ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಮ್ಮನೇ ಉತ್ತಮ ವಿಮರ್ಶಕಿ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಯಾರ ಟೀಕೆಗೂ ಉತ್ತರಿಸುವುದಿಲ್ಲ. ಪ್ರತಿಕ್ರಿಯಿಸುವುದಿಲ್ಲ. ಕೇವಲ ಅಭಿಪ್ರಾಯಗಳೆಂದು ಗೌರವಿಸಿ ಸುಮ್ಮನಾಗುತ್ತೇನೆ. ಆದರೆ ಅಮ್ಮನ ಟೀಕೆಗಳಿಗೆ ಮಾತ್ರ ಗಂಭೀರವಾಗಿ ಯೋಚಿಸುತ್ತೇನೆ' ಹೀಗೆ `ದಬಾಂಗ್ 2' ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.ಯಾರು ಏನೇ ಹೇಳಿದರೂ ಅದರ ಹಿಂದಿನ ಉದ್ದೇಶ ಅರಿಯುವ ಆಸಕ್ತಿಯಾಗಲೀ ಕುತೂಹಲವಾಗಲೀ ಅವರಿಗಿಲ್ಲವಂತೆ. ಆದರೆ ಅಮ್ಮ ಏನಾದರೂ ಹೇಳಿದರೆ ಅದು ಅವರ ಒಳಿತಿಗಾಗಿಯೇ ಇರುತ್ತದೆ ಎಂಬ ಖಾತರಿ ಇದೆಯಂತೆ.

ಪೂನಮ್ ಸಿನ್ಹಾ ಉತ್ತಮ ನಟಿಯೂ ಹೌದು. ಅಮ್ಮನೂ ಹೌದು. ವಿಮರ್ಶಕಿಯೂ ಹೌದು. ಹಾಗಾಗಿ ಅಮ್ಮನ ಟೀಕೆಗಳನ್ನು ತೆರೆದ ಕಿವಿಯಿಂದ ಕೇಳುತ್ತೇನೆ. ಮುಕ್ತ ಹೃದಯದಿಂದ ಅವನ್ನು ಸ್ವೀಕರಿಸುತ್ತೇನೆ. ಅಗತ್ಯವಿದ್ದಲ್ಲೆಲ್ಲ ಸುಧಾರಣೆ, ಬದಲಾವಣೆಗೆ ಸಿದ್ಧಳಾಗುತ್ತೇನೆ ಎಂದು ಸೋನಾಕ್ಷಿ ಅಮ್ಮನ ಬಗ್ಗೆ ಮುಂಬೈನಲ್ಲಿ ಹೇಳಿದ್ದಾರೆ.ಉಡುಗೆ, ನೃತ್ಯ ಎಲ್ಲದರ ಕುರಿತು ಅಮ್ಮನೊಂದಿಗೆ ಚರ್ಚಿಸಿದಾಗಲೇ ಅವರಿಗೆ ಸಮಾಧಾನವಂತೆ. ಸಹೋದರರಾದ ಲವ ಮತ್ತು ಕುಶ ಮಾತ್ರ ಈವರೆಗೂ ಏನೂ ಹೇಳಿಲ್ಲವಂತೆ. ಆದರೆ ತಮ್ಮ ಸಹೋದರಿಯ ಬಗ್ಗೆ ಹೆಮ್ಮೆ ಪಡುತ್ತಾರಂತೆ.

ಅಪ್ಪ ಎಲ್ಲದರಿಂದಲೂ ದೂರವಿರುತ್ತಾರೆ. ಅವರಿಗೆ ಸಮಯವೂ ದೊರೆಯುವುದಿಲ್ಲ. ಆದರೆ ಅಮ್ಮ ಮತ್ತು ಮಗಳ ನಡುವಿನ ಚರ್ಚೆಯನ್ನು ಸೋನಾಕ್ಷಿಯೇ ಸಂಕ್ಷಿಪ್ತವಾಗಿ ವಿವರಿಸುವುದಂತೆ. ಅಪ್ಪ ಮತ್ತು ಮಗಳ ಮಾತುಗಳ ನಡುವೆ ಪೂನಮ್ ಕಿವಿಯಾಗುತ್ತಾರಂತೆ.ಪ್ರತಿ ಸಿನಿಮಾಗೆ ಸಹಿ ಮಾಡುವ ಮುನ್ನ ಕುಟುಂಬದಲ್ಲಿ ಒಂದು ಸುತ್ತು ಚರ್ಚೆ ನಡೆಯುವುದು ಸಹಜವಂತೆ. ಈವರೆಗೂ ಈ ಚರ್ಚೆಯಿಲ್ಲದೇ ಯಾವುದೇ ಚಿತ್ರಗಳಿಗೆ ಸೋನಾಕ್ಷಿ ಸಹಿ ಹಾಕಿಲ್ಲ. ಅಪ್ಪ ಅಮ್ಮ ಇಬ್ಬರೂ ಸಿನಿಮಾದಲ್ಲಿ ಸಾಕಷ್ಟು ಸಮಯ ಕಳೆದಿರುವುದರಿಂದ ಅವರ ತೀರ್ಮಾನ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಈ ಮುದ್ದಿನ ಮಗಳದ್ದು.

ಕೆಲವೊಮ್ಮೆ ಅಮ್ಮ ಸಹ ಸಿನಿಮಾದ ನಿರೂಪಣೆ ಆಗುವಾಗ ಸೋನಾಕ್ಷಿಗೆ ಜೊತೆಯಾಗುತ್ತಾರಂತೆ. ತಮ್ಮ ಇಡೀ ಕುಟುಂಬ ತಮ್ಮಂದಿಗಿರುವುದರಿಂದಲೇ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸರಳವಾಗಿದೆ ಎನ್ನುವುದು ಸೋನಾಕ್ಷಿ ಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT