ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಮಾವು, ಹಲಸು ಮೇಳ

Last Updated 30 ಮೇ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಲಾಲ್‌ಬಾಗ್‌ನಲ್ಲಿ ಜೂನ್ 1ರಿಂದ 24ರವರೆಗೆ ಮಾವು ಹಾಗೂ ಹಲಸಿನ ಹಣ್ಣುಗಳ ಮೇಳವನ್ನು ಆಯೋಜಿಸಲಾಗಿದೆ~ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ. ಹೇಮಲತಾ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಲಾಲ್‌ಬಾಗ್‌ನ ಗಾಜಿನಮನೆ ಮುಂಭಾಗದಲ್ಲಿ ನಡೆಯುವ ಮೇಳದಲ್ಲಿ ಸುಮಾರು 100 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ನಡೆಯುವ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಮೇಳದ ಮೊದಲ ಮೂರು ದಿನ ಹಣ್ಣುಗಳ ಪ್ರದರ್ಶನ ನಡೆಯಲಿದೆ~ ಎಂದರು.

ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು, ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ಕಾರ್ಬೈಡ್ (ರಾಸಾಯನಿಕ ವಸ್ತು) ಮುಕ್ತ ತಾಜಾ ಹಣ್ಣುಗಳು ನ್ಯಾಯಯುತ ಬೆಲೆಗೆ ಸಿಗುವಂತೆ ಮಾಡುವುದು ಮೇಳದ ಮುಖ್ಯ ಉದ್ದೇಶ. ಅಂತೆಯೇ ಬೆಳೆಗಾರರು, ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಉದ್ದಿಮೆದಾರರನ್ನು ಒಂದೆಡೆ ಸೇರಿಸಿ ವಿಷಯ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು, ಜನಸಾಮಾನ್ಯರಿಗೆ ಮಾವು ಹಾಗೂ ಹಲಸಿನ ಅತ್ಯುತ್ತಮ ತಳಿಗಳನ್ನು ಪರಿಚಯಿಸುವುದು ಮೇಳದ ಉದ್ದೇಶ ಎಂದು ಹೇಳಿದರು.

2011ರಲ್ಲಿ ನಡೆದ ಮೇಳದಲ್ಲಿ ಒಂದು ಸಾವಿರ ಟನ್ ಮಾವಿನ ಹಣ್ಣುಗಳು ಮಾರಾಟವಾಗಿದ್ದವು. ಈ ಬಾರಿಯ ಮೇಳದಲ್ಲಿ ಒಂದು ಸಾವಿರ ಟನ್‌ಗಿಂತ ಹೆಚ್ಚಿನ ಹಣ್ಣುಗಳು ಮಾರಾಟವಾಗುವ ನಿರೀಕ್ಷೆ ಇದೆ. ಹಣ್ಣಿನ ಗುಣಮಟ್ಟ ಪರೀಕ್ಷೆಗೆ ಹಾಗೂ ಬೆಲೆ ನಿಗದಿಗೆ ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿಯ ಸದಸ್ಯರು ಮೇಳದಲ್ಲಿ ಪ್ರತಿನಿತ್ಯ ಮಳಿಗೆಗಳಿಗೆ ಭೇಟಿ ನೀಡಿ ಹಣ್ಣಿನ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲೂ ಮೇಳ:  ಮಾವು ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಮೇಳನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ರಾಮನಗರ ಮತ್ತು ಧಾರವಾಡದಲ್ಲಿ ಮೇಳ ನಡೆಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ ಅಥವಾ ಭಾನುವಾರ ವಿವಿಧ ಹಣ್ಣುಗಳ ಮೇಳ ನಡೆಸಲು ಉದ್ದೇಶಿಸಲಾಗಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT