ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಪ್ರಯಾಣಕ್ಕೆ ತಗ್ಗದ ಉತ್ಸಾಹ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ದಿನವೂ `ನಮ್ಮ ಮೆಟ್ರೊ~ ಸಂಚಾರದ ಸವಿಯನ್ನು ನಾಗರಿಕರು ಸಡಗರದಿಂದಲೇ ಆಸ್ವಾದಿಸಿದರು. ಗುರುವಾರ ಇದ್ದಂತೆ ಸತತ ನೂಕು ನುಗ್ಗಲು ಕಾಣಲಿಲ್ಲ. ಆದರೂ ಶುಕ್ರವಾರ ಮೆಟ್ರೊದಲ್ಲಿ ಪ್ರಯಾಣ ಮಾಡಿದವರ ಸಂಖ್ಯೆ ಮೊದಲ ದಿನಕ್ಕಿಂತ ಹೆಚ್ಚಾಗಿಯೇ ಇತ್ತು. ಶನಿವಾರ, ಭಾನುವಾರ ಹಾಗೂ ಹಬ್ಬದ ದಿನಗಳಂದು ಜನರು ಭಾರಿ ಸಂಖ್ಯೆಯಲ್ಲಿ ಪ್ರಯಾಣ ಮಾಡುವ ನಿರೀಕ್ಷೆ ಇದೆ.

ಗುರುವಾರ ಸಂಜೆ 4ರಿಂದ ರಾತ್ರಿ 11.30ರವರೆಗೆ 38,546 ಸಾವಿರ ಮಂದಿ ಪ್ರಯಾಣ ಮಾಡಿದ್ದು, ಒಟ್ಟು 7.53 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗಿದೆ. ಶುಕ್ರವಾರ ಬೆಳಿಗ್ಗೆ 6ರಿಂದ ರಾತ್ರಿ 7ರವರೆಗೆ 39,639 ಮಂದಿ ಪ್ರಯಾಣಿಸಿದ್ದು, 6.94 ಲಕ್ಷ ರೂಪಾಯಿ ಸಂಗ್ರಹವಾಗಿತ್ತು.

`ಸದ್ಯ ಪ್ರತಿದಿನ ರಾತ್ರಿ 10ರವರೆಗೆ ಮೆಟ್ರೊ ರೈಲುಗಳು ಓಡಾಟ ನಡೆಸಲಿವೆ. ನಿಲ್ದಾಣಗಳಲ್ಲಿ ಪ್ರಯಾಣಿಕರು ಇದ್ದರೆ ರಾತ್ರಿ 11ರವರೆಗೆ ರೈಲು ಸಂಚಾರದ ಸಮಯವನ್ನು ವಿಸ್ತರಿಸಲಾಗುವುದು. ನಾಗರಿಕರು ಬಯಸಿದರೆ ಮಧ್ಯರಾತ್ರಿ ತನಕ ರೈಲು ಓಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಸಿದ್ಧವಿದೆ~ ಎಂದು ನಿಗಮದ ನಿರ್ದೇಶಕ (ಕಾರ್ಯಾಚರಣೆ) ಡಿ.ಡಿ.ಪಹುಜ ವರದಿಗಾರರಿಗೆ ತಿಳಿಸಿದರು.

`ಬೆಳಿಗ್ಗೆ 6ರಿಂದ 8ರವರೆಗೆ, ರಾತ್ರಿ 8ರಿಂದ 10ರವರೆಗೆ ಪ್ರತಿ 15 ನಿಮಿಷಕ್ಕೊಂದರಂತೆ ಹಾಗೂ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರತಿ 10 ನಿಮಿಷಕ್ಕೊಂದರಂತೆ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ರೈಲುಗಳನ್ನು ಓಡಿಸಲಾಗುತ್ತಿದೆ. ಹಬ್ಬ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದರೆ 8 ನಿಮಿಷಕ್ಕೊಂದು ರೈಲು ಓಡಿಸಲಾಗುವುದು~ ಎಂದು ಅವರು ಹೇಳಿದರು.

`ರೈಲುಗಳ ಸಂಚಾರಕ್ಕೆ ಬೇಕಾದ ವಿದ್ಯುತ್, ಸಿಬ್ಬಂದಿ ವೇತನ ಮತ್ತಿತರ ನಿರ್ವಹಣಾ ವೆಚ್ಚಗಳಿಗೆ ಪ್ರತಿ ದಿನ 6 ಲಕ್ಷ ರೂಪಾಯಿ ಬೇಕಾಗುತ್ತದೆ~ ಎಂದು ತಿಳಿಸಿದ ಅವರು, `ಒಟ್ಟು 42.30 ಕಿ.ಮೀ. ಉದ್ದದ ಮೊದಲ ಹಂತದ ಎಲ್ಲ ರೀಚ್‌ಗಳಲ್ಲಿ ಸಂಚಾರ ಆರಂಭವಾದ ಮೇಲೆ ನಿಗಮವು ಪಡೆದಿರುವ ಸಾಲದ ಮರು ಪಾವತಿ ಪ್ರಾರಂಭಿಸಬೇಕಾಗುತ್ತದೆ~ ಎಂದರು.

`ಈಗ ಸಂಚರಿಸುತ್ತಿರುವ 3 ಬೋಗಿಗಳನ್ನು ಒಳಗೊಂಡ ರೈಲು ಗಾಡಿಗೆ ಸಾವಿರ ಜನರನ್ನು ಕರೆದೊಯ್ಯುವ ಸಾಮರ್ಥ್ಯ ಇದೆ. ಆದರೆ ಯಾವುದೇ ಒಂದು ನಿಲ್ದಾಣದಲ್ಲಿ ಸಾವಿರ ಜನರನ್ನು ಹತ್ತಲು ಅವಕಾಶ ಕೊಡುತ್ತಿಲ್ಲ. ಹೆಚ್ಚು ಪ್ರಯಾಣಿಕರು ಬರುತ್ತಿರುವ ಎಂ.ಜಿ. ರಸ್ತೆ ಅಥವಾ ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ ಗರಿಷ್ಠ 500 ಮಂದಿ ರೈಲು ಹತ್ತಲು ಅವಕಾಶ ಕೊಡಲಾಗುತ್ತಿದೆ. ನಂತರದ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರಿಗೆ ಸ್ಥಳಾವಕಾಶ ಇರಲಿ ಎಂಬ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ~ ಎಂದು ಅವರು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT