ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಾಪುರ ಘಟಕ; 4000 ಉದ್ಯೋಗ

Last Updated 21 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹೋಂಡಾ ಆಕ್ಟಿವಾ~ ಸ್ಕೂಟರ್ ಮೂಲಕ ಹೆಚ್ಚು ಜನಪ್ರಿಯವಾಗಿರುವ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ `ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯ ಪ್ರೈ.ಲಿ.~(ಎಚ್‌ಎಂಎಸ್‌ಐ) ಕೋಲಾರ ಜಿಲ್ಲೆಯ ನರಸಾಪುರದಲ್ಲಿ ನಿರ್ಮಿಸುತ್ತಿರುವ `ದ್ವಿಚಕ್ರ ವಾಹನ ತಯಾರಿಕಾ ಘಟಕ~ದಲ್ಲಿ 4000 ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ.

ನರಸಾಪುರದಲ್ಲಿ ನೆಲೆಗೊಳ್ಳುತ್ತಿರುವುದು ಭಾರತದಲ್ಲಿನ `ಹೋಂಡಾ~ದ ಮೂರನೇ ಘಟಕವಾಗಿದ್ದು, 2013ರ ಜುಲೈನಲ್ಲಿ ಕಾರ್ಯಾರಂಭ ಮಾಡಲಿದ್ದು, ಇಲ್ಲಿ ಮೋಟಾರ್ ಬೈಕ್ ಮತ್ತು ಸ್ಕೂಟರ್ ಎರಡೂ ತಯಾರಾಗಲಿವೆ ಎಂದು `ಎಚ್‌ಎಂಎಸ್‌ಐ~ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪ ನಿರ್ದೇಶಕ ತೊಮೊಕಿ ನಾಗಯಾಮ ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕದ ಮಾರುಕಟ್ಟೆಗೆ 110 ಸಿಸಿ ಸಾಮರ್ಥ್ಯದ `ಹೋಂಡಾ ಡ್ರೀಮ್ ಯುಗ~ ಮೋಟಾರ್‌ಬೈಕ್ ಬಿಡುಗಡೆ ಮಾಡಿ ಮಾತನಾಡಿದ ಅವರು, ನರಸಾಪುರ ಘಟಕಕ್ಕೆ ಆರಂಭಿಕ ಬಂಡವಾಳವಾಗಿ ರೂ1500 ಕೋಟಿ ತೊಡಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಡವಾಳ ವಿನಿಯೋಜಿಸಲಾಗುವುದು ಎಂದರು.
ಕೋಲಾರ ಜಿಲ್ಲೆಯಲ್ಲಿನ ಈ ಘಟಕ ಆರಂಭದಲ್ಲಿ ವರ್ಷಕ್ಕೆ 12 ಲಕ್ಷ ದ್ವಿಚಕ್ರ ವಾಹನಗಳನ್ನು ತಯಾರಿಸಲಿದ್ದು, ನಂತರದಲ್ಲಿ ಇದನ್ನು 18 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದರು.

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 2011-12ರಲ್ಲಿ ಒಟ್ಟು 1.20 ಕೋಟಿ ಮೋಟಾರ್‌ಬೈಕ್ ಮತ್ತು ಸ್ಕೂಟರ್‌ಗಳು ಮಾರಾಟವಾಗಿದ್ದು, ಈ ವರ್ಷ 1.30 ಕೋಟಿಗೆ ಹೆಚ್ಚುವ ನಿರೀಕ್ಷೆ ಇದೆ. ಸದ್ಯ ಇಲ್ಲಿನ ಮಾರುಕಟ್ಟೆಯಲ್ಲಿ `ಹೋಂಡಾ~ ದ್ವಿಚಕ್ರ ವಾಹನಗಳ ಪಾಲು ಶೇ 15ರಷ್ಟಿದೆ ಎಂದು `ಎಚ್‌ಎಂಎಸ್‌ಐ~ನ ದಕ್ಷಿಣ ಭಾರತ ವಲಯ ಮಾರಾಟ ವ್ಯವಸ್ಥಾಪಕ ಅಶೀಷ್ ಚೌಧರಿ ಪ್ರಶ್ನೆಗೆ ಉತ್ತರಿಸಿದರು.

8.5 ಬಿಎಚ್‌ಪಿ, ಲೀಟರ್‌ಗೆ 72 ಕಿ.ಮೀ. ಮೈಲೇಜ್ ಸಾಮರ್ಥ್ಯದ `ಹೋಂಡಾ ಡ್ರೀಮ್ ಯುಗ~ ಬೈಕ್ ರೂ47087 ಮತ್ತು ರೂ48560 ಹಾಗೂ ರೂ49717(ಬೆಂಗಳೂರು ಎಕ್ಸ್ ಷೋರೂಂ ಬೆಲೆ)ಗೆ ಲಭ್ಯವಿದೆ. ಪ್ರಸಕ್ತ ಹಣಕಾಸು ವರ್ಷ ಕಂಪೆನಿ ಭಾರತದಲ್ಲಿ ಒಟ್ಟು 27 ಲಕ್ಷ ದ್ವಿಚಕ್ರ ವಾಹನ ಮಾರಾಟದ ಗುರಿ ಇಟ್ಟುಕೊಂಡಿದೆ ಎಂದು ಚೌಧರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT