ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಂಸ್ಕೃತಿ ಬಹುಮುಖಿ ನೆಲೆಯ ತಣ್ಣನೆ ಕ್ರೌರ್ಯ

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಪುರಾಣ, ಇತಿಹಾಸ ಮತ್ತು ಜಾನಪದ ಜಗತ್ತುಗಳ ಜೊತೆ ಮುಖಾಮುಖಿ ಆಗುವುದರ ಮೂಲಕ ಗಿರೀಶ ಕಾರ್ನಾಡರು ತಮ್ಮ ಬಹುಪಾಲು ಕೃತಿಗಳ ವಿನ್ಯಾಸ ರೂಪಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರು ಪ್ರಮುಖವಾಗಿ ಎರಡು ಬಗೆಯ ಅನುಕೂಲಗಳನ್ನು ಸಾಧಿಸುತ್ತಾರೆ. ಮೊದಲನೆಯದಾಗಿ ಗಟ್ಟಿಯಾದ ಕಥಾವಸ್ತುವೊಂದು ಅವರ ಕೃತಿಗೆ ದೊರಕುತ್ತದೆ.

ಜೊತೆಗೆ ಅದು ಒಳಗೊಳ್ಳುವ ಅರ್ಥಪರಂಪರೆ ವಸ್ತುವಿಗೆ ಒಂದು ಸೂಕ್ತ ಹಿನ್ನೆಲೆಯನ್ನು ಒದಗಿಸಿ ಕೊಡುತ್ತದೆ. ಎರಡನೆಯದಾಗಿ ಕಾರ್ನಾಡರು ಈ ವಸ್ತುವನ್ನು `ಮುರಿದು ಕಟ್ಟುವುದರ' ಮೂಲಕ ಸಮಕಾಲೀನ ಸಮಸ್ಯೆಗಳನ್ನು ವಿಶ್ಲೇಷಿಸುತ್ತಾರೆ. `ಸ್ಮೃತಿ ಮತ್ತು ಸ್ಥಿತಿ'ಗಳ ಈ ಮುಖಾಮುಖಿಯ ಮೂಲಕ ಕಾರ್ನಾಡರು ತಮ್ಮ ನಾಟಕಗಳ ಸಂವಿಧಾನವನ್ನು ರೂಪಿಸಿಕೊಳ್ಳುತ್ತಾರೆ. ತುಘಲಕ್, ಹಯವದನ, ಯಯಾತಿ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ - ಈ ಎಲ್ಲ ನಾಟಕಗಳಲ್ಲೂ ಇದೇ ವಿನ್ಯಾಸವಿದೆ.

ಅಂಜುಮಲ್ಲಿಗೆ, ಒಡಕಲು ಬಿಂಬ, ಮದುವೆ ಆಲ್ಬಮ್ - ಮುಂತಾದ ಅವರ ನಾಟಕಗಳು ಇದಕ್ಕಿಂತ ಭಿನ್ನ ಸ್ವರೂಪದವು; ಸಾಮಾಜಿಕ ವಸ್ತುವನ್ನೊಳಗೊಂಡಂಥವು. ಇತ್ತೀಚಿನ ಅವರ `ಬೆಂದ ಕಾಳು ಆನ್ ಟೋಸ್ಟ್' ಈ ಮಾದರಿಗೆ ಸೇರುವ ನಾಟಕ. ಕನ್ನಡ ವಿಮರ್ಶೆ ಗಿರೀಶರ ಮೊದಲ ಮಾದರಿಯ ನಾಟಕಗಳನ್ನು ಚರ್ಚಿಸಿದಷ್ಟು ವಿಸ್ತಾರವಾಗಿ ಎರಡನೆಯ ಬಗೆಯ ನಾಟಕಗಳನ್ನು ಚರ್ಚೆಗೊಳಪಡಿಸಿಲ್ಲ. ಆದರೆ ಪ್ರಸ್ತುತ ನಾಟಕ `ಬೆಂದ ಕಾಳು ಆನ್ ಟೋಸ್ಟ್' ಹತ್ತಿ ಉರಿಯುತ್ತಿರುವ ಸಮಕಾಲೀನ ಸಮಸ್ಯೆಯನ್ನು ವಸ್ತುವನ್ನಾಗಿಸಿಕೊಂಡು ವಿಶ್ಲೇಷಿಸುವ ಮೂಲಕ ನಮ್ಮನ್ನು ಗಂಭೀರ ಚರ್ಚೆಗೆ ಆಹ್ವಾನಿಸುತ್ತದೆ. ಕಂಬಾರರ `ಶಿವರಾತ್ರಿ'ಯಂತೆ ಗಿರೀಶರ `ಬೆಂದ ಕಾಳು ಆನ್ ಟೋಸ್ಟ್' ಇತ್ತೀಚಿನ ಮಹತ್ವದ ಕೃತಿ. ಇವೆರಡೂ ಸಮಕಾಲೀನ ಸಮಸ್ಯೆಯನ್ನು ಮುಖಾಮುಖಿ ಆಗುವ ಎರಡು ಮಾದರಿಗಳು.

ಧರ್ಮ ಮತ್ತು ರಾಜಕೀಯ ಯಾವುದೇ ಕಾಲದಲ್ಲೂ, ಯಾವ ಸಮಾಜದಲ್ಲೂ ಅತ್ಯಂತ ಪ್ರಭಾವಿಯಾದ ಸಂಸ್ಥೆಗಳು. ಅಧಿಕಾರ ಕೇಂದ್ರಗಳಾದ ಇವು ನಮ್ಮ ಸಾಮಾಜಿಕ ರಚನೆಯ ವಿನ್ಯಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕನ್ನಡ ಸಾಹಿತ್ಯ ಪರಂಪರೆ ಈ ಎರಡು ಸಂಸ್ಥೆಗಳ ಪ್ರಭಾವ, ಪರಿಣಾಮಗಳನ್ನು ಉದ್ದಕ್ಕೂ ವಿಶ್ಲೇಷಿಸುತ್ತ ಬಂದಿದೆ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳೇ ಇದಕ್ಕೆ ಅತ್ಯುತ್ತಮ ಮಾದರಿ. ಪ್ರಭುತ್ವ - ಹಾಗೂ ಸೃಜನಶೀಲತೆಯ ಮುಖಾಮುಖಿಯನ್ನು ಅಲ್ಲಿ ನಾವು ಕಾಣುತ್ತೇವೆ. ಕನ್ನಡ ಸಾಹಿತ್ಯ ಮುಂದೆ ಇದನ್ನು ಬೇರೆ ಬೇರೆ ನೆಲೆಗಳಲ್ಲಿ ಮುಖಾಮುಖಿಯಾಗುತ್ತದೆ.

ಕಾರ್ನಾಡರ `ತುಘಲಕ್' ಸಹ ಈ ಕಾರಣದಿಂದಲೇ ನಮ್ಮ ಕಾಲದ ಮಹತ್ವದ ಶ್ರೇಷ್ಠ ಕೃತಿ. ರಾಜಕೀಯ, ಧರ್ಮ ಹಾಗೂ ಸಂವೇದನಾಶೀಲ ಸೃಜನಶೀಲತೆ ಮುಖಾಮುಖಿಯಾಗುವುದರ ಸಂಪೂರ್ಣ ಸ್ವರೂಪವನ್ನು ಕಾರ್ನಾಡರ ಪ್ರತಿಭೆ ಇಲ್ಲಿ ಅನನ್ಯವೆಂಬಂತೆ ಹಿಡಿದಿದೆ. ಆಧುನಿಕ ಜಗತ್ತಿನ ಮತ್ತೊಂದು ವಿಕಾರ - ಬೌದ್ಧಿಕ ದುರಹಂಕಾರ. ಹೃದಯದ ಭಾಷೆಯನ್ನು ಮರೆತ ಸಮಾಜ ಎದುರಿಸುವ ಅನಾಹುತಗಳನ್ನು `ಅಗ್ನಿ ಮತ್ತು ಮಳೆ'ಯಂತಹ ನಾಟಕದಲ್ಲಿ ಕಾರ್ನಾಡರು ಮುಖಾಮುಖಿಯಾಗುತ್ತಾರೆ. ಇಂಥದೇ ಸಮಕಾಲೀನ ಸವಾಲು ಜಾಗತೀಕರಣ ಸೃಷ್ಟಿಸುತ್ತಿರುವ ಸರಕು ಸಂಸ್ಕೃತಿಯ ತಣ್ಣನೆಯ ಕ್ರೌರ‌್ಯ. `ಬೆಂದ ಕಾಳು ಆನ್ ಟೋಸ್ಟ್' ನಗರ ಸಂಸ್ಕೃತಿಯ ಆಸೆಬುರುಕುತನ, ನಯವಂಚಕತೆ, ಸಾವಯವ ಸಂಬಂಧವಿಲ್ಲದ ಛಿದ್ರ ಬದುಕು, ಲೋಲುಪತೆ ಇವುಗಳನ್ನು ಪರಿಣಾಮಕಾರಿಯಾಗಿ ನಮ್ಮ ಅನುಭವಕ್ಕೆ ತಂದುಕೊಡುತ್ತದೆ. ನಾವೇ ತೋಡಿಕೊಳ್ಳುತ್ತಿರುವ ಇರುಳ ಬಾವಿಗೆ ಹಗಲಲ್ಲೇ ಬೀಳುವ ದುರಂತವನ್ನು ಗಿರೀಶರು ಇಲ್ಲಿ ಬೆಚ್ಚಿ ಬೀಳುವ ರೀತಿಯಲ್ಲಿ ಚಿತ್ರಿಸುತ್ತಾರೆ. ಈ ನಾಟಕದ ಪ್ರಭಾಕರ ತೇಲಂಗನ ಸ್ಥಿತಿ ಆಧುನಿಕ ಬದುಕಿನ ವಿಕೃತಿಯ ಅರ್ಥಪೂರ್ಣ ರೂಪಕ.

ಗಿರೀಶರನ್ನು ಗಾಢವಾಗಿ ಕಾಡಿದ ನಾಟಕ ಶೂದ್ರಕನ `ಮೃಚ್ಛಕಟಿಕ'. ಸಮೃದ್ಧವಾದ ನಗರವೊಂದರಲ್ಲಿ ಅವ್ಯಾಹತವಾಗಿ ನಡೆದಿರುವ ಜನಜಂಗುಳಿಯ ದೈನಂದಿನ ಆಗುಹೋಗುಗಳನ್ನು ಈ ನಾಟಕ ಜಗತ್ತಿನ ಬೇರೆ ಯಾವ ನಾಟಕದಲ್ಲೂ ಕಂಡಿರದಷ್ಟು ಹೃದಯಂಗಮವಾಗಿ, ಅಷ್ಟೇ ಸೂಕ್ಷ್ಮತೆಯೊಡನೆ ಚಿತ್ರಿಸುತ್ತದೆ ಎಂದು ಕಾರ್ನಾಡ ಹೇಳುತ್ತಾರೆ. ಈ ನಾಟಕದಲ್ಲಿ ಎಂಥ ಎದೆ ಕಲಕುವ ಸನ್ನಿವೇಶದಲ್ಲೂ ಪಾತ್ರಗಳ ಸಾಮಾಜಿಕ ಸ್ಥಾನಮಾನಗಳು ಆ ಘಟನೆಯ ಆರ್ಥಿಕ, ರಾಜಕೀಯ ಸ್ವರೂಪಗಳನ್ನು ನಿರಂತರವಾಗಿ ವ್ಯಾಖ್ಯೆಗೊಳಿಸುತ್ತಿರುತ್ತವೆ. ಮೃಚ್ಛಕಟಿಕದ ಈ ವಿನ್ಯಾಸವೇ `ಬೆಂದ ಕಾಳು ಆನ್ ಟೋಸ್ಟ್' ನಾಟಕದ ಸಂವಿಧಾನವನ್ನು ರೂಪಿಸಿದೆ.

ಕಾರ್ನಾಡ ಹೇಳುತ್ತಾರೆ: `ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಅನಿರೀಕ್ಷಿತವಾಗಿ ಬೆಳೆದು ದೈತ್ಯಸ್ವರೂಪ ತಾಳಿರುವ ಬೆಂಗಳೂರು ಮಹಾನಗರದ ಸಂದಿಗೊಂದಿಗಳೆಲ್ಲೆಲ್ಲಾ ಪ್ರತಿವರ್ಷಕ್ಕೆಂಬಂತೆ ಶೂದ್ರಕನ ಉಜ್ಜಯನಿ ನಗರದ ಚೈತನ್ಯ, ಅಸ್ವಸ್ಥತೆ, ಅರಾಜಕತೆ ಕಾಣಿಸಿಕೊಂಡು ನನ್ನನ್ನು ದಿಗ್ಭ್ರಮೆಗೊಳಿಸಿವೆ. ಮರುಳುಗೊಳಿಸಿವೆ. `ಬೆಂದ ಕಾಳು ಆನ್ ಟೋಸ್ಟ್' ಶೂದ್ರಕನ ಆ ಸಮಗ್ರ ನಾಗರಿಕ ದರ್ಶನಕ್ಕೆ ನಾನು ಸಲ್ಲಿಸುವ ಅಲ್ಪ ಕಾಣಿಕೆಯಾಗಿದೆ' (ಲೇಖಕರ ಮಾತು).

ನಗರ ಸಂಸ್ಕೃತಿಯ ಪ್ರತೀಕವಾದ ಅಂಜನಾ ಪಡಬಿದ್ರೆ ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡು ನಾಟಕದ ರಚನೆಯಿದೆ. ಇವರ ಮನೆಯ ಅಡುಗೆಯವಳು ವಿಮಲಾ; ಕೆಲಸದವಳು ಮುತ್ತು; ಅಂಜನಾಳ ಗೆಳತಿ ಪಾಪ್ಸ್ ಅಯ್ಯರ್; ಅಂಜನಾ ಅತ್ತೆ ಅನಸೂಯಾ ಪಡಬಿದ್ರೆ; ಮಗ ಕುಣಾಲ; ಇವರ ಮನೆಗೆ ಉದ್ಯೋಗಾಕಾಂಕ್ಷಿಯಾಗಿ ಬರುವವನು ಪ್ರಭಾಕರ ತೇಲಂಗ. ನಾಟಕ ಇವರೆಲ್ಲರ ಕತೆ ಹೇಳುತ್ತಾ ಆ ಮೂಲಕ ನಗರ ಸಂಸ್ಕೃತಿಯ ಬದುಕನ್ನು ಅನಾವರಣಗೊಳಿಸುತ್ತದೆ.

ಮೇಲ್ನೋಟಕ್ಕೆ ಪಡಬಿದ್ರೆ ಕುಟುಂಬದ ಕತೆಯಾದರೂ ಇಲ್ಲಿ ಬರುವ ಪ್ರತಿಯೊಬ್ಬರಿಗೂ ಅವರದೇ ಆದ ಜಗತ್ತಿದೆ. ವ್ಯಾವಹಾರಿಕ ಸಂಬಂಧದಿಂದ ಇವರೆಲ್ಲ ಬಂಧಿತರಾಗಿದ್ದರೂ ಪ್ರತಿಯೊಬ್ಬರದೂ ಪ್ರತ್ಯೇಕ ಜಗತ್ತು. ಪರಸ್ಪರ ಸಾವಯವ ಸಂಬಂಧವಿಲ್ಲದ ವಿಚ್ಛಿದ್ರ ಜಗತ್ತು. ಸ್ಪಷ್ಟವಾಗಿ ಹೇಳಬೇಕೆಂದರೆ `ಹೃದಯಹೀನ' ಜಗತ್ತು. ಇಲ್ಲಿಯ ಪ್ರತಿಯೊಬ್ಬರೂ ಮತ್ತೊಬ್ಬರ ಬದುಕಿನೊಡನೆ `ಆಟ'ವಾಡುತ್ತಾ ಹೋಗುತ್ತಾರೆ. ಈ ಆಟದ ಹಿಂದಿನ ತಣ್ಣನೆಯ ಕ್ರೌರ‌್ಯ ನಮ್ಮನ್ನು ಬೆಚ್ಚಿಬೀಳಿಸುತ್ತದೆ; ತಲ್ಲಣಗೊಳಿಸುತ್ತದೆ. ಆಧುನಿಕ ಜಗತ್ತಿನ ಅನೇಕ ಜಗತ್ತುಗಳನ್ನು - ಪರಸ್ಪರ ಸಂಬಂಧವಿಲ್ಲದ ವಿಚ್ಛಿದ್ರ ಜಗತ್ತುಗಳನ್ನು - ದೃಶ್ಯವತ್ತಾಗಿ ಈ ನಾಟಕ ಕಟ್ಟಿಕೊಡುತ್ತದೆ. ಇದು ನಾಟಕ ಒಳಗೊಳ್ಳುವ ಬಹುಮುಖೀ ನೆಲೆ; ಅರ್ಥವಿಸ್ತಾರ. ಕ್ರೌರ‌್ಯಕ್ಕೆ ಹತ್ತು ಮುಖವಲ್ಲ, ನೂರಾರು ಮುಖ.

ಪಾಪ್ಸ್‌ಅಯ್ಯರ್ ಅಂಜನಾ ಪಡಬಿದ್ರೆ ಗೆಳತಿ; ಹೈ ಸೊಸೈಟಿಯ ಜೊತೆ ಸಂಬಂಧವಿರುವಂಥವಳು. ಅಂಜನಾಳ ಮನೆಯೇ ಇವಳ ಬಿಡುವಿನ ವೇಳೆಯ ನೆಲೆ, ಉದ್ಯೋಗಾಕಾಂಕ್ಷಿಯಾಗಿ ಪಡಬಿದ್ರೆ ಮನೆಗೆ ಬರುವ ಪ್ರಭಾಕರ ತೇಲಂಗ ಎಂಬ ಮಧ್ಯಮವರ್ಗದ ವ್ಯಕ್ತಿಗೆ ಆಗಸದಷ್ಟು ಎತ್ತರದ ಆಸೆಯ ಆಮಿಷ ತೋರುತ್ತಾಳೆ. ಅಜೀಂ ಪ್ರೇಮ್‌ಜಿ ತನ್ನ ಕುಟುಂಬದ ಗೆಳೆಯರೆಂದೂ, ಅವರ ವಿಪ್ರೋ ಕಂಪೆನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಪದವಿ ಕೊಡಿಸುವುದಾಗಿ ಭರವಸೆ ನೀಡುತ್ತಾಳೆ. ಇರುವ ಕೆಲಸಕ್ಕೆ ರಾಜೀನಾಮೆ ಕೊಡಿಸುತ್ತಾಳೆ. ನೆಲೆಯೂರಿದ್ದ ಕುಟುಂಬವನ್ನು ಅತಂತ್ರಗೊಳಿಸಿ ತೇಲಂಗನ ಹೆಂಡತಿ, ಮಕ್ಕಳನ್ನು ಊರಿಗೆ ಕಳಿಸುತ್ತಾಳೆ. ತೇಲಂಗನನ್ನು ಆಸೆಯ ಅಲೆಯಲ್ಲಿ ತೇಲಿಸಿ ಇಂಟರ್‌ವ್ಯೆಗೂ ಕಳಿಸುತ್ತಾಳೆ.

ಆದರೆ ಕೆಲಸ ಸಿಗಬೇಕಲ್ಲ! ಪಾಪ್ಸ್ ಅಯ್ಯರ್‌ಗೆ ಪ್ರೇಮ್‌ಜಿ ಗೊತ್ತಿದ್ದರೆ ತಾನೇ? ಇವೆಲ್ಲ ಪಾಪ್ಸ್ ಅಯ್ಯರ್‌ಗೆ `ಆಟ'; ಆದರೆ ತೇಲಂಗಿಗೆ ಜೀವನ್ಮರಣದ ಪ್ರಶ್ನೆ. ಆಧುನಿಕ ಬದುಕಿನಲ್ಲಿ `ಕ್ರೌರ‌್ಯ'ವೂ ಮನರಂಜನೆಯ ವಸ್ತು. ನಮ್ಮ ಮಾಧ್ಯಮಗಳನ್ನು ಗಮನಿಸಿ. ಎಲ್ಲ ಸರಕುಗಳಂತೆ ಅವರಿಗೆ ಅದೂ ಒಂದು ಸರಕು; ಲಾಭದ ದಂಧೆ. ತೇಲಂಗನ ಸ್ಥಿತಿ ಸಂವೇದನಾಶೀಲ ಮನಸ್ಸಿಗೆ ಆಘಾತವುಂಟು ಮಾಡುತ್ತದೆ. ಆದರೆ ಆತನ ಈ ಸ್ಥಿತಿಗೆ ಪಾಪ್ಸ್ ಅಯ್ಯರ್‌ನಷ್ಟೇ ಅವನೂ ಕಾರಣ ಎಂಬ ಸತ್ಯ ಆಧುನಿಕ ಬದುಕಿನ ವಿಕೃತಿಯ ದರ್ಶನ ಮಾಡಿಸುತ್ತದೆ.

ಸಾವಯವ ಸಂಬಂಧವಿಲ್ಲದ ಆಧುನಿಕ ಬದುಕಿನಲ್ಲಿ ಇಂಥ ಆಟ ಮೇಲುವರ್ಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ವಲಯಗಳಲ್ಲೂ ಇದೇ ಕತೆ, ವ್ಯಥೆ. ವಿಮಲಾ ಹಾಗೂ ಮುತ್ತು ಈ ಜಗತ್ತಿನ ಇನ್ನೊಂದು ನೆಲೆಯನ್ನು ಅನಾವರಣಗೊಳಿಸುತ್ತಾರೆ. ನಗರ ಸಂಸ್ಕೃತಿಯಲ್ಲಿ ಯಾವುದೂ ಮೂರ್ತ ರೂಪದಲ್ಲಿ ಕಾಣಿಸಿಕೊಳ್ಳುವುದಿಲ್ಲ. ದೇವರಂತೆ ಆಧುನಿಕ ಸಂಸ್ಕೃತಿಯ ದೆವ್ವವೂ ಅಮೂರ್ತವೇ. ಖತರ್ನಾಕ್ ವಿಮಲಾ ವಿಳಾಸವಿಲ್ಲದವಳು, ಚಾಲಾಕಿ, ಲೋಲುಪ ಬದುಕಿಗೆ ಒಲಿದ ಅವಳು ತನ್ನ ಸ್ವಾರ್ಥಕ್ಕೆ ಎಲ್ಲರನ್ನೂ ಬಳಸಿಕೊಳ್ಳುತ್ತಾಳೆ, `ಆಟ'ವಾಡಿಸುತ್ತಾಳೆ. ಇವಳ `ಆಟ'ದಲ್ಲಿ ಮುತ್ತು, ಚಿನ್ನಸ್ವಾಮಿ, ಆಟೊ ಡ್ರೈವರ್, ಸರೋಜಮ್ಮ ಕಡೆಗೆ ಕುಣಾಲನೂ ಪಾತ್ರಧಾರಿಗಳೇ. ಪಾಪ್ಸ್ ಅಯ್ಯರ್ ನಾಟಕದ ಒಂದು ತುದಿಯಲ್ಲಿದ್ದರೆ, ವಿಮಲಾ ನಾಟಕದ ಮತ್ತೊಂದು ತುದಿಯಲ್ಲಿದ್ದಾಳೆ. ನಡುವೆ `ನಾಟಕ'. ಈ ನಾಟಕದ ರಚನೆಯ ಸುಭದ್ರ ಬಂಧ ಕಾರ್ನಾಡರ ಪ್ರತಿಭೆಗೆ ಸಂಬಂಧಿಸಿದ್ದು.

ಇಪ್ಪತ್ತರ ಕುಣಾಲ, ಎಪ್ಪತ್ತರ ಅನಸೂಯಮ್ಮ ಈ ನಾಟಕದ ಮತ್ತೆರಡು ಪ್ರಮುಖ ಪಾತ್ರಗಳು; ಇವರಿಬ್ಬರ ಬದುಕೂ ವಿಕ್ಷಿಪ್ತ. ಇಬ್ಬರಿಗೂ ಜವಾಬ್ದಾರಿಗಳಿಲ್ಲ; ಒಂದು ರೀತಿ ಪರಾವಲಂಬಿಗಳು. ನಮ್ಮ ಸಮಾಜದಲ್ಲಿ ಮಾರ್ಗದರ್ಶನ ಮಾಡಬೇಕಾದ ಹಿರಿಯರು; ಕಲಿತು ಬದುಕು ರೂಪಿಸಿಕೊಳ್ಳಬೇಕಾದ ಕಿರಿಯರು - ಗೊಂದಲಕ್ಕೊಳಗಾಗಿರುವ ಸ್ಥಿತಿಯನ್ನು ಇವರು ಸಮರ್ಥವಾಗಿ ಪ್ರತಿನಿಧಿಸುತ್ತಾರೆ. ಉಪಭೋಗ ಸಂಸ್ಕೃತಿ ನಮ್ಮ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮದ ಪ್ರತಿಫಲದಂತೆ ಇವರಿದ್ದಾರೆ. ಕುಣಾಲನಿಗೆ ವಿಮಲಾ `ಹೀರೋಯಿನ್' ಆಗಿ ಕಾಣುವ ಕ್ರಮ ನಾಟಕದ ದುರಂತ ವ್ಯಂಗ್ಯ. ಅನಸೂಯಮ್ಮನ `ಅಶ್ವಮೇಧಯಾಗ' ಇದರ ಇನ್ನೊಂದು ಮುಖ.

ಚಿತ್ತಾಲರ `ಮೂರು ದಾರಿಗಳು' ಕಾದಂಬರಿಯ ರಂಗಪ್ಪನಂತೆ, ಕಾರಂತರ `ಅಳಿದ ಮೇಲೆ' ಕಾದಂಬರಿಯ ಯಶವಂತರಾಯರಂತೆ, `ಬೆಟ್ಟದ ಜೀವ' ಕಾದಂಬರಿಯ ಶಂಭುವಿನಂತೆ ಅದೃಶ್ಯವಾಗಿಯೇ ಪ್ರಕಟವಾಗಿ ಕಾಣಿಸಿಕೊಳ್ಳದೇ ಪ್ರಭಾವ ಬೀರುವ ಪಾತ್ರ ಈ ನಾಟಕದ `ಪಡಬಿದ್ರೆ' ರಂಗದ ಮೇಲೆ ಕಾಣಿಸದಿದ್ದರೂ ಕಾಡುವ ಪಾತ್ರ. ಗಿರೀಶ ಕಾರ್ನಾಡರ ಕನ್ನಡ ಭಾಷೆಯ ಬಗೆಗಿನ ತಕರಾರು ಈ ನಾಟಕದಲ್ಲೂ ಮುಂದುವರೆಯುತ್ತದೆ. `ಬುದ್ಧಿಭ್ರಂಶ' `ವೈದಿಕ್' ಇಂಥ ಪ್ರಯೋಗಗಳು ಕಾರ್ನಾಡರಿಗೆ ಮಾತ್ರ ಸಾಧ್ಯ.

`ಬೆಂದ ಕಾಳು ಆನ್ ಟೋಸ್ಟ್' - ಶೀರ್ಷಿಕೆಯೂ ಅರ್ಥಪೂರ್ಣವಾಗಿದೆ.  Baked beans on Toast (ಟೋಸ್ಟಿನ ಮೇಲೆ ಸುರಿದ ಬೇಯಿಸಿದ ಕಾಳು) ಪಾಶ್ಚಾತ್ಯ breakfast ನ ಒಂದು ಪ್ರಮುಖ ಅಂಗ. ನಮ್ಮ ಸದ್ಯದ ಪರಿಸ್ಥಿತಿಯೂ ಇದೇ. ಈ ಶೀರ್ಷಿಕೆ ಒಂದು ರೀತಿಯಲ್ಲಿ ಸಂಸ್ಕೃತಿ ವ್ಯಾಖ್ಯಾನವೂ ಹೌದು.
ಕಾರ್ನಾಡರು ಈ ನಾಟಕದ ಮೂಲಕ ನಮ್ಮ ಬದುಕಿನ ಹೊಸ ರಾಗವೊಂದನ್ನು ಸಮರ್ಥವಾಗಿ ಪರಿಚಯಿಸಿದ್ದಾರೆ. ಅದು ‘Bangalore ಭಯಾನಕ' ಅಥವಾ `ನಗರ ಭಯಾನಕ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT