (ಗವಾಕ್ಷಿ), ದೋಣಿ, ಬೀಸೋ ಕಲ್ಲು, ಹರವಿ, ವಾಡೆ, ಮಡಕೆ, ಕುಡಿಕೆ, ನರಿಕೆ ಕೋಲು, ಕನ್ನಡಿ, ಮೊರ, ತಂಬೂರಿ, ಏಕತಾರಿ, ತಬಲಾ ಮೊದಲಾದ ವಾದ್ಯ ಪರಿಕರಗಳು...ಹೀಗೆ ಗ್ರಾಮಸ್ಥರು ತಾವು ಜತನದಿಂದ ಕಾಪಾಡಿದ್ದ ಅಮೂಲ್ಯ ವಸ್ತುಗಳ ರಾಶಿಯನ್ನೇ ಗುಡ್ಡ ಹಾಕಿದ್ದು ಬೆರಗುಗೊಳಿಸುವಂತಿತ್ತು.

ಇಷ್ಟೇ ಅಲ್ಲ, ಊರಲ್ಲಿ ನಶಿಸಿಹೋಗಿದ್ದ ಭಾಗವಂತಿಕೆ ಮೇಳವನ್ನು ಪುನರಾರಂಭಿಸಲಾಗಿದೆ. ಗ್ರಾಮದ ಹಿರಿಯರಾದ ತಿಪ್ಪಣ್ಣ, ರಾಮಚಂದ್ರ, ಪಡಿಯಪ್ಪ ಮೊದಲಾದವರು ಹತ್ತು ಜನರ ಒಂದು ತಂಡ ಕಟ್ಟಿ ಕೋಟು, ಪೇಟ, ಅಂಗವಸ್ತ್ರ, ತಾಳ, ಕನಕ ತಮಟೆ ಮೊದಲಾದ ಪರಿಕರ ಒದಗಿಸಿಕೊಟ್ಟು ಭಾಗವಂತಿಕೆ ಮೇಳಕ್ಕೆ ಜೀವ ತುಂಬಿದ್ದಾರೆ. ಈ ತಂಡ ಮೈಸೂರಿನ ದಸರಾ ಉತ್ಸವದಲ್ಲಿ ಪಾಲ್ಗೊಂಡು ಬಹುಮಾನವನ್ನೂ ಪಡೆದಿದೆ. ವೀರಭದ್ರ ಕುಣಿತಕ್ಕೂ ವೇಷ ಭೂಷಣ ಒದಗಿಸಿ ಕೊಡಲಾಗಿದೆ. ಕೀಲುಕುದುರೆ, ತಮಟೆ ವಾದ್ಯ, ಡೊಳ್ಳು ಕುಣಿತ, ಕರಡಿ ಕುಣಿತ, ಸೋಬಾನೆ ಗಾಯನ ಮೊದಲ ಆರು ಜನಪದ ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಗ್ರಾಮವೇ ಹಿಂದಿನ ಜನಪದ ಗ್ರಾಮವಾಗಿ ಮರುಹುಟ್ಟು ಪಡೆಯುವತ್ತ ದಾಪುಗಾಲು ಹಾಕುತ್ತಿದೆ.

ಗುಂಡಿಗೆ ಗುಡ್ ಬೈ
ಗ್ರಾಮದಲ್ಲಿ ಸಾಮಾಜಿಕ ಕ್ರಾಂತಿಯೂ ನಡೆದಿದೆ. ಸಾರ್ವಜನಿಕ ಶೌಚಾಲಯ, ಸಮುದಾಯ ಭವನ ತಲೆ ಎತ್ತಿವೆ. ಗ್ರಾಮದ ಅಭಿವೃದ್ಧಿಗೆಂದೇ ಟ್ರಸ್ಟ್ ನೋಂದಾಯಿಸಲಾಗಿದೆ. ಊರ ಮುಖಂಡ ತಿಪ್ಪಣ್ಣ ಶಾಲೆಗೆಂದೇ ತಮ್ಮ 17 ಗುಂಟೆ ಜಮೀನು ದಾನ ಕೊಟ್ಟಿದ್ದಾರೆ.

ಹಿಂದೆ ಗ್ರಾಮದಲ್ಲಿ ಹಲ ಯುವಕರು ಸದಾ ಜೂಜಾಡುತ್ತಿದ್ದರಂತೆ. ಈಗ ಅದನ್ನು ನಿರ್ಬಂಧಿಸಲಾಗಿದೆ. ಗ್ರಾಮದಲ್ಲಿ ಈಗ ಯಾರೊಬ್ಬರೂ ಜೂಜಾಡುವುದಿಲ್ಲ. ಅದೇ ರೀತಿ ಗ್ರಾಮದ ಹಲ ಮನೆಗಳಲ್ಲಿ ಹಗಲಲ್ಲೇ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಮಹಿಳೆಯರೂ ಮದ್ಯ ಮಾರಾಟದಲ್ಲಿ ತೊಡಗುತ್ತಿದ್ದರು. ಈಗ ಇಡೀ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗಿದ್ದು ಮದ್ಯ ಮಾರಾಟವನ್ನು ಸ್ವಯಂ ಪ್ರೇರಣೆಯಿಂದಲೇ ನಿಷೇಧಿಸಲಾಗಿದೆ. ಒಂದೇ ಒಂದು ಬಾಟಲ್ ಮದ್ಯ ಕೂಡ ಗ್ರಾಮದಲ್ಲಿ ಮಾರಾಟವಾಗುವುದಿಲ್ಲ.

ಎಲ್ಲಿ ನೋಡಿದರಲ್ಲಿ ರಂಗ
ರಂಗನಾಥಸ್ವಾಮಿ ಮೇಲಿನ ಭಕ್ತಿಯಿಂದ ಗ್ರಾಮದಲ್ಲಿರುವ ಬಹುತೇಕ ಜನರ ಹೆಸರು ರಂಗಪ್ಪ, ರಂಗಣ್ಣ, ರಂಗಸ್ವಾಮಿ, ರಂಗಜ್ಜ, ರಂಗನಾಥ ಮೊದಲಾಗಿ ರಂಗ ಎಂದೇ ಆರಂಭವಾಗುತ್ತದೆ. ಅಕಸ್ಮಾತ್ ಹೆಸರು ಬದಲಾಗಿದ್ದರೂ ರಂಗ ಎಂಬ ಅಡ್ಡನಾಮವೊಂದು ಇದ್ದೇ ಇರುತ್ತದೆ. ಗ್ರಾಮದ ಬಹುತೇಕ ಸೋದರ ಕುಟುಂಬಗಳು ದೊಡ್ಡ ಒಕ್ಕಲು, ಚಿಕ್ಕ ಒಕ್ಕಲು, ಸಣ್ಣ ಒಕ್ಕಲು ಎಂದು ವರ್ಗೀಕರಣಗೊಂಡಿವೆ. ಈ ಕುಟುಂಬಗಳ ಮಧ್ಯೆ ಮದುವೆ ನಿಷಿದ್ಧ. ಹೊರಗಿನಿಂದ ಬಂದವರು (ಅಳಿಯ ಒಕ್ಕಲು) ಮಾತ್ರ ಸಂಬಂಧ ಬೆಳೆಸಬಹುದು.

ಸೊಪ್ಪಿನ ನಂಟು-ಸಾವಿಗೂ ಉಂಟು
ಊರಿನ ಬಾವಿ ಪಕ್ಕದ ಒಂದೂವರೆ ಎಕರೆ ಪ್ರದೇಶವನ್ನು ಇಡೀ ಗ್ರಾಮಸ್ಥರೆಲ್ಲ ಹಂಚಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಸೊಪ್ಪು ಬೆಳೆಯಲಾಗುತ್ತದೆ. ಯುಗಾದಿಯ ಮರು ದಿನ ವರ್ಷ ತೊಡಕಿನಂದು ಒಟ್ಟಿಗೆ ಬೀಜ ಬಿತ್ತುತ್ತಾರೆ. ಅಕ್ಟೋಬರ್ ಕೊನೆವರೆಗೆ ಗ್ರಾಮಸ್ಥರು ಇದೇ ಸೊಪ್ಪಿನ ಸವಿ ಸವಿಯುತ್ತಾರೆ.

ತಮ್ಮ ಹಿತ್ತಿಲಲ್ಲಿ ಯಾರೂ ಏನೂ ಬೆಳೆಯುವುದಿಲ್ಲ. ಬದುಕಿನಲ್ಲಿನ ಈ ಸೌಹಾರ್ದತೆಯನ್ನು ಜನ ಸಾವಿನಲ್ಲೂ ಉಳಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಸಂಸ್ಕಾರ ಆಗುವ ತನಕ ಜನ ಉಪವಾಸವೇ ಇರುತ್ತಾರಂತೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT