ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳದಲ್ಲಿ ಪ್ರಮಾಣ ಪ್ರಸಂಗ...

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಪುಣ್ಯಕ್ಷೇತ್ರದಲ್ಲಿ ರಾಜಕೀಯ ಬೇಡ: ಬಿಕೆಸಿ ವಾದ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ದೇವರ ಮೇಲೆ ಪ್ರಮಾಣ ಮಾಡುವ ಬದಲು ದೇಶದ ಸಂವಿಧಾನದ ಮೇಲೆ ಪ್ರಮಾಣ ಮಾಡುವ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆಧ್ಯಾತ್ಮಿಕ ಕೇಂದ್ರವಾದ ದೇವಸ್ಥಾನವನ್ನು ರಾಜಕೀಯ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವ ನಿರ್ಧಾರ ಸರಿಯಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಎದುರು ಇದೇ 27 ರಂದು ಪ್ರಮಾಣ ಮಾಡುವ ನಿರ್ಧಾರ ತೆಗೆದುಕೊಂಡಿ ರುವ ವಿಷಯದ ಕುರಿತು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಚಂದ್ರಶೇಖರ್, `ಇವರಿಬ್ಬರೂ ತಮ್ಮ ಮಾತು ಹಿಂದಕ್ಕೆ ಪಡೆಯಲಿ. ಧರ್ಮಸ್ಥಳದಲ್ಲಿ
ಪ್ರಮಾಣ ಮಾಡುವ ನಿರ್ಧಾರ ಕೈಬಿಡಲಿ~ ಎಂದು ಸಲಹೆ ಮಾಡಿದರು.

`ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಾರ ಗೌರವ ಇದೆ~ ಎಂದ ಅವರು, `ಇಬ್ಬರು ನಾಯಕರು ದೇವರೆದುರು ಸತ್ಯವನ್ನೇ ಹೇಳುತ್ತಾರೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಇಲ್ಲ. ಧರ್ಮಸ್ಥಳದಲ್ಲಿ ಇವರಿಬ್ಬರೂ ತಮ್ಮ ನಿಲುವಿಗೆ ಅಂಟಿಕೊಂಡರೆ ಆಸ್ತಿಕ ಮನಸ್ಸುಗಳನ್ನು ನೋಯಿಸಿದಂತಾಗುತ್ತದೆ. ಪುಣ್ಯಕ್ಷೇತ್ರಕ್ಕೆ ರಾಜಕಾರಣವನ್ನು ಕೊಂಡೊಯ್ಯುವುದು ಬೇಡವೇಬೇಡ~ ಎಂದು ಒತ್ತಾಯಿಸಿದರು.

ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ನಡುವಿನ ಆರೋಪ - ಪ್ರತ್ಯಾರೋಪಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ತಿಳಿದಿಲ್ಲ. ಇಂಥ ವಿಚಾರಗಳನ್ನೆಲ್ಲ ದೇವರ ಮೇಲೆ ಪ್ರಮಾಣ ಮಾಡುವ ಹಂತಕ್ಕೆ ತಂದರೆ ಮುಂದೆ ಅನೇಕ ರಾಜಕೀಯ ಮುಖಂಡರು ಇದೇ ಹಾದಿ ಹಿಡಿಯುತ್ತಾರೆ. ಗಂಭೀರ ರಾಜಕೀಯ ಸಂವಾದ ಸಾಧ್ಯವೇ ಇಲ್ಲದ ಪರಿಸ್ಥಿತಿ ಇದರಿಂದ ನಿರ್ಮಾಣವಾಗುತ್ತದೆ ಎಂದು ಖೇದ ವ್ಯಕ್ತಪಡಿಸಿದರು.

ಈ ಪ್ರಕರಣವನ್ನು ವಿಜ್ಞಾನದ ನೆರವಿನಿಂದ ಸುಲಭವಾಗಿ ಪರಿಹರಿಸಬಹುದಿತ್ತು. ವಿಜ್ಞಾನದ ಮಾರ್ಗ ಬದಿಗೊತ್ತಿ ದೇವಸ್ಥಾನ ಮತ್ತು ರಾಜಕಾರಣವನ್ನು ಅಪಮೌಲ್ಯಗೊಳಿಸುವುದು ಬೇಡ ಎಂದು ಹೇಳಿದರು.
 

ಮೂರ್ಖತನದ ಪರಮಾವಧಿ: ಸಾಣೆಹಳ್ಳಿ ಶ್ರೀ ಖಂಡನೆ

ಪ್ರಜಾವಾಣಿ ವಾರ್ತೆ
ಚಿತ್ರದುರ್ಗ:
ಆಣೆ ಪ್ರಮಾಣ ಮಾಡುವುದು ಮೂರ್ಖತನದ ಪರಮಾವಧಿ ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ಮೇಲೆ ಆಣೆ ಪ್ರಮಾಣ ಮಾಡುವವರಿಗೆ ಆತ್ಮ ಸಾಕ್ಷಿ ಎನ್ನುವುದಿಲ್ಲ. ಇತ್ತೀಚೆಗೆ ರಾಜಕಾರಣಿಗಳು ಭ್ರಷ್ಟಚಾರದ ಪರಮಾವಧಿ ತಲುಪುತ್ತಿದ್ದಾರೆ.

ಈ ಭ್ರಷ್ಟ ರಾಜಕಾರಣಿಗಳು ದೂರದ ಪುಣ್ಯಕ್ಷೇತ್ರಗಳಿಗೆ ಹೋಗಿ ದೇವರನ್ನು ಪೂಜಿಸಿ, ಕ್ಷಮಿಸು ಎಂದು ಬೇಡಿಕೊಳ್ಳುತ್ತಾರೆ. ಆದರೆ, ಈ ಎಲ್ಲವುಗಳಿಂದ ಯಾವುದೇ ರೀತಿಯಲ್ಲಿ ಅವರಿಗೆ ದೇವರ ಅನುಗ್ರಹ ದೊರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಕಣ್ಣಿಲ್ಲದ, ಕಿವಿ ಇಲ್ಲದ, ಕಾಲಿಲ್ಲದ ದೇವರನ್ನು ನಂಬುವುದಕ್ಕಿಂತ ಜನರನ್ನೇ ದೇವರೆಂದು ನಂಬಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಬೇಕು. ಆಗ ಮಾತ್ರ ಈ ರಾಜಕಾರಣಿಗಳಿಗೆ ಒಳ್ಳೆಯದಾಗಲಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ಬಹಿರಂಗ ಸಮರಕ್ಕೆ ಇಳಿದಿದ್ದಾರೆ. ಇವರಿಬ್ಬರೂ ಕೂಡ ಜನಪರ ಕಾಳಜಿ ಇಲ್ಲದ ವ್ಯಕ್ತಿಗಳು. ರಾಜ್ಯದಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು.

ಆದರೆ, ಇವರು ಚಿಕ್ಕಮಕ್ಕಳಂತೆ ದೇವರ ಮೇಲೆ ಆಣೆ-ಪ್ರಮಾಣ ಮಾಡುವ ಕುರಿತು ಸವಾಲು-ಪ್ರತಿಸವಾಲು ಹಾಕುತ್ತಿದ್ದಾರೆ. ಇದರ ಅರ್ಥ ಅವರಿಗೆ ಯಾವುದೇ ಜ್ಞಾನ ಇಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಕಿಂಚಿತ್ ಕಾಳಜಿ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಎಲ್ಲ ರಾಜಕಾರಣಿಗಳು ಕೂಡ ಇಂದು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಶಿ, ಶ್ರೀಶೈಲ, ಮಂಜುನಾಥ ಸ್ವಾಮಿ ಸೇರಿದಂತೆ ಯಾವುದೇ ಪುಣ್ಯ ಕ್ಷೇತ್ರಗಳಿಗೆ ಈ ರಾಜಕಾರಣಿಗಳು ಹೋದರೂ ದೇವರ ಅನುಗ್ರಹ ದೊರೆಯಲು ಸಾಧ್ಯವಿಲ್ಲ. ಇದನ್ನು ಅರಿತು ಜನರನ್ನೇ ಜನಾರ್ದನ ಎಂದುಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲಿ ಎಂದು ಸಲಹೆ ನೀಡಿದರು.

`ಮಂಜುನಾಥನನ್ನು ರಾಜಕೀಯಕ್ಕೆ ಎಳೆಯಬೇಡಿ~

ಪ್ರಜಾವಾಣಿ ವಾರ್ತೆ
ಸಿಂಧನೂರು:
`ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವ್ರ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾ ಮೇರು ಇಬ್ರು ದೊಡ್ಡವ್ರ. ನಾನು ರಾಜಕೀಯವಾಗಿ ಅಷ್ಟೊಂದು ಅನುಭವ ಪಡೆದಿಲ್ಲ. ಆದಾಗ್ಯೂ ವೈಯಕ್ತಿಕವಾಗಿ ಹೇಳುವುದಾದರೆ ಧರ್ಮಸ್ಥಳದ ಮಂಜುನಾಥನ ಬಳಿ ಸುಳ್ಳು ಹೇಳಿದರೆ ಕಣ್ಣು ಹೋಗುತ್ತವೆ ಎಂಬ ನಂಬಿಕೆ ಇದೆ. ಇಂತಹದ್ದರಲ್ಲಿ ಇಬ್ಬರು ರಾಜಕೀಯ ನಾಯಕರು ದೇವರನ್ನು ಮುಜುಗರಕ್ಕೆ ಒಳಪಡಿಸುವುದು ಸರಿ ಎಂದು ಕಾಣುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಇಲ್ಲಿ ಭಾನುವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇವರು, ದೇವಸ್ಥಾನಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸಹ ಉಚಿತವಲ್ಲ. ಗೌರವಾನ್ವಿತ ವ್ಯಕ್ತಿಗಳು ಹೀಗೆ ಮಂಜುನಾಥನ ಬಳಿ ಆಣೆ ಮಾಡಲು ನಿಂತರೆ ಜನಸಾಮಾನ್ಯರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು~ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯರು ಹಗುರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಬಹು ದಿನಗಳಿಂದ ಪ್ರತಿಷ್ಠೆಯನ್ನು ಕಾಪಾಡಿಕೊಂಡು ಬಂದಿರುವ ಅವರ ಕುಟುಂಬದವರು ಬಿ.ಜೆ.ಪಿ. ಸರ್ಕಾರಕ್ಕೆ ಆಡಳಿತ ಮಾಡಲು ಅವಕಾಶ ನೀಡಬೇಕು.
 

ತಮ್ಮ ಆರೋಪಗಳಿದ್ದರೆ ವಿಧಾನಸಭಾ ಅಧಿವೇಶನಕ್ಕೆ ಬಂದು ಚರ್ಚಿಸಬೇಕು. ಅದನ್ನು ಬಿಟ್ಟು ನಿರಂತರವಾಗಿ ವ್ಯಕ್ತಿಗತವಾಗಿ ಮೇಲಿಂದ ಮೇಲೆ ಹೇಳಿಕೆಗಳನ್ನು ನೀಡಿ ಮುಖ್ಯಮಂತ್ರಿಗಳನ್ನು ಮುಜುಗರಕ್ಕೀಡು ಮಾಡುವುದು ಅವರ ಘನತೆಗೆ ಶೋಭೆ ಬರುವುದಿಲ್ಲ. ತಾಳ್ಮೆಯಿಂದ ಇದ್ದರೆ ಮುಂದೊಂದು ದಿನ ಅವರಿಗೂ ರಾಜ್ಯದ ಅಧಿಕಾರ ಸಿಗಬಹುದು ಎಂದು ಹೇಳಿದರು.
 

ಆಣೆ, ಪ್ರಮಾಣ- ದೇವೇಗೌಡರ ಮೌನ
ಹುಬ್ಬಳ್ಳಿ:
`ಅಕ್ರಮಗಳ ಮಾಹಿತಿ ಬಹಿರಂಗಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ನಡುವಣ ಆಣೆ-ಪ್ರಮಾಣಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಪಕ್ಷದ  ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಆಣೆ- ಪ್ರಮಾಣಗಳು ಹೊಸತೇನಲ್ಲ ಎಂದು ಹೇಳಿದರು.

ಈ ಹಿಂದೆ ನಂಜನಗೂಡು ದೇವಸ್ಥಾನದಲ್ಲಿ `ಇನ್ನು ಮುಂದೆ ಯಾವುದೇ ತಪ್ಪು ಮಾಡುವುದಿಲ್ಲ, ಅಭಿವೃದ್ಧಿ ರಾಜಕೀಯ ಮಾಡುತ್ತೇನೆ...~ ಎಂದು ಆಣೆ ಮಾಡಿದ ಯಡಿಯೂರಪ್ಪ ಅವರು, ನಂತರ ಅದನ್ನು ಮರೆತಿದ್ದರು ಎಂದು ದೇವೇಗೌಡ ದೂರಿದರು.

ಯಡಿಯೂರಪ್ಪ ಅವರ ಪ್ರಮಾಣದ ಸವಾಲಿಗೆ ಪೂರಕ ಉತ್ತರ ನೀಡಿದ ಕುಮಾರಸ್ವಾಮಿ ಕ್ರಮದ ಬಗ್ಗೆ
ಪ್ರಶ್ನಿಸಿದಾಗ, ಅದು ಅವರ ವೈಯಕ್ತಿಕ ವಿಷಯ, ಇಂಥ ವಿಷಯದಲ್ಲಿ ಯಾರೂ ಸಲಹೆ ನೀಡುವುದು ಸರಿಯಲ್ಲ. ಎಲ್ಲರೂ ಆತ್ಮಚಿಂತನೆ ಮಾಡಿಕೊಳ್ಳಬೇಕು ಎಂದು  ಹೇಳಿದರು. `ಯಡಿಯೂರಪ್ಪ ಮುಖ್ಯಮಂತ್ರಿ ಆದುದಕ್ಕೆ ತಾಯಿ ಭುವನೇಶ್ವರಿ ಕೂಡ ಈಗ ಬೇಸರಗೊಂಡಿರಬೇಕು~ ಎಂದು ಅವರು ಹೇಳಿದರು. ತಮ್ಮ ಮನೆಯಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಕಡತಗಳು ಇವೆ ಎಂದು ಯಡಿಯೂರಪ್ಪ ಮಾಡಿರುವ ಆರೋಪಕ್ಕೆ  ದೇವೇಗೌಡರು ಪ್ರತಿಕ್ರಿಯಿಸಿದರು.

`ರಾಜ್ಯಕ್ಕೆ ಒಳಿತಾಗುವುದಿದ್ದರೆ ಪ್ರಮಾಣ ಮಾಡಲಿ~

ಪ್ರಜಾವಾಣಿ ವಾರ್ತೆ
ಬೆಂಗಳೂರು:
`ಇದು ಸರಿಯೋ ತಪ್ಪೋ ನಾನು ಹೇಳಲಾರೆ. ಆದರೆ, ಇದರಿಂದ ರಾಜ್ಯಕ್ಕೆ ಒಳಿತಾಗುವುದಾದರೆ ಅವರಿಬ್ಬರೂ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯ ಎದುರು ಪ್ರಮಾಣ ಮಾಡಲಿ...~

-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಇದೇ 27ರಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿರುವ ಕುರಿತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ವಾಮನ ಆಚಾರ್ಯ ಅವರು ನೀಡಿರುವ ಪ್ರತಿಕ್ರಿಯೆ ಇದು.

ಭಾನುವಾರ ಇಲ್ಲಿ ನಡೆದ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕುಮಾರಸ್ವಾಮಿ ಅವರು ಯಡಿಯೂರಪ್ಪನವರ ಮೇಲೆ ಇತ್ತೀಚೆಗೆ ಮಾಡಿರುವ ಆರೋಪಗಳು ಸುಳ್ಳು ಎಂದು ದೇವರೆದುರು ಹೊರತುಪಡಿಸಿ ಬೆರೆಲ್ಲೂ ಸಾಬೀತು ಮಾಡಲು ಸಾಧ್ಯವಿಲ್ಲ. ಅವರಿಬ್ಬರೂ ಮಂಜುನಾಥ ಸ್ವಾಮಿಯ ಮೇಲೆ ವಿಶ್ವಾಸ ಇರಿಸಿದ್ದಾರೆ, ಈ ಹಿನ್ನೆಲೆಯಲ್ಲೇ ಪ್ರಮಾಣ ಮಾಡುತ್ತಿದ್ದಾರೆ~ ಎಂದರು.

ಕೋರ್ಟ್ ಪ್ರಕರಣದ ಮೂಲಕ, ಬಿಜೆಪಿಯ ಶಾಸಕರನ್ನು ಹೈಜಾಕ್ ಮಾಡುವುದರ ಮೂಲಕ ಕುಮಾರಸ್ವಾಮಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರು. ಇದು ಯಾವುದೂ ಸಫಲವಾಗಲಿಲ್ಲ. `ಯಡಿಯೂರಪ್ಪ ಅವರು ಸಂಧಾನ ಮಾಡಿಕೊಳ್ಳಲು ಬಂದಿದ್ದರು~ ಎಂದು ಈಗ ಆರೋಪ ಮಾಡುತ್ತಿದ್ದಾರೆ. ಇದು ಸೌಜನ್ಯದ ರಾಜಕಾರಣ ಅಲ್ಲ ಎಂದರು.

`ಪಕ್ಷದ ವತಿಯಿಂದ ಜಾಹಿರಾತಿನ ಹಣ ಪಾವತಿ~
ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಉತ್ತರ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕೆಗಳಿಗೆ ಇದೇ 18ರಂದು ನೀಡಿದ ಜಾಹಿರಾತಿನ ಹಣವನ್ನು ಪಕ್ಷದ ವತಿಯಿಂದ ಪಾವತಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರು  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಮಕೃಷ್ಣ ಹೆಗಡೆ ಕಾಲದಿಂದಲೂ ಸರ್ಕಾರದ ಬಗ್ಗೆ ಅಥವಾ ಮುಖ್ಯಮಂತ್ರಿಗಳ ಬಗ್ಗೆ ಬರುವ ಆರೋಪಗಳಿಗೆ ಜಾಹಿರಾತಿನ ಮೂಲಕ ಸ್ಪಷ್ಟೀಕರಣ ನೀಡಿರುವ ಅನೇಕ ಉದಾಹರಣೆಗಳಿವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT