ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಟು ಮುರಿದ ನೆನಪಿನ ವಾರಸುದಾರಿಕೆ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ನನ್ನನ್ನು ಬರಹಗಾರನನ್ನಾಗಿಸಿದ ಸಂಗತಿಗಳು ಯಾವವು ಎಂದು ಯೋಚಿಸಿದಾಗಲೆಲ್ಲಾ ಎಪ್ಪತ್ತರ ಸುಮಾರಿಗೆ ಹಳ್ಳಿಗಳಲ್ಲಿ ಜೀವಂತವಿದ್ದ ಕಥನ ಪರಂಪರೆಗಳೇ ಕಾರಣ ಎಂದು ನನಗೆ ಅನ್ನಿಸುವುದುಂಟು. ನನ್ನ ಹಾಗೆ ಗಡಿಭಾಗಗಳಿಂದ ಬಂದವರಿಗೆ ಒಂದಕ್ಕಿಂತ ಹೆಚ್ಚು ಜನಪದ ಕಥನ ಪರಂಪರೆಗಳ ಸಂಬಂಧ ಒದಗಿ ಬಂದದ್ದರಿಂದ ಕಾವ್ಯಕಟ್ಟೋಣದ ಶಕ್ತಿ ಬದುಕಿನ ಕ್ರಮಗಳಿಂದಲೇ ದಕ್ಕಿತ್ತು.

ನಮ್ಮ ಊರು ಮೂರು ಭಾಷೆಗಳಲ್ಲಿ ಬದುಕನ್ನು ನಮಗೆ ಪರಿಚಯಿಸುತ್ತಿತ್ತು. ನಾವು ಆಡುತ್ತಿರುವ ನುಡಿಗಳು ಬೇರೆ ಬೇರೆ ಭಾಷೆಗಳು ಅಂತ ನನಗೆ ಗೊತ್ತಾಗಿದ್ದೇ ಹೈಸ್ಕೂಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುವ ಸಮಯಕ್ಕೆ. ಆಗಲೂ ಈಗಲೂ ನಮ್ಮ ಪರಿಸರದಲ್ಲಿ ಯಾರೊಬ್ಬರೂ ಒಂದೇ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ. ಕನ್ನಡ, ತೆಲುಗು ಮತ್ತು ತಮಿಳನ್ನು ಜನ ಸಮುದಾಯಗಳು ಒಂದೇ ಭಾಷೆ ಎಂಬಂತೆ ಬಳಸುತ್ತಿದ್ದವು.

ಭಾಷೆಗಳ ನಡುವಿನ ಆ  ನಂಟು ಈಗೀಗ ಆಧುನಿಕತೆಯ ರಾಜಕೀಯ ಕಾರಣಗಳಿಂದ ತೆಳುವಾಗುತ್ತಿರುವುದನ್ನು ಗಮನಿಸಿದ್ದೇನೆ. ಅಂದಿಗೆ ನಮ್ಮೂರಿನಲ್ಲಿ ರಾತ್ರಿಗಳೆಂದರೆ ಹಟ್ಟಿ ಪಡಸಾಲೆಗಳ ಕತ್ತಲಲ್ಲಿ ಮಾಯಾಬಜಾರುಗಳು ಹುಟ್ಟಿಕೊಳ್ಳುತ್ತಿದ್ದವು.

ಯಾವುದೇ ಹಟ್ಟಿಯ ಬಳಿ ಹೋದರೂ ಕಿವಿಯ ಮೇಲೆ ಯಾವುದಾದರೊಂದು ಕತೆ ಕೇಳುತ್ತಿತ್ತು. ಇಲ್ಲವೇ ನಾಯಕರ ಓಣಿಯಲ್ಲಿ ಕೋಲಾಟದ ಹಾಡು ಮತ್ತು ಕುಣಿತ ಕಣ್ಣಿಗೆ ಬೀಳುತ್ತಿತ್ತು. ನೂರಾರು ಕತೆಗಳು ಹೀಗೆ ಮೌಖಿಕವಾಗಿ ಪ್ರದರ್ಶನಗೊಳ್ಳುವಾಗ ಊರಿನ ಚಾವಡಿಯಲ್ಲಿ ಅಂದಿಗೆ ಏಳನೆಯ ತರಗತಿಯವರೆಗೆ ಓದಿದ್ದ ಯುವಕನೊಬ್ಬ ಸೀಮೆಎಣ್ಣೆ ಬುಡ್ಡಿ ಬೆಳಕಿನಲ್ಲಿ ಬರಹ ರೂಪದ ಕತೆಗಳನ್ನು ಓದಿ ಹೇಳುತ್ತಿದ್ದ.

ಗಂಡಸರೇ ಇದ್ದ ದಿನ `ಮದನಕಾಮರಾಜ'ನ ಕತೆಗಳನ್ನು ಮತ್ತು ಹೆಂಗಸರು ಇದ್ದ ದಿನ `ಭಟ್ಟಿವಿಕ್ರಮಾರ್ಕ'ನ ಸಾಹಸ ಕತೆಯನ್ನುಆತ ಓದುತ್ತಿದ್ದ. ಅಲ್ಲಿನ ಅನೇಕ ಸಂಗತಿಗಳನ್ನು ಜನ ತಮಗೆ ತಿಳಿದಂತೆ ತಮ್ಮ ತಮ್ಮ ಬದುಕಿಗೆ ಅನ್ವಯಿಸಿ ಮಾತನಾಡಿಕೊಳ್ಳುವ ಘಟನೆ ನನ್ನ ಕಣ್ಣಲ್ಲಿ ಇಂದಿಗೂ ಅಳಿಸದ ಚಿತ್ರದಂತೆ ಉಳಿದುಹೋಗಿದೆ.

ಆತ ಆ ಪುಸ್ತಕಗಳನ್ನು ಎಲ್ಲಿ ಸಂಪಾದಿಸಿದ ಎನ್ನುವುದು ಆವೊತ್ತಿಗೂ ಇವೊತ್ತಿಗೂ ಸೋಜಿಗದ ಸಂಗತಿಯಾಗಿಯೇ ಉಳಿದು ಹೋಗಿದೆ. ಅದೇ ಕಾಲದಲ್ಲಿ  ಕ್ರೈಸ್ತಧರ್ಮದ ಪ್ರಚಾರಕ್ಕಾಗಿ ವರ್ಷಕ್ಕೊಮ್ಮೆ ನಮ್ಮೂರಿಗೆ ಬಂದು ವಾರಗಟ್ಟಲೆ ನಿಲ್ಲುತ್ತಿದ್ದ ಕ್ರಿಶ್ಚಿಯನ್ ಪಾದ್ರಿಗಳು, ಅವರಲ್ಲಿ  ಕೆಲವರು ಯೂರೋಪಿನವರೂ ಇರುತ್ತಿದ್ದರು.

ಅವರ ಬಣ್ಣ, ಅವರ ಬಿಳಿ ಉಡುಪು ನನಗೆ ಕತೆಯಲ್ಲಿ ಕೇಳುತ್ತಿದ್ದ ಪಾತ್ರಗಳ ತರಹ ರೋಮಾಂಚನ ಮತ್ತು ಭಯವನ್ನು ಏಕಕಾಲಕ್ಕೆ ಉಂಟುಮಾಡುತ್ತಿದ್ದವು. ಅವರು ಅಂದು ನಮಗೆ ಹಂಚಿದ ಬೈಬಲ್ಲಿನ ಸರಳ ಅನುವಾದ ಪುಸ್ತಕವೇ ನಾನು ಓದಿರಬಹುದಾದ ಪಠ್ಯವಲ್ಲದ ಮೊದಲ ಪುಸ್ತಕವಿರಬಹುದು ಎನ್ನುವ ಗುಮಾನಿ ನನಗಿದೆ.

ಅಲ್ಲದೆ ಶಾಲೆಯಲ್ಲಿ ಮೇಷ್ಟ್ರು ಹೇಳುತ್ತಿದ್ದ ಬ್ರಿಟಿಷರ ಆಳ್ವಿಕೆ ಮತ್ತು ಸ್ವಾತಂತ್ರ್ಯದ ಹೋರಾಟದ ಸಂಗತಿಗಳಿಂದಾಗಿ ಅವರು ನಮ್ಮ ಶತ್ರುಗಳು ಎಂದೇ ನನಗಾಗ ಅರ್ಥವಾದದ್ದು. ನನಗೆ ಈಗ ಅನ್ನಿಸುವಂತೆ ಅಕ್ಷರ ಮತ್ತು ಮೌಖಿಕ ನಿರೂಪಣೆಗಳ ನಡುವೆ ನಮ್ಮ ಮನಸ್ಸಿನಲ್ಲಿ ಒಂದು ಬಗೆಯ ಗುಟ್ಟಿನ ಪೈಪೋಟಿ ನಡೆಯುತ್ತ್ದ್ದಿದಿರಬಹುದು.

ಅತ್ತ ರಾತ್ರಿಗಳಲ್ಲಿ, ಊರುಗಳಲ್ಲಿ ಪೂಜೆಗೊಳ್ಳುತ್ತಿದ್ದ ಗ್ರಾಮದೇವತೆಗಳು ಒಳಿತನ್ನು ಕಾಯುವ ಮತ್ತು ಕೆಡುಕನ್ನು ಶಿಕ್ಷಿಸುವ ಕಾರ್ಯಾಚರಣೆಗಳು, ಜಾತ್ರೆಗಳು, ರಾಮನವಮಿಯಲ್ಲಿ ನಡೆಯುತ್ತಿದ್ದ ಹತ್ತು ದಿನಗಳ ರಾಮಾಯಣದ ಹರಿಕತೆ ಹೀಗೆ ನನ್ನ ಒಳ ಲೋಕವನ್ನು ರೂಪಿಸುತ್ತಿರುವಾಗ ಇತ್ತ ಹಗಲು ಶಾಲೆಯಲ್ಲಿ ಅಕ್ಷರ ಪ್ರಪಂಚದ ಮೂಲಕ ಪರಿಚಯವಾಗುತ್ತಿದ್ದ ಪದ್ಯ ಗದ್ಯಗಳೆಂಬ ಕನ್ನಡ ಸಾಹಿತ್ಯ ನಿರೂಪಣೆಗಳು ನನಗೆ ಅತ್ಯಂತ ಸಪ್ಪೆಯಾಗಿ ಕಾಣುತ್ತಿತ್ತು.

ನಮ್ಮ  ಕಲಿಕೆಯ ಕ್ರಮ ಈಗೀಗ ಮತ್ತಷ್ಟು ಮೆಕ್ಯಾನಿಕಲ್ ಆಗಿರುವುದನ್ನು ಗಮನಿಸುತ್ತಿದ್ದೇನೆ. ಕೋಲಾರ ಜಿಲ್ಲೆಗೆ ನಮ್ಮೂರು ಸೇರಿದ್ದರೂ ತಮಿಳುನಾಡು ಗಡಿಗೆ ಹತ್ತಿಕೊಂಡಿರುವ ಮಾಸ್ತಿ ಪಕ್ಕದ ಒಂದು ಸಾಧಾರಣ ಹಳ್ಳಿ. ಕುಪ್ಪೂರು ಎಂಬ ಈ ಹಳ್ಳಿಯಿಂದ ಅನೇಕ ಪವಾಡಗಳ ಸಹಾಯದಿಂದ ಬೆಂಗಳೂರಿಗೆ ಓದಲು ಬಂದೆ.

ಇಂಥ ದಟ್ಟ ಗ್ರಾಮೀಣ ಹಿನ್ನೆಲೆಯಿಂದ ಬಂದ ನಾನು ಸಾಹಿತ್ಯದ ವಿದ್ಯಾರ್ಥಿಯಾದದ್ದು ಎಂಬತ್ತರ ನಡುಗಾಲದಲ್ಲಿ. ಆಗ ಸಾಹಿತ್ಯವೆಂದರೆ ದಲಿತ ಅಥವಾ ಬಂಡಾಯ ಚಳವಳಿಗಳು ಒಪ್ಪುವ ನಿರೂಪಣೆಗಳು ಮಾತ್ರ ಸಾಹಿತ್ಯವೆಂದು ಮಾನ್ಯತೆಯನ್ನು ಪಡೆಯುತ್ತಿದ್ದ ಕಾಲವದು.

ಕನ್ನಡದ ಎಲ್ಲಾ ಬರಹಗಾರರು ನೋವಿನ ಲೋಕದ ವಕ್ತಾರರಾಗಲು ತಾ ಮುಂದು ನಾ ಮುಂದು ಎಂದು ಹಾತೊರೆಯುತ್ತಿದ್ದ ಕಾಲ ಅದು. ಎಪ್ಪತ್ತರ ದಶಕದ ಆದಿಯಲ್ಲಿ ಕರ್ನಾಟಕದಲ್ಲಿ ನಡೆದ ಬೂಸಾ ಚಳವಳಿ, ನಂತರದ ಮೈಸೂರಿನಲ್ಲಿ ನಡೆದ ಶೂದ್ರ ಬರಹಗಾರರ ಒಕ್ಕೂಟ, ಇವುಗಳಿಗೆ ಇಂಬು ಕೊಡುವಂತಿರುವ ಕುವೆಂಪು ಅವರ ವೈಚಾರಿಕ ಚಿಂತನೆಗಳು, ಇವೆಲ್ಲಾ ಮುಪ್ಪುರಿಗೊಂಡು ಬದುಕನ್ನು ಚಿತ್ರಿಸುವ ಬದಲಿ ಲೋಕದೃಷ್ಟಿಯನ್ನು ಮಂಡಿಸಿದ್ದವು.

ಆ ಮೂಲಕ ಲೋಕ ಸಂವಾದವು ನವ್ಯದ ವ್ಯಕ್ತಿ ಕೇಂದ್ರವಾಗಿದ್ದ ಅಮೂರ್ತವಾದ ರೂಪಕ ಪ್ರಪಂಚದಿಂದ ಮತ್ತು ಅನುಭವದ ಪ್ರಾಮಾಣಿಕತೆಯ ವ್ಯಸನಗಳಿಂದ ಬಿಡಿಸಲು ಮುಂದಾಗಿತ್ತು.

ಆ ಕಾಲಘಟ್ಟದಲ್ಲಿ ನಡೆದ ಜನಪರ ಹೋರಾಟಗಳು ಸಾಹಿತ್ಯವು ನಿರ್ವಹಿಸಬೇಕಿರುವ ಸಾಮಾಜಿಕ ಹೊಣೆಗಾರಿಕೆಯನ್ನು ತೀವ್ರವಾಗಿ ಪ್ರಶ್ನಿಸಿತ್ತು. ಆ ಮೂಲಕ ಹೊಸ ತಲೆಮಾರಿಗೆ ಸಾಹಿತ್ಯವೆಂದರೆ ಅದು ಸಾಮಾಜಿಕ ತರತಮಗಳ ಜೊತೆಗಿನ ಜಗಳ, ಶೋಷಿತರ ಮತ್ತು ನಿರ್ಲಕ್ಷಿತರ ಬಗೆಗಿನ ಕಾಳಜಿ ಎನ್ನುವ ಸರಳ ತಿಳಿವಳಿಕೆಯನ್ನು ಬಲವಾಗಿ ರವಾನಿಸಿದವು.

`ಕಲೆಗಾಗಿ ಕಲೆ' ಎನ್ನುವ ಕಾವ್ಯ ಮೀಮಾಂಸೆ ಕಟುಟೀಕೆಗೆ ಒಳಗಾಗಿತ್ತು. ಕೆಲ ನವ್ಯಸಾಹಿತಿಗಳನ್ನು ಈ ಸಾಲಿನಲ್ಲಿ ಹೆಸರಿಸಿ ಅವರನ್ನು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯದೃಶ್ಯವಾಗಿತ್ತು.

`ಜೀವನಕ್ಕಾಗಿ ಕಲೆ' ಎನ್ನುವ ಜೀವನ ಮೀಮಾಂಸೆ ಸಾಹಿತ್ಯ ನಿರೂಪಣೆಗಳು ಸೃಜನಶೀಲ ಚಟುವಟಿಕೆಯನ್ನು ಮಾತ್ರವಲ್ಲದೆ ಓದುವ ಕ್ರಮವನ್ನು ನಿಯಂತ್ರಿಸುತ್ತಿತ್ತು. ಆದರೆ `ಲಂಕೇಶ್ ಪತ್ರಿಕೆ' ಇಂತಹ ವಿದ್ಯಮಾನವನ್ನು ಅನುಮಾನಿಸುತ್ತಾ `ಕನ್ನಡ ಪ್ರಜ್ಞೆ' ಪಡೆದುಕೊಳ್ಳಬೇಕಾದ ಸೂಕ್ಷ್ಮತೆಯ ಕಡೆಗೆ ಮನಸ್ಸು ಹೊರಳಿಸಬೇಕಾದ ಅನಿವಾರ್ಯತೆಯನ್ನು ಮನಗಾಣಿಸುತ್ತಿತ್ತು.

ಆದರೆ ಲಂಕೇಶರ ರಾಜಕೀಯ ವಾಗ್ವಾದಗಳೆ ಸಾಹಿತಿಗಳ ಮಧ್ಯೆ ಮುನ್ನೆಲೆಯಾಗಿ ಚರ್ಚೆಗೊಳ್ಳುತ್ತಿದ್ದವು. ದಲಿತ ಮತ್ತು ಬಂಡಾಯದ ನಿರೂಪಣೆಗಳು ಬದುಕಿನ ಬಹಿರಂಗದ ಬಿರುಕು ಮತ್ತು ಶೋಷಣೆಯ ಸ್ವರೂಪವನ್ನು ವಿವರಿಸಲು ಗಟ್ಟಿದನಿಯನ್ನು, ಆರೋಪಣಾ ರೀತಿಯ ಮಾತಿನ ವರಸೆಯನ್ನು ಬಳಸುವಲ್ಲಿ ಮಾತ್ರ ಶಕ್ತವಾಗಿದ್ದವು.

ಅದೇ ಅವುಗಳ ಮಿತಿಯೂ ಆಗಿತ್ತು. ಆದರೆ ಅದೇ ಸಮಯದಲ್ಲಿ ದೇವನೂರು ಬರೆಯುತ್ತಿದ್ದ ಬರೆಹದ ರೀತಿಯಾಗಲಿ, ಬದುಕನ್ನು ನೋಡುತ್ತಿದ್ದ ಕ್ರಮವಾಗಲಿ, ಅಥವಾ ಅಸ್ಪೃಶ್ಯತೆಯ ತಳ ಶೋಧಿಸುವ ಚಿಂತನಕ್ರಮವಾಗಲಿ ಹೊಸ ತಲೆಮಾರುಗಳಿಗೆ ನಡೆಯುವ ಸುಲಭದ ದಾರಿಯಾಗಿರಲಿಲ್ಲ.

ಅಂದು ರಚನೆಯಾಗುತ್ತಿದ್ದ ಬರಹಗಳಲ್ಲಿ ದೇವನೂರರನ್ನು ಅನುಕರಿಸುವ ಹಲವು ಪ್ರಯತ್ನಗಳು ಕೂಡ ಅಲ್ಲಲ್ಲಿ ಕಣ್ಣಿಗೆ ಬೀಳುತ್ತಿದ್ದವು. ಅಲ್ಲದೆ ಮತ್ತೊಂದು ಮುಖ್ಯವಾದ ಸಂಗತಿಯೆಂದರೆ, ಗಾಂಧಿ ಮತ್ತು ಅಂಬೇಡ್ಕರರನ್ನು ಪರಸ್ಪರ ಶತ್ರುಗಳಂತೆ ವಿವರಿಸುವ, ಗ್ರಹಿಸುವ ವಿದ್ಯಮಾನವು ಹೋರಾಟಗಳ ಮಾತುಕತೆಯ ನಡುವೆ ಬಲವಾಗಿ ಕಾಣಿಸುತ್ತಿತ್ತು.

ಈ ಸಮಸ್ಯೆ ಇಂದಿಗೂ ಮುಂದುವರೆದಿದೆ. ಹೀಗೆ ಕನ್ನಡದ ಬರವಣಿಗೆಯಲ್ಲಿ ಕೆಳ ಸಮುದಾಯಗಳು ತಮ್ಮ ದನಿ ಮತ್ತು ಚಹರೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅಕ್ಷರದ ಯಾಜಮಾನ್ಯ ಮತ್ತುಜ್ಞಾನದ ಪ್ರಭುತ್ವ ಪಡೆದ ಸಮುದಾಯಗಳು ತಮ್ಮ ಹಳೆಯ ಮಾತಿನ ವರಸೆಗಳನ್ನು ಯಾವ ಅಳುಕೂ ಇಲ್ಲದೆ ಮುಂದುವರಿಸಿದ್ದವು. ಈ ಸವಾಲನ್ನು ಎದಿರುಗೊಳ್ಳಲು ತೀವ್ರವಾದ ಹುಡುಕಾಟದಲ್ಲಿ ಹೊಸ ತಲೆಮಾರುಗಳು ತೊಡಗಿದ್ದವು.

ಸಹಜ ನ್ಯಾಯ ಮತ್ತು ಸಮಾನತೆಯ ವಿಷಯಗಳು ಆಗ ಬೋಧನೆಯ ಸಂಗತಿಗಳಾಗಿ ಸಮಾಜದ ಎಲ್ಲಾ ವಲಯಗಳಲ್ಲಿ ಚರ್ಚೆಗೆ ಒಳಗಾಗಿದ್ದವು. ತಮ್ಮ ಅಂತರಾಳದಲ್ಲಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಿದ್ದವರು, ಖಾಸಗಿ ಮಾತುಕಥೆಯಲ್ಲಿ ಎಗ್ಗಿಲ್ಲದೆ ತಮ್ಮ ಅತೃಪ್ತಿಯನ್ನು ಹೊರ ಹಾಕುತ್ತಿದ್ದವರೂ ಅಚ್ಚರಿಯೆಂಬಂತೆ ಸಾರ್ವಜನಿಕ ವಲಯಗಳ ಮಾತುಕತೆಯಲ್ಲಿ ಮಾತ್ರ ಅದನ್ನು ಬೆಂಬಲಿಸುವ ಮಾತನ್ನು ಆಡುತ್ತಿದ್ದರು.

ಕಾಳಜಿಯನ್ನು ನಟಿಸುತ್ತಿದ್ದರು.  ಆಗ ಅದು `ಪೊಲಿಟಿಕಲ್ ಕರೆಕ್ಟ್‌ನೆಸ್'ಎನ್ನುವ ಮರೆಮಾಚುತಂತ್ರ ಎನ್ನುವ ಅರಿವು ನನಗೆ ಇರಲಿಲ್ಲ. ಇಂತಹ ಇಕ್ಕಟ್ಟಿನ ಕಾಲದಲ್ಲಿ ನಾನು ಮೊದಲಿಗೆ ಕವಿತೆಯನ್ನು ಬರೆಯಲು ಪ್ರಾರಂಭಿಸಿದೆ.

ನನ್ನ ಆ ದಿನಗಳ ಕವಿತೆಗಳಲ್ಲಿ ಕ್ರಾಂತಿಯ ತರಹದ ವಸ್ತುಗಳನ್ನು ಆಯ್ದುಕೊಂಡರೂ ನಮ್ಮೂರಿನ ಹಾಡುಗಬ್ಬದ ಲಯಗಳು ಅಲ್ಲಿ ನಿರಾಯಾಸ ಕಾಣಿಸಿಕೊಳ್ಳುತ್ತಿದ್ದವು. ನಾನು ಆ ದಿನಗಳಲ್ಲಿ  ನನ್ನ ಬರವಣಿಗೆಯ ಆ ಚಹರೆಗಳನ್ನು ಕವಿತೆಯ ಅವಲಕ್ಷಣವೆಂದು ತಿಳಿದುಕೊಂಡಿದ್ದೆ. ಮತ್ತೂ ಈ ಸಮಸ್ಯೆಯಿಂದ ಪಾರಾಗುವ ಪ್ರಯತ್ನಗಳನ್ನು ನವ್ಯ ಕವಿತೆಗಳ ಅಧ್ಯಯನದ ಮೂಲಕ ಮುಂದುವರಿಸಿದೆ.

ದಲಿತ ಮತ್ತು ಬಂಡಾಯದ ಮಾದರಿಗಳು ಆಗಲೇ ಕಾವ್ಯ ಪಂಡಿತರಿಂದ ಗೇಲಿಗೆ ಒಳಗಾಗುತ್ತಿದ್ದವು. ಆ ಬರವಣಿಗೆಯ ಶೈಲಿಗೆ ಕವಿತೆಯ ರೂಪಕ ಶಕ್ತಿ  ಅವು ಕೇವಲ ಹೇಳಿಕೆಗಳೆಂದು ಟೀಕೆಗೊಳ್ಳುತ್ತಿದ್ದವು. ಕಾಲದೇಶಗಳನ್ನು ದಾಟಿ ಬರುವ ಕಾವ್ಯ ಮಾತ್ರ ಉತ್ತಮ ಕಾವ್ಯವೆಂದು ವಿಮರ್ಶಕರು ವಿವರಿಸುತ್ತಿದ್ದರು.

ಕಾವ್ಯಕ್ಕೆ ಅಂಥ ಮ್ಯೋಜಿಕಲ್‌ನ ಗುಣ ಎಲ್ಲಿಂದ ಬರುತ್ತದೆ ಎಂದು ನಾನು ಹಾಗೂ ನನ್ನಂತೆ ಹಳ್ಳಿಗಳಿಂದ ನಗರಗಳಿಗೆ ಬಂದ ಹುಡುಗರು, ಕಸ್ತೂರಿ ಮೃಗಗಗಳು ಪುನಗನ್ನು ಬೆನ್ನು ಹತ್ತಿ ಅಲೆಯುವ ಹಾಗೆ ಕಾವ್ಯ ಮಾದರಿಗಳ ಸುತ್ತ ಗಿರಕಿ ಹೊಡೆಯುತ್ತಿದ್ದೆವು.

ಈ ಪ್ರಯತ್ನಗಳಿಂದಾಗಿ ನನ್ನ ಕವಿತೆಗಳಲ್ಲಿ `ಆಕಾಸದಾಗ ಆ ನೀಲಿಯಾಗ ಚುಕ್ಕೆಯ ಚಿತ್ತಾರವೋ ನೀನ್ ಹಾಕಿದ ರಂಗೋಲಿಯೋ' ಎನ್ನುವ ಸರಳ ಉಪಮೆಗಳು ಮರೆಯಾಗುತ್ತಾ `ನೆಲ ಮನೆಯೊಳಗಿನ ತಳಮನೆಗೆ ತಳವಿರದ ಸೆರೆಮನೆಗೆ ಕಣ್ಣೊಳಗೆ ದೀಪಗಳಾರಿ' ರೀತಿಯ ಸಂಕೀರ್ಣ ಪ್ರತಿಮೆಗಳು ರೂಪಕಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು.

ಆ ದಿನಗಳಲ್ಲಿ ಕ್ರೈಸ್ಟ್ ಕಾಲೇಜಿನಲ್ಲಿ  ಚಿ.ಶ್ರಿನಿವಾಸರಾಜು ಪ್ರತಿವರ್ಷ ನಡೆಸುತ್ತಿದ್ದ `ಬೇಂದ್ರೆ ಕಾವ್ಯ ಸ್ಪರ್ಧೆ'ಯು ಹೊಸ ಕವಿಗಳಿಗೆ ಕನ್ನಡ ಕಾವ್ಯಲೋಕಕ್ಕೆ ವೀಸಾ ನೀಡುವ ಪ್ರಕ್ರಿಯೆಯಂತಿತ್ತು. ಈ ಸ್ಪರ್ಧೆಯ ಮೂಲಕವೇ ಅಬ್ದುಲ್ ರಶೀದ್, ಮೊಗಳ್ಳಿ ಮುಂತಾದ ನಮ್ಮ ತಲೆಮಾರಿನ ಮಹತ್ವದ ಬರಹಗಾರರು ಓದುಗರಿಗೆ ಪರಿಚಯವಾಗಿದ್ದರು.

ಆಗ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದ ಕವಿ ಎಚ್.ಎಸ್. ಶಿವಪ್ರಕಾಶ್ ಅವರು. ಅವರ ಕವಿತೆಗಳು ಅನುಭಾವ ಪರಂಪರೆಯ ಜೊತೆಗೆ ಅವರು ನಡೆಸುತ್ತಿರುವ ಸಂವಾದದ ಫಲವಾಗಿ ಕಟ್ಟುತಿದ್ದ ಪದ ರೂಪಗಳಲ್ಲಿ  ಮತ್ತೆ ಜನಪದ ಹಾಡಿನ ಲಯಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಆ ಪದ ಬಳಕೆ ಸಹಜವಾಗಿ ಕಾಣದೆ ಪ್ರಜ್ಞಾಪೂರ್ವಕವಾಗಿ ಬಳಸಿರುವಂತೆ ಕಾಣುತ್ತಿದ್ದವು.

ಆ ದಿನಗಳಲ್ಲೇ ಎಸ್.ಜಿ. ಸಿದ್ಧರಾಮಯ್ಯ ಅವರು ದೇಸಿನುಡಿಗಟ್ಟುಗಳನ್ನು ಬಳಸಿ ಕವಿತೆಯನ್ನು ಕಟ್ಟುತ್ತಿದ್ದರು. ಆ ಕವಿತೆಗಳ ಭಾಷಾ ಪ್ರಯೋಗಗಳು ಜನಪದ ನುಡಿಗಟ್ಟುಗಳಲ್ಲಿ  ಮೈಪಡೆದಿದ್ದರೂ ಕವಿತೆಯ ಒಳ ರಚನೆ ಮಾತ್ರ ನವ್ಯಶಿಲ್ಪದಲ್ಲಿ ಬಂಧಿಯಾಗಿತ್ತು.

ಇಂಥ ಚೌಕಟ್ಟುಗಳಿಂದ ರಚನೆಗೊಂಡ ಕವಿತೆಗಳ ನಿಕಟ ಓದು ನಾನು ಬಳಸುತ್ತಿರುವ ಭಾಷೆ, ಕಟ್ಟುತ್ತಿರುವ ರೂಪಕ ಇವುಗಳಿಗೂ ನನ್ನ ಬದುಕಿಗೂ ಇರುವ ಸಂಬಂಧದ ನಂಟು ಯಾವ ಬಗೆಯದೆಂದು ನಾನು ಯೋಚಿಸುವಂತೆ ಮಾಡಿತು. ಕವಿತೆ ನಮ್ಮ ಬದುಕಿನಿಂದ, ಸಮುದಾಯದ ನೆನಪಿನಿಂದ ಜೀವ ಪಡೆಯಬೇಕು ಎನ್ನುವ ಅರಿವು ಮೂಡುವುದಕ್ಕೆ ಸರಿ ಸುಮಾರು ಒಂದೂವರೆ ದಶಕವೇ ಬೇಕಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಎಪ್ಪತ್ತು ಎಂಬತ್ತರ ದಶಕದಲ್ಲಿ ಕರ್ನಾಟಕದ ಸಾಂಸ್ಕೃತಿಕ ವಾಗ್ವಾದದ ಕೇಂದ್ರವಾಗಿತ್ತು. ಕೀರಂ, ಕೆವಿಎನ್, ಡಿಆರ್‌ಎನ್ ಮುಂತಾದ `ಬೆಸ್ಟ್ ಮೈಂಡ್ಸ್ ಆಫ್ ಅವರ್ ಟೈಮ್' ಪಾಠ ಹೇಳುತ್ತಿದ್ದ ಕಾಲ ಅದು.

ನಾನಾಗ ಅಲ್ಲಿ ತೌಲನಿಕ ಸಾಹಿತ್ಯಾಧ್ಯಯನದ ವಿದ್ಯಾರ್ಥಿಯಾಗಿದ್ದೆ. ಅಲ್ಲದೆ ಕನ್ನಡ ಸಾಹಿತ್ಯದ ಹಲವು ಶ್ರೇಷ್ಠ ಲೇಖಕರು, ಸಂಶೋಧಕರು ಅಲ್ಲಿ ಅಧ್ಯಾಪಕರಾಗಿದ್ದರು. ಇವರ ಒಡನಾಟಗಳು  ನನ್ನ ಚಿಂತನಾ ಕ್ರಮವನ್ನು ರೂಪಿಸುತ್ತಿದ್ದವು. ಆ ಕಾಲಕ್ಕೆ ಸಾಹಿತ್ಯದಲ್ಲಿ  ಶ್ರೇಷ್ಠತೆ ಎಂಬ ಪ್ರಶ್ನೆಯು ಅಧ್ಯಯನ ಕೇಂದ್ರದಲ್ಲಿ ಗಂಭೀರಚರ್ಚೆಯನ್ನು ಹುಟ್ಟುಹಾಕಿತ್ತು.

ಶ್ರೇಷ್ಠತೆಯ ಚರ್ಚೆಯಲ್ಲಿ ಜನಪರ ನಿಲುವುಗಳ ಬರಹಗಳು ಪಡೆದುಕೊಳ್ಳಬೇಕಾದ ಕಲಾತ್ಮಕತೆ ನೆಲೆಯ ಪರ, ವಿರುದ್ಧವಾದ ವಿವಾದಗಳು ಬಿರುಸುಗೊಂಡಿತ್ತು. ಅನುಭವದ ಅಧಿಕೃತತೆಯನ್ನು ಶ್ರೇಷ್ಠ ಎನ್ನುವ ನಿಲುವು ಮತ್ತು ಅನುಭವದ ಪ್ರಾಮಾಣಿಕತೆಯನ್ನು ಉನ್ನತವೆನ್ನುವ ನಿಲುವುಗಳ ನಡುವೆ ನಡೆಯುತ್ತಿದ್ದ ಚರ್ಚೆ ಅದು ಎಂಬುದು ನನ್ನ ಗ್ರಹಿಕೆಯಾಗಿತ್ತು.

ಈ ವಿದ್ಯಮಾನವು ನನ್ನ ಬರವಣಿಗೆಯ ಮೇಲೆ ದೊಡ್ಡ ನಿಯಂತ್ರಣವನ್ನು ಹೇರಿತು. ಶ್ರೇಷ್ಠತೆ ಎನ್ನುವುದು ಬರವಣಿಗೆಯಲ್ಲಿರಬೇಕಾದ ಗುಣವೋ ಅಥವಾ ಬರಹದಲ್ಲಿ ಗುರುತಿಸಬೇಕಾದ ಲಕ್ಷಣವೋ ಎಂಬುದನ್ನು ಅರಿಯದ ನಾನು ಎಂಬತೈದರಿಂದ ಬರೆಯುತ್ತಾ ಬಂದಿದ್ದ ಕವಿತೆಗಳನ್ನು ಒಟ್ಟು ಮಾಡಿ ಸಂಕಲನ ಪ್ರಕಟಿಸಲು ಸಿದ್ಧನಾಗಿದ್ದವನು ಆ ಪ್ರಯತ್ನವನ್ನು ಕೈಬಿಟ್ಟೆ. ಅಂದು ಕೈಬಿಟ್ಟ ಹಾಡುಗಬ್ಬದ ಮಾದರಿಯ ಕವಿತೆಗಳನ್ನು ಇಂದಿಗೂ ಪ್ರಕಟಿಸಲು ಆಗಿಲ್ಲ.

ಶ್ರೇಷ್ಠತೆಯ ಪ್ರಶ್ನೆಯ ಮೂಲಕ ನವ್ಯ ಮನೋಧರ್ಮವು ಕನ್ನಡ ಸಾಹಿತ್ಯದಲ್ಲಿ ಮರು ರೂಪದಲ್ಲಿ ಮತ್ತೆ ಕಾಣಿಸಿಕೊಂಡ ಕ್ರಮ ಎಂಬುದು ನನ್ನ ಈಗಿನ ತಿಳಿವಳಿಕೆ. ಅದು ದಲಿತ ಬಂಡಾಯದ ಅಭಿವ್ಯಕ್ತಿಯ ವಿನ್ಯಾಸವನ್ನು ಪ್ರಶ್ನಿಸುವುದಕ್ಕಿಂತ ಆ ದಶಕಗಳಲ್ಲಿ ತಾತ್ವಿಕವಾಗಿ ಗರಿಕಟ್ಟಿಕೊಳ್ಳುತ್ತಿದ್ದ ತಳ ಜನ ಸಮುದಾಯಗಳ ಚಲನೆಯ ದಿಕ್ಕು ತಪ್ಪಿಸಲು ನಡೆದ ಸಾಂಸ್ಕೃತಿಕ ಹುನ್ನಾರವಾಗಿರಬಹುದೆಂಬ ಅನುಮಾನ ನನಗಿದೆ.

ಇದೇ ಸಮಯದಲ್ಲಿ  ಬಾಬರಿ ಮಸೀದಿಯ ಧ್ವಂಸವು ಸಾಹಿತ್ಯದಲ್ಲಿ ಶ್ರೇಷ್ಠತೆಯ ಚರ್ಚೆಯನ್ನು ಕೋಮು ಸೌಹಾರ್ದದಕಡೆಗೆ ಹೊರಳಿಸಿತು. ವೈದಿಕಪ್ರಜ್ಞೆಯ ಬರಹಗಾರರಲ್ಲಿ ಬಾಬರಿ ಮಸೀದಿ ಪ್ರಕರಣ ಆಂತರ್ಯದೊಳಗೆ ಸಂಭ್ರಮದ ವಿಷಯವಾದರೆ ಪ್ರಗತಿಪರರ್ಲ್ಲೆಲ `ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ'ವೆಂದು ಅಯೋಧ್ಯೆಯ ಘಟನೆಯನ್ನು ಖಂಡಿಸಿದರು.

ಇಲ್ಲಿಂದಾಚೆ ಕನ್ನಡದ ಪ್ರಮುಖ ಬರಹಗಾರರು ಕೋಮುಗಳು ಸೌಹಾರ್ದದಿಂದ ಇರಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಗಳನ್ನು ನಡೆಸಿದರು. ಇದ್ದಕ್ಕಿದ್ದ ಹಾಗೆ ನಮ್ಮ ನಡುವೆ ಭಾರತದೇಶ ಮತ್ತು ಸಮುದಾಯಗಳ ಬಹುತ್ವದ ಪ್ರಶ್ನೆಗಳು ಮಹತ್ವವನ್ನು ಪಡೆದುಕೊಂಡವು.

ಅಲ್ಲಿಂದ ಮುಂದೆ ಸರಿ ಸುಮಾರು ಹತ್ತು ವರ್ಷ ಕರ್ನಾಟಕದಲ್ಲಿ ಜಾಗತೀಕರಣ ಕುರಿತಾದ ಚರ್ಚೆ ಬಿರುಸಾಯಿತು. ಜಾಗತೀಕರಣದ ಅಡ್ಡ ಪರಿಣಾಮಗಳ ಅಪ್ಪಳಿಸುವಿಕೆ ಸಾಹಿತ್ಯ ನಿರೂಪಣೆಗಳಲ್ಲಿ ಪ್ರತಿಧ್ವನಿಗೊಂಡಂತೆ ಇತರ ಸಮಾಜ ವಿಜ್ಞಾನಗಳಲ್ಲಿ ಕಾಣಿಸಲಿಲ್ಲ.

ಈ ಜಾಗತೀಕರಣ ಪ್ರಕ್ರಿಯೆಯು ನಮ್ಮ ಸಂಪನ್ಮೂಲಗಳನ್ನು ಸಾಮ್ರೋಜ್ಯಶಾಹಿ ರಾಷ್ಟ್ರಗಳು ಮಾರುಕಟ್ಟೆಯ ಮೂಲಕ ಲಪಟಾಯಿಸುವ ಹುನ್ನಾರ ಅಲ್ಲದೆ ನಮ್ಮ ಜೀವನ ಕ್ರಮಗಳನ್ನು ನಿಧಾನ ನಾಶಗೊಳಿಸುವ ವಿದ್ಯಮಾನವೆಂಬ ಆತಂಕವನ್ನು ಎಲ್ಲಾ ಸಾಹಿತ್ಯ ನಿರೂಪಣೆಗಳು ತಮ್ಮ ಮೇಲೆ ತಾವೇ ಹೇರಿಕೊಂಡವು.

ಅದರ ರೂಪಕವೆಂಬಂತೆ ಅದನ್ನು `ಗೋಳೀಕರಣ'ವೆಂದು ಕರೆಯುವ ಪ್ರಯತ್ನವೂ ನಡೆಯಿತು. ಈ ಭರಾಟೆಯಲ್ಲಿ ರೈತರ ಆತ್ಮಹತ್ಯೆಗಳ ಸರಣಿ, ಮಲೆನಾಡಿನಲ್ಲಿ ನಕ್ಸಲ್ ಹಿಂಸಾ ಹೋರಾಟ, ಇವುಗಳ ಚರ್ಚೆ ಹಿಂದೆ ಸರಿದವು. ಪ್ರಗತಿಪರ ಚಳವಳಿಗಳಲ್ಲಿ ಕರಗಿಹೋಗದೆ ಉಳಿದುಹೋಗಿದ್ದ ಜಾತಿಪ್ರಜ್ಞೆ ಮತ್ತು ಚಿಂತನೆಯ ಹುಸಿತನದ ನಾಯಕತ್ವಗಳಿಂದಾಗಿ ಸಾಮಾಜಿಕ ಚಳವಳಿಗಳು ಹಲವು ಹೋಳುಗಳಾಗಿ ಚದುರಿಹೋದವು.

ಪ್ರಭುತ್ವ ಮತ್ತು ಧರ್ಮಪೀಠಗಳ ಮರ್ಜಿಗೆ ಬಿದ್ದ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಮತ್ತೆ ಅನಾಥವಾದವು. ಕಣ್ಮುಂದಿನ ಈ ವಿದ್ಯಮಾನಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುವ ಪ್ರಾಮಾಣಿಕತೆ ಸಾಹಿತಿಗಳಲ್ಲಿ ಇರಲಿಲ್ಲ. ಏಕೆಂದರೆ ಅವರು ಅಲಂಕರಿಸಿದ ಪದವಿಗಳಲ್ಲಿ, ವಶೀಲಿ ಮಾಡಿ ಪಡೆದ ಪ್ರಶಸ್ತಿಗಳಲ್ಲಿ ಅದು ಕಳೆದು ಹೋಗಿತ್ತು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕವಿಗಳ ಕುತ್ತಿಗೆಯ ಮೇಲೆ ಕತ್ತಿ ತೂಗುತ್ತಿರುವಾಗಲೂ ಅವರು ಇವೊತ್ತಿನಷ್ಟು ಭಾವ ಭ್ರಷ್ಟವಾಗಿರಲಿಲ್ಲ. ತಮ್ಮ ಎದೆಯ ದನಿಯನ್ನು ಕಳೆದುಕೊಂಡಿರಲಿಲ್ಲ. ಅನ್ಯಾಯವನ್ನು ಬೆಂಬಲಿಸಿಯೂ ಇರಲಿಲ್ಲ.

ಇಂದು ರಚನೆಯಾಗುತ್ತಿರುವ ಕನ್ನಡ ಸಾಹಿತ್ಯ ನಿರೂಪಣೆಗಳು ಕಳೆದ  ಒಂದು ಸಾವಿರ ವರ್ಷಗಳಲ್ಲಿ ಎಂದೂ ಅನುಭವಿಸದಷ್ಟು ಸೃಜನಶೀಲತೆಯ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿವೆ. ಅಲ್ಲದೆ ಸಾಹಿತ್ಯವು ಆಧುನಿಕತೆಯ ವರ್ತಮಾನ ಸೃಷ್ಟಿಸಿರುವ ಅನೇಕ ಅವಶ್ಯಕತೆಗಳನ್ನು ನಿಭಾಯಿಸಬೇಕಾಗಿರುವುದು ಕೂಡ ಬಹು ದೊಡ್ಡ ಸಮಸ್ಯೆಯಾಗಿ ರೂಪುಗೊಂಡಿದೆ.

ಪಟ್ಟಿ ಮಾಡಿದರೆ ಮುಗಿಯಲಾರದಷ್ಟು ಆತಂಕಗಳು `ಸೂಳ್ಪಡೆಯಲ್ ಅಪ್ಪುದು ಕಣಾ' ಎಂದು ಅಣಕಿಸುತ್ತಿವೆ. ಈ ಆರೋಪ ಪಟ್ಟಿಯಲ್ಲಿ ನನ್ನ ಹೆಸರನ್ನು ಬೇರೆ ಯಾರಾದರೂ ಸೇರಿಸಿಯಾರು? ಆದ್ದರಿಂದ ಬರಹಗಾರನ ಸಂಕಟಗಳ ನಿವೇದನೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ.

ಇಂದು ನನ್ನ ಬದುಕನ್ನು, ನನ್ನ ಸುತ್ತಲ ಲೋಕವನ್ನು ಗ್ರಹಿಸಲು - ಅಭಿವ್ಯಕ್ತಿಸಲು ಒದಗಿ ಬಂದಿರುವ ಸಿದ್ಧ ಚಿಂತನೆ ಚೌಕಟ್ಟುಗಳೇ ನನ್ನ ಬಂಧನಗಳೆಂದು ಅರಿವಾಗಿದೆ. ನನ್ನ ಮಟ್ಟಿಗೆ ಈ ಕಂದಕವನ್ನು ದಾಟಲು ನಾವು ತುಂಡರಿಸಿಕೊಂಡಿರುವ ಸಮುದಾಯಿಕ ನೆನಪುಗಳಿಗೆ ಹಿಂತಿರುಗುವುದರಿಂದ ನಿವಾರಿಸಿಕೊಳ್ಳಬಹುದು ಎಂಬ ನಂಬಿಕೆಯಿಂದ ಅಂತಹ ಪ್ರಯತ್ನವನ್ನು ನಡೆಸಿದ್ದೇನೆ.

ಇದು ನಾಸ್ಟಾಲಜಿಕ್ ಆದ ಪಲಾಯನವಾದ ಯೋಚನೆಯಲ್ಲ.  ದಾಟಿಕೊಳ್ಳುವ ಅಥವಾ ಉತ್ತರಿಸದೆ ಮುಂದೂಡುವ ತಂತ್ರವೂ ಅಲ್ಲ. ನೆನಪನ್ನು ವರ್ತಮಾನವಾಗಿಸಿಕೊಳ್ಳುವ ಪ್ರಯೋಗ. ನಾನು ಹೇಳುತ್ತಿರುವ ನೆನಪು ವೈಯಕ್ತಿಕ ನೆಲೆಯದಲ್ಲ.

ಸಾವಿರಾರು ವರ್ಷಗಳಿಂದ ಕನ್ನಡದ ಬದುಕನ್ನು ನಿರ್ವಹಿಸಿಕೊಂಡು ಬಂದಿರುವ ಅರಿವು ಅದು. ಇದು ಕೂಡ ಸಿದ್ಧ ಸೂತ್ರದಂತೆ ನಮಗೆ ಒದಗಿ ಬರುವುದಿಲ್ಲ. ಕುವೆಂಪು ಹೇಳಿದಂತೆ ಹಳೆಯ ವಡವೆಗಳನ್ನು ಕರಗಿಸಿ ನಮಗೆ ಇಂದು ಬೇಕಾದ ರೂಪಕ್ಕೆ ಎರಕ ಒಯ್ದುಕೊಳ್ಳುವ ಕ್ರಿಯೆ. ಆದ್ದರಿಂದಲೇ ನಾನೇ ಏನನ್ನಾದರೂ ಹೊಸದನ್ನು ಬರೆಯುವ ಹಂಬಲ ನನ್ನನ್ನು ಕಾಡಿಸಿಲ್ಲ.

ಪಂಪನಿಂದ ಆದಿಯಾಗಿ ಕುವೆಂಪು ದೇವನೂರು ಮಹಾದೇವ ಅವರ ಮೂಲಕ ಬರೆಸಿಕೊಂಡಿರುವ ಕನ್ನಡ ನಿರೂಪಣೆಗಳನ್ನು ನಾನು ನನ್ನವೆಂಬಂತೆ ಮರು ಬರೆಯುವ ಮಾರ್ಗವನ್ನು ಹಿಡಿದು ನಡೆಯುತ್ತಿದ್ದೇನೆ. ನೀರಿನ ನಂಟು ಬೆಳೆದರೆ ದಂಟು ಉಳಿದೀತು ಎನ್ನುವ ಗಾದೆಯನ್ನು ನಂಬಿ ನಡೆದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT